ಶನಿವಾರ, ಆಗಸ್ಟ್ 8, 2020
22 °C

ನಾಗರಿಕರ ಮೊಗದಲ್ಲಿ ನಗು ತಂದ ಆಸ್ಪತ್ರೆಗಳು

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ನಾಗರಿಕರ ಮೊಗದಲ್ಲಿ ನಗು ತಂದ ಆಸ್ಪತ್ರೆಗಳು

ಮನಸಿಗೆ ಹಿಡಿಸುವ ವಾತಾವರಣ. ಕಿಕ್ಕಿರಿದು ತುಂಬಿದ್ದ ರೋಗಿಗಳು. ವೈದ್ಯರ ಬಗ್ಗೆ ಸಮಾಧಾನವಾಗಿ ಮಾಹಿತಿ ನೀಡುತ್ತಿದ್ದ ಸಿಬ್ಬಂದಿ. ರೋಗಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಅವರ ಕಾಯಿಲೆಗಳಿಗೆ ಸ್ಪಂದಿಸುತ್ತಿದ್ದ ವೈದ್ಯರು...

ಇದು ಬಿಬಿಎಂಪಿ ಅಧೀನದಲ್ಲಿರುವ ಹಲಸೂರು, ಶ್ರೀರಾಮಪುರ, ಹೊಸಹಳ್ಳಿ, ಸಿದ್ದಯ್ಯ ರಸ್ತೆ ಹಾಗೂ ಬನಶಂಕರಿ ರೆಫರಲ್ ಆಸ್ಪತ್ರೆ, ಹಾಗೂ ಎನ್‌.ಆರ್.ಕಾಲೊನಿ ಹೆರಿಗೆ ಆಸ್ಪತ್ರೆಗಳಲ್ಲಿ ಕಂಡುಬಂದ ದೃಶ್ಯಗಳು. ಆಸ್ಪತ್ರೆಗಳಲ್ಲಿ ಮಾತಿಗೆ ಸಿಕ್ಕ ಬಹುತೇಕರು ಬಿಬಿಎಂಪಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ಇವನ್ನು ಹೊರತುಪಡಿಸಿ ನಗರದಲ್ಲಿ ಪಾಲಿಕೆಯ 26 ಹೆರಿಗೆ ಆಸ್ಪತ್ರೆಗಳಿವೆ.

ಆಸ್ಪತ್ರೆಗಳಲ್ಲಿನ ಸ್ವಚ್ಛತೆ, ಶೌಚಾಲಯ ಸೌಲಭ್ಯ, ರೋಗಿಗಳ ಆರೈಕೆ, ಸಿಬ್ಬಂದಿಯ ಸ್ಪಂದನೆ, ಕುಡಿಯುವ ನೀರು, ವಿಶ್ರಾಂತಿ ಹೀಗೆ ಹತ್ತಾರು ವಿಭಾಗಗಳನ್ನು ಪ್ರತಿದಿನ ಹಿರಿಯ ಅಧಿಕಾರಿಗಳು ಗಮನಿಸುತ್ತಾರೆ. ಸಿಬ್ಬಂದಿಯ ಉತ್ತಮ ಸ್ಪಂದನೆ ಇರುವ ಕಾರಣದಿಂದಲೇ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಗರ್ಭಿಣಿಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಜೆ.ಸಿ.ರಸ್ತೆ ಬಳಿ ಇರುವ ಎಚ್.ಸಿದ್ದಯ್ಯ ರಸ್ತೆ ರೆಫೆರಲ್ ಆಸ್ಪತ್ರೆಗೆ ಪಾಲಿಕೆಯು ಹೈಟೆಕ್ ಸ್ಪರ್ಶ ನೀಡಿದೆ. 30 ಹಾಸಿಗೆ ಸಾಮರ್ಥ್ಯವುಳ್ಳ ಈ ಆಸ್ಪತ್ರೆಯು ಸುತ್ತಮುತ್ತಲಿನ ಸಾರ್ವಜನಿಕರ ಮೊದಲ ಆಯ್ಕೆಯಾಗಿದೆ. ‘ಇತ್ತೀಚೆಗೆ ನಿರ್ಮಿಸಿದ ಕಟ್ಟಡದಲ್ಲಿ ‘ವಿಶೇಷ ನವಜಾತ ಶಿಶು ನಿಗಾ ಘಟಕ’ ತೆರೆಯಲಾಗಿದೆ. ಈ ಘಟಕದಲ್ಲಿ ಹೊರಗಿನ ಆಸ್ಪತ್ರೆಗಳ ನವಜಾತ ಶಿಶುಗಳಿಗಾಗಿ 8 ಯೂನಿಟ್‌ಗಳು ಹಾಗೂ ನಮ್ಮ ಆಸ್ಪತ್ರೆಯ ಶಿಶುಗಳಿಗೆ 3 ಯೂನಿಟ್‌ಗಳನ್ನು ಮೀಸಲಿಡಲಾಗಿದೆ’ ಎಂದು ಆಸ್ಪತ್ರೆಯ ಸೂಪರಿಟೆಂಡೆಂಟ್ ಹಾಗೂ ವೈದ್ಯರಾದ ಸುಮಿತ್ರಾ ಮಾಹಿತಿ ನೀಡಿದರು.

ಸ್ತನ ಕ್ಯಾನ್ಸರ್ ರೋಗ ಪತ್ತೆ ಪರೀಕ್ಷೆ, ಎಕ್ಸ್‌ ರೇ, ಹೃದ್ರೋಗ ಸೇವಾ ಘಟಕ ಸೇರಿದಂತೆ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಅವಶ್ಯವಾದ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೆ ಅಗತ್ಯ ಸೌಕರ್ಯವುಳ್ಳ ಲ್ಯಾಬ್ ಸಹ ಇಲ್ಲಿದೆ.

(ಪ್ರಜಕ್ತಾ)

‘ಹೆರಿಗೆಗೆ ಸಂಬಂಧಿಸಿದ ಸಕಲ ವೈದ್ಯಕೀಯ ಸೇವೆಗಳನ್ನೂ ಒಳಗೊಂಡಿರುವ ನಮ್ಮ ಆಸ್ಪತ್ರೆಯು ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ. ಗುಣಮಟ್ಟದ ವೈದ್ಯಕೀಯ ಸೇವೆ, ಸ್ವಚ್ಛತೆ, ಔಷಧಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿ, ಸುಸಜ್ಜಿತ ವಾರ್ಡ್‌ಗಳು ಹಾಗೂ ಮೂಲಸೌಕರ್ಯದ ವಿಷಯದಲ್ಲಿ ನಾವು ರಾಜಿಯಾಗಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀರಾಮಪುರ ರೆಫೆರಲ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಹಾಗೂ ವೈದ್ಯರಾದ ಫಾತಿಮಾ.

ನಗರದ ವಿವಿಧ ಭಾಗಗಳ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಈ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. 24 ತಾಸು ಕಾರ್ಯನಿರತವಾಗಿರುವ ರಕ್ತನಿಧಿ ಕೇಂದ್ರವೂ ಇಲ್ಲಿದೆ. ಒಳರೋಗಿಗಳ ಸ್ನಾನಕ್ಕೆ ಬಿಸಿನೀರಿನ ಸೌಲಭ್ಯವನ್ನೂ ಈ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ.

‘ಕಟ್ಟಡದ ಸಮಸ್ಯೆ ಬಿಬಿಎಂಪಿಯ ಕೆಲವು ಆಸ್ಪತ್ರೆಗಳಿಗೆ ತೊಡಕಾಗಿದೆ. ಬಿಬಿಎಂಪಿಯ ಆರೋಗ್ಯ ವಿಭಾಗಕ್ಕೆ ಪ್ರತ್ಯೇಕವಾಗಿ ಎಂಜಿನಿಯರ್ ತಂಡ ನೀಡಿದರೆ ನಿರ್ವಹಣೆಗೆ ಸಹಕಾರಿಯಾಗುತ್ತದೆ’ ಎನ್ನುವುದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ನಿರ್ಮಲಾ ಬುಗ್ಗಿ ಅವರ ಅಭಿಪ್ರಾಯ.

ಸಾಲುಗಟ್ಟಿ ನಿಂತಿದ್ದ ರೋಗಿಗಳು

ಶ್ರೀರಾಮಪುರ ಹಾಗೂ ಹೊಸಹಳ್ಳಿ ರೆಫೆರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಾಗೂ ತಪಾಸಣೆಗಾಗಿ ಜನರು ಸಾಲುಗಟ್ಟಿ ನಿಂತಿದ್ದರು. ಬಸವನಗುಡಿಯ ಎನ್.ಆರ್.ಕಾಲೊನಿ ಹೆರಿಗೆ ಆಸ್ಪತ್ರೆಯಲ್ಲಿಯೂ ಇದೇ ಸ್ಥಿತಿ ಕಂಡು ಬಂತು.

ಈ ಎಲ್ಲ ಕಡೆ ವೈದ್ಯರು, ರೋಗಿಗಳನ್ನು ಆತ್ಮೀಯವಾಗಿ ಕೊಠಡಿಯೊಳಗೆ ಬರಮಾಡಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ರೋಗಿಗಳ ಮುಖದಲ್ಲಿದ್ದ ಆತಂಕವು ವೈದ್ಯರ ಆತ್ಮೀಯತೆ ಕಂಡು ದೂರವಾಯಿತು. ರೋಗಿಗಳ ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದರೂ ಬೇಸರಗೊಳ್ಳದೆ ಅವರ ಸಮಸ್ಯೆಗಳನ್ನು ವೈದ್ಯರು ಆಲಿಸಿದರು. ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಿದ್ದರು.

ಎನ್‌.ಆರ್. ಕಾಲೊನಿ ಹೆರಿಗೆ ಆಸ್ಪತ್ರೆಯ ವಾರ್ಡ್‌ನಲ್ಲಿ ಹತ್ತಾರು ಬಾಣಂತಿಯರು ಮಲಗಿದ್ದರು. ಅವರ ಪೈಕಿ ಇಟ್ಟಮಡುವಿನ ನಿವಾಸಿಯಾದ ಸುಪ್ರಿಯಾ ಅವರನ್ನು ಮಾತಿಗೆಳೆದೆ.

‘ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೇಗೆ ಕೊಡುತ್ತಾರೋ ಎಂಬ ಹಿಂಜರಿಕೆಯಿಂದಲೇ ಇಲ್ಲಿಗೆ ಬಂದೆ. ಆದರೆ, ಇಲ್ಲಿನ ಪರಿಸ್ಥಿತಿಯೇ ಬೇರೆ. ಮುಖ್ಯ ವೈದ್ಯಾಧಿಕಾರಿ ದಿನಕ್ಕೆ ಎರಡು ಬಾರಿ ಬಂದು ನನ್ನ ಹಾಗೂ ಮಗುವಿನ ಆರೋಗ್ಯ ವಿಚಾರಿಸುತ್ತಾರೆ. ಅದೇ ರೀತಿ ನರ್ಸ್‌ಗಳು ನಮ್ಮ ಆರೋಗ್ಯದ ಮೇಲೆ ನಿಗಾ ಇಟ್ಟಿರುತ್ತಾರೆ. ಅವರ ಆರೈಕೆ ಕಂಡು ಖುಷಿಯಾಯಿತು’ ಎಂದರು ಹೆರಿಗೆಯಾಗಿ ಚೇತರಿಸಿಕೊಳ್ಳುತ್ತಿದ್ದ ಸುಪ್ರಿಯಾ.

‘ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರು ನಮ್ಮನ್ನು ಸರಿಯಾಗಿ ನೋಡುವುದಿಲ್ಲ ಎಂದು ಮೊದಲ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿಯ ವೈದ್ಯರು ಅಷ್ಟೇನೂ ಕಾಳಜಿ ತೋರಲಿಲ್ಲ. ನರ್ಸ್‌ಗಳೂ ಉದಾಸೀನ ಮಾಡುತ್ತಿದ್ದರು. ಡಿಸ್‌ಚಾರ್ಜ್ ಆಗುವಾಗ ₹60 ಸಾವಿರ ಬಿಲ್ ಮಾಡಿದರು. ಆದರೆ, ಇಲ್ಲಿ ಒಂದು ರೂಪಾಯಿ ಖರ್ಚು ಮಾಡದೇ ಹೆರಿಗೆ ಮತ್ತು ಚಿಕಿತ್ಸೆ ಪೂರ್ಣಗೊಂಡಿದೆ’ ಎಂದು ಹೇಳಿದರು.

ಜಯನಗರದಿಂದ ಬಂದಿದ್ದ ಗರ್ಭಿಣಿ ಪ್ರಜಕ್ತಾ ಮಾತನಾಡಿ, ‘ಐದು ತಿಂಗಳಿನಿಂದ ತಪಾಸಣೆಗಾಗಿ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿಯವರೆಗೂ ಯಾವೊಬ್ಬ ವೈದ್ಯರಾಗಲಿ ಅಥವಾ ಸಿಬ್ಬಂದಿಯಾಗಲಿ ಹಣ ಕೇಳಿಲ್ಲ. ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಪರಿಚಯಸ್ಥರಿಗೂ ಇದೇ ಆಸ್ಪತ್ರೆಗೆ ಬರುವಂತೆ ಸಲಹೆ ನೀಡುತ್ತೇನೆ’ ಎಂದರು.

(ಮಗುವಿನೊಂದಿಗೆ ಸುಪ್ರಿಯಾ)

**

ಯಾವೆಲ್ಲ ಸೌಲಭ್ಯ ಲಭ್ಯ

* ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಯ ಸೇವೆ

* ತಾಯಿ ಹಾಗೂ ಮಗುವಿನ ಆರೈಕೆ ಕೇಂದ್ರ

* ಸಂತಾನ ಹರಣ ಶಸ್ತ್ರ ಚಿಕಿತ್ಸೆ

* ಎಂಪಿಟಿ ಕಾಯ್ದೆಯಡಿ ಗರ್ಭಪಾತ ಸೌಲಭ್ಯ

* ತಾಯಿಯಿಂದ ಮಗುವಿಗೆ ಹರಡಬಹುದಾದ ಎಚ್‌ಐವಿ ರೋಗ ತಡೆ ಸೌಲಭ್ಯ

* ಗಂಡಾಂತರ ಹೆರಿಗೆ, ಸಿಜೇರಿಯನ್  ಹೆರಿಗೆ ಸೌಲಭ್ಯ

* ಅತ್ಯಾಧುನಿಕ ಎಂಡೊಸ್ಕೋಪಿಕ್ ಶಸ್ತ್ರಚಿಕಿತ್ಸೆ

* ಸರ್ಕಾರಿ ಅನುದಾನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ

* ಮಡಿಲು ಕಿಟ್ ಹಾಗೂ ಉಚಿತವಾಗಿ ಊಟದ ವ್ಯವಸ್ಥೆ

* ರಕ್ತ ನಿಧಿ ಕೇಂದ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.