ಶನಿವಾರ, ಆಗಸ್ಟ್ 8, 2020
22 °C
ಕಾಶ್ಮೀರ ವಿವಾದ: ಭಾರತದ ವಿರುದ್ಧ ಪಾಕ್‌ ವಿದೇಶಾಂಗ ಸಚಿವ ಖ್ವಾಜಾ ಆಸೀಫ್‌ ಆರೋಪ

ಬಂದೂಕಿನಿಂದಲೇ ಪರಿಹಾರಕ್ಕೆ ಯತ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಬಂದೂಕಿನಿಂದಲೇ ಪರಿಹಾರಕ್ಕೆ ಯತ್ನ

ಇಸ್ಲಾಮಾಬಾದ್‌: ಕಾಶ್ಮೀರ ವಿವಾದವನ್ನು ಬಂದೂಕಿನ ನಳಿಕೆಯ ಮೂಲಕವೇ ಪರಿಹಾರ ಕಂಡುಕೊಳ್ಳಲು ಭಾರತ ಯತ್ನಿಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸೀಫ್‌ ಆರೋಪಿಸಿದ್ದಾರೆ.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ‘ಕಾಶ್ಮೀರ ಏಕತಾ ದಿನ’ದ ಕಾರ್ಯಕ್ರಮದಲ್ಲಿ ಆಸಿಫ್ ಈ ಹೇಳಿಕೆ ನೀಡಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ಇಪ್ಪತ್ತು ನಾಗರಿಕರ ಕೊಲೆಯಾಗಿದೆ. ಇದು ಬಂದೂಕಿನ ನಳಿಕೆಯ ಮೂಲಕ ಎಲ್ಲ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿರುವ ಭಾರತದ ನೀತಿಯ ಅಭಿವ್ಯಕ್ತಿಯಾಗಿದೆ ಎಂದು ಅವರು ದೂರಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಮತ್ತು ಶೋಫಿಯಾನ್‌ ಜಿಲ್ಲೆಯಲ್ಲಿ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಹದಿಮೂರು ಉಗ್ರರನ್ನು ಸಾಯಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ  ‌ಮೂವರು ಯೋಧರು ಮತ್ತು ನಾಲ್ವರು ನಾಗರಿಕರೂ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದ ಯೋಧರು ನಡೆಸಿರುವ ಈ ಹತ್ಯಾಕಾಂಡ ಸ್ವೀಕಾರಾರ್ಹವಲ್ಲ. ಇದನ್ನು ಅಂತರರಾಷ್ಟ್ರೀಯ ಮತ್ತು ಮಾನವ ಹಕ್ಕುಗಳ ಸಮುದಾಯ ಖಂಡಿಸಬೇಕು ಎಂದು ಅವರು

ಒತ್ತಾಯಿಸಿದ್ದಾರೆ.

ಜಮ್ಮು–ಕಾಶ್ಮೀರದ ಜನರು ಸ್ವಯಂ ನಿರ್ಣಯ ಮತ್ತು ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಅಂತರರಾಷ್ಟ್ರೀಯ ಸಮುದಾಯಕ್ಕೆ ಪಾಕಿಸ್ತಾನ ತನ್ನ ಜವಾಬ್ದಾರಿಗಳನ್ನು ನೆನಪಿಸುತ್ತದೆ. ಹಾಗೆಯೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುವಂತೆ ಅವರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

**ಮಥುರಾ : ಪಾಕಿಸ್ತಾನವನ್ನು ‘ವೃಣಕ್ಕೆ’ ಹೋಲಿಸಿರುವ ಉತ್ತರಪ್ರದೇಶ ಸಚಿವ ಶ್ರೀಕಾಂತ್‌ ಶರ್ಮಾ, ಭಾರತದ ಸೈನಿಕರ ಮೇಲೆ ಪಾಕಿಸ್ತಾನವು ಗುಂಡಿನ ದಾಳಿ ನಡೆಸಿದರೆ, ಪ್ರತಿಯಾಗಿ ಭಾರತವೂ ಗುಂಡಿನ ಮಳೆಗರೆಯಬೇಕು ಎಂದು ಕರೆ ನೀಡಿದ್ದಾರೆ.

ಇಲ್ಲಿ ನಡೆದ ‘ಅಖಿಲ ಭಾರತೀಯ ಉದ್ಯೋಗ್‌ ವ್ಯಾಪಾರಿ ಮಂಡಲ್‌’ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನವು ವೃಣ ಇದ್ದಂತೆ. ಸಂಯಮ ವಹಿಸುವಂತೆ ದೇಶದ ಸೈನಿಕರಿಗೆ ಸೂಚನೆ ನೀಡಲಾಗಿತ್ತು. ಒಂದೊಮ್ಮೆ ಆ ಭಾಗದಿಂದ (ಪಾಕಿಸ್ತಾನ) ಗುಂಡಿನ ದಾಳಿ ನಡೆದರೆ, ಅವರು ಬಂಕರ್‌ನಲ್ಲಿ ಆಶ್ರಯ ಪಡೆಯುವ ತನಕ ನಾವು ಗುಂಡಿನ ಮಳೆಗರೆಯಬೇಕು' ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.