ಮಂಗಳವಾರ, ಡಿಸೆಂಬರ್ 10, 2019
24 °C

ಬೇಸಿಗೆಗೆ ಆರೋಗ್ಯದಾಯಕ ಪಾನಕಗಳು

Published:
Updated:
ಬೇಸಿಗೆಗೆ ಆರೋಗ್ಯದಾಯಕ ಪಾನಕಗಳು

ಬೇಸಿಗೆಯಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಒಣಹವೆ ತುಂಬಿರುತ್ತದೆ. ಇದರಿಂದಾಗಿ ಸುಸ್ತು, ಸಂಕಟ, ಬಾಯಾರಿಕೆ, ಮೈಉರಿ, ದೌರ್ಬಲ್ಯಗಳು ಉಂಟಾಗುತ್ತವೆ. ಇವುಗಳನ್ನು ತಡೆಗಟ್ಟಲು ಬೇಸಿಗೆಯಲ್ಲಿ ತಂಪಾದ, ಹಿತವಾದ ಪಾನೀಯಗಳನ್ನು ಸೇವಿಸಬೇಕು. ಬೆವರು ಹೆಚ್ಚಾಗಿ ಉಂಟಾಗುವುದರಿಂದ ದೇಹಕ್ಕೆ ನೀರಿನಂಶದ ಪೂರೈಕೆ ಅಧಿಕವಾಗಿ ಬೇಕಾಗುತ್ತದೆ. ಕುಡಿಯವ ನೀರಿಗೆ ಕೊನ್ನಾರಿಗಡ್ಡೆ, ಲಾವಂಚ ಹಾಕಿ ಕುದಿಸಿ ಇವುಗಳಲ್ಲಿ ಯಾವುದಾದರೊಂದನ್ನು ನೀರಿಗೆ ಹಾಕಿ ಕುದಿಸಿ, ಶೋಧಿಸಿ ಬೆಲ್ಲ ಅಥವಾ ಕಲ್ಲುಸಕ್ಕರೆ ಬೆರೆಸಿ ಕುಡಿಯಬೇಕು.

ಬೆಲ್ಲದ ಪಾನಕ: ಅರ್ಧಲೀಟರ್ ನೀರಿಗೆ ಬೆಲ್ಲ ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕದಡಬೇಕು. ಏಲಕ್ಕಿ ಕುಟ್ಟಿ ಹಾಕಿದಲ್ಲಿ ಇನ್ನಷ್ಟು ರುಚಿಕರ.

ಖರ್ಜೂರಾದಿ ಮಂಥ: ಖರ್ಜೂರ, ದಾಳಿಂಬೆ, ಒಣದ್ರಾಕ್ಷಿ, ನೆಲ್ಲಿಕಾಯಿ ಪುಡಿ, ಹುಣಸೆಹಣ್ಣು, ಎಲ್ಲವೂ ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವೆಲ್ಲವೂ ಒಂದು ಭಾಗವಾದರೆ ಇದಕ್ಕೆ 4 ಭಾಗ ನೀರನ್ನು ಹಾಕಿ ನೆನೆಸಬೇಕು. ಎಲ್ಲವನ್ನೂ ರುಬ್ಬಿ (ಮಿಕ್ಸಿಯಲ್ಲಿ ಹಾಕಬಹುದು) ನಂತರ ಶೋಧಿಸಿ ಕುಡಿದರೆ ದಾಹ, ಶ್ರಮ, ಬಿಸಿಲಿನಿಂದಾಗಿ ಬರುವ ತಲೆಸುತ್ತು ಯಾವುದೂ ಇರುವುದಿಲ್ಲ.

ಜೀರ್ಣಕರ ಪಾನೀಯ: ಹೆಸರುಬೇಳೆಯನ್ನು ಬೇಯಿಸಿ ಕಟ್ಟು ತೆಗೆಯಬೇಕು. ಎರಡು ಲೋಟ ಕಟ್ಟಿಗೆ ಎರಡು ಲೋಟ ಮಜ್ಜಿಗೆ ಬೆರೆಸಿ ಅದಕ್ಕೆ ಕೊತ್ತಂಬರಿ, ಶುಂಠಿ, ಜೀರಿಗೆ ಉಪ್ಪು ಬೆರೆಸಿ ಕುಡಿಯಬೇಕು. ಇದು ಬಲವನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ಪರಿಹರಿಸುತ್ತದೆ.

ಮುರುಗಲ ಪಾನೀಯ: ಕೋಕಮ್ ಎಂದು ಕರೆಯಲಾಗುವ ಮುರುಗಲ ಬೇಸಿಗೆಯ ಹಣ್ಣು, ಮಲೆನಾಡ ಮತ್ತು ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡರೆ ವರ್ಷವಿಡೀ ಬಳಸಬಹುದು.

3,4 ಮುರುಗಲ ಹಣ್ಣಿನ ಒಳಗಿನ ಬೀಜಗಳನ್ನು ತೆಗೆದುಹಾಕಿ, ಸಿಪ್ಪೆಯನ್ನು ನೀರಿನಲ್ಲಿ ತೊಳೆಯಬೇಕು. ಈ ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ, ಶೋಧಿಸಿದ ರಸಕ್ಕೆ ಎರಡು ಲೋಟ ನೀರು ಮತ್ತು ಬೆಲ್ಲ ಬೆರೆಸಿದರೆ ಪಾನೀಯ ಸಿದ್ದ. ಇದು ಪಿತ್ತನಾಶಕ ಮತ್ತು ರಕ್ತಶುದ್ಧಿಕರವಾಗಿ ಕೆಲಸ ಮಾಡುತ್ತದೆ.

ಲಾವಂಚದ ಪಾನೀಯ: ಎಂಟರಿಂದ ಹತ್ತು ಲಾವಂಚದ ಬೇರುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಎರಡು ಗಂಟೆ ನೆನೆಸಬೇಕು. ನಂತರ ಇದನ್ನು ಶೋಧಿಸಿ ಅರ್ಧ ಕಪ್ ಬೆಲ್ಲ, ನಿಂಬೆರಸ ಮತ್ತು ಏಲಕ್ಕಿ ಪುಡಿ ಹಾಕಬೇಕು. ಇದು ತಂಪಾಗಿರುವುದಲ್ಲದೆ ರಕ್ತಶುದ್ಧಿಯನ್ನು ಮಾಡುತ್ತದೆ.

ಅಕ್ಕಿತೊಳೆದ ನೀರಿನ ಪಾನೀಯ (ಅಮೃತಪಾನ): ಎರಡು ಲೋಟದಷ್ಟು ಅಕ್ಕಿತೊಳೆದ ನೀರಿಗೆ ಅರ್ಧ ಲೋಟ ಹಾಲು, ಬೆಲ್ಲ ಹಾಕಿ ಬೆರೆಸಬೇಕು. ಏಲಕ್ಕಿ ಪುಡಿಯನ್ನು ಬೆರಸಬೇಕು. ದೇಹವನ್ನು ತಂಪಾಗಿಡುವುದರಲ್ಲಿ ಇದು ಸಹಕಾರಿ.

ಹೆಸರುಬೇಳೆ ಪಾನೀಯ: ಒಂದು ಬಟ್ಟಲು ಹೆಸರುಬೇಳೆಯನ್ನು ಒಂದು ಗಂಟೆಕಾಲ ನೀರಿನಲ್ಲಿ ನೆನೆಸಿ, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ನಾಲ್ಕು ಬಟ್ಟಲು ನೀರು ಒಂದು ತುಂಡು ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಎರಡು ಬಾರಿ ತಿರುವಿಕೊಳ್ಳಬೇಕು.

ದಿಢೀರ್ ಪಾನೀಯ: ಅರ್ಧಲೀಟರ್ ನೀರಿಗೆ ಅರ್ಧ ಬಟ್ಟಲು ಬೆಲ್ಲ ಬೆರೆಸಿ, ಅದಕ್ಕೆ ಬಟ್ಟಲು ಹಾಲು ಸೇರಿಸಬೇಕು. ಕುಡಿಯಲು ರುಚಿಕರ ಮತ್ತು ಬಾಯಾರಿಕೆ ಆಯಾಸ ನೀಗಿಸುವಂತಹದ್ದು. ಅನಿರೀಕ್ಷಿತವಾಗಿ ಅತಿಥಿಗಳೂ ಬಂದಾಗ ದಿಢೀರಾಗಿ ತಯಾರಿಸಬಹುದು.

ಬೇಲದ ಹಣ್ಣಿನ ಪಾನೀಯ: ಬೇಲದ ಹಣ್ಣಿನ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ನಂತರ ರಸವನ್ನು ಶೋಧಿಸಿ ತಕ್ಕಷ್ಟು ನೀರು ಮತ್ತು ಬೆಲ್ಲ ಬೆರೆಸಿದರೆ ಅತ್ಯಂತ ರುಚಿಯಾಗಿರುತ್ತದೆ. ಪಾನೀಯ ಘಮ ಘಮಿಸುವುದಕ್ಕೆ ಏಲಕ್ಕಿಪುಡಿಯನ್ನು ಹಾಕಬೇಕು.

ರಾಗಿಪಾನಕ: ಅರ್ಧ ಬಟ್ಟಲು ರಾಗಿಹಿಟ್ಟಿಗೆ ಎರಡು ಲೋಟ ನೀರು, ಅರ್ಧ ಬಟ್ಟಲು ಬೆಲ್ಲ ಮತ್ತು ಅರ್ಧ ಬಟ್ಟಲು ಹಾಲು ಹಾಕಿ ಬೆರೆಸಿದರೆ ರಾಗಿ ಪಾನೀಯ ತಯಾರಾಗುತ್ತದೆ. ಪರಿಮಳಕ್ಕೆ ರುಚಿಗೆ ಏಲಕ್ಕಿ ಪುಡಿಯನ್ನು ಬೆರೆಸಿಕೊಳ್ಳಬೇಕು.

ಹುಣಸೆಹಣ್ಣಿನ ಪಾನೀಯ: ಹುಣಸೆಹಣ್ಣನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ ಶೋಧಿಸಬೇಕು. ಒಂದು ಲೋಟ ನೀರಿಗೆ ಎರಡು ಚಮಚ ರಸ ಮತ್ತು ಬೆಲ್ಲ ಬೆರೆಸಿ ಕುಡಿಯಬೇಕು.

ಸುಲಭ ಪಾನೀಯ: ನೀರು ಮಜ್ಜಿಗೆಗೆ ಬೆಲ್ಲವನ್ನು ಬೆರೆಸಿ ಕುಡಿಯಬೇಕು. ಪರಿಮಳಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಬೇಕು.

ನೇರಳೆಹಣ್ಣಿನ ಪಾನೀಯ: ನೇರಳೆಹಣ್ಣಿನ ಬೀಜ ತೆಗೆದು ಸ್ವಲ್ಪ ನೀರು ಹಾಕಿ ಕಿವುಚಿ ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ನೀರು, ಬೆಲ್ಲ ಬೆರೆಸಿ ಕುಡಿಯಬೇಕು.

ಫ್ಯಾಶನ್ ಹಣ್ಣಿನ ಪಾನಕ: ಮನೆಯಲ್ಲಿಯೇ ಫ್ಯಾಶನ್ ಹಣ್ಣಿನ ಬಳ್ಳಿಯನ್ನು ಬೆಳೆಸಿಕೊಂಡಿದ್ದಲ್ಲಿ ಬೇಕೆನಿಸಿದಾಗ ಪಾನೀಯ ತಯಾರಿಸಬಹುದು. ಫ್ಯಾಶನ್ ಹಣ್ಣಿನ ತಿರುಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕಿವುಚಿ ರಸವನ್ನು ತೆಗೆಯಬೇಕು. ಅದಕ್ಕೆ ಬೆಲ್ಲ ಸೇರಿಸಿ ಮತ್ತಷ್ಟು ನೀರು ಬೆರೆಸಿ ಪಾನೀಯ ತಯಾರಿಸಬೇಕು.

ನಿಂಬೆ, ಮುರುಗಲ ಪಾನಿಯ: ಮುರುಗಲ ಹಣ್ಣಿನ ಬೀಜಗಳನ್ನು ತೆಗೆದು ಸಿಪ್ಪೆಯನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಬೇಕು. ತೊಳೆದ ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ, ಶೋಧಿಸಿದ ರಸಕ್ಕೆ ನೀರು ಮತ್ತು ಬೆಲ್ಲ ಬೆರೆಸಿ, ನಿಂಬೆರಸ ಬೆರೆಸಬೇಕು.

ಹೆಸರುಕಾಳಿನ ಪಾನೀಯ: ಒಂದು ಬಟ್ಟಲು ಹುರಿದ ಹೆಸರುಕಾಳನ್ನು ಮುಕ್ಕಾಲು ಗಂಟೆಗಳ ಕಾಲ ನೆನೆಸಿಟ್ಟು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ನೀರು ಮತ್ತು ಬೆಲ್ಲ ಬೆರೆಸಬೇಕು.

ಎಳ್ಳಿನ ಪಾನೀಯ: ಅರ್ಧ ಬಟ್ಟಲು ಎಳ್ಳನ್ನು ಸ್ವಲ್ಪ ಹೊತ್ತು ನೆನೆಸಿಟ್ಟು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ನಾಲ್ಕು ಬಟ್ಟಲು ನೀರು, ಬೆಲ್ಲ ಮತ್ತು ಸ್ವಲ್ಪ ಹಾಲನ್ನು ಬೆರೆಸಬೇಕು.

ಕಾಮಕಸ್ತೂರಿ ಪಾನೀಯ: ಅರ್ಧ ಬಟ್ಟಲು ಕಾಮಕಸ್ತೂರಿಬೀಜವನ್ನು ರಾತ್ರಿ ಹೊತ್ತು ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಗ್ಗೆ ಅರಳಿಕೊಳ್ಳುತ್ತದೆ. ಇದಕ್ಕೆ ಬೆಲ್ಲ, ನೀರು, ಹಾಲು ಬೆರೆಸಿ ಕುಡಿಯಬೇಕು. ಈ ಪಾನೀಯ ದೇಹದ ಉಷ್ಣವನ್ನು ಕಡಿಮೆ ಮಾಡುವುದರೊಂದಿಗೆ ಬಾಯಿಹುಣ್ಣನ್ನು ವಾಸಿ ಮಾಡುತ್ತದೆ.

ಕಾಕ್‍ಟೇಲ್ ಮಜ್ಜಿಗೆ: ಒಂದು ಲೋಟ ಮಜ್ಜಿಗೆಗೆ 1/2 ಲೋಟ ಮಾವಿನ ಹಣ್ಣಿನ ರಸ ಮತ್ತು ಪೈನಾಪಲ್ ಹಣ್ಣಿನ ರಸ ಮತ್ತು ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು.

ಬೀಟರೂಟ್-ಕ್ಯಾರೆಟ್ ಪಾನೀಯ: ಬೀಟ್‍ರೂಟ್ ಮತ್ತು ಕ್ಯಾರೆಟ್‍ಗಳನ್ನು ತುರಿದು ಮಿಕ್ಸಿಗೆ ಹಾಕಿ ರುಬ್ಬಿ ರಸ ತೆಗೆದು ಅದಕ್ಕೆ ಹಾಲು, ಬೆಲ್ಲ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು.

ನೆಲ್ಲಿಕಾಯಿ ಪಾನೀಯ: ಅಸಿಡಿಟಿಯ ತೊಂದರೆಯಿಂದ ಬಳಲುವವರಿಗೆ ನೆಲ್ಲಿಕಾಯಿ ಪುಡಿಯನ್ನು ಪುದೀನ ರಸದಲ್ಲಿ ಬೆರೆಸಿ ಬೆಲ್ಲ, ಜೇನುತುಪ್ಪ ಬೆರೆಸಿ ಕುಡಿಯಬೇಕು.

ಕಾಕ್‍ಟೇಲ್ ಪಾನೀಯ: ಕಬ್ಬಿನರಸ, ಕಪ್ಪುದ್ರಾಕ್ಷಿ ರಸ ಮತ್ತು ಬೆಲ್ಲ, ಏಲಕ್ಕಿಪುಡಿಯನ್ನು ಬೆರೆಸಿ ಕುಡಿಯಬೇಕು.

ಒಂದೆಲಗದ ಪಾನೀಯ: ಒಂದೆಲಗದ ರಸ ತೆಗೆದು ಬೆಲ್ಲ, ನೀರು, ಸೇರಿಸಿ ಕುಡಿಯಬೇಕು.

ದಾಸವಾಳದ ಎಲೆಯ ಪಾನೀಯ: ದಾಸವಾಳದ ಎಲೆಯನ್ನು ತೆಗೆದು ಸ್ವಚ್ಛಗೊಳಸಿ ರುಬ್ಬಿ ರಸವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಬೆಲ್ಲ, ನೀರು ಬೆರೆಸಿ ಪಾನೀಯ ತಯಾರಿಸಬಹುದು. ಬೇಸಿಗೆಯಲ್ಲಿ ದೇಹ ತಂಪಾಗಿಡುವಲ್ಲಿ ಇದು ಸಹಾಯಕ.

ದಾಸವಾಳದ ಹೂವಿನ ಶರಬತ್: ದಾಸವಾಳದ ಹೂವನ್ನು ರುಬ್ಬಿ ರಸವನ್ನು ತೆಗೆದು ಅದಕ್ಕೆ ನೀರು, ಬೆಲ್ಲವನ್ನು ಬೆರೆಸಿ ಕುಡಿಯಬೇಕು.

ಇನ್ನೊಂದು ವಿಧಾನ: ಒಂದು ಲೋಟ ಸಕ್ಕರೆಗೆ ನೀರು ಬೆರೆಸಿ ಸಕ್ಕರೆ ಪಾಕ ತಯಾರಿಸಿಟ್ಟುಕೊಳ್ಳಬೇಕು. ಅದಕ್ಕೆ ಒಂದು ಬಟ್ಟಲು ದಾಸವಾಳದ ಹೂವಿನ ರಸವನ್ನು ಬೆರೆಸಿ, ಒಲೆಯ ಮೇಲಿಟ್ಟು ನೀರಿನಂಶ ಹೋಗುವವರೆಗೂ ಕಾಯಿಸಬೇಕು. ನಂತರ ಇಳಿಸಿ, ಶೋಧಿಸಿ, ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಎರಡು ಚಮಚ ರಸಕ್ಕೆ ಒಂದು ಲೋಟ ನೀರನ್ನು ಬೆರೆಸಿ ಕುಡಿಯಬೇಕು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಅತಿಥಿಗಳಿಗೆ ಸತ್ಕರಿಸಲು ಇದೇ ಪಾನೀಯ ನೀಡುತ್ತಾರೆ.

ಪುದಿನಾ ಪಾನೀಯ: ಪುದಿನವನ್ನು ಸ್ವಚ್ಛವಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ ಬೆಲ್ಲ ಬೆರೆಸಬೇಕು. ಏಲಕ್ಕಿಪುಡಿಯನ್ನು ಬೆರೆಸಿದಲ್ಲಿ ಇನ್ನು ಉತ್ತಮ. ಬೆಳಿಗ್ಗೆ ಖಾಲಿಹೊಟ್ಟೆಗೆ ಈ ಪಾನೀಯ ಕುಡಿದರೆ ಅಜೀರ್ಣ, ಎದೆಯುರಿ ಬಾಧಿಸುವುದಿಲ್ಲ.

ಸೊಗದೆ ಬೇರಿನ ಪಾನೀಯ: ಸೊಗದೆ ಬೇರನ್ನು ನೀರಿನಲ್ಲಿ ಹಾಕಿ ಕಷಾಯ ತಯಾರಿಸಿಕೊಳ್ಳಬೇಕು. ಸಕ್ಕರೆಪಾಕವನ್ನು ತಯಾರಿಸಿಟ್ಟುಕೊಂಡು ಅದರಲ್ಲಿ ಕುದಿಯ ಹಾಕಿ ನೀರಿನಂಶ ಹೋಗುವವರೆಗೂ ಕಾಯಿಸಬೇಕು. ನಂತರ ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಬೇಕಾದಾಗಲೆಲ್ಲ ಒಂದು ಲೋಟ ನೀರಿಗೆ ಈ ಪಾನೀಯ ಬೆರೆಸಿ ಕುಡಿಯಬೇಕು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದಾಹ, ಸುಸ್ತು, ಸಂಕಟ ದೂರವಾಗುವುದು. ಆಯುರ್ವೇದ ಔಷಧಿಯ ಅಂಗಡಿಯಲ್ಲಿ ‘ಸೊಗದೆಬೇರಿನ ಶರಬತ್ತು’ ದೊರೆಯುವುದು. ಮನೆಯಲ್ಲಿ ಮಾಡಿಕೊಳ್ಳಲು ಕಷ್ಟವೆನಿಸಿದರೆ ಅದನ್ನೇ ತಂದು ಬಳಸಬಹುದು.

ಸಕ್ಕರೆಕಾಯಿಲೆಯವರಿಗೆ ಪಾನೀಯ: ಕಿತ್ತಲೆಹಣ್ಣಿನ ರಸ ಮತ್ತು ಮೋಸಂಬಿ ರಸಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಬಹುದು. ಮಜ್ಜಿಗೆಗೆ ಮೋಸಂಬಿ ರಸ ಮತ್ತು ಸೌತೆಕಾಯಿ ರಸವನ್ನು ಬೆರೆಸಿ ಕುಡಿಯಬೇಕು.

ಹೆಸರುಬೇಳೆ ಬೇಯಿಸಿ ಕಟ್ಟು (ಮೇಲಿನ ತಿಳಿ) ತೆಗೆದು ಅದಕ್ಕೆ ಮಜ್ಜಿಗೆ, ಸ್ವಲ್ಪ ಉಪ್ಪು ಬೆರೆಸಿ ಕುಡಿಯಬೇಕು. 1/2 ಲೋಟ ಸೌತೆಕಾಯಿರಸ, ಪುದಿನಾ ರಸ (ಎರಡು ಚಮಚ)

ನಿಂಬೆರಸ: 1 ಚಮಚ, ಚಿಟಿಕೆ ಜೀರಿಗೆ ಪುಡಿ, ಚಿಟಿಕೆ ಉಪ್ಪನ್ನು ಬೆರೆಸಿ ಕುಡಿಯಬೇಕು.

ಕಿತ್ತಲೆರಸ ಇಲ್ಲವೇ ಮೋಸಂಬಿ ರಸಕ್ಕೆ ಹುರಿದ ಜೀರಿಗೆ ಪುಡಿ: 1 ಚಿಟಿಕೆ, 1 ಚಿಟಿಕೆ ಕಾಳುಮೆಣಸಿನ ಪುಡಿ, ಉಪ್ಪು 1 ಚಿಟಿಕೆಯಷ್ಟು ಬೆರೆಸಿ ಕುಡಿಯಬೇಕು.

ಕರಬೂಜ ಹಣ್ಣಿನ ರಸ: 1/4 ಲೋಟಕ್ಕೆ ಸೌತೆಕಾಯಿ ರಸವನ್ನು ಇದಕ್ಕೆ 1/2 ಲೋಟದಷ್ಟು ಬೆರೆಸಿ ಕುಡಿಯಬೇಕು.

ಮಾವಿನ ಕಾಯಿಯನ್ನು ಕುಕ್ಕರ್‌ನಲ್ಲಿ ಬೇಯಿಸಿ ಮಿಕ್ಸಿಗೆ ಹಾಕಿ ರುಬ್ಬಿ ಅದಕ್ಕೆ ನೀರು ಬೆರೆಸಿ, ಉಪ್ಪು, ಏಲಕ್ಕಿ ಶುಂಠಿಗಳನ್ನು ಹಾಕಿ ಕುಡಿಯಬೇಕು. ಮಾವಿನಕಾಯಿ ತುರಿದು ಮಿಕ್ಸಿಗೆ ಹಾಕಿ ರುಬ್ಬಿ ರಸ ತೊಟ್ಟು ಅದಕ್ಕೆ ಮೋಸಂಬಿ ರಸ, ಚಿಟಿಕೆ ಶುಂಠಿಪುಡಿ–ಉಪ್ಪನ್ನು ಬೆರೆಸಿ ಕುಡಿಯಬೇಕು.

ನಿಂಬೆಹಣ್ಣಿನ ರಸಕ್ಕೆ ನೀರು ಹಾಕಿ ಶುಂಠಿ, ಮೆಣಸು, ಜೀರಿಗೆ ಪುಡಿ, ಚಿಟಿಕೆ ಬೆರೆಸಿ ಚಿಟಿಕೆ ಉಪ್ಪು ಬೆರೆಸಿ ಕುಡಿಯಬೇಕು.

1/2 ಬಟ್ಟಲು ಹೆಸರುಕಾಳನ್ನು, ಮೂರ್ನಾಲ್ಕು ಗಂಟೆ ಕಾಲ ನೆನೆಸಿಡಬೇಕು. ನಂತರ ಮಿಕ್ಸಿಗೆ ಹಾಕಿ ರುಬ್ಬಿ ಅದಕ್ಕೆ ನೀರು, ಉಪ್ಪು, ಶುಂಠಿ, ಜೀರಿಗೆಪುಡಿ ಬೆರೆಸಿ ಕುಡಿಯಬೇಕು. ಇದಕ್ಕೆ ಮಜ್ಜಿಗೆಯನ್ನು ಬೆರೆಸಿಕೊಳ್ಳಬಹುದು.

ಸಕ್ಕರೆಕಾಯಿಲೆಯವರು ಯಾವುದೇ ಹಣ್ಣಿನ ರಸವಿರಲಿ ಸಿಹಿಯಿಲ್ಲದೇ ಕುಡಿಯಬಹುದು. ಕಷ್ಟವೆನಿಸಿದಲ್ಲಿ ಸ್ಟಿವಿಯಾ ಎಲೆಯಿಂದ ತಯಾರಿಸಿದ ಪುಡಿ ಬೆರೆಸಿ ಪಾನೀಯಗಳನ್ನು ಕುಡಿಯಬಹುದು. ಸ್ಟಿವಿಯಾ ಎಲೆ ಸಿಹಿರುಚಿ ಕೊಡುತ್ತದಲ್ಲದೇ ಅದರಲ್ಲಿ ಯಾವುದೇ ಕ್ಯಾಲೊರಿ ಇಲ್ಲದಿರುವುದರಿಂದ ಯಾವುದೇ ವಿಧವಾದ ತೊಂದರೆಗಳಾಗುವುದಿಲ್ಲ.

ಪ್ರತಿಕ್ರಿಯಿಸಿ (+)