ಶುಕ್ರವಾರ, ಜೂನ್ 5, 2020
27 °C

ಐವರಲ್ಲಿ ಒಬ್ಬರಿಗೆ ಹೀಗಾಗುವುದೇಕೆ?

ಎಸ್.ಎಸ್. ವಾಸನ್ Updated:

ಅಕ್ಷರ ಗಾತ್ರ : | |

ಐವರಲ್ಲಿ ಒಬ್ಬರಿಗೆ ಹೀಗಾಗುವುದೇಕೆ?

ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಲೈಂಗಿಕ ಜೀವನದಲ್ಲಿ ಹೆಚ್ಚು ಆಸಕ್ತರು ಎಂಬ ಮಾತಿದೆ. ಆದರೆ ಅದು ಸಂಪೂರ್ಣ ನಿಜವೇನಲ್ಲ. ಪುರುಷರಿಗೂ ಲೈಂಗಿಕ ಬಯಕೆಯಲ್ಲಿ ತೊಡಕುಗಳು ಕಾಡುತ್ತವೆ.

ಐವರಲ್ಲಿ ಒಬ್ಬ ಪುರುಷನಿಗೆ ಲೈಂಗಿಕ ಬಯಕೆಯ ಸಮಸ್ಯೆ ಎದುರಾಗುತ್ತದೆಯಂತೆ. ಇದನ್ನು ನಂಬಲು ಕಷ್ಟ ಎನ್ನಿಸಿದರೂ ಸಾಕಷ್ಟು ಮಹಿಳೆಯರಿಂದ ತಮ್ಮ ಸಂಗಾತಿ ಕುರಿತು ಈ ಮಾತು ಕೇಳಿಬಂದಿದೆ. ತಮ್ಮ ಸಂಗಾತಿಗೆ ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆ ಎಂದು ಹೇಳುವ ಮಹಿಳೆಯರು ಶೇ 30ರಷ್ಟು ಇದ್ದಾರೆ.

ಹಾಗಿದ್ದರೆ ಪುರುಷರಲ್ಲಿ ಹೀಗಾಗಲು ಕಾರಣವೇನು? ಕೆಲವು ಪ್ರಕರಣಗಳಲ್ಲಿ ಇದನ್ನು ವಯೋಸಹಜ ಎಂದು ಪರಿಗಣಿಸಬಹುದು. ವಯಸ್ಸಾಗುತ್ತಿದ್ದಂತೆ ಲೈಂಗಿಕ ಬಯಕೆ ಹೆಚ್ಚುವ ಉದಾಹರಣೆಗಳಿದ್ದರೂ ವಯಸ್ಸಾಗುತ್ತಿದ್ದಂತೆ ಆಸಕ್ತಿ ಕುಂದುವ ಪ್ರಕರಣಗಳೂ ಇಲ್ಲ ಎನ್ನುವಂತಿಲ್ಲ. ಮನುಷ್ಯರ ಇನ್ನಿತರ ದೈಹಿಕ ಲಕ್ಷಣಗಳಂತೆ ಲೈಂಗಿಕ ಬಯಕೆಯಲ್ಲೂ ಏರುಪೇರಾಗುತ್ತದೆ.

ಸಾಕಷ್ಟು ಪುರುಷರಿಗೆ ಈ ಬಯಕೆ ಸಾಮಾನ್ಯ ಮಟ್ಟದಲ್ಲಿರುತ್ತದೆ. ಕೆಲವರಿಗೆ ಅತಿಯಾದ ಬಯಕೆ, ನಡವಳಿಕೆಯೇ ಆಗಿಬಿಟ್ಟಿರುತ್ತದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಲೈಂಗಿಕತೆಯಲ್ಲಿ ನಿರಾಸಕ್ತಿ ತಾಳಿದವರೂ ಇರುತ್ತಾರೆ. ಇದನ್ನೇ ‘ಹೈಪೊಆ್ಯಕ್ಟಿವ್ ಸೆಕ್ಷುಯಲ್ ಡಿಸಾರ್ಡರ್’ ಎಂದು ಕರೆಯಲಾಗುತ್ತದೆ.

ಪುರುಷರಲ್ಲಿ ಲೈಂಗಿಕ ನಿರಾಸಕ್ತಿ ಕುರಿತು ದೊಡ್ಡ ಮಟ್ಟದಲ್ಲಿ ಅಧ್ಯಯನವೊಂದು ನಡೆಯಿತು. ಈ ‘ದಿ ನ್ಯಾಷನಲ್ ಹೆಲ್ತ್ ಅಂಡ್ ಸೋಷಿಯಲ್ ಲೈಫ್ ಸರ್ವೆ’ಯಲ್ಲಿ ಅಮೆರಿಕದ 18–59ರ ವಯೋಮಾನದ 1200 ಪುರುಷರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ ಶೇ.15ರಷ್ಟು ಪುರುಷರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದವರು. 30ರ ಪ್ರಾಯದ ಒಳಗಿನ ಪುರುಷರಲ್ಲಿ, ಈ ಸಮಸ್ಯೆ ದುಪ್ಪಟ್ಟು ಇದ್ದದ್ದು ಅಚ್ಚರಿ ಉಂಟುಮಾಡಿತ್ತು. 50ಕ್ಕೂ ಹೆಚ್ಚು ವಯಸ್ಸಿನವರಲ್ಲಿ ಈ ಕೊರತೆ ಕಂಡುಬಂದಿದ್ದು, ಇದಕ್ಕೆ ನಿಮಿರುವಿಕೆ ಸಮಸ್ಯೆಯೇ ಮೂಲ ಎಂಬುದನ್ನು ಅಧ್ಯಯನ ತಿಳಿಸಿಕೊಟ್ಟಿತ್ತು.

ಈ ಒಂದು ಸಮಸ್ಯೆಯು ಪುರುಷರನ್ನು ಲೈಂಗಿಕ ಸ್ಥಿತಿಗೆ ಸಿದ್ಧಗೊಳಿಸುವ ಮೆದುಳಿನ ನಿಯಂತ್ರಣ ಯಾಂತ್ರಿಕ ರಚನೆಯಲ್ಲಿ ಕೆಲವು ಬದಲಾವಣೆಗಳನ್ನು ತರುತ್ತದೆ. ಈ ಕುರಿತು ಮೆದುಳಿನ ಸ್ಕ್ಯಾನಿಂಗ್ ಮಾಡಿದಾಗ, ಮೀಡಿಯಲ್ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ ನಿಷ್ಕ್ರಿಯಗೊಂಡಿದ್ದು ಕಂಡುಬಂದಿದೆ. ಮೆದುಳಿನ ಈ ಭಾಗವೇ ಪ್ರಚೋದನೆಗೆ ಕಾರಣ. ಇದಕ್ಕೆ ವಿರುದ್ಧವಾಗಿ, ಲೈಂಗಿಕ ಬಯಕೆಯು ಸಹಜವಾಗಿರುವ ಪುರುಷರಲ್ಲಿ ಈ ಭಾಗ ಚಟುವಟಿಕೆಯಿಂದಿರುವುದು ಕಂಡುಬಂದಿದೆ.

ವೈದ್ಯರನ್ನು ಭೇಟಿ ಮಾಡಿ: ಲೈಂಗಿಕ ಬಯಕೆಯು ಕ್ಷೀಣಗೊಂಡ ಸ್ಥಿತಿಯು ಆರು ತಿಂಗಳಿಗೂ ಹೆಚ್ಚು ಕಾಲ ಮುಂದುವರೆದರೆ, ಅದು ಸಂಬಂಧ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ವೈದ್ಯರ ಸಲಹೆ ತೆಗೆದುಕೊಳ್ಳುವುದು ಅತಿ ಮುಖ್ಯವಾಗುತ್ತದೆ.

ಕಡಿಮೆ ಡೊಪಮೈನ್ ಮಟ್ಟ: ಮೆದುಳಿನ ಸಂದೇಶ ವ್ಯವಸ್ಥೆಯು ಲೈಂಗಿಕತೆಗೂ ಸಂಬಂಧಿಸಿರುತ್ತದೆ. ಅದರಲ್ಲಿ ಒಂದು ಸಂದೇಶವಾಹಕ ಡೊಪಮೈನ್. ಇದರ ಕಾರ್ಯವೈಖರಿ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಲೈಂಗಿಕ ನಿರಾಸಕ್ತಿ ಸಮಸ್ಯೆಯ ಮೂಲಗಳು:

* ಋಣಾತ್ಮಕ ಚಿಂತನೆ

* ಸಂಬಂಧದಲ್ಲಿನ ತೊಡಕುಗಳು

* ಸಂಗಾತಿಯ ಲೈಂಗಿಕ ನಡವಳಿಕೆ

* ಬಾಲ್ಯದ ಒತ್ತಡಗಳು

* ದೈಹಿಕ ಸಮಸ್ಯೆಗಳು (ಮಧುಮೇಹ, ಅತಿಯಾದ ರಕ್ತದೊತ್ತಡ, ಕೊಲೆಸ್ಟ್ರಾಲ್, ಥೈರಾಯ್ಡ್)

* ಎಂಡೋಕ್ರೈನ್ ಸಮಸ್ಯೆ (ಹೈಪರ್‌ಪ್ರೊಲಾಕ್ಟ್ನೆಮಿಯಾ)

* ಟೆಸ್ಟೊಸ್ಟೆರೋನ್ ಕೊರತೆ

* ನಿಮಿರುವಿಕೆ ಸಮಸ್ಯೆ

* ಭಾವನಾತ್ಮಕ, ದೈಹಿಕ ನಿಂದನೆ, ಒತ್ತಡ, ಆತಂಕ

* ಔಷಧಗಳ ಅಡ್ಡಪರಿಣಾಮ

* ಅಗಲಿಕೆಯಂಥ ಒತ್ತಡಕಾರಕ ಪರಿಸ್ಥಿತಿಗಳು

* ಮದ್ಯವ್ಯಸನ

ಚಿಕಿತ್ಸೆಗಳೇನು?

ವೈದ್ಯಕೀಯ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು: ಎಂಡೋಕ್ರೈನ್ ಸಮಸ್ಯೆ, ಸುಸ್ತು ಅಥವಾ ದೀರ್ಘಾವಧಿಯ ಔಷಧಗಳ ಬಳಕೆ ಕುರಿತು ಒಮ್ಮೆ ಪರೀಕ್ಷಿಸಿಕೊಳ್ಳುವ ಅವಶ್ಯಕತೆಯಿದೆ. ವೈದ್ಯರ ಸಂಪರ್ಕದ ನಂತರವಷ್ಟೇ ನಿರ್ದಿಷ್ಟ ಔಷಧಗಳ ಸೇವನೆ ನಿಲ್ಲಿಸುವ ಕುರಿತು ಆಲೋಚಿಸಬೇಕು. ಟೆಸ್ಟೆಸ್ಟೆರೋನ್-ಲೈಂಗಿಕ ಜೀವನದ ಮೇಲೆ ನೇರ ಸಂಪರ್ಕ ಹೊಂದಿದೆ. ದೀರ್ಘಾವಧಿಯ ಬಳಕೆ ಅಡ್ಡಪರಿಣಾಮಕ್ಕೆ ದಾರಿ.

ಒತ್ತಡ ನಿವಾರಕಗಳು: ಕೆಲವು ಒತ್ತಡ ನಿವಾರಕ ಔಷಧಗಳು ಒತ್ತಡ ನಿರ್ವಹಣೆಗೆ ಸಹಾಯ ಮಾಡಬಲ್ಲದು. ಇದು ಲೈಂಗಿಕ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು.

ಆಪ್ತ ಸಮಾಲೋಚನೆ: ಯಾವುದೇ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಕಂಡುಬರದೇ ಇದ್ದರೂ, ವ್ಯಕ್ತಿ ಅಥವಾ ದಂಪತಿಗೆ ಈ ಕುರಿತು ಸಮಾಲೋಚನೆ ನೀಡುವುದು ಅಗತ್ಯ. ಎಲ್ಲ ಸಮಸ್ಯೆಗೂ ಚಿಕಿತ್ಸೆ ಎಂಬುದು ಇದ್ದೇ ಇರುತ್ತದೆ. ಅದರ ಮೂಲ ಬೇರು ಮಾನಸಿಕವಾಗಿದ್ದರೆ, ಸಮಾಲೋಚನೆ ಸಹಾಯ ಮಾಡಬಲ್ಲದು.

ಲೈಂಗಿಕ ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಮಸ್ಯೆಗಳಿಗೆ ಅನುಭವೀ ಸಮಾಲೋಚಕರು, ಥೆರಪಿಸ್ಟ್‌ಗಳಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ದಂಪತಿಗಳಲ್ಲಿ ಆಸಕ್ತಿಯ ಅಸಮತೋಲನವೂ ಈ ಸಮಸ್ಯೆಗೆ ಕಾರಣವಾಗಿರಬಹುದು. ಆದ್ದರಿಂದ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ, ಆತಂಕ ನಿವಾರಣೆಯ ಚಿಕಿತ್ಸೆ, ಮನೋವಿಶ್ಲೇಷಣೆ, ಸಂವಹನ ವೃದ್ಧಿ, ಲೈಂಗಿಕ ಅನ್ಯೋನ್ಯತೆ, ಭಯ, ವಿರಸ, ಕೋಪ ನಿವಾರಣೆ, ವ್ಯಾಯಾಮ, ಧ್ಯಾನ – ಇವೆಲ್ಲವೂ ದೈಹಿಕ ಹಾಗೂ ಮಾನಸಿಕ ದೃಢತೆ ಕಾಯ್ದುಕೊಳ್ಳಲು ಸಹಾಯಕವಾಗಬಲ್ಲವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.