ಶುಕ್ರವಾರ, ಡಿಸೆಂಬರ್ 6, 2019
26 °C

ಚುನಾವಣೆ ಬಂದಾಗಲಷ್ಟೇ ನೀರ ನೆನಪು

Published:
Updated:
ಚುನಾವಣೆ ಬಂದಾಗಲಷ್ಟೇ ನೀರ ನೆನಪು

ಬೆಂಗಳೂರು: ಬಿಸಿಲ ಕಾವು ಏರುತ್ತಿದ್ದಂತೆ ರಸ್ತೆಯುದ್ದಕ್ಕೂ ನೀರು ಚೆಲ್ಲುತ್ತಾ ಸಾಗುವ ಟ್ಯಾಂಕರ್ ಭರಾಟೆ ಜೋರಾಗುತ್ತದೆ. ಕೈ ಮುಗಿದು ನಿಂತಿರುವ ‘ದಾನಿ’ಯ ದೊಡ್ಡ ಫೋಟೊ ಅದರಲ್ಲಿ ರಾಜಾಜಿಸುತ್ತಾ ಇರುತ್ತದೆ. ’ಅದೃಶ್ಯ ಮತದಾರರ’ ಜಲದಾಹವನ್ನು ತಾತ್ಕಾಲಿಕ ಉಪಶಮನ ಮಾಡುತ್ತದೆ.

ರಾಜಧಾನಿಯಲ್ಲಿ ‘ಜನನಾಯಕರ’ ಜಲಕಾಯಕವಿದು. ಚುನಾವಣಾ ವರ್ಷದಲ್ಲಂತೂ ಅವರ ‘ದುಡಿಮೆ’ ನಿತ್ಯ ನಿರಂತರ. ಬೀದಿ ಬೀದಿಗಳಲ್ಲಿ ಕೊಳವೆಬಾವಿ ಕೊರೆಸಲು ಮುತುವರ್ಜಿ ತೋರುತ್ತಾರೆ. ಒಂದರಲ್ಲಿ ನೀರು ಸಿಗದಿದ್ದರೆ ಮತ್ತೊಂದು ಕೊರೆಸಲು ಗಡಿಬಿಡಿ ತೋರುತ್ತಾರೆ.

ಕೆಲವು ದಿನಗಳ ಹಿಂದೆ ಸಂಜಯನಗರದ ಪೋಸ್ಟಲ್‌ ಕಾಲೊನಿಯಲ್ಲಿ ಸೀಟು ಆಕಾಂಕ್ಷಿಯೊಬ್ಬರು ಕೊಳವೆಬಾವಿ ಕೊರೆಸಿದರು. ಸುತ್ತಮುತ್ತಲ ನಿವಾಸಿಗಳಿಗೆ ಉಪ್ಪಿಟ್ಟು ಕೇಸರಿಬಾತ್‌ ಹಂಚಿ ನೀರು ಪೂರೈಕೆಯ ಖುಷಿ ಹಂಚಿಕೊಂಡರು. ಬೆಂಬಲಿಗರು ನಾಯಕರ ಹಾಡಿ ಹೊಗಳಿದರು. 3–4 ದಿನಕ್ಕೊಮ್ಮೆ ಕಾವೇರಿ ನೀರು ಪಡೆಯುತ್ತಿದ್ದ ನಿವಾಸಿಗಳೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ವಾರದಲ್ಲೇ ಅವರ ಸಂತಸ ಮಾಯವಾಯಿತು. ಆ ಬೋರ್‌ವೆಲ್‌ ಬತ್ತಿ ಹೋಗಿತ್ತು. ನಗರ ಸುತ್ತಾಡಿದಾಗ ಇಂತಹ ಹತ್ತಾರು ಉದಾಹರಣೆಗಳು ಕಾಣಸಿಗುತ್ತವೆ.

ಜನ ಹಾಗೂ ಜನ‍ಪ್ರತಿನಿಧಿಗಳು ಈ ರೀತಿ ಎಗ್ಗಿಲ್ಲದೆ ಕೊಳವೆಬಾವಿಗಳನ್ನು ಕೊರೆಯುತ್ತಿರುವುದರಿಂದ ಅವುಗಳ ಸಂಖ್ಯೆ 4.5 ಲಕ್ಷ ದಾಟಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ. ಆದರೂ, ಕೊಳವೆಬಾವಿಗಳ ಸಂಖ್ಯೆ ರಾಕೆಟ್‌ನಂತೆ ಏರುತ್ತಿದೆ. ಹೆಚ್ಚಿನ ಅಪಾರ್ಟ್‌ಮೆಂಟ್‌ಗಳು ಇರುವ ಪ್ರದೇಶಗಳಲ್ಲಿ ರಾತ್ರಿ ಒಂದು ಸುತ್ತು ಹಾಕಿದರೆ, ಒಂದಿಲ್ಲೊಂದು ಕಡೆ ಕೊಳವೆಬಾವಿ ಕೊರೆಯುವ ದೃಶ್ಯ ಸಾಮಾನ್ಯವಾಗಿ ಕಣ್ಣಿಗೆ ಬಿದ್ದೇ ಬೀಳುತ್ತದೆ.

ಗಂಗರ ಆಧಿಪತ್ಯದ ಕಾಲದಲ್ಲಿ ಪುಟ್ಟ ಗ್ರಾಮವಾಗಿದ್ದ ಬೆಂಗಳೂರು, ತನ್ನಂತಹ 110 ಹಳ್ಳಿಗಳನ್ನೇ ಆಪೋಷನ ತೆಗೆದುಕೊಂಡು ಮಹಾನಗರ­ವಾಗಿ ಬೆಳೆಯುವವರೆಗೆ ಕಾಲದ ಕುಲುಮೆಯಲ್ಲಿ ದಿಗಿಲು ಉಂಟು ಮಾಡು­ವಷ್ಟು ರೂಪಾಂತರ ಹೊಂದಿದೆ. ಗಗನಚುಂಬಿ ಕಟ್ಟಡಗಳನ್ನೂ ನೆಲದಡಿ ರೈಲು ಮಾರ್ಗಗಳನ್ನೂ ಹೊಂದಿರುವ ಈ ಊರು ದಶದಿಕ್ಕುಗಳಲ್ಲಿ ಹಬ್ಬಿದೆ.

ಒಂದು ಕಾಲದಲ್ಲಿ ಕೆರೆಗಳ ಬೀಡಾಗಿದ್ದ ನಗರ ಈಗ ‘ಕಾವೇರಿ’ಯನ್ನಷ್ಟೇ ಅವಲಂಬಿಸಿದೆ. 100 ಕಿ.ಮೀ. ದೂರದಿಂದ ನಗರಕ್ಕೆ ಕುಡಿಯುವ ನೀರು ತರಲಾಗುತ್ತಿದೆ. ಅದಕ್ಕಾಗಿ ‘ನೀರಿನಂತೆ’ ದುಡ್ಡು ಖರ್ಚು ಮಾಡಲಾಗಿದೆ. ಆರು ಹಂತದ ಯೋಜನೆಗಳಿಗೆ ಐದಾರು ಸಾವಿರ ಕೋಟಿ ಸುರಿದರೂ ನಗರದ ಶೇ 60ರಷ್ಟು ಮಂದಿಗೆ ಇನ್ನೂ ಕಾವೇರಿ ನೀರು ಪೂರೈಸಲು ಸಾಧ್ಯವಾಗಿಲ್ಲ. 110 ಹಳ್ಳಿಗಳ ಜನರ ಕಾವೇರಿ ನೀರು ಮರೀಚಿಕೆಯಾಗಿದೆ. ಇಲ್ಲಿನ ಹಳ್ಳಿಗಳಿಗೆ ಪೈಪ್‌ಲೈನ್‌ ಅಳವಡಿಕೆ ಕೆಲವು ತಿಂಗಳ ಹಿಂದಷ್ಟೇ ಆರಂಭವಾಗಿದೆ. ಮಳೆ ಬರುವವರೆಗೆ ಅಳಿದುಳಿದ ನೀರಿನಲ್ಲಿ ಬೇಸಿಗೆ ಕಳೆಯಲು ದೊಡ್ಡ ಕಸರತ್ತನ್ನೇ ನಡೆಸಬೇಕಿದೆ.

ಕಾವೇರಿ ಕಣಿವೆಯಿಂದ ನೀರು ತರುವುದು ತುಂಬಾ ಕಷ್ಟವಾಗಿದ್ದರೂ ತಂದ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸ್ವಲ್ಪವೂ ಬಿಗುವು ಕಾಣುತ್ತಿಲ್ಲ. ಶೇ 39ರಷ್ಟು ಪ್ರಮಾಣದ ನೀರು ಪೋಲಾಗುತ್ತಿದ್ದರೂ ಅದು ಎಲ್ಲಿ ಹೋಗುತ್ತಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ನಗರದ ಮೂರು ವಲಯಗಳಲ್ಲಿ ನೀರಿನ ಸೋರಿಕೆ ತಡೆಗಟ್ಟುವ ಯೋಜನೆ ಅನುಷ್ಠಾನಗೊಂಡಿದ್ದರೂ ಪೋಲು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ‘ನೀರಿನ ಮಿತ ಬಳಕೆ’ ಘೋಷಣೆ ವಿಶ್ವ ಜಲದಿನಕ್ಕಷ್ಟೇ ಸೀಮಿತವಾಗಿದೆ.

ಕೊಳವೆ ಮಾರ್ಗದಲ್ಲಿ ವ್ಯಾಪಕ ಸೋರಿಕೆ ಮತ್ತು ಅಕ್ರಮ ನಲ್ಲಿ ಸಂಪರ್ಕದ ಸಮಸ್ಯೆಗಳು ಈ ಪೋಲಾಗುವ ನೀರಿನೊಂದಿಗೆ ತಳಕು ಹಾಕಿಕೊಂಡಿವೆ. ನಿತ್ಯ 135 ಕೋಟಿ ಲೀಟರ್ ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಅದರಲ್ಲಿ 45 ಕೋಟಿ ಲೀಟರ್‌ನಷ್ಟು ನೀರು ಚರಂಡಿ ಪಾಲಾಗುತ್ತಿದೆ. ಒಂದೆಡೆ ಹನಿ ನೀರಿಗೂ ಜನ ಬಾಯಿ ಬಿಡುತ್ತಿದ್ದರೆ, ಇನ್ನೊಂದೆಡೆ ಜೀವಜಲ ಕೊಳಚೆಯನ್ನು ಸೇರುತ್ತಿದೆ.

ಲೆಕ್ಕವಿಲ್ಲದ ನೀರಿನ ಸ್ಥಿತಿ ಇದಾದರೆ, ಲೆಕ್ಕವಿಟ್ಟ ಜಲವೂ ಪೋಲಾಗುತ್ತಿರುವುದು ಜಲಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ನಲ್ಲಿಗೆ ಪೈಪ್ ಜೋಡಿಸಿ ರಸ್ತೆ ಮೇಲೆ ಕಾರು ತೊಳೆಯುತ್ತಾ ನಿಲ್ಲುವುದು, ಮನೆಯೊಳಗೆ ಬೆಳೆಸಿದ ಉದ್ಯಾನಕ್ಕೂ ನಲ್ಲಿಯ ನೀರು ಬಿಡಲಾಗುತ್ತಿದೆ. ಈ ವಿಷಯದಲ್ಲಿ ನಮ್ಮ ಜನರು ಧಾರಾಳಿಗಳು. ಶುದ್ಧ ನೀರು ಚರಂಡಿ ಸೇರಿದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.

ನಗರದ ಹೃದಯ ಭಾಗದ ನಿವಾಸಿಗಳಿಗೆ ಜಲಮಂಡಳಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದೆ. ಹೊರವಲಯಕ್ಕೆ 3–4 ದಿನಕ್ಕೊಮ್ಮೆ ನೀರು ಸಿಗುತ್ತಿದೆ. ಏಪ್ರಿಲ್‌– ಮೇ ತಿಂಗಳಲ್ಲಿ ಕೆಲವು ಭಾಗಗಳಿಗೆ ವಾರಕ್ಕೊಮ್ಮೆ ನೀರು ಪೂರೈಕೆಯಾದರೆ ಅದೇ ದೊಡ್ಡ ಸಾಧನೆ.

ನಗರದಲ್ಲಿ ವಾರ್ಷಿಕ 800 ಮಿ.ಮೀ.ಯಷ್ಟು ಮಳೆಯಾಗುತ್ತದೆ. ಅಂದರೆ, ಅದರ ಒಟ್ಟು ಪ್ರಮಾಣ 22 ಟಿಎಂಸಿ ಅಡಿಯಷ್ಟು. ಈ ನೀರೆಲ್ಲ ಚರಂಡಿಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಈ ವ್ಯವಸ್ಥೆ ಅಳವಡಿಸಿಕೊಳ್ಳದ ಮನೆಗಳ ಮಾಲೀಕರಿಗೆ ದಂಡ ವಿಧಿಸುವುದಷ್ಟೇ ಜಲಮಂಡಳಿ ಕಾರ್ಯ ಸೀಮಿತವಾಗಿದೆ.

ಮತ್ತೊಂದು ಕಾವೇರಿ ಸೃಷ್ಟಿಸಿ’

ದೂರದ ಕಾವೇರಿ ನದಿಯಿಂದ ಸಾವಿರಾರು ಕೋಟಿ ವ್ಯಯಿಸಿ ಇನ್ನಷ್ಟು ಪ್ರಮಾಣದ ನೀರು ತರುವ ಯೋಜನೆ ರೂಪಿಸುವ ಬದಲು ನಗರದಲ್ಲೇ ಮತ್ತೊಂದು ಕಾವೇರಿಯನ್ನು ಸೃಷ್ಟಿಸಬೇಕು. ಮತ್ತೊಂದು ಕಾವೇರಿ ಸೃಷ್ಟಿಸುವುದು ಎಂದರೆ ನಗರದಲ್ಲಿ ನದಿ ನಿರ್ಮಾಣ ಮಾಡುವುದಲ್ಲ. ಕಲುಷಿತಗೊಂಡ ಕೆರೆಗಳನ್ನು ಶುದ್ಧೀಕರಿಸಿ ಅಲ್ಲಿನ ನೀರು ಬಳಕೆ ಮಾಡಬೇಕು. ಮಳೆ ನೀರನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಬೇಕು.

ಕಾವೇರಿಯಿಂದ ಪಡೆಯುವಷ್ಟು ನೀರನ್ನು ಸ್ಥಳೀಯ ಮೂಲಗಳಿಂದಲೇ ಪಡೆಯುವಂತೆ ಆಗಬೇಕು. ಸರ್ಕಾರ, ಕೈಗಾರಿಕೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸುಸ್ಥಿರವಾದ ನೀರಿನ ನಿರ್ವಹಣೆ ವ್ಯವಸ್ಥೆ ರೂಪಿಸಲು ಸಾಧ್ಯ. ಕೈಗಾರಿಕೆ ಪ್ರದೇಶಗಳಿಗೆ ಎರಡು ಕೊಳವೆ ಮಾರ್ಗ ಕಲ್ಪಿಸಿದರೆ ನಿತ್ಯ ಮೂರು ಕೋಟಿ ಲೀಟರ್‌ ನೀರನ್ನು ಉಳಿತಾಯ ಮಾಡಬಹುದು.

ಶುಲ್ಕ ಹಾಗೂ ದಂಡ ಆಕರಣೆ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಹೆಚ್ಚಿನ ಹಣ ಪಾವತಿಸುವ ಭೀತಿಯಿಂದ ಜನರ ನೀರಿನ ಬಳಕೆ ವಿಧಾನವೂ ಬದಲಾಗಲಿದೆ. ಇದರಿಂದ ಪ್ರತಿದಿನ 20 ಕೋಟಿ ಲೀಟರ್‌ ನೀರು ಉಳಿತಾಯ ಆಗಲಿದೆ. ಒಂದು ಎಕರೆ ವಿಸ್ತಾರದ ಕೆರೆ ನಾಲ್ಕು ಸಾವಿರ ಜನರ ನೀರಿನ ದಾಹ ಇಂಗಿಸಬಲ್ಲದು. ಮುಂದಿನ 20 ವರ್ಷಗಳಲ್ಲಿ ನಗರದ ಜನಸಂಖ್ಯೆ ಮತ್ತೆ 80 ಲಕ್ಷದಷ್ಟು ಹೆಚ್ಚುವ ನಿರೀಕ್ಷೆ ಇದೆ. ಅದಕ್ಕಾಗಿ ನಾವು ಎರಡು ಸಾವಿರ ಎಕರೆಯಷ್ಟು ವಿಶಾಲವಾದ ಕೆರೆಗಳನ್ನು ಶುದ್ಧಗೊಳಿಸಿ, ಸಂರಕ್ಷಿಸುವ ಅಗತ್ಯವಿದೆ.

–ಅಶ್ವಿನ್‌ ಮಹೇಶ್‌, ನಗರ ಯೋಜನಾ ತಜ್ಞ

***

ಪಕ್ಷಗಳ ಪ್ರಮುಖರ ಅಭಿಪ್ರಾಯ

 

ನೀರಿನ ಮಿತ ಬಳಕೆಗೆ ಜಾಗೃತಿ

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಹನಿ ನೀರು ಚೆಲ್ಲದಂತಹ ವಿತರಣಾ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುತ್ತೇವೆ. ಶೇ 100ರಷ್ಟು ತ್ಯಾಜ್ಯ ನೀರು ಸಂಸ್ಕರಣೆಗೆ ಆದ್ಯತೆ ನೀಡುತ್ತೇವೆ. ನಗರದ ಹೃದಯಭಾಗದ ಎಲ್ಲ ಹಳೆಯ ಪೈಪ್‌ಲೈನ್‌ಗಳನ್ನು ಬದಲಿಸಿ ಹೊಸದನ್ನು ಹಾಕುತ್ತೇವೆ. ನೀರಿನ ಮಿತ ಬಳಕೆಗೆ ಜಾಗೃತಿ ಮೂಡಿಸುತ್ತೇವೆ.

ಪ್ರೊ. ಕೆ.ಇ.ರಾಧಾಕೃಷ್ಣ, ಕೆಪಿಸಿಸಿ ಉಪಾಧ್ಯಕ್ಷ

***

‘ಎಲ್ಲರಿಗೂ ದಿನ ಬಿಟ್ಟು ನೀರು’

ನಗರದ ಹೊರ ಭಾಗದ ಪ್ರದೇಶಗಳಿಗೆ ಈಗ ನಾಲ್ಕೈದು ದಿನಕ್ಕೊಮ್ಮೆ ಕಾವೇರಿ ನೀರು ಸರಬರಾಜು ಆಗುತ್ತಿದೆ. ಈ ವಿಷಯದ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಕನಿಷ್ಠ 2 ದಿನಕ್ಕೊಮ್ಮೆ ನೀರು ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬಂದರೆ, ಎಲ್ಲರಿಗೂ 2 ದಿನಕ್ಕೊಮ್ಮೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಐದನೇ ಹಂತದ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇವೆ.

ಎಸ್‌. ಮುನಿರಾಜು, ಬಿಜೆಪಿ ಶಾಸಕ

ಪ್ರತಿಕ್ರಿಯಿಸಿ (+)