ಮಂಗಳವಾರ, ಡಿಸೆಂಬರ್ 10, 2019
26 °C

ನನ್ನ ಪ್ರಕಾರ ಆರೋಗ್ಯ ಎಂದರೆ...

Published:
Updated:
ನನ್ನ ಪ್ರಕಾರ ಆರೋಗ್ಯ ಎಂದರೆ...

ನಮ್ಮನ್ನು ನಾವು ಪ್ರೀತಿಸುವುದು

ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದರ ಜೊತೆಗೆ ಇತರರನ್ನೂ ಪ್ರೀತಿಸುತ್ತಾ ಖುಷಿಖುಷಿಯಾಗಿ ಬದುಕಿನ ಬಂಡಿ ತಳ್ಳುವುದೇ ಆರೋಗ್ಯ. ಇರುವಷ್ಟು ಕಾಲ ಖುಷಿಯಾಗಿರಬೇಕು. ಮುಂಜಾನೆ ವಾಕಿಂಗ್‌, ಯೋಗ, ಧ್ಯಾನ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ನಮ್ಮ ದೇಹ ಮತ್ತು ಮನಸ್ಸನ್ನು ಸದೃಢವಾಗಿ ಇಡಬಲ್ಲದು. ಉತ್ತಮ ಆರೋಗ್ಯಕ್ಕೆ ಮಾತ್ರೆ, ಔಷಧಗಳು ಅನಿವಾರ್ಯ ಎಂದು ಅನೇಕರು ನಂಬಿದ್ದಾರೆ. ಆದರೆ, ಔಷಧಗಳಿಗೆ ಅಂಟಿಕೊಳ್ಳುವುದೇ ಆರೋಗ್ಯವಲ್ಲ. ಔಷಧಗಳ ಅವಲಂಬನೆ ಇಲ್ಲದೆ ನಗುನಗುತ್ತಾ, ನಗಿಸುತ್ತಾ ಬದುಕುವುದರಲ್ಲಿ ಆರೋಗ್ಯದ ಗುಟ್ಟು ಅಡಗಿದೆ.

–ಮಹಾಂತೇಶ್ ಬೀಳಗಿ, ಉದ್ಯಮಿ, ರಾಜರಾಜೇಶ್ವರಿನಗರ

*

ಊಟವೇ ಸಕಲವು

ಹೊಟ್ಟೆ ತುಂಬಾ ಉಂಡು, ರಟ್ಟೆ ಮುರಿಯೋ ಹಾಗೆ ದುಡೀತಾ ಬದುಕೋದೇ ಆರೋಗ್ಯ. ಸೊಪ್ಪುಸದೆಯಿಂದ ಹಿಡಿದು ಬಾಡೂಟದವರೆಗೂ ಎಲ್ಲವನ್ನೂ ತಿನ್ನೋ ನಮಗೆ ಇಂಥದ್ದೇ ಊಟ ಆಗಬೇಕು ಅನ್ನೋದೇನೂ ಇಲ್ಲ. ಮಾಡೋ ಕೆಲಸದಲ್ಲಿ ಶ್ರದ್ಧೆ ಇದ್ದರೆ ಅದು ನಮ್ಮನ್ನು ಅರಾಮವಾಗಿ ಇಡುತ್ತೆ. ನಾವು ಮಕ್ಕಳಾಗಿದ್ದಾಗ, ಈಗಿರುವ ಕುರುಕಲು ತಿಂಡಿಗಳು ಇರಲಿಲ್ಲ. ಕಾಳು, ಬೇಳೆ, ಸೊಪ್ಪು ತರಕಾರಿಗಳೇ ನಮಗೆ ಕುರುಕಲು. ನಮ್ಮ ಹಿರೀಕರು ಗಟ್ಟಿಮುಟ್ಟಾಗಿ ಇರ‍್ತಾ ಇದ್ರು. ಪೌಷ್ಟಿಕಾಂಶ ಇರೋ ಊಟ ಉಣ್ಣೋರು. ಆದರೆ ನಮ್ಮದೆಲ್ಲ ಬರೀ ಬೂಸ. ಅದ್ರಾಗೆ ಏನೂ ಇರಲ್ಲ. ರುಚಿ ಸಿಗುತ್ತಷ್ಟೆ. ಅದ್ಕೆ ನಂಗೆ ಆರೋಗ್ಯ ಅಂದ ತಕ್ಷಣ ತಲೆಗೆ ಬರೋದು ಊಟ ಮಾತ್ರಾನೇ.

–ಅಂಜನಮ್ಮ, ಪೌರಕಾರ್ಮಿಕರು, ದಾಸರಹಳ್ಳಿ

*

ಸಮಾಜದ ಸ್ವಾಸ್ಥ್ಯ

ಅಸಹಿಷ್ಣುತೆ, ಅಸಮಾಧಾನ, ಮತೀಯವಾದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮನ್ನು ಕಾಡುತ್ತಿವೆ. ಈ ವಾತಾವರಣಗಳಿಂದ ಮುಕ್ತರಾಗಿ ಸಹೋದರತೆ, ಸಹಬಾಳ್ವೆಯ ಜೀವನ ಸಾಗಿಸುವುದೇ ನಿಜಾರ್ಥದ ಆರೋಗ್ಯ. ‘ಆರೋಗ್ಯ’ ಎನ್ನುವುದನ್ನು ದೈಹಿಕ ಸೌಂದರ್ಯ ಅಥವಾ ಮಾನಸಿಕ ನೆಮ್ಮದಿ ಎನ್ನುವ ಸೀಮಿತ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಬೇಕಿಲ್ಲ. ಆರೋಗ್ಯ ಎಂದರೆ ಸಮಾಜದ ಸ್ವಾಸ್ಥ್ಯವೂ ಹೌದು. ಜಾತ್ಯತೀತತೆ, ಸಾಮುದಾಯಿಕ ಭಾವನೆಯಿಂದ ಕೂಡಿದ ಬದುಕೇ ಅರ್ಥಪೂರ್ಣ, ಆರೋಗ್ಯವಂತ ಬದುಕು.

–ಉಷಾ, ಶಿಕ್ಷಕಿ, ಉತ್ತರಹಳ್ಳಿ

*

ಮಾನಸಿಕ, ದೈಹಿಕ ಫಿಟ್‌ನೆಸ್

ಆರೋಗ್ಯವೇ ಭಾಗ್ಯ. ಆದರೆ, ಬಾಹ್ಯ ಸೌಂದರ್ಯವೂ ಮುಖ್ಯ. ಬಾಹ್ಯ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅನೇಕರು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಮಾನಸಿಕ ಹಾಗೂ ದೈಹಿಕ ಫಿಟ್‌ನೆಸ್‌ ಆರೋಗ್ಯ ಎನಿಸಿಕೊಳ್ಳುತ್ತದೆ. ಆಧುನಿಕ ಮತ್ತು ಜಾಗತೀಕರಣಕ್ಕೆ ಒಗ್ಗಿಕೊಂಡಿರುವ ಜೀವನಶೈಲಿಯಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆದ್ಯತೆ ನೀಡಲೇಬೇಕು. ನಿಯಮಿತ ಮತ್ತು ಸರಳ ಆಹಾರ ಪದ್ಧತಿ ಹಾಗೂ ಒತ್ತಡದಿಂದ ದೂರ ಇರುವ ಬದುಕೇ ನಿಜವಾದ ಆರೋಗ್ಯಪೂರ್ಣ ಬದುಕು.

–ರಕ್ಷಿತ್‌ ತೀರ್ಥಹಳ್ಳಿ, ಚಲನಚಿತ್ರ ನಿರ್ದೇಶಕ, ಬನಶಂಕರಿ

*

ನೆಮ್ಮದಿಯ ಬದುಕು

ಸದ್ಯದ ಪರಿಸ್ಥಿತಿಯಲ್ಲಿ ಜೀವನ ಎಂದರೆ ಒತ್ತಡ ಎಂದು ವ್ಯಾಖ್ಯಾನಿಸುವ ಪರಿಸ್ಥಿತಿ ಬಂದಿದೆ. ಮಾನಸಿಕ ಒತ್ತಡ, ಖಿನ್ನತೆ ನಮ್ಮನ್ನು ಕಾಡುತ್ತಿದೆ. ಒತ್ತಡಗಳಿಂದ ದೂರವಿದ್ದು ನೆಮ್ಮದಿಯ ಜೀವನ ಸಾಗಿಸುವುದೇ ನನ್ನ ಪ್ರಕಾರ ಆರೋಗ್ಯ. ಮಾನಸಿಕ ಆರೋಗ್ಯದ ಮುಂದೆ ಬಾಹ್ಯ ಸೌಂದರ್ಯ ಗೌಣವಾಗುತ್ತದೆ. ನನ್ನ ಪ್ರಕಾರ ನೆಮ್ಮದಿಯೇ ನಿಜವಾದ ಆರೋಗ್ಯ.

–ಮನು, ಸಾಫ್ಟ್‌ವೇರ್ ಎಂಜಿನಿಯರ್, ಮಲ್ಲೇಶ್ವರ

*

ದೇಹ, ಮನಸ್ಸಿನ ಮತೋಲನ

ನನ್ನ ಪ್ರಕಾರ ಮನಸ್ಸು, ದೇಹ ಹಾಗೂ ಆತ್ಮದ ಸಮತೋಲನವನ್ನು ಕಾಯ್ದುಕೊಳ್ಳುವುದೇ ಆರೋಗ್ಯ. ನಾನೂ ಅದನ್ನೇ ಪಾಲಿಸುತ್ತಿದ್ದೇನೆ. ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೇನೆ. ರೋಗಿಗಳ ಸಂಖ್ಯೆ ಹೆಚ್ಚು, ನನ್ನ ಮೇಲಿನ ಒತ್ತಡವೂ ಹೆಚ್ಚು. ಅದನ್ನು ನಿಯಂತ್ರಿಸಲು ಸಮತೋಲನ ಕಾಯ್ದುಕೊಂಡಿದ್ದೇನೆ. ಕೇವಲ ದೇಹದ ಆರೋಗ್ಯ ಮತ್ತು ಸೌಂದರ್ಯಕ್ಕೆ ಪ್ರಾಶಸ್ತ್ಯ ನೀಡಿ ಮನಸ್ಸು ಮತ್ತು ಆತ್ಮವನ್ನು ಕಡೆಗಣಿಸಿ ಆರೋಗ್ಯವಾಗಿದ್ದೇನೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

–ಪ್ರತ್ಯೂಷ್, ವೈದ್ಯರು, ಎನ್‌.ಆರ್.ಕಾಲೊನಿ

*

ಕಣ್ತುಂಬ ನಿದ್ದೆ, ಹೊಟ್ಟೆ ತುಂಬಾ ಹಿಟ್ಟು

ಕೈತುಂಬ ಕೆಲಸ, ಹೊಟ್ಟೆ ತುಂಬಾ ಹಿಟ್ಟು, ಕಣ್ತುಂಬ ನಿದ್ದೆಯೇ ಆರೋಗ್ಯ. ನನಗೆ ಈ ಮೂರು ಸರಿಯಾದ ಪ್ರಮಾಣದಲ್ಲಿ ದೊರೆತಿರುವುದರಿಂದ ನಾನು ಆರೋಗ್ಯವಂತ. ಎಷ್ಟೋ ಜನರಿಗೆ ಎಲ್ಲ ಸೌಕರ್ಯಗಳಿದ್ದರೂ ನಿದ್ದೆಯೇ ದುರ್ಲಭ. ಅವರನ್ನು ಆರೋಗ್ಯವಂತರು ಎಂದು ಕರೆಯಲಾಗುವುದಿಲ್ಲ.

–ಶರತ್‌, ಆಟೋಚಾಲಕ, ಯಲಚೇನಹಳ್ಳಿ

*

ಕ್ರಿಯಾಶೀಲತೆ

ನನ್ನ ಪ್ರಕಾರ ಆರೋಗ್ಯ ಎಂದರೆ ಚಟುವಟಿಕೆಯಿಂದಿರುವುದು. ತರಗತಿಯಲ್ಲಿ ಉಪನ್ಯಾಸಕರು ಮಾಡುತ್ತಿರುವ ಪಾಠವನ್ನು ಸರಿಯಾಗಿ ಗ್ರಹಿಸುತ್ತಿದ್ದೇನೆ ಎಂದರೆ ಆರೋಗ್ಯದಿಂದಿದ್ದೇನೆ ಎಂದು ಅರ್ಥ. ತೂಕಡಿಕೆ ಆವರಿಸುತ್ತಿದೆ, ಮಾಡುವ ಕಾರ್ಯಗಳ ಮೇಲೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದರೆ ಅನಾರೋಗ್ಯ. ಆಲಸ್ಯವೂ ಒಂದು ರೀತಿಯ ಅನಾರೋಗ್ಯವೇ ಎನ್ನುವುದು ನಾನು ಅರ್ಥೈಸಿಕೊಂಡ ಆರೋಗ್ಯ.

–ಕಾರ್ತಿಕ್‌ ಡಿ.ಎಲ್‌. ವಿದ್ಯಾರ್ಥಿ, ಯಲಹಂಕ

*

ದೇಹ, ಮನಸಿನ ಸಮತೋಲನ

ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದೇ ನಿಜವಾದ ಆರೋಗ್ಯ. ವ್ಯಕ್ತಿ ಆರೋಗ್ಯವಂತನಾಗಿದ್ದರೆ ಎಲ್ಲವನ್ನೂ ಸಾಧಿಸಬಲ್ಲ. ಇದಕ್ಕಾಗಿ ನಿತ್ಯ ಯೋಗ, ವ್ಯಾಯಾಮ, ಧ್ಯಾನ ಮಾಡಬೇಕು. ಸಂಗೀತವನ್ನೂ ಆಲಿಸಬೇಕು.

–ಸಂತೋಷ್ ಗೇರಗಲ್, ವಕೀಲ, ಜಯನಗರ

*

ತಾಳ್ಮೆ, ದೃಢತೆ

ರಂಗಭೂಮಿಯಲ್ಲಿ ನಟರಿಗೆ ದೇಹವೇ ಆಯುಧ. ಕ್ರೀಡಾಪಟುಗಳಂತೆ ಶರೀರವನ್ನು ಹುರಿಗೊಳಿಸಿಕೊಂಡು ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್ ಕಾಯ್ದುಕೊಳ್ಳಬೇಕು. ರಂಗಭೂಮಿಯಲ್ಲಿ ಫಲಿತಾಂಶ ಬೇಗ ಸಿಗುವುದಿಲ್ಲ. ಕನಿಷ್ಠ 6 ವರ್ಷ ತಾಳ್ಮೆಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ನಿಧಾನವಾಗಿ ಹಣ, ಯಶಸ್ಸು, ಅಸ್ಮಿತೆ ಸಿಗುತ್ತದೆ. ರಂಗಭೂಮಿ ಎನ್ನುವುದು ಸತ್ಯವನ್ನು ಹೇಳುವ ಸುಳ್ಳಿನ ಆಟ. ಅದು ವರ್ಷಕ್ಕೊಮ್ಮೆ ಅಭ್ಯಾಸ ಮಾಡುವುದರಿಂದ ಬರುವುದಿಲ್ಲ. ಅದಕ್ಕೆ ಪ್ರತಿದಿನದ ಅಭ್ಯಾಸ ಬೇಕು. ಇದನ್ನು ಸಾಧ್ಯವಾಗಿಸುವ ಮಾನಸಿಕ, ದೈಹಿಕ ದೃಢತೆಯೇ ಆರೋಗ್ಯ.

-ಮಂಗಳಾ ಎನ್‌., ನಿರ್ದೇಶಕಿ, ಸಂಚಾರಿ ಥಿಯೇಟರ್‌

*

ನವಿರು ಚಿಂತನೆ, ಪ್ರಗತಿಪರ ಯೋಚನೆ

ರಂಗಭೂಮಿಯಲ್ಲಿ ನಟ, ನಿರ್ದೇಶಕರು ದೈಹಿಕವಾಗಿ ಫಿಟ್‌ ಆಗಿರುವಷ್ಟೇ, ಮಾನಸಿಕವಾಗಿಯೂ ಸದೃಢರಾಗಿರಬೇಕು. ನಟರಾದವರಿಗೆ ಪ್ರತಿದಿನವೂ ಹೊಸ ದಿನ. ಅಭಿನಯ ಪ್ರತಿದಿನ ಹೊಸತನದಿಂದ ಇರಬೇಕು. ಇದಕ್ಕೆ ತ್ರಾಣ ತುಂಬಾ ಮುಖ್ಯ. ಇದರ ಜೊತೆಗೆ ಮಾನಸಿಕವಾಗಿಯೂ ತಾಜಾ ಆಗಿರಬೇಕು. ಇದರಿಂದ ಹೊಸ ವಿಚಾರಗಳನ್ನು ಗ್ರಹಿಸಲು ಸಾಧ್ಯ. ಪೊಸಿಟಿವ್‌ನೆಸ್‌, ಪ್ರೊಗ್ರೆಸಿವ್‌ನೆಸ್‌, ಲವ್ಲಿನೆಸ್‌ ಎನ್ನುವುದು ನನ್ನ ರಂಗಭೂಮಿ ಸೂತ್ರಗಳು. ಈ ಸೂತ್ರಗಳನ್ನು ಯಶಸ್ವಿಯಾಗಿ ಅನುಸರಿಸಲು ಸಾಧ್ಯವಾಗುವ ದೇಹ ಮತ್ತು ಮನಸ್ಸೇ ನನ್ನ ಪ್ರಕಾರ ಅರೋಗ್ಯ.

-ಸುಷ್ಮಾ, ರಂಗಭೂಮಿ ನಟಿ, ನಿರ್ದೇಶಕಿ, ವಿಜಯನಗರ ಬಿಂಬ

**

ಸಂಗ್ರಹ: ಎಸ್‌. ಸಂಪತ್, ಸುಮನ ಕೆ., ಶಶಿಕುಮಾರ್ ಸಿ., ಅಭಿಲಾಷ ಬಿ.ಸಿ., ಕಲಾವತಿ ಬೈಚಬಾಳ, ಕಾವ್ಯ ಸಮತಲ

ಪ್ರತಿಕ್ರಿಯಿಸಿ (+)