ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಗೆದ್ದ ಸಂಜೀತಾ; ದೀಪಕ್‌ಗೆ ಕಂಚಿನ ಪದಕ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದ ಎರಡನೇ ದಿನವೂ ಮಿಂಚಿದ ಭಾರತದ ವೇಟ್‌ಲಿಫ್ಟರ್‌ಗಳು ದೇಶಕ್ಕೆ ಮತ್ತೆ ಎರಡು ಪದಕ ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಸಂಜೀತಾ ಚಾನು ಚಿನ್ನಕ್ಕೆ ಕೊರಳೊಡ್ಡಿದರೆ ಪುರುಷರ 69 ಕೆ.ಜಿ ವಿಭಾಗದಲ್ಲಿ ದೀಪಕ್‌ ಲಾಥರ್‌ ಕಂಚು ಗೆದ್ದರು.

ಒಟ್ಟು 192 ಕೆ.ಜಿ ಭಾರ ಎತ್ತಿದ ಚಾನು ಕ್ಲೀನ್ ಮತ್ತು ಜರ್ಕ್‌ನಲ್ಲಿ 108 ಕೆ.ಜಿ ಎತ್ತಿದರು. ಸ್ನ್ಯಾಚ್‌ನಲ್ಲಿ 84 ಕೆ.ಜಿ ಎತ್ತಿ ಕೂಟದ ದಾಖಲೆ ಬರೆದರು. ಮೊದಲ ದಿನ ಚಿನ್ನ ಗೆದ್ದಿದ್ದ ಸಾಯಿಕೋಮ್ ಮೀರಾಬಾಯಿ ಚಾನು ಒಟ್ಟು ಮೂರು ದಾಖಲೆ ನಿರ್ಮಿಸಿದ್ದರು.

ಮಣಿಪುರದ ಸಂಜೀತಾ ಚಾನು ಚಿನ್ನ ಗೆಲ್ಲುವುದು ಖಚಿತವಾದ ಕೂಡಲೇ ಭಾವುಕರಾದರು. ಪದಕ ಪ್ರದಾನ ಸಮಾರಂಭದಲ್ಲಿ ಆನಂದಬಾಷ್ಪ ಸುರಿಸಿ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು. ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಕಾಮನ್‌ವೆಲ್ತ್ ಗೇಮ್‌ನಲ್ಲಿ ಸತತ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

ಕಿರಿಯ ವಯಸ್ಸಿನಲ್ಲಿ ಸಾಧನೆ: ಒಟ್ಟು 295 ಕೆ.ಜಿ ಭಾರ ಎತ್ತಿದ ದೀಪಕ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಕ್ರೀಡಾಪಟು ಎಂದೆನಿಸಿಕೊಂಡರು. 18 ವರ್ಷದ ಅವರು ಸ್ನ್ಯಾಚ್‌ನಲ್ಲಿ 136 ಕೆ.ಜಿ ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 159 ಕೆ.ಜಿ ಎತ್ತಿದರು. ಪ್ರತಿಸ್ಪರ್ಧಿ, ಶ್ರೀಲಂಕಾದ ದಿಸನಾಯಕೆ ಮುದಿಯನಸೆಲಗೆ ಪ್ರಮುಖ ಹಂತದಲ್ಲಿ ತಪ್ಪು ಎಸಗಿದ್ದು ಭಾರತದ ವೇಟ್‌ಲಿಫ್ಟರ್ ಪದಕ ಗೆಲ್ಲಲು ನೆರವಾಯಿತು. ದಿಸನಾಯಕೆ ಕ್ಲೀನ್ ಮತ್ತು ಜರ್ಕ್‌ನ ಮೊದಲ ಪ್ರಯತ್ನದಲ್ಲಿ ಮಾತ್ರ ಯಶಸ್ಸು ಕಂಡರು.

‘ಯಾರಿಗೂ ಕೆಟ್ಟದ್ದು ಬಯಸುವುದು ಸರಿಯಲ್ಲ. ಆದರೆ ನನಗೆ ಇಂದಿನ ಸ್ಪರ್ಧೆಯಲ್ಲಿ ಹೀಗೆ ಮಾಡದೆ ಬೇರೆ ದಾರಿ ಇರಲಿಲ್ಲ. ನನ್ನ ಪ್ರಯತ್ನವನ್ನು ಮುಗಿಸಿದ ನಂತರ ಇತರರು ತಪ್ಪು ಎಸಗಲಿ ಎಂದು ಪ್ರಾರ್ಥಿಸಿದೆ. ಹಾಗೆಯೇ ಆಯಿತು; ನಾನು ಚಿನ್ನ ಗೆದ್ದೆ’ ಎಂದು ಚಾನು ಹೇಳಿದರು.

ಸರಸ್ವತಿಗೆ ನಿರಾಸೆ: ಶುಕ್ರವಾರ 58 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಸರಸ್ವತಿ ರಾವತ್‌ ನಿರಾಸೆಗೊಂಡರು. ಸ್ನ್ಯಾಚ್‌ನ ಒಂದು ಪ್ರಯತ್ನದಲ್ಲಿ ಕೂಡ ಯಶಸ್ಸು ಕಾಣದ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT