ಭಾನುವಾರ, ಡಿಸೆಂಬರ್ 15, 2019
19 °C

ಖಿನ್ನತೆಯ ಮೀರಿ ಕಟೆದ ದೇಹಸಿರಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಖಿನ್ನತೆಯ ಮೀರಿ ಕಟೆದ ದೇಹಸಿರಿ

ಅಂದು ವರ್ಷದ ಬಾಲಕನಂತೆ ಅಳುತ್ತಿದ್ದವರು ಟೈಗರ್ ಶ್ರಾಫ್.

ಜೈ ಹೇಮಂತ್ ಶ್ರಾಫ್ ಎಂಬ ಹೆಸರನ್ನು ಕೆಲವರು ಗೇಲಿ ಮಾಡಿದಾಗ ಅವರು ಹೀಗೇ ಅತ್ತಿದ್ದರು. ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮ, ‘ಇವನು ಟ್ರಾನ್ಸ್ ಜೆಂಡರ್ ತರಹ ಇದಾನೆ’ ಎಂದು ಮಾತಿನಲ್ಲೇ ಕಲ್ಲು ಹೊಡೆದಾಗ ಟೈಗರ್ ಒಳಗೊಳಗೇ ಅತ್ತಿದ್ದಿದೆ.

ಜಾಕಿ ಶ್ರಾಫ್ ತನ್ನ ತಂದೆ ಎಂಬ ಸಹಜ ವಿಶೇಷಣವಿದ್ದೂ, ಟೈಗರ್ ಸುಲಭವಾಗಿ ನಟನಾಗಲು ಸಾಧ್ಯವಾಗಲಿಲ್ಲ. ಬದಲಿಗೆ ಮೊದಲು ಅವರು ನಟರಿಗೆ ಹತ್ತಿರವಾದರು. ಟೇಕ್ವಾಂಡೊದಲ್ಲಿ ಐದನೇ ಗ್ರೇಡ್ ಬ್ಲ್ಯಾಕ್ ಬೆಲ್ಟ್ ಪಡೆದ ಸಾಧನೆ ಮಾಡಿದರು. ಹೃತಿಕ್ ರೋಷನ್, ಮೈಕಲ್ ಜಾಕ್ಸನ್ ನೃತ್ಯ ಲಾಲಿತ್ಯದಿಂದ ಸ್ಫೂರ್ತಿ ಪಡೆದು, ತಾವೂ ನೃತ್ಯಾಭ್ಯಾಸಕ್ಕಿಳಿದರು.

ಇಷ್ಟೆಲ್ಲ ಪ್ರತಿಭೆಯಿದ್ದೂ ಸರಿಯಾದ ಅವಕಾಶ ತಾನಾಗೇ ಹುಡುಕಿಕೊಂಡು ಬರಲಿಲ್ಲ. ಅಪ್ಪ ಸುಮ್ಮನೆ ಯಾರಿಗೋ ಶಿಫಾರಸು ಮಾಡಿ, ಮಗನಿಗೆ ಅವಕಾಶ ಕೊಡಿಸುವುದು ಸರಿಯಲ್ಲ ಎಂಬ ನಿಲುವು ಇಟ್ಟುಕೊಂಡಿದ್ದೂ ಮರಿ ಶ್ರಾಫ್‌ಗೆ ಬೇಸರ ತರಿಸಿತ್ತು. ‘ಧೂಮ್ 3’ ಸಿನಿಮಾದಲ್ಲಿ ಅಮೀರ್ ಖಾನ್ ದೇಹಾಕಾರ ರೂಪಿಸಲು ಸಲಹೆ ನೀಡಿದ ತಂಡದಲ್ಲಿ ಟೈಗರ್ ಕೂಡ ಒಬ್ಬರು. ಆಗ ಅವರ ಹೆಸರಿನ್ನೂ ಜೈ ಹೇಮಂತ್. ಸ್ಟಂಟ್ ಕಲಾವಿದನಾಗಿ ಮೊದಲು ಚಿತ್ರರಂಗ ಪ್ರವೇಶಿಸಿದ ಈ ಪ್ರತಿಭಾವಂತನ ವೇಗ, ಸಾಹಸ ಪ್ರವೃತ್ತಿಯನ್ನೇ ಬಂಡವಾಳವಾಗಿಸಿ, ನಾಡಿಯಾದ್ ವಾಲಾ ನಿರ್ಮಾಣ ಸಂಸ್ಥೆ ‘ಹೀರೊಪಂತಿ’ ಹಿಂದಿ ಸಿನಿಮಾ ತಯಾರಿಸಿತು.

ವಿಮರ್ಶೆಗಳಲ್ಲಿ ಯದ್ವಾತದ್ವಾ ಟೀಕೆಗಳು ವ್ಯಕ್ತವಾದಾಗ ಟೈಗರ್ ಕನ್ನಡಿ ಎದುರು ನಿಂತು ಅಳತೊಡಗಿದರು. ಆಗ ಅವರ ಅಪ್ಪನೇ ವಿಮರ್ಶೆಗಳಲ್ಲಿ ನೃತ್ಯ, ಸಾಹಸಕ್ಕೆ ವ್ಯಕ್ತವಾಗಿದ್ದ ಮೆಚ್ಚುಗೆಯ ಧ್ವನಿಯನ್ನು ಓದಿ ಹೇಳಿದರು. ಆಗ ಒಂಚೂರು ಸಮಾಧಾನವಾಯಿತು. ಸಿನಿಮಾ ನೂರು ಕೋಟಿಗಿಂತ ಹೆಚ್ಚು ಹಣ ಗಳಿಸಿದ ಮೇಲೆ ಟೈಗರ್‌ಗೆ ಆತ್ಮವಿಶ್ವಾಸ ಮರಳಿತು. ಎರಡು ವರ್ಷಗಳ ದೀರ್ಘಾವಧಿಯಲ್ಲಿ ತಯಾರಾಗಿದ್ದ ಸಿನಿಮಾ ಅದು.

2016ರ ಪ್ರಾರಂಭದಲ್ಲಿ ‘ಬಾಘಿ’ ಸಿನಿಮಾದಲ್ಲಿ ಅವರ ಕಟೆದ ದೇಹ ಮತ್ತೊಮ್ಮೆ ಅನಾವರಣಗೊಂಡಿತು. ಚಿಕ್ಕಮಕ್ಕಳು ಹೆಚ್ಚಾಗಿ ಅವರ ಅಭಿಮಾನಿಗಳಾಗಲು ಕಾರಣವಾದ ಈ ಸಿನಿಮಾ ಮಾರುಕಟ್ಟೆಯಲ್ಲಿ ಟೈಗರ್ ಬೇಡಿಕೆಯನ್ನು ಸಾಬೀತುಪಡಿಸಿತು. ಇದೂ ಗಳಿಕೆಯಲ್ಲಿ ನೂರು ಕೋಟಿ ರೂಪಾಯಿಯ ಗಡಿ ದಾಟಿತು.

ಅದಕ್ಕೇ ನಿರ್ದೇಶಕ ರೆಮೊ ಡಿಸೋಜಾ ‘ಫ್ಲೈಯಿಂಗ್ ಜಾಟ್’ ಹೆಸರಿನ ಇಂಡಿಯನ್ ಸೂಪರ್ ಹೀರೊ ಸಿನಿಮಾ ತಯಾರಿಸಿದ್ದು.

ಕಡಿಮೆ ಅವಧಿಯಲ್ಲಿ ಚಿತ್ರೀಕರಣಗೊಂಡು ತೆರೆಕಂಡ ಈ ಸಿನಿಮಾ ತೋಪಾಯಿತು. ಅದಾದ ಮೇಲೆ ‘ಮುನ್ನಾ ಮೈಕಲ್’ ಕೂಡ ಮಕಾಡೆಯಾಯಿತು. ಟೈಗರ್ ಖಿನ್ನತೆಗೆ ಒಳಗಾದರು.‌ 24ನೇ ವಯಸ್ಸಿನೊಳಗೆ ನೂರು ಕೋಟಿ ರೂಪಾಯಿ ಯಶಸ್ಸನ್ನು ಕಂಡಿದ್ದ ಅವರಿಗೆ ಎರಡೆರಡು ಸೋಲುಗಳನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಥೇಟ್ ದೀಪಿಕಾ ಪಡುಕೋಣೆ ತರಹದ ಸಂಕಟವನ್ನು ಅವರೂ ಅನುಭವಿಸಿದರು. ಕೆಲವು ಮೂದಲಿಕೆಗಳು ಗಾಯದ ಮೇಲೆ ಉಪ್ಪು ಸವರಿದಂಥ ಅನುಭವ ಕೊಟ್ಟವು.

ಮನೋವೈದ್ಯರ ಸಲಹೆಯ ನಂತರ ಸೆಟೆದೆದ್ದ ಟೈಗರ್ ಸಲೂನ್‌ನಲ್ಲಿ ಕುಳಿತದ್ದು ತಮ್ಮ ಉದ್ದ ಕೂದಲನ್ನು ಕತ್ತಿರಿಸಿಕೊಳ್ಳಲು. ಆಗ ಅವರು ಬಾಲಕನಂತೆ ಅತ್ತಿದ್ದನ್ನು ಕಂಡು ಚಿತ್ರತಂಡದವರು ನಕ್ಕಿದ್ದರು.

ಈಗ ‘ಬಾಘಿ 2’ ತೆರೆ ಕಂಡಿದೆ. ಅದರದ್ದೂ ಭರ್ಜರಿ ಗಳಿಕೆ. ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಸಿನಿಮಾಗೆ ಸಹಿ ಹಾಕಿ ಆಗಿದೆ. ಎರಡು ಮೆಟ್ಟಿಲುಗಳಿಂದ ಜಾರಿ ಬಿದ್ದ ಮೇಲೆ ದಿಗ್ಗನೆದ್ದು ನಿಂತಿರುವ ಟೈಗರ್ ಕಣ್ಣಲ್ಲೀಗ ಆತ್ಮವಿಶ್ವಾಸದ ಬೆಳಕು. ಕಟೆದ ದೇಹದ ಸ್ನಾಯುಗಳಲ್ಲಿ ನಾಲ್ಕು ವರ್ಷದ ಹಿಂದಿಗಿಂತ ಹೆಚ್ಚು ಕಸುವು.

ಪ್ರತಿಕ್ರಿಯಿಸಿ (+)