ಭಾನುವಾರ, ಡಿಸೆಂಬರ್ 15, 2019
25 °C
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ಪ್ರಸ್ತಾವಕ್ಕೆ ಚೀನಾ ಎಚ್ಚರಿಕೆ

ಚೀನಾ ಸರಕಿಗೆ ಹೆಚ್ಚುವರಿ ಸುಂಕ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೀನಾ ಸರಕಿಗೆ ಹೆಚ್ಚುವರಿ ಸುಂಕ

ವಾಷಿಂಗ್ಟನ್‌ / ಬೀಜಿಂಗ್‌ : ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಹೆಚ್ಚುವರಿಯಾಗಿ ₹ 6.50 ಲಕ್ಷ ಕೋಟಿ ಮೊತ್ತದ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಒಡ್ಡಿದ್ದಾರೆ.

ಅಮೆರಿಕದ ಈ ಹೊಸ ವ್ಯಾಪಾರ ನಿರ್ಬಂಧ ಪ್ರಸ್ತಾವದ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಹೋರಾಟ ನಡೆಸುವುದಾಗಿ ಚೀನಾ ಎಚ್ಚರಿಸಿದೆ.

ಅಮೆರಿಕವು ಕೈಗೊಂಡ ವಾಣಿಜ್ಯ ನಿರ್ಬಂಧ ಕ್ರಮಗಳಿಗೆ ಚೀನಾ ಪ್ರತೀಕಾರ ಕ್ರಮ ಕೈಗೊಂಡಿರುವುದರಿಂದ, ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಗಳನ್ನು ಗುರುತಿಸಲು ಟ್ರಂಪ್‌, ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಟ್ರಂಪ್‌ ಆಡಳಿತದ ಈ ನಿಲುವು, ವಿಶ್ವದ ಎರಡು ಅತಿದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಮತ್ತು ಚೀನಾದ ಮಧ್ಯೆ ಹೊಸ ವಾಣಿಜ್ಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಅಮೆರಿಕವು ಈ ಮೊದಲೇ ವಾಣಿಜ್ಯ ಸಮರದಲ್ಲಿ ಸೋತಿರುವುದರಿಂದ ಹೆಚ್ಚುವರಿ ಆಮದು ಸುಂಕ ಪ್ರಸ್ತಾವ ವನ್ನು ಟ್ರಂಪ್‌ ಸಮರ್ಥಿಸಿಕೊಂಡಿ ದ್ದಾರೆ. ‘ಈ ಕ್ರಮ  ಕೆಲಮಟ್ಟಿಗೆ ತೊಂದರೆ ಸೃಷ್ಟಿಸಿದರೂ, ದೀರ್ಘಾವಧಿಯಲ್ಲಿ ಇದರಿಂದ ಅಮೆರಿಕೆಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ’ ಎಂದು ಹೇಳಿದ್ದಾರೆ.

ಟ್ರಂಪ್‌ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕವು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದು, ವಾಣಿಜ್ಯ ಸಮರಕ್ಕೆ ತಾನು ಬೆದರುವುದಿಲ್ಲ ಎಂದು ತಿರುಗೇಟು ನೀಡಿದೆ. ಅಂತರರಾಷ್ಟ್ರೀಯ ಸಮುದಾಯದ ಆಕ್ಷೇಪಗಳಿಗೆ ಬೆಲೆಕೊಡದ ಅಮೆರಿಕದ ವ್ಯಾಪಾರ ಸಂರಕ್ಷಣೆಯ ಏಕಪಕ್ಷೀಯ ನಿರ್ಧಾರವನ್ನು ಯಾವುದೇ ಬೆಲೆ ತೆತ್ತಾದರೂ ದೃಢಸಂಕಲ್ಪದಿಂದ ಎದುರಿಸುವುದಾಗಿ ಹೇಳಿದೆ.

ಚೀನಾದ ಸರಕುಗಳ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸುವ ಹೊಸ ಪ್ರಸ್ತಾವವು ಅಸಂಬದ್ಧ ಎಂದೂ ಕಟುವಾಗಿ ಟೀಕಿಸಿದೆ.

**

ಅಸಮರ್ಥ ಮತ್ತು ಮೂರ್ಖ ಆಡಳಿತಗಾರರಿಂದಾಗಿ ಅಮೆರಿಕವು ಹಲವು ವರ್ಷಗಳ ಹಿಂದೆಯೇ ವಾಣಿಜ್ಯ ಸಮರದಲ್ಲಿ ಪರಾಭವಗೊಂಡಿದೆ.

–ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)