ಮಂಗಳವಾರ, ಡಿಸೆಂಬರ್ 10, 2019
26 °C
250 ತಾಸು ಹಾಳು: ಚರ್ಚೆಗೇ ಬಾರದ ಅವಿಶ್ವಾಸ ಗೊತ್ತುವಳಿ ನೋಟಿಸ್‌

ಸಂಸತ್‌ ಕಲಾಪ ಪೂರ್ಣ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್‌ ಕಲಾಪ ಪೂರ್ಣ ವ್ಯರ್ಥ

ನವದೆಹಲಿ : ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ನಿರಂತರ ಗದ್ದಲದಿಂದಾಗಿ ಈ ಅಧಿವೇಶನ ಬಹುತೇಕ ವ್ಯರ್ಥವಾಗಿದೆ.

ವಿವಿಧ ಪಕ್ಷಗಳು ಬೇರೆ ಬೇರೆ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ನೀಡಿದ್ದ ಅವಿಶ್ವಾಸ ಗೊತ್ತುವಳಿ ನೋಟಿಸನ್ನು ಚರ್ಚೆಗೆ ಎತ್ತಿಕೊಳ್ಳುವುದು ಸಾಧ್ಯವಾಗಿರಲಿಲ್ಲ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಬ್ಯಾಂಕ್‌ ಹಗರಣಗಳು, ಕಾವೇರಿ ನೀರು ನಿರ್ವಹಣಾ ಮಂಡಳಿಗಾಗಿ ಬೇಡಿಕೆ, ಪ್ರತಿಮೆ ಭಗ್ನ ಪ್ರಕರಣಗಳು, ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗೆಗಿನ ಸುಪ್ರೀಂ ಕೋರ್ಟ್‌ ತೀರ್ಪು, ಕಾಸ್‌ಗಂಜ್‌ನಲ್ಲಿ ಕಾನೂನು ಸುವ್ಯವಸ್ಥೆ ವಿಚಾರ ಕಲಾಪಗಳ ಮೇಲೆ ಕರಿನೆರಳು ಬೀರಿದವು.

ಅಧಿವೇಶನದ ಎರಡನೇ ಭಾಗ ಮಾರ್ಚ್‌ 5ರಂದು ಆರಂಭವಾಯಿತು. ಆದರೆ ಒಂದು ದಿನವೂ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ.

ಶುಕ್ರವಾರದ ಕಲಾಪ ಆರಂಭವಾಗುವುದಕ್ಕೆ ಮೊದಲೇ ಟಿಡಿಪಿ, ಎಐಎಡಿಎಂಕೆ ಮತ್ತು ಕಾಂಗ್ರೆಸ್‌ ಸಂಸದರು ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ವಿನಂತಿಯ ಮೇರೆಗೆ ಕೆಲವರು ತಮ್ಮ ಆಸನಕ್ಕೆ ಹಿಂದಿರುಗಿದರು.

**

ಅನಂತ್‌ ವಿರುದ್ಧ ಹಕ್ಕುಚ್ಯುತಿ ನೋಟಿಸ್‌

ಸಂಸತ್ತಿನಲ್ಲಿ ನಿರಂತರ ಗದ್ದಲ ಉಂಟಾಗಲು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ಆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕಾರಣ ಎಂದು ಹೇಳುವ ಮೂಲಕ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಅವರು ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಕಾಂಗ್ರೆಸ್‌ ನೋಟಿಸ್‌ ನೀಡಿದೆ.

ಸ್ಪೀಕರ್‌ಗೆ ಕಾಂಗ್ರೆಸ್‌ ಸಂಸದ ಕೆ.ಸಿ. ವೇಣುಗೋಪಾಲ್‌ ಅವರು ಶುಕ್ರವಾರ ನೋಟಿಸ್‌ ನೀಡಿದರು. ಸದನ ನಡೆಸಲು ಸರ್ಕಾರಕ್ಕೆ ಆಸಕ್ತಿ ಇರಲಿಲ್ಲ ಎಂದೂ ಈ ನೋಟಿಸ್‌ನಲ್ಲಿ ಹೇಳಲಾಗಿದೆ.

**

ಉಪವಾಸ ರಾಜಕಾರಣ

ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಬಿಕ್ಕಟ್ಟು ಸೃಷ್ಟಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ವಿರೋಧ ಪಕ್ಷಗಳ ವರ್ತನೆಯನ್ನು ಖಂಡಿಸಿ ಬಿಜೆಪಿ ಸಂಸದರು 12ರಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಕೂಡ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ. ಸಾಮರಸ್ಯ ಕಾಪಾಡುವುದಕ್ಕಾಗಿ ಇದೇ 9ರಂದು ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ನಡೆಸಲು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)