ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತ ಏರಿದರು, ಅಸ್ತಮಾ ಗೆದ್ದರು

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪ್ರಕೃತಿಯ ರಮ್ಯ ವಾತಾವರಣ, ಅಗಾಧ ಸಾಮರ್ಥ್ಯದ ಎದುರು ಮನುಷ್ಯ ಮೂಕವಿಸ್ಮಿತನಾಗುತ್ತಾನೆ. ಪ್ರಕೃತಿಯ ಕೂಸಾದ ಮನುಷ್ಯನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಪ್ರಕೃತಿಯಲ್ಲಿಯೇ ಪರಿಹಾರ ಇರುತ್ತದೆ. ಇದು ಸಾಧ್ಯವಾಗಲು ನಾವು ಮುಕ್ತವಾಗಿ ಪ್ರಕೃತಿಯಲ್ಲಿ ಬೆರೆಯಬೇಕಷ್ಟೇ. ಅಸ್ತಮಾ ಸಮಸ್ಯೆ ಹೊಂದಿದ್ದ ಸತ್ಯರೂಪ್ ಸಿದ್ಧಾಂತ್‌ಗೆ ಪ್ರಕೃತಿಯ ಒಡನಾಟವೇ ಚೈತನ್ಯ ಕೊಟ್ಟಿತು. ಅವರು ಆಸ್ತಮಾ ಗೆದ್ದ ಬಗೆ ವಿಶಿಷ್ಟ ಹಾಗೂ ಆಸಕ್ತಿದಾಯಕ.

ಅಸ್ತಮಾ ಇದ್ದವರಿಗೆ ಸಹಜ ವಾತಾವರಣದಲ್ಲಿಯೇ ಕೆಲವೊಮ್ಮೆ ಉಸಿರಾಟದ ಸಮಸ್ಯೆಯಾಗುತ್ತದೆ. ಇನ್ನು ಪರ್ವತಾರೋಹಣಕ್ಕೆ ಉಸಿರಿನ ಹಿಡಿತವೇ ಜೀವಾಳ. ತಮ್ಮದೇ ವಿಧಾನದಲ್ಲಿ ಅಸ್ತಮಾದಿಂದ ಬಿಡುಗಡೆ ಪಡೆದಿರುವ ಸತ್ಯರೂಪ್ ಪರ್ವತಾರೋಹಣದ ಮೋಹಿ.

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಸತ್ಯರೂಪ್, ಈಚೆಗಷ್ಟೆ ಅಂಟಾರ್ಕ್ಟಿಕಾದ ಅತ್ಯಂತ ಎತ್ತರದ ಮೌಂಟ್ ವಿನ್ಸನ್ ಮ್ಯಾಸಿಫ್ ಪರ್ವತದ ತುದಿ ತಲುಪಿ ಮರಳಿದ್ದಾರೆ. ಈ ಮೂಲಕ ಏಳು ಖಂಡಗಳಲ್ಲಿನ ಏಳು ಅತಿ ಎತ್ತರದ ಪರ್ವತಗಳನ್ನೇರಿದ ದೇಶದ ಎರಡನೆಯ ಪರ್ವತಾರೋಹಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಲ್ಲಿ ಮಸ್ತಾನ್ ಬಾಬು ಅವರು ಈ ಸಾಧನೆಯ ಹಾದಿಯಲ್ಲಿ ಮೊದಲಿನವರು.

‘ನಾನು ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದೆ. ಕೆಲ ಆಹಾರಗಳನ್ನು ಸೇವಿಸಿದರೆ ಅದರಿಂದ ಆಸ್ತಮಾ ಮತ್ತಷ್ಟು ಹೆಚ್ಚುತ್ತಿತ್ತು. ಒಂದು ಕಾಯಿಲೆಗೆ ಔಷಧಿಯನ್ನು ಸತತವಾಗಿ ತೆಗೆದುಕೊಳ್ಳುತ್ತಿದ್ದರೆ, ರೋಗವೂ ಅದಕ್ಕೆ ಹೊಂದಿಕೊಳ್ಳಲು ಆರಂಭಿಸುತ್ತದೆ. ಇದನ್ನು ಮನಗಂಡು, ಹೊರಗಿನ ಔಷಧವನ್ನು ಕ್ರಮೇಣ ಕಡಿಮೆ ಮಾಡಿದೆ. ಆತ್ಮಸ್ಥೈರ್ಯವನ್ನೇ ಔಷಧ ಮಾಡಿಕೊಂಡೆ. ಪ್ರಕೃತಿಯಲ್ಲಿ ಮುಕ್ತವಾಗಿ ಬೆರೆಯುವುದು ನನ್ನ ಜೀವನ ವಿಧಾನದ ಭಾಗವಾಯಿತು. ಇದನ್ನು ತಿಂದರೆ ಆಸ್ತಮಾ ಹೆಚ್ಚುತ್ತದೆ ಎನಿಸುವಂತಹ ಆಹಾರಗಳನ್ನೂ ನಿರ್ಭೀತಿಯಿಂದ ತಿನ್ನಲು ಆರಂಭಿಸಿದೆ. ನನ್ನ ಆತ್ಮವಿಶ್ವಾಸದ ಎದುರು ಆಸ್ತಮಾ ತಲೆಬಾಗಿತು. ಸಮಸ್ಯೆಯಿಂದ ಹೊರಬಂದು ಸಹಜ ಜೀವನ ನಡೆಸಬಹುದು ಎನ್ನುವ ಆತ್ಮವಿಶ್ವಾಸ ಮೂಡಿಸಲು ನನ್ನ ಉದಾಹರಣೆಯನ್ನೇ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

2014ರ ಜೂನ್‌ನಲ್ಲಿ ಉತ್ತರ ಅಮೆರಿಕದ ಮೌಂಟ್ ಡೆನಾಲಿ–ಮೌಂಟ್ ಮೆಕಿನ್ಲಿ ಪರ್ವತದ ತುದಿ ತಲುಪಿದರು. 9 ದಿನಗಳ ಅವಧಿಯಲ್ಲಿ (ಪರ್ವತದ ಬುಡದಿಂದ ತುದಿ ತಲುಪಲು ತೆಗೆದುಕೊಂಡ ಸಮಯ) ಭಾರತೀಯರೊಬ್ಬರು ಗೈಡ್‌ ನೆರವಿಲ್ಲದೆ ಈ ಪರ್ವತಾರೋಹಣ ಪೂರ್ಣಗೊಳಿಸಿದ್ದು ಇದೇ ಮೊದಲಾಗಿತ್ತು.

‘ಈ ಆಸ್ತಮಾ ನನ್ನನ್ನು ಕೊಲ್ಲಬಹುದು ಎಂದು ಹಲವು ಬಾರಿ ಅನಿಸಿತ್ತು. ಆದರೆ ನಾನು ಧೃತಿಗೆಡಲಿಲ್ಲ. ಭೂಮಿಯ ಮೇಲೆ ಮನುಷ್ಯ ಕಾಲಿಡಬಹುದಾದ ಅತ್ಯಂತ ಎತ್ತರದ ಸ್ಥಳ ಮೌಂಟ್ ಎವರೆಸ್ಟ್. ಅಲ್ಲಿಗೆ ತಲುಪುವುದು ಮನುಷ್ಯನ ಮನೋದೈಹಿಕ ಸಾಮರ್ಥ್ಯದ ಅತ್ಯುನ್ನತ ಪರೀಕ್ಷೆಯೂ ಹೌದು. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಮೌಂಟ್ ಎವರೆಸ್ಟ್ ಹತ್ತುವ ಮೊದಲ ಯತ್ನ ಯಶ ಕಂಡಿರಲಿಲ್ಲ. 2016ರಲ್ಲಿ ಈ ಗುರಿ ಸಾಧಿಸಿದೆ’ ಎನ್ನುವುದು ಸತ್ಯರೂಪ್ ಅವರು ಹೆಮ್ಮೆಯಿಂದ ಹೇಳುವ ಮಾತು.

**

ಆಸ್ತಮಾ ನನ್ನ ಬದುಕಿಗೆ ಅನೇಕ ಮಿತಿಗಳನ್ನು ಹೇರಿತ್ತು. ಅದರಿಂದ ಹೊರಬರಲೇಬೇಕು ಎಂದು ಗಟ್ಟಿ ಸಂಕಲ್ಪ ಮಾಡಿಕೊಂಡೆ. ಪ್ರಕೃತಿಯ ಒಡನಾಟ, ಆರೋಗ್ಯಕರ ಆಹಾರ ಪದ್ಧತಿ ನನಗೆ ಮರುಜೀವ ನೀಡಿತು. ಆಸ್ತಮಾದಿಂದ ಬಿಡುಗಡೆ ಪಡೆಯಲು ಔಷಧಗಳಷ್ಟೇ ಸಾಲದು. ಆತ್ಮಸ್ಥೈರ್ಯ ಮತ್ತು ದೃಢವಿಶ್ವಾಸವೂ ಬೇಕು.

-ಸತ್ಯರೂಪ್ ಸಿದ್ಧಾಂತ, ಪರ್ವತಾರೋಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT