ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉದ್ಘಾಟನೆ; ಮೊದಲ ಪಂದ್ಯದಲ್ಲಿ ಮುಂಬೈಗೆ ಚೆನ್ನೈ ಸವಾಲು

Last Updated 6 ಏಪ್ರಿಲ್ 2018, 20:19 IST
ಅಕ್ಷರ ಗಾತ್ರ

ನವದೆಹಲಿ: ಚುಟುಕು ಕ್ರಿಕೆಟ್‌ನ ಸವಿಯುಣ್ಣಲು ಕಾತರದಿಂದ ಕಾಯುತ್ತಿದ್ದವರಿಗೆ ಇನ್ನು ರಸ ರೋಮಾಂಚನ. ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 11ನೇ ಆವೃತ್ತಿಗೆ ಶನಿವಾರ ಸಂಜೆ ಚಾಲನೆ ಸಿಗಲಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಟೂರ್ನಿ ಉದ್ಘಾಟನೆಯಾಗಲಿದೆ. ರಾತ್ರಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡ ಎರಡು ಬಾರಿಯ ಚಾಂಪಿಯನ್‌ ಮತ್ತು ನಾಲ್ಕು ಬಾರಿ ರನ್ನರ್ ಅಪ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ ಪ್ರಕರಣಗಳ ಸುಳಿಗೆ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದ ಸಿಎಸ್‌ಕೆ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಮರಳಿರುವುದರಿಂದ ಟೂರ್ನಿಗೆ ರಂಗು ತುಂಬಲಿವೆ ಎಂಬ ವಿಶ್ವಾಸ ಮೂಡಿದೆ.

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಕ್ಕೆ ಒಳಗಾದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ ಅವರ ಅನುಪಸ್ಥಿತಿ ಈ ಬಾರಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಆದರೆ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್‌ ದೋನಿ, ಕ್ರಿಸ್ ಗೇಲ್‌, ಸುರೇಶ್ ರೈನಾ, ಬೆನ್ ಸ್ಟೋಕ್ಸ್‌, ಎಬಿ ಡಿವಿಲಿಯರ್ಸ್‌ ಮುಂತಾದವರು ಟೂರ್ನಿಗೆ ಕಳೆ ತುಂಬುಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಕ್ರಿಕೆಟ್ ಪ್ರೇಮಿಗಳು.

ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತದ ಆಟಗಾರ ಎಂದೆನಿಸಿಕೊಂಡಿರುವ ಎಡಗೈ ವೇಗಿ ಜಯದೇವ ಉನದ್ಕತ್‌, ಕರ್ನಾಟಕದ ಕೆ.ಎಲ್‌.ರಾಹುಲ್‌. ಮನೀಷ್ ಪಾಂಡೆ, ಕೆ.ಗೌತಮ್‌ ಅವರು ಕೂಡ ಮಿಂಚುವ ಭರವಸೆ ಮೂಡಿಸಿದ್ದಾರೆ.

ಮುಂಬೈ, ಸಿಎಸ್‌ಕೆಗೆ ಜಯದ ನಿರೀಕ್ಷೆ: ಎರಡು ವರ್ಷಗಳ ನಿಷೇಧದ ನಂತರ ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವ ಭರವಸೆಯಲ್ಲಿದೆ ಮುಂಬೈ ಇಂಡಿಯನ್ಸ್‌. ಮಹೇಂದ್ರ ಸಿಂಗ್ ದೋನಿ ಮುಂದಾಳತ್ವದ ಸಿಎಸ್‌ಕೆ, ಬಲಿಷ್ಠ ಆಟಗಾರರನ್ನು ಹೊಂದಿದ್ದು ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ಗೆ ಸವಾಲೆಸೆಯಲು ಸಜ್ಜಾಗಿದೆ. ತವರಿನ ಪ್ರೇಕ್ಷಕರ ಬೆಂಬಲ ಈ ತಂಡಕ್ಕೆ ಇದೆ.

ಹತ್ತು ವರ್ಷ ಮುಂಬೈ ತಂಡದಲ್ಲಿದ್ದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್‌ ಈ ಬಾರಿ ಚೆನ್ನೈ ತಂಡದ ಪಾಲಾಗಿದ್ದು, ಅವರು ಪಂದ್ಯದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಅವರ್ ಸ್ಫೋಟಕ ಬ್ಯಾಟಿಂಗ್‌ಗೆ ಬಲ ತುಂಬಲು ಎಲ್ವಿನ್ ಲೂಯಿಸ್‌, ಕೀರನ್ ಪೊಲಾರ್ಡ್‌, ಈಶಾನ್ ಕಿಶನ್, ಸೂರ್ಯಕುಮಾರ್ ಯಾದವ್‌ ಮತ್ತು ಸಿದ್ದೇಶ್ ಲಾಡ್ ಇದ್ದಾರೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಕೂಡ ತಂಡದ ಶಕ್ತಿ ಎನಿಸಿದ್ದಾರೆ. ಆದರೆ ಹರಭಜನ್ ಮತ್ತು ಲಸಿತ್ ಮಾಲಿಂಗ ಅವರ ಅನುಪಸ್ಥಿತಿ ತಂಡದ ಬೌಲಿಂಗ್‌ ವಿಭಾಗವನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಿದೆ. ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಪ್ಯಾಟ್ ಕಮಿನ್ಸ್‌ ಮತ್ತು ಮುಸ್ತಫಿಜುರ್‌ ರಹಮಾನ್‌ ಈ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ.

ಸುರೇಶ್ ರೈನಾ, ರವೀಂದ್ರ ಜಡೇಜ, ಮುರಳಿ ವಿಜಯ್‌, ಕೇದಾರ್ ಜಾದವ್‌, ಡ್ವೇನ್‌ ಬ್ರಾವೊ, ಫಾಫ್‌ ಡುಪ್ಲೆಸಿ, ಶೇನ್‌ ವ್ಯಾಟ್ಸನ್‌ ಮುಂತಾದವರನ್ನು ಒಳಗೊಂಡ ಸಿಎಸ್‌ಕೆಯ ಬೌಲಿಂಗ್‌ಗೆ ಮೊನಚು ತುಂಬಲು ಶಾರ್ದೂಲ್ ಠಾಕೂರ್‌, ಕರಣ್ ಶರ್ಮಾ, ಇಮ್ರಾನ್ ತಾಹಿರ್ ಮುಂತಾದವರು ಇದ್ದಾರೆ.

ಒಂದೂವರೆ ತಾಸಿನ ಕಾರ್ಯಕ್ರಮ: ಉದ್ಘಾಟನಾ ಸಮಾರಂಭ ಒಂದೂವರೆ ತಾಸು ನಡೆಯಲಿದೆ. ಸಂಜೆ ಐದು ಗಂಟೆಗೆ ಆರಂಭವಾಗಲಿರುವ ವೈವಿಧ್ಯಮಯ ಕಾರ್ಯಕ್ರಮಗಳು ಮೊದಲ ಪಂದ್ಯದ ಟಾಸ್‌ಗೆ 15 ನಿಮಿಷಗಳ ಮುನ್ನ ಮುಗಿಯಲಿವೆ.

ಪರಿಣಿತಿ ಚೋಪ್ರಾ, ವರುಣ್ ಧವನ್‌, ಜಾಕ್ವೆಲಿನ್ ಫರ್ನಾಂಡಿಸ್‌, ಪ್ರಭುದೇವಾ, ಹೃತಿಕ್ ರೋಷನ್‌, ಹಿರಿಯ ಅಥ್ಲೀಟ್‌ ಮಿಲ್ಖಾ ಸಿಂಗ್‌ ಮುಂತಾದವರು ಕಾರ್ಯಕ್ರಮಕ್ಕೆ ಕಳೆ ತುಂಬಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಾರ್ಕ್‌, ರಬಾಡ ಇಲ್ಲ: ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾದ ಮಿಷೆಲ್ ಸ್ಟಾರ್ಕ್ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಈ ಬಾರಿಯ ಐಪಿಎಲ್‌ಗೆ ಲಭ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT