ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಬುಡನ್‌ಗಿರಿ ವಿವಾದ: ಶಾಖಾದ್ರಿ ಉಸ್ತುವಾರಿಗೆ ಸಮ್ಮತಿ

ಸರ್ಕಾರದ ಸೂತ್ರಕ್ಕೆ ಸುಪ್ರೀಂಕೋರ್ಟ್‌ ಒಪ್ಪಿಗೆ
Last Updated 6 ಏಪ್ರಿಲ್ 2018, 19:35 IST
ಅಕ್ಷರ ಗಾತ್ರ

ನವದೆಹಲಿ: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿನ ಧಾರ್ಮಿಕ ವಿಧಿಯ ಮೇಲುಸ್ತುವಾರಿಯನ್ನು ಸೈಯ್ಯದ್‌ ಗೌಸ್‌ ಮೊಹಿಯುದ್ದಿನ್‌ ಶಾಖಾದ್ರಿ ಅವರಿಗೆ ವಹಿಸಿರುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಕ್ಷೇತ್ರದಲ್ಲಿ ಧಾರ್ಮಿಕ ಆಚರಣೆ ಹೇಗಿರಬೇಕು ಎಂಬುದರ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿ 2015ರ ಸೆಪ್ಟೆಂಬರ್‌ 3, 2017ರ ಮಾರ್ಚ್‌ 27 ಹಾಗೂ ಸೆಪ್ಟೆಂಬರ್‌ 22ರಂದು ಕೋರ್ಟ್‌ ನೀಡಿರುವ ಆದೇಶ ಪಾಲಿಸಲಾಗಿಲ್ಲ’ ಎಂದು ದೂರಿ ಸಲ್ಲಿಸಲಾಗಿದ್ದ ಮೇಲ್ಮ
ನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಹಾಗೂ ಆರ್‌.ಭಾನುಮತಿ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಸರ್ಕಾ
ರದ ಮುಖ್ಯ ಕಾರ್ಯದರ್ಶಿ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಇತ್ಯರ್ಥಪಡಿಸಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುವ ಈ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಾದವನ್ನು ಇತ್ಯರ್ಥಪಡಿಸುವಲ್ಲಿ ವಿಳಂಬ ಆಗಿರುವುದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಬೇಷರತ್‌ ಕ್ಷಮೆ ಯಾಚಿಸಿ ಸಲ್ಲಿಸಿರುವ ಹೇಳಿಕೆಯನ್ನು ಮಾನ್ಯ ಮಾಡುವುದಾಗಿ ತಿಳಿಸಿದ ನ್ಯಾಯಪೀಠ, ಪ್ರಕರಣ ಇತ್ಯರ್ಥಪಡಿಸಿ ಸರ್ಕಾರ ನೀಡಿರುವ ವರದಿಯನ್ನೂ ಒಪ್ಪಿಕೊಳ್ಳುವುದಾಗಿ ಹೇಳಿತು.

‘ಪಾರಂಪರಿಕವಾದ ಈ ಕ್ಷೇತ್ರವು ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. ಬದಲಿಗೆ, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದೆ’ ಎಂಬ ಶಿಫಾರಸುಗಳೊಂದಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ್ದ ವರದಿಯನ್ನು, ಸಂಪುಟ ಉಪ ಸಮಿತಿ ಅಂಗೀಕರಿಸಿತ್ತು. ಇದನ್ನು ಆಧರಿಸಿ ಮಾರ್ಚ್‌ 19ರಂದು ಆದೇಶ ಹೊರಡಿಸಿದ್ದ ಸರ್ಕಾರ, ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಪೀಠದೆದುರು ಸ್ಪಷ್ಟಪಡಿಸಿತು.

ಸೈಯ್ಯದ್‌ ಗೌಸ್‌ ಮೊಹಿಯುದ್ದಿನ್‌ ಶಾಖಾದ್ರಿ ಅವರು ನೇಮಿಸುವ ‘ಮುಜಾವರ್‌’ ಅವರೇ ಪಾರಂಪರಿಕ ಕ್ಷೇತ್ರವಾದ ದತ್ತಪೀಠದ ಗರ್ಭಗುಡಿಯಲ್ಲಿ ದಿನನಿತ್ಯ ಧಾರ್ಮಿಕ ವಿಧಿಯನ್ನು ನೆರವೇರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿತು.

‘ಕ್ಷೇತ್ರದ ಆಡಳಿತ ಮಂಡಳಿಯು ಧಾರ್ಮಿಕ ವಿಧಿ ಕೈಗೊಳ್ಳಲು ಹಿಂದೂ ಅರ್ಚಕರನ್ನು ನೇಮಿಸಬೇಕು’ ಎಂದು 2010ರಲ್ಲಿ ಹಿಂದೂ ಧಾರ್ಮಿಕ
ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ಆಯುಕ್ತರು ಸಲ್ಲಿಸಿದ್ದ ವರದಿಯನ್ನು ರದ್ದುಪಡಿಸಲಾಗಿದೆ ಎಂದು ಸರ್ಕಾರ ಸಲ್ಲಿಸಿರುವ ಹೇಳಿಕೆಯಲ್ಲಿ
ಸ್ಪಷ್ಟಪಡಿಸಲಾಗಿದೆ.

ಪರಿಣಾಮಗಳೇನು?

l ಶಾಖಾದ್ರಿ ನೇಮಿಸುವ ‘ಮುಜಾವರ್’ರಿಂದ ಧಾರ್ಮಿಕ ವಿಧಿ

l ಗರ್ಭಗುಡಿ ಪ್ರವೇಶಿಸುವ ‘ಮುಜಾವರ್’ರಿಂದಲೇ ಭಕ್ತರಿಗೆ ತೀರ್ಥ ವಿತರಣೆ

l ಗರ್ಭಗುಡಿಯಲ್ಲಿನ ದತ್ತ ಪೀಠದ ಪಾದುಕೆಗಳಿಗೆ ಪುಷ್ಪ ಸಮರ್ಪಣೆಗೆ ಮುಜಾವರ್‌ಗೆ ಮಾತ್ರ ಅವಕಾಶ

l ನಿತ್ಯ ಸಂಜೆ 7ಕ್ಕೆ ಹಾಗೂ ರಾತ್ರಿ 8ಕ್ಕೆ ಲೋಬಾನ ಉರಿಸಿ ಧಾರ್ಮಿಕ ಆಚರಣೆ ನಡೆಸಲು ಅವಕಾಶ

l ಹಿಂದೂ ಧಾರ್ಮಿಕ ಗುರುಗಳು, ಮಠಾಧೀಶರು, ಸಂತರು ಗುಹೆಯೊಳಗಿನ ಗರ್ಭಗುಡಿ ಪ್ರವೇಶಿಸಿ ಗೌರವ ಸಲ್ಲಿಸಬಹುದು

l ಕ್ಷೇತ್ರವು ವಕ್ಫ್ ಆಸ್ತಿಯಲ್ಲ. ಬದಲಿಗೆ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ

***

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಸ್ವಾಮಿ ಸಂವರ್ಧನಾ ಸಮಿತಿಯಿಂದ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು  ಚಿಕ್ಕಮಗಳೂರು ಜಿಲ್ಲಾ ಬಿಜೆಪಿ  ವಕ್ತಾರ ವರಸಿದ್ಧಿ ವೇಣುಗೋಪಾಲ್‌ ಹೇಳಿದ್ದಾರೆ.

ಇದು  ಕರ್ನಾಟಕದ ಜಾತ್ಯತೀತ ಪರಂಪರೆಗೆ ಸಂದ ಜಯ ಎಂದು  ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT