ಗುರುವಾರ , ಜುಲೈ 16, 2020
22 °C

ಆರೋಗ್ಯ ಎಂಬ ದುಬಾರಿ ‘ಚಿಕಿತ್ಸೆ!’

ಡಾ. ವೀಣಾ ಭಟ್‌ Updated:

ಅಕ್ಷರ ಗಾತ್ರ : | |

ಆರೋಗ್ಯ ಎಂಬ ದುಬಾರಿ ‘ಚಿಕಿತ್ಸೆ!’

‘ನೋಡಿ ಡಾಕ್ಟ್ರೇ, ತಲೆನೋವು ಗುಣಪಡಿಸಿಕೊಳ್ಳಲಿಕ್ಕೆ ಇದ್ದ ಹೊಲವನ್ನೇ ಮಾರಬೇಕಾಯಿತು’ ಎಂಬುದು ರಂಗಪ್ಪನ ಅಳಲಾದರೆ, ‘ಕಳೆದ ಬಾರಿ ಹೇರಿಗೆ ಸಿಜೇರಿಯನ್ ಆಗಿ ಇರುವ ಒಂದು ಆಕಳನ್ನು ಮಾರಿ ಆಸ್ಪತ್ರೆ ಬಿಲ್ ಕಟ್ಟಿದ್ದೆ, ಈ ಬಾರಿ ನಾರ್ಮಲ್ ಹೆರಿಗೆ ಆಗುಬಹುದಾ?’ ಎಂದು ಆತಂಕ ವ್ಯಕ್ತಪಡಿಸುವ ಮಲ್ಲಮ್ಮ, ‘ಯಶಸ್ವಿನಿ ಕಾರ್ಡಿನಲ್ಲಿ ಔಷಧ ಉಚಿತವಾಗಿ ಸಿಗುತ್ತಾ ಡಾಕ್ಟ್ರೇ’ – ಎಂದು ನೊಂದು ಕೇಳುವ ಭೀಮಣ್ಣ – ಈ ಎಲ್ಲರ ಅಹವಾಲುಗಳ ನಡುವೆಯೇ ಮತ್ತೆ ಬಂದಿದೆ, ವಿಶ್ವ ಆರೋಗ್ಯ ದಿ‌ನ.

ಆರೋಗ್ಯ ಮನುಷ್ಯನ ಮೂಲಭೂತ ಹಕ್ಕು. ಜೀವನವೆಂದರೆ ಕೇವಲ ಬದುಕುವುದಲ್ಲ; ಆರೋಗ್ಯದಿಂದ ಜೀವಿಸುವುದು. ಆದರೆ ದುರಾದೃಷ್ಟವಶಾತ್ ಆರೋಗ್ಯವನ್ನು ದಾನವಾಗಿ ಅಥವಾ ಎರವಲಾಗಿ ಪಡೆಯಲಿಕ್ಕೂ ಸಾಧ್ಯವಿಲ್ಲ. ಜಾತಿ, ಮತ, ಲಿಂಗಬೇಧವಿಲ್ಲದೆ ಎಲ್ಲರನ್ನೂ ಕಾಡುತ್ತದೆ ಈ ಕಾಯಿಲೆ. ಅದು ಕೇವಲ ನೋವು, ನರಳಿಕೆ, ಉತ್ಸಾಹ, ಸುಖ, ಸಂತೋಷ, ಸಂಭ್ರಮ, ನೆಮ್ಮದಿಗಳನ್ನು ಮಾತ್ರವೇ ನಾಶಗೊಳಿಸದು, ವ್ಯಕ್ತಿಗತ ಹಾಗೂ ಕೌಟುಂಬಿಕ ಸಮಾಧಾನಗಳನ್ನು ನಾಶಮಾಡಿ, ಆರ್ಥಿಕವಾಗಿಯೂ ನಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಇಂದು ವಿಶ್ವದ ಅರ್ಧದಷ್ಟು ಜನರನ್ನು ಸಾಲಬಾಧೆಗೆ ನೂಕುತ್ತಿರುವುದೇ ಈ ಅನಾರೋಗ್ಯ.

ಆರೋಗ್ಯ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ರೋಗವಿಲ್ಲದಿರುವುದು ಎಂದಷ್ಟೇ ಅಲ್ಲ, ಇದೊಂದು ಪರಿಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ, ಅಧ್ಯಾತ್ಮಿಕ ಸುಖಾನುಭವ. ಆದರೆ ಆರೋಗ್ಯವೇನೆಂದು ಗೊತ್ತಿರುವುದು ಹಾಗಿರಲಿ, ಹೆಚ್ಚಿನವರಿಗೆ ತಮ್ಮ ಕಾಯಿಲೆಗಳಿಗೆ ಕಾರಣಗಳೇ ಗೊತ್ತಿಲ್ಲ. ಅವು ಆನುವಂಶೀಯ, ತಪ್ಪು ಆಹಾರಸೇವನೆ, ವಿಶ್ರಾಂತಿಯ ಕೊರತೆ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಯ ಕೊರತೆಯಿಂದ, ರೋಗಾಣುಗಳ ದಾಳಿಯಿಂದ ಕುಂದುವ ರೋಗನಿರೋಧಕಶಕ್ತಿಯಿಂದ, ಗಾಳಿ-ನೆಲ-ಜಲಮಾಲಿನ್ಯಗಳಿಂದ, ಧೂಮಪಾನ-ಮದ್ಯಪಾನಗಳಂಥ ಚಟದಿಂದಾಗುವ ಅಂಗಾಂಗಗಳ ಹಾನಿಯಿಂದ ಎಂಬ ಅರಿವೇ ಇರುವುದಿಲ್ಲ. ರೋಗದ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಳ್ಳದೆ ಉಲ್ಬಣಗೊಂಡಾಗ ಹೆಚ್ಚು ವೆಚ್ಚ ಮಾಡಿ ಹಣ ಕಳೆದುಕೊಳ್ಳುವವರು ಹಲವರು.

ವೈದ್ಯಕೀಯ ಕ್ಷೇತ್ರದಲ್ಲಿಂದು ಸಾಕಷ್ಟು ಪ್ರಗತಿಯಾಗಿ ಪರಿಣಾಮಕಾರಿಯಾದ ಔಷಧ ಹಾಗೂ ಚಿಕಿತ್ಸಾಕ್ರಮಗಳು ಲಭ್ಯವಿವೆ; ಹೈಟೆಕ್ ಆಸ್ಪತ್ರೆಗಳೂ ಹೆಚ್ಚೆಚ್ಚು ತೆರೆದುಕೊಳ್ಳುತ್ತಿವೆ. ಆದರೂ ಹೆಚ್ಚಿನ ರೋಗಿಗಳ ಸ್ಥಿತಿ ಚಿಂತಾಜನಕವೇ. ಆಧುನಿಕ ಜೀವನಶೈಲಿ ಸಂಬಂಧ ಕಾಯಿಲೆಗಳಾದ ಮಧುಮೇಹ, ಏರು ರಕ್ತದೊತ್ತಡ, ಹೃದ್ರೋಗ, ಕ್ಯಾನ್ಸರ್‌ನಂತಹ ರೋಗಗಳು ಜನರನ್ನು ಒಂದೆಡೆ ಕಂಗೆಡಿಸುತ್ತಿದ್ದರೆ ಇನ್ನೊಂದೆಡೆ ಹೆಚ್ಚಿರುವ ಚಿಕಿತ್ಸಾ ವೆಚ್ಚಗಳು ಜನಸಮುದಾಯಕ್ಕೆ ಹೊರೆಯಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೈದ್ಯಕೀಯರಂಗದ ವ್ಯಾಪಾರೀಕರಣದಿಂದಾಗಿ ದಿನೇದಿನೇ ರೋಗಿ–ವೈದ್ಯರ ಸಂಬಂಧ ಹದಗೆಡುತ್ತಿದೆ.

ಯಾರೊಬ್ಬರಿಗೂ ‘ಸಾವು’ ಮತ್ತು ‘ಆರ್ಥಿಕ ಸಂಕಷ್ಟ’ಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಬರಬಾರದು. ಹಾಗೆಯೇ ‘ಆಹಾರ’ ಹಾಗೂ ‘ಔಷಧ’ ಕೊಳ್ಳುವಿಕೆಯ ನಡುವೆಯೂ ಆಯ್ಕೆ ಮಾಡಿಕೊಳ್ಳುವ ಹಾಗಿರಬಾರದು. ಸಾರ್ವತ್ರಿಕ ಆರೋಗ್ಯ ರಕ್ಷಣೆ ಎಂದರೆ ಎಲ್ಲರಿಗೂ ಎಲ್ಲವನ್ನೂ ಎಲ್ಲ ಸಂದರ್ಭಗಳಲ್ಲಿಯೂ ಉಚಿತವಾಗಿ ನೀಡುವುದು ಎಂದರ್ಥವಲ್ಲ. ಇದನ್ನು ಯಾವ ರಾಷ್ಟ್ರವೂ ಸುಸ್ಥಿರವಾಗಿ ನಡೆಸಲು ಸಾಧ್ಯವಿಲ್ಲ. ಇಲ್ಲಿ ಜನರಿಗೆ ಕನಿಷ್ಠ ಅತ್ಯಗತ್ಯ ಆರೋಗ್ಯ ಸೇವೆಯನ್ನು ದೊರಕಿಸುವುದರ ಜೊತೆಗೆ ಅದನ್ನು ವಿಸ್ತರಿಸಿ ಹಣಕಾಸಿನ ಸುರಕ್ಷತೆಯನ್ನು ನೋಡಿಕೊಳ್ಳುವುದು; ಮತ್ತು ಬರಿಯ ಔಷಧ ಚಿಕಿತ್ಸೆಯಷ್ಟೇ ಅಲ್ಲ, ಆರೋಗ್ಯಕರ ಪರಿಸರವನ್ನು ಒದಗಿಸುವುದು ಕೂಡ ಸೇರುತ್ತದೆ. ಕೇವಲ ಮಾತ್ರೆ–ಔಷಧಗಳ ಸೇವನೆಯಿಂದ, ಆಸ್ಪತ್ರೆ–ವೈದ್ಯರ ಭೇಟಿಯಿಂದಷ್ಟೇ ಆರೋಗ್ಯಸಂಪಾದನೆ ಸಾಧ್ಯವಿಲ್ಲ. ನೈಜ ಆರೋಗ್ಯದ ಅರಿವು ಪಡೆದು ನಿತ್ಯಜೀವನದಲ್ಲಿ ಈ ಅರಿವನ್ನು ಅಳವಡಿಸಿಕೊಂಡಾಗ ಮಾತ್ರ ಆರೋಗ್ಯ ಸಿದ್ಧಿ ಸಾಧ್ಯ. ಆಹಾರ, ವ್ಯಾಯಾಮ, ವಿಶ್ರಾಂತಿ, ಸ್ವಚ್ಛತೆಗಳ  ಕುರಿತಾಗಿ ನಿರ್ವಹಿಸುವ ಮುತುವರ್ಜಿಯೇ ರೋಗಗಳ ವಿರುದ್ಧ ತೆಗೆದುಕೊಳ್ಳುವ ಎಚ್ಚರಿಕೆಯ ಮಾನದಂಡಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.