ಕೈದಿಗಳಿಗೆ ಅಮಲೇರುವ ಮಾತ್ರೆ

7

ಕೈದಿಗಳಿಗೆ ಅಮಲೇರುವ ಮಾತ್ರೆ

Published:
Updated:

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮತ್ತು ಬರಿಸುವ ಮಾತ್ರೆಗಳನ್ನು ರವಾನೆ ಮಾಡುತ್ತಿರುವುದು ಕಂಡು ಬಂದಿದ್ದು, ಮಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಚಾರಾಣಾಧೀನ ಕೈದಿ ಕೇಶವ್‌ ಎಂಬಾತನಿಗೆ ನೀಡಿದ್ದ ಪೊಟ್ಟಣವೊಂದನ್ನು ಜೈಲು ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ‘ಎಎನ್‌ಎಕ್ಸ್‌.5’ ಎಂಬ 82 ಮಾತ್ರೆಗಳು ಪತ್ತೆಯಾಗಿವೆ.

ಮಾರ್ಚ್ 3ರಂದು ಸಂಜೆ 4ಕ್ಕೆ ಜೈಲಿಗೆ ಬಂದಿದ್ದ ಸಂದರ್ಶಕರೊಬ್ಬರು ಕೈದಿಯನ್ನು ಭೇಟಿಯಾಗಿದ್ದರು. 12 ನಿಮಿಷ ಕೈದಿಯೊಂದಿಗೆ ಮಾತುಕತೆ ನಡೆಸಿದ ಸಂದರ್ಶಕ, ಪೊಟ್ಟಣವೊಂದನ್ನು ನೀಡಿದ್ದರು. ಖಾಕಿ ಬಣ್ಣದ ಹಾಳೆಯಲ್ಲಿ ಸುತ್ತಿದ ಪೊಟ್ಟಣದಲ್ಲಿ ಮಾತ್ರೆಗಳನ್ನು ಇಡಲಾಗಿತ್ತು ಎಂದು ಮಂಡಿ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇವು ಅಮಲೇರುವ ಮಾತ್ರೆಗಳಾಗಿದ್ದು, ಖಿನ್ನತೆಯಿಂದ ಬಳಲುವ ರೋಗಿಗೆ ವೈದ್ಯರ ಸಲಹೆ ಮೇರೆಗೆ ನೀಡಲಾಗುತ್ತದೆ. ಕೈದಿಗೆ ಇಂತಹ ಯಾವುದೇ ಕಾಯಿಲೆ ಇರುವುದು ಕಂಡು ಬಂದಿಲ್ಲ. ಒಂದು ವೇಳೆ ಅನಾರೋಗ್ಯ ಕಂಡು ಬಂದರೆ ಜೈಲಿನಲ್ಲಿರುವ ವೈದ್ಯರೇ ಚಿಕಿತ್ಸೆ ನೀಡುತ್ತಾರೆ ಎಂದು ಕಾರಾಗೃಹದ ಸಿಬ್ಬಂದಿ ತಿಳಿಸಿದ್ದಾರೆ.

ವೈದ್ಯರ ಶಿಫಾರಸು ಇಲ್ಲದೆ ಮಾತ್ರೆಗಳು ಜೈಲು ಸೇರಿದ್ದು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಟ್ಟಣ ನೀಡಿದ ವ್ಯಕ್ತಿಯ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನಿಖೆಯ ದೃಷ್ಟಿಯಿಂದ ಈ ದೃಶ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಾಣಾಧೀನ ಕೈದಿ ಕೇಶವ್‌ ಹಾಗೂ ಮೂವರು ಸಹಚರರು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಕೊಲೆ, ದರೋಡೆ, ಡಕಾಯತಿ ಸೇರಿ ಹಲವು ಪ್ರಕರಣಗಳು ಈತನ ಮೇಲಿದ್ದು, ಹಾಸನದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry