ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪ್ರಿಯಾ ನನ್ನ ಸ್ಪೂರ್ತಿ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬದುಕು ಒಂದು ನದಿಯಂತೆ.ಅಲ್ಲಿ ಆಗಾಗ ಏರಿಳಿತಗಳಿರುತ್ತವೆ.ಅಲೆಗಳೂ ಇರುತ್ತವೆ.ಅವುಗಳ ನಡುವೆ ಸಮತೂಕದಿಂದ ನಡೆದು ಜೀವನದ ಯಶಸ್ಸು ಗಳಿಸುವುದೆಂದರೆ ಅಷ್ಟು ಸುಲಭವಲ್ಲ.

ಹಾಗೆ ಮುನ್ನಡೆಯುವ ಸಂದರ್ಭದಲ್ಲಿ ಎಷ್ಟೋ ಬಾರಿ ಕುಸಿದು ಬಿದ್ದಂತಾಗುತ್ತದೆ.ಹಲವಾರು ಸಂದರ್ಭಗಳಲ್ಲಿ ಎಷ್ಟೋ ಕೆಲಸಗಳನ್ನು ಮಾಡಲು ಹೊರಟು ಕೈ ಚೆಲ್ಲಿ ಕುಳಿತುಕೊಳ್ಳುವ ಹತಾಶ ಮನಸ್ಥಿತಿ ಮೂಡುತ್ತದೆ.ಆ ಕ್ಷಣಗಳಲ್ಲಿ ಮನಸಿಗೆ ಸ್ಪೂರ್ತಿ ತುಂಬುವ ಒಂದು ವ್ಯಕ್ತಿ ಅದು ಮಹಿಳೆಯಾಗಿರಬಹುದು ಅಥವಾ ಪುರುಷನಾಗಿರ ಬಹುದು .ಅವರ ಸ್ಮರಣೆ ಮನದಲ್ಲಿ ಮೂಡಿದಾಗ ಅವರ ತ್ಯಾಗ, ಸೇವಾ ಪರತೆ,ಕಷ್ಟ ಸಹಿಷ್ಣುತೆಗಳ ಮುಂದೆ ತನ್ನದೇನೂ ಅಲ್ಲ ಎಂಬ ಭಾವ ಮೂಡಿ ಹತಾಶ ಮನಸು  ತಾನಾಗಿಯೇ ಸಾಂತ್ವನ ಗೊಳ್ಳುತ್ತದೆ.ಅವರು ತುಂಬಾ ಖ್ಯಾತಿ ಗಳಿಸಿದವರೇ ಆಗ ಬೇಕೆಂದಿಲ್ಲ.ಅವರ ನೆನಪಿನಿಂದ ಮನಸ್ಸು ಜಡತನ ಕಿತ್ತೊಗೆದು ಚೇತನದ ಸೆಲೆ ಉಕ್ಕಿದಂತೆ ಹರ್ಷಪಟ್ಟರೆ ಸಾಕು.

ನನ್ನ ಮನಸಿಗೆ ಸದಾ ಸ್ಪೂರ್ತಿ ತುಂಬುವ ಮಹಿಳೆ ಶಿವ ಪ್ರಿಯಾ. ಲಕ್ನೋದ ನರ್ಸಿಂಗ್ ಕಾಲೇಜ್ ಒಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ರಿಯಾ ಅವರ ಬದುಕು ನನಗೆ ಸದಾ ಅಚ್ಚರಿ ಹಾಗೂ ಹೆಮ್ಮೆ.

ಮಿಲಿಟರಿ ಆಸ್ಪತ್ರೆ ಎಂ‌.ಎಚ್.ಕಿರ್ಕಿಯಲ್ಲಿ ನರ್ಸಿಂಗ್ ತರಬೇತಿಗೆಂದು ಬಂದ ಪ್ರಿಯಾ ಮೊದಲ ನೋಟದಲ್ಲಿಯೇ ನೆಲಬಾಂಬ್ ಸ್ಫೋಟದಲ್ಲಿ ಬೆನ್ನು ಹುರಿಗೆ ಪೆಟ್ಟಾಗಿ ಹಾಸಿಗೆ ಹಿಡಿದ ಮಿಲಿಟರಿ ಕಮಾಂಡೋ ಶ್ಯಾಮರಾಜನ ಬದುಕಿನಲ್ಲಿ ಸ್ಪೂರ್ತಿಯ ಚೇತನವಾಗ ಬಯಸಿದಳು.
2002 ರಲ್ಲಿ ಮಿಲಿಟರಿಯಲ್ಲಿ ಕರ್ತವ್ಯ ನಿರತನಾಗಿದ್ದ ಶ್ಯಾಮ್ ಉಗ್ರರ ದಾಳಿಗೆ ಸಿಲುಕಿ ಪೂರ್ಣವಾಗಿ ಪರಾಶ್ರಿತನಾಗಿ ಬದುಕಿನಲ್ಲಿ ಆಸಕ್ತಿ ಕುಂದಿ ನಿರಾಸೆ, ನೋವುಗಳ ಮಧ್ಯೆ ಕುಸಿದಿರುವಾಗ ಆ ಬಾಳಿಗೆ ಚೇತನವಾಗಿ ಅವನ ಬದುಕಿನ ಉಸಿರಾಗಿ,ಕನಸಾಗಿ ಬರುವ ದೃಢ ನಿರ್ಧಾರ ಕೈಗೊಂಡಾಗ ಅವಳಿಗೆ ಇಪ್ಪತ್ತರ ಹರೆಯ.ತನ್ನ ವಯಸ್ಸಿನ ಇತರ ಹುಡುಗಿಯರಂತೆ ಬದುಕಿನ ಹೊಂಗನಸುಗಳಿಗೆ ರಂಗು ಚೆಲ್ಲಿ ಹೊಸ ಬಾಳಿನ ನಿರೀಕ್ಷೆಯಲ್ಲಿರ ಬೇಕಾದವಳು ಅಶಕ್ತ,ಪರಾವಲಂಬಿಯಾದ ಯೋಧನೊಬ್ಬನ ಬಾಳಿಗೆ ಊರುಗೋಲಾಗ ಬಯಸಿದಾಗ ಅವಳ ನಿರ್ಧಾರವನ್ನು ಬದಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. ತಾಯ್ತಂದೆಯರ ಏಕ ಮಾತ್ರ ಪುತ್ರಿ.ಅಣ್ಣ ತಮ್ಮಂದಿರ ಏಕೈಕ ಸೋದರಿ.ಹಾಗಿದ್ದರೂ ಕೂಡ ಎಲ್ಲರ ಮನವೊಲಿಸಿ ಶ್ಯಾಮನ ಮನಗೆದ್ದು ಅವನ ಮನೆಮನ ಬೆಳಗಿದಳು.

ಹಾಸಿಗೆಯನ್ನೇ ಆಶ್ರಯಿಸಿದ್ದ ಪತಿಯನ್ನು ಗಾಲಿಕುರ್ಚಿಯಲ್ಲಿ ಕುಳಿತುಕೊಳ್ಳುವಷ್ಟು ಚೈತನ್ಯ ಅವಳ ಪ್ರೀತಿಗಿತ್ತು.ತನ್ನ ಬದುಕು ಸಂಪೂರ್ಣವಾಗಿ ಪತಿ ಸೇವೆಗೆ ಮೀಸಲಿರಿಸುವುದರ ಜೊತೆಗೆ ತನ್ನ ವೃತ್ತಿ ಜೀವನದಲ್ಲೂ ಮುಂದುವರಿದಳು.ನರ್ಸಿಂಗ್ ತರಬೇತಿಯ ನಂತರ ಉನ್ನತ ಮಟ್ಟದ ವಿದ್ಯಾಭ್ಯಾಸ ಗಳಿಸಿ ಪ್ರಥಮ ರ್ಯಾಂಕ್ ನಲ್ಲಿಯೇ ಎಂ.ಎಸ್ಸಿ ಮುಗಿಸಿ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಧ್ಯಾಪಿಕೆಯಾದಳು.

ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಶ್ಯಾಮನ ಬದುಕು ಪ್ರಿಯಾಳ ಸಹವಾಸದಲ್ಲಿ ಉತ್ಸಾಹ ತಳೆಯಿತು.ಗಾಲಿಕುರ್ಚಿಯನ್ನು ತನ್ನ ಜೀವನದ ಒಂದು ಭಾಗವಾಗಿ ಭಾವಿಸಿ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದನು.ನೂತನ ವೈದ್ಯಕೀಯ ಕ್ಷೇತ್ರದ ಕೊಡುಗೆಯ ಫಲವಾಗಿ ಅವರ ದಾಂಪತ್ಯವೂ ಚಿಗುರೊಡೆದು ಸಾನ್ವಿ ಎಂಬ ಮುದ್ದು ಕುವರಿ ಅವರ ಮನೆಮನ ಬೆಳಗಿದಳು‌.

ಇಂದಿಗೂ ಶಿವಪ್ರಿಯಾ ಪತಿಯ ಜೊತೆ ಅತ್ಯಂತ ನೆಮ್ಮದಿಯ ಸಂತುಷ್ಟ ಜೀವನ ಸಾಗಿಸುತ್ತಿದ್ದಾಳೆಂದರೆ ಅದು ಅವಳ ತ್ಯಾಗದ ಫಲ.
ನನಗೆಂದೂ ಪ್ರಿಯಾಳ ಬದುಕು ಸ್ಪೂರ್ತಿ. ಅವಳ ಬದುಕು ಮಾದರಿ.ಅದೆಷ್ಟೋ ಹೆಣ್ಣು ಮಕ್ಕಳು ಸಣ್ಣ ಪುಟ್ಟ ಕಾರಣದಿಂದ ವೈವಾಹಿಕ ಬದುಕಿನಲ್ಲಿ ತಾವಾಗಿಯೇ ತೊಂದರೆಗಳನ್ನು ತಂದೊಡ್ಡುತ್ತಿರುವಾಗ ಪ್ರಿಯಾಳ ಬದುಕು ನಮಗೆಲ್ಲ ಮಾದರಿ‌.
ಯೋಧನ ಬಾಳಿಗೆ ಬೆಳಕಾಗಿ ಅವನ ಕನಸುಗಳಿಗೆ ಉಸಿರಾಗಿ ಚೇತನದ ಚಿಲುಮೆಯಾಗಿ ಬಾಳುತ್ತಿರುವ ಶಿವಪ್ರಿಯಾ ಶ್ಯಾಮ್ ರ ಬದುಕಿನ ಕಥೆ 2017 ಆಗಸ್ಟ್‌ ತಿಂಗಳಿನ ರೀಡರ್ಸ್ ಡೈಜೆಸ್ಟ್ ಪತ್ರಿಕೆಯಲ್ಲೂ ಪ್ರಕಟವಾಗಿದೆ‌.

-ಪ್ರಸನ್ನಾ ವಿ ಚೆಕ್ಕೆಮನೆ
ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT