ಮಂಗಳವಾರ, ಡಿಸೆಂಬರ್ 10, 2019
25 °C

ನನ್ನ ಜೀವನದ ಮೊದಲ ಗುರು ನನ್ನ ಅಜ್ಜಿ

Published:
Updated:
ನನ್ನ ಜೀವನದ ಮೊದಲ ಗುರು ನನ್ನ ಅಜ್ಜಿ

ನನ್ನ ಬದುಕಿನ ಸ್ಪೂರ್ತಿ

ನನ್ನ ಗೆಲುವಿನ ಕೀರ್ತಿ

ನಮ್ಮೆಲ್ಲರ ಬಾಳಿನ ಸಾರಥಿ

ನೀನಗಿದೊ ಪ್ರೀತಿಯ ಆರತಿ

ತಾಯಿಯೇ ಮೊದಲ ಗುರು ಅಂತ ಎಲ್ಲ ಹೇಳ್ತಾರೆ ಆದರೆ ನನ್ನ ಜೀವನದಲ್ಲಿ ನೀನೆ ಮೊದಲ ಗುರು, ನೀನೆ ಮೊದಲ ಪಾಠಶಾಲೆ. ನಿನ್ನಂತ ಧೀರ, ಪ್ರತಿಭಾವಂತ, ರಚನಾತ್ಮಕ, ಭಾವನಾತ್ಮಕ, ಪ್ರಭಾವಿತ, ಪರಿಪೂರ್ಣ, ಕಾರ್ಯನಿರತ ಇತ್ಯಾದಿ...ಮಹಿಳೆಯನ್ನು ನಾನಿನ್ನೂ ಕಂಡಿಲ್ಲ. ನನ್ನ ಜೀವನದ ಗೆಲುವೆಲ್ಲಾ ನಿನ್ನದೇ  ಮತ್ತು ನಿನ್ನಿಂದಲೇ. ನಿನ್ನಿಂದಲೇ ನಾನು ಈ ಸ್ಥಾನದಲ್ಲಿ ಇರುವೆ. ನನ್ನ ತಂದೆ-ತಾಯಿ, ಗುರು, ಸ್ಪೂರ್ತಿ  ಎಲ್ಲವು ನೀನೆ. ನೀನು ಓದಿಲ್ಲ ಬರೆದಿಲ್ಲ ಆದರೆ ಯಾವ ವಿದ್ಯಾವಂತರಿಗಿಂತ ಕಡಿಮೆ ಇಲ್ಲ. ನೀನು ಬಯಸಿದ್ದರೆ ಸುಖದ ಸುಪ್ಪತ್ತಿಗೆಯಲ್ಲಿ ಆರಾಮಾಗಿ ಇರಬಹುದಿತ್ತು. ಆದರೆ ಕಾಯಕವೇ ಕೈಲಾಸ ಎಂದು ನಂಬಿದವಳು ನೀನು. ನೀನೆ ಕಲಿಸಿದ್ದು  ಆಳಾಗಿ ದುಡಿ,ಅರಸನಾಗಿ ಉಣ್ಣು ಎಂದು. ನೀನ್ಯಾವತ್ತು ಹೆಣ್ಣು  ಮದುವೆಯಾಗಿ ಬೇರೆಯವರ ಮನೆಗೆ ಹೋಗುವವಳು ಅವಳಿಗ್ಯಾಕೆ ಓದು ಬರಹ ಎಂದು ನಮ್ಮ ಓದನ್ನು ನಿಲ್ಲಿಸಲಿಲ್ಲ. ಶಾಲೆ ಕಾಲೇಜಿನ ಶುಲ್ಕ ಎಷ್ಟಾದರೂ ಕಷ್ಟ ತೋರಿಸದೆ ಭರಿಸಿದೆ. ಗಂಡು ಬೇಕೆಂದು ಆರು ಹೆಣ್ಣು ಮಕ್ಕಳು ಹುಟ್ಟಿದರು,ಖರ್ಚು ಮಾಡುವುದು  ತುಂಬಾ ಕಷ್ಟ ಎಂದು ನೆರೆಹೊರೆಯವರು ಹೀಯಾಳಿಸಿದರು ನೀನು ಎದೆಗುಂದಲಿಲ್ಲ ಬದಲಿಗೆ ನನ್ನ ಮೊಮ್ಮಕ್ಕಳು ಯಾವ ಗಂಡು ಹುಡುಗನಿಗಿಂತ ಕಡಿಮೆ ಇಲ್ಲ ಎಂದು ಎದುರುತ್ತರ ನೀಡಿದಾಗ ಕಣ್ಣಂಚಲಿ ಮಿಂಚಿತ್ತು ಖುಷಿಯ ಕಣ್ಣೀರು ನನಗೆ. ಒಂದೊಂದು ಸಾರಿ ನಾನೇ ವಿಸ್ಮಿತಳಾಗುವೆ ನೀನಗೆಲ್ಲಿಂದ ಬಂತು ಇಷ್ಟೊಂದು ಧೈರ್ಯ -ಸ್ಥೈರ್ಯ .

ನಿನಗೆ ನೆನಪಿದೆಯೋ ಇಲ್ಲವೋ ಆ ದಿನ ನಿನ್ನ ಎದೆಗವಚಿ ಮಲಗಿದ್ದು. ಹೊಲದಲ್ಲಿ ಶೇಂಗಾ ಒಕ್ಕುವ ಸಮಯ, ಮನೆಗೆ ಚೀಲ ಹೊಲೆದು ತರುವವರೆಗು ನೀನೆ ಕಾವಲುಗಾರ್ತಿ ಆಗಿರುತ್ತಿದ್ದೆ. ನಾನು ಹಠ ಮಾಡಿ ಆವತ್ತು ನಿನ್ನೊಂದಿಗೆ ಮಲಗಿದೆ ಹೊಲದಲ್ಲಿ .ಇನ್ನೇನು ಕತ್ತಲಾಯ್ತು ತೋಳ-ನರಿಗಳ ಶಬ್ದಕ್ಕೆ ಹೆದರಿ ಎದೆ ಡವ-ಡವ ಎಂದು ಹೊಡೆದುಕೊಂಡು ಅತ್ತಾಗ ನೀ ಹೇಳಿದ ಮುತ್ತಿನಂತ ಮಾತು ಇನ್ನು ನೆನಪಿದೆ. ನಾವು ಬೇರೆಯವರಿಗೆ ತೊಂದರೆ ಕೊಟ್ಟರೆ ಮಾತ್ರ ನಾವು ತೊಂದರೆ ಅನುಭವಿಸುತ್ತೇವೆ - "ಮಾಡಿದ್ದುಣ್ಣೋ ಮಾರಾಯ". ನೀ ಹೇಳಿದ ಪ್ರತಿಯೊಂದು ನೀತಿ ಪಾಠ ನನ್ನ ಎಲ್ಲ ಕಡೆ ಬದುಕಿಸುತ್ತಿವೆ ಮತ್ತು ಬದುಕಿಸುತ್ತಿರುತ್ತವೆ.ನೀನು ಯಾರ ಮಗಳು ಎಂದು ಊರಲ್ಲಿ ಯಾರಾದರೂ ಕೇಳಿದರೆ ತಂದೆಯ ಹೆಸರಿಗಿಂತ ಹೆಚ್ಚು ನಿನ್ನ ಹೆಸರು ಹೇಳಿ ಗುರುತಿಸಿಕೊಂಡಿದ್ದೆ ನೆನಪು. ನೀನೊಬ್ಬ ನಾಯಕಿ, ಸೇವಕಿ, ಅನ್ನಗಾರ್ತಿ. ಆ ದಿನ ರೈಲಿನಲ್ಲಿ ಜನ ಒಬ್ಬ ಮನುಷ್ಯನನ್ನು ಮೋಸಿಸುತ್ತಿದ್ದನ್ನು ಖಂಡಿಸಿ ಆತನನ್ನು ಮನೆಗೆ ಕರೆದುಕೊಂಡು ಬಂದಿದ್ದೆ .ನೀನ್ನ ಸಹಾಯ ಹಸ್ತ ಊರಲ್ಲಿ ಪ್ರಸಿದ್ಧ. ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು. ನಿನ್ನ ಬಗ್ಗೆ ಎಷ್ಟು ಹೇಳಿದರು ಕಡಿಮೇನೆ.ಒಳ್ಳೆಯ ಸಲಹೆಗಾರ್ತಿ- ಜೊತೆಗಾರ್ತಿ. ನನ್ನ ಬಾಳಿನ ಆದರ್ಶ ವ್ಯಕ್ತಿ ನೀನು. ನನ್ನ ದೇವರು ನೀನು. ಮನೆಯಲ್ಲಿ ನಿನ್ನ ಕೇಳದೆ ಯಾರೂ ಯಾವತ್ತೂ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ.  ಅಜ್ಜಿ ನೀನು ಇನ್ನು ನೂರು ವರ್ಷ ಹೀಗೆ  ಬದುಕು.

ಐ ಲವ್ ಯು ಅಜ್ಜಿ

-ಅಮೃತಾ ಗೋನಾಳ

ಸಂಶಿ, ಕುಂದಗೋಳ

ಧಾರವಾಡ -೫೮೧೧೧೭

ಪ್ರತಿಕ್ರಿಯಿಸಿ (+)