ಭಾನುವಾರ, ಡಿಸೆಂಬರ್ 15, 2019
19 °C

ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟ ಜೋಷ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟ ಜೋಷ್ನಾ

ಗೋಲ್ಡ್‌ ಕೋಸ್ಟ್‌ (ಪಿಟಿಐ): ಅಮೋಘ ಆಟ ಆಡಿದ ಭಾರತದ ಜೋಷ್ನಾ ಚಿಣ್ಣಪ್ಪ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕ್ವಾಷ್‌ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಆಕ್ಸೆನ್‌ಫೊರ್ಡ್‌ ಸ್ಟುಡಿಯೋಸ್‌ನ ಸ್ಕ್ವಾಷ್ ಅಂಗಳದಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಜೋಷ್ನಾ 11–6, 11–8, 11–4ರ ನೇರ ಗೇಮ್‌ಗಳಿಂದ ಆಸ್ಟ್ರೇಲಿಯಾದ ಸ್ಯಾಕ್ಸ್‌ಬಿ ಟಮಿಕಾ ಅವರನ್ನು ಮಣಿಸಿದರು.

ಉಭಯ ಆಟಗಾರ್ತಿಯರ ನಡುವಣ ಹೋರಾಟ 25 ನಿಮಿಷ ನಡೆಯಿತು.

ಮೊದಲ ಗೇಮ್‌ನ ಶುರುವಿನಿಂದಲೇ ದಿಟ್ಟ ಆಟ ಆಡಿದ ಜೋಷ್ನಾ 4–1ರ ಮುನ್ನಡೆ ಪಡೆದರು. ನಂತರವೂ ಮೋಡಿ ಮಾಡಿದ ಭಾರತದ ಆಟಗಾರ್ತಿ ಮುನ್ನಡೆಯನ್ನು 8–2ಕ್ಕೆ ಹೆಚ್ಚಿಸಿಕೊಂಡರು. ಇದರಿಂದ ವಿಚಲಿತರಾದಂತೆ ಕಂಡ ಸ್ಯಾಕ್ಸ್‌ಬಿ ಹಲವು ತಪ್ಪುಗಳನ್ನು ಮಾಡಿ ಗೇಮ್‌ ಕೈಚೆಲ್ಲಿದರು.

ಎರಡನೇ ಗೇಮ್‌ನಲ್ಲೂ ಜೋಷ್ನಾ ಪ್ರಾಬಲ್ಯ ಮೆರೆದರು. ಆಕರ್ಷಕ ರಿಟರ್ನ್‌ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಸಂಗ್ರಹಿಸಿದ ಅವರು 6–0ರ ಮುನ್ನಡೆ ಪಡೆದರು. ನಂತರವೂ ಛಲದಿಂದ ಹೋರಾಡಿ ಗೆಲುವಿನ ತೋರಣ ಕಟ್ಟಿದರು.

ಮೂರನೇ ಗೇಮ್‌ನ ಆರಂಭದಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 3–3ರ ಸಮಬಲ ಕಂಡುಬಂತು.

ಬಳಿಕ ಜೋಷ್ನಾ ಅಬ್ಬರಿಸಿದರು. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ಬಾರಿಸಿದ ಚೆಂಡನ್ನು ಹಿಂತಿರುಗಿಸುತ್ತಿದ್ದ ಅವರು ಮಿಂಚಿನ ಸರ್ವ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿ ಏಳನೇ ನಿಮಿಷದಲ್ಲಿ ಗೇಮ್‌ ಗೆದ್ದರು.

ದೀ‍ಪಿಕಾಗೆ ನಿರಾಸೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ದೀಪಿಕಾ ಪಳ್ಳಿಕಲ್‌, ಪ್ರೀ ಕ್ವಾರ್ಟರ್‌ನಲ್ಲಿ ಸೋತರು.

ಹದಿನಾರರ ಘಟ್ಟದ ಹಣಾಹಣಿಯಲ್ಲಿ ದೀಪಿಕಾ 3–11, 6–11, 2–11ರಲ್ಲಿ ಇಂಗ್ಲೆಂಡ್‌ನ ಅಲಿಸನ್‌ ವಾಟರ್ಸ್‌ಗೆ ಶರಣಾದರು.

ದೀಪಿಕಾ ಮೂರೂ ಗೇಮ್‌ಗಳಲ್ಲೂ ಪರಿಣಾಮಕಾರಿ ಆಟ ಆಡಲು ವಿಫಲರಾದರು.

ಪುರುಷರ ಸಿಂಗಲ್ಸ್‌ನಲ್ಲಿ ಅಂಗಳಕ್ಕಿಳಿದಿದ್ದ ವಿಕ್ರಂ ಮಲ್ಹೋತ್ರಾ 6–11, 11–8, 6–11, 6–11ರಲ್ಲಿ ಇಂಗ್ಲೆಂಡ್‌ನ ನಿಕ್‌ ಮ್ಯಾಥ್ಯೂ ವಿರುದ್ಧ ಸೋತರು.

ಮೊದಲ ಗೇಮ್‌ನಲ್ಲಿ ನಿರಾಸೆ ಕಂಡ ವಿಕ್ರಂ, ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದರು. ಆದರೆ ನಂತರದ ಎರಡೂ ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ನಿಕ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.‌ ಈ ಹೋರಾಟ 40 ನಿಮಿಷ ನಡೆಯಿತು.

ಪ್ರತಿಕ್ರಿಯಿಸಿ (+)