ಭಾನುವಾರ, ಡಿಸೆಂಬರ್ 15, 2019
23 °C

ಬೆಂಗಳೂರು: 393 ಮತಗಟ್ಟೆಗಳ ಸ್ಥಳಾಂತರಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  393 ಮತಗಟ್ಟೆಗಳ ಸ್ಥಳಾಂತರಕ್ಕೆ ಪ್ರಸ್ತಾವ

ಬೆಂಗಳೂರು: ನಗರದ 28 ವಿಧಾನಸಭಾ ಕ್ಷೇತ್ರಗಳ ಒಟ್ಟು 8,278 ಮತಗಟ್ಟೆಗಳ ಪೈಕಿ 393 ಮತಗಟ್ಟೆಗಳ ಸ್ಥಳಾಂತರ ಹಾಗೂ 112 ಮತಗಟ್ಟೆಗಳ ಹೆಸರು ಬದಲಾವಣೆ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ಕಾರಣಗಳಿಗಾಗಿ ಮತಗಟ್ಟೆಗಳ ಸ್ಥಳಾಂತರ ಮಾಡಲಾಗುತ್ತಿದೆ. ಕೆಲ ಕಟ್ಟಡಗಳು ಶಿಥಿಲ ಅಥವಾ ನೆಲಸಮಗೊಂಡಿವೆ. ಕೆಲ ಮತಗಟ್ಟೆಗಳು ಮೊದಲ ಮಹಡಿಯಲ್ಲಿದ್ದು, ಅಂಗವಿಕಲರು ಹಾಗೂ ಹಿರಿಯರಿಗೆ ತೊಂದರೆ ಉಂಟಾಗುತ್ತದೆ. ಅಂತಹ ಮತಗಟ್ಟೆಗಳನ್ನು ನೆಲಮಹಡಿಗೆ ಸ್ಥಳಾಂತರ ಮಾಡಬೇಕಿದೆ’ ಎಂದರು.

ಕೆಲ ಮತಗಟ್ಟೆಗಳು ಮತಗಟ್ಟೆ ಪ್ರದೇಶದಿಂದ ಹೊರಗಡೆ ಇವೆ. ಅವುಗಳನ್ನು ಆ ಪ್ರದೇಶದ ವ್ಯಾಪ್ತಿಗೆ ತರಬೇಕಿದೆ. ಯಾವುದೇ ಮತಗಟ್ಟೆಯು ಎರಡು ಕಿ.ಮೀ.ಗಿಂತ ದೂರ ಇರಬಾರದು. ಕೆಲ ಮತಗಟ್ಟೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಖಾಸಗಿ ಕಟ್ಟಡದಲ್ಲಿರುವ ಮತಗಟ್ಟೆಗಳನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕಿದೆ. ಮತ್ತೆ ಕೆಲ ಮತಗಟ್ಟೆಗಳು ಧಾರ್ಮಿಕ ಸ್ಥಳ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸೇರಿದ ಜಾಗಗಳಲ್ಲಿವೆ. ಅವುಗಳನ್ನು ಸ್ಥಳಾಂತರ ಮಾಡಬೇಕಿದೆ ಎಂದು ವಿವರಿಸಿದರು.

ಮತದಾರರ ಪಟ್ಟಿಗೆ ಹೊಸದಾಗಿ 3.55 ಲಕ್ಷ ಮಂದಿ ಹೆಸರು ಸೇರ್ಪಡೆ ಮಾಡಿದ್ದಾರೆ. ಈ ಪೈಕಿ 3.30 ಲಕ್ಷ ಜನರಿಗೆ ಮತದಾರರ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಇನ್ನೂ 24 ಸಾವಿರ ಮಂದಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಏಪ್ರಿಲ್‌ 14ರವರೆಗೆ ಅವಕಾಶವಿದೆ ಎಂದರು.

ಯಾವುದೇ ಮತಗಟ್ಟೆಯಲ್ಲಿ ಗರಿಷ್ಠ 1,400 ಮತದಾರರು ಇರಬೇಕು. ಆದರೆ, ನಗರ ವ್ಯಾಪ್ತಿಯಲ್ಲಿ 806 ಮತಗಟ್ಟೆಗಳಲ್ಲಿ 1,400ಕ್ಕಿಂತ ಹೆಚ್ಚಿನ ಮತದಾರರು ಇದ್ದಾರೆ. ಹೀಗಾಗಿ, ಈ ಮತಗಟ್ಟೆಗಳಲ್ಲಿ ಹೆಚ್ಚುವರಿಯಾಗಿ ಮತಗಟ್ಟೆಗಳನ್ನು (ಆಗ್ಸಿಲರಿ) ಸ್ಥಾಪಿಸಬೇಕು. ಆದರೆ, ಹೆಚ್ಚುವರಿ ಕೊಠಡಿ ಹಾಗೂ ಸಿಬ್ಬಂದಿ ಕೊರತೆ ಇದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ 58ಕ್ಕಿಂತ ಮೀರಿಲ್ಲ. ಹೀಗಾಗಿ, 1,500ಕ್ಕಿಂತ ಹೆಚ್ಚಿನ ಮತದಾರರು ಇರುವ ಮತಗಟ್ಟೆಗಳಲ್ಲಿ ಮಾತ್ರ ಆಗ್ಸಿಲರಿ ಮತಗಟ್ಟೆ ಸ್ಥಾಪಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಅಥವಾ ರ‍್ಯಾಲಿಗೆ ಅನುಮತಿ ಪಡೆಯಲು ಚುನಾವಣಾ ಆಯೋಗವು ‘ಸುವಿಧಾ’, ವಾಹನಗಳ ಅನುಮತಿಗಾಗಿ ‘ಸುಗಮ್‌’, ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್‌ ಅಳವಡಿಕೆ ಕುರಿತು ಸಾರ್ವಜನಿಕರು ದೂರು ನೀಡಲು ‘ಸಮಾಧಾನ’ ಎಂಬ ಆ್ಯಪ್‌ಗಳನ್ನು ರೂಪಿಸಿದೆ ಎಂದರು.

ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್ ಕುಮಾರ್, ‘ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗಗಳ 20 ಕಡೆಗಳಲ್ಲಿ ಚೆಕ್‌ಪೋಸ್ಟ್‌

ಗಳನ್ನು ಸ್ಥಾಪಿಸಲಾಗಿದೆ. 15 ಮತಗಟ್ಟೆಗಳಿಗೆ ಒಂದು ಪೊಲೀಸ್‌ ಸಂಚಾರಿ ವಾಹನವನ್ನು ನಿಯೋಜಿಸಲಾಗಿದೆ. ಯಾವುದೇ ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪುತ್ತಾರೆ.

ಕೇಂದ್ರದಿಂದ 8 ಪಡೆಗಳು ಶನಿವಾರ ಬರುತ್ತಿವೆ. ಮತ್ತೆ ಏಳು ಪಡೆಗಳು ಇದೇ 10ರಂದು ಬರಲಿವೆ. ಒಂದು ಪಡೆಯಲ್ಲಿ 110 ಮಂದಿ ಇರುತ್ತಾರೆ. ನಾಮಪತ್ರ ಸಲ್ಲಿಕೆ ವೇಳೆಗೆ ಒಟ್ಟು 45 ಪಡೆಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ನಮ್ಮ ಇಲಾಖೆಯಲ್ಲಿ 18 ಸಾವಿರ ಪೊಲೀಸರು ಇದ್ದಾರೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಭದ್ರತಾ ಯೋಜನೆ ರೂಪಿಸಿಕೊಂಡಿದ್ದೇವೆ’ ಎಂದು ವಿವರಿಸಿದರು.

‘9,900 ಮಂದಿ ಬಂದೂಕು ಹಾಗೂ ಪಿಸ್ತೂಲ್‌ಗಳನ್ನು ಇಲಾಖೆಗೆ ತಂದೊಪ್ಪಿಸಿದ್ದಾರೆ. ಅನಧಿಕೃತವಾಗಿ ಪಿಸ್ತೂಲ್‌ ಹೊಂದಿದ್ದ ಮೂವರನ್ನು ಬಂಧಿಸಿದ್ದೇವೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಕಾಂಗ್ರೆಸ್‌ ವಿರುದ್ಧ ಎರಡು, ಬಿಜೆಪಿ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದರು.

12 ಸಾವಿರ ಸಿಬ್ಬಂದಿ ಕೊರತೆ’

ಚುನಾವಣಾ ಕರ್ತವ್ಯಕ್ಕಾಗಿ 55 ಸಾವಿರ ಸಿಬ್ಬಂದಿ ಅಗತ್ಯವಿದೆ. ಈಗ 43 ಸಾವಿರ ಸಿಬ್ಬಂದಿ ಇದ್ದು, 12 ಸಾವಿರ ಮಂದಿ ಕೊರತೆ ಇದೆ. ಡಿ ಗ್ರೂಪ್‌ ನೌಕರರು, ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆದುಕೊಳ್ಳಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಕೋರಲಾಗಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು (10ನೇ ತರಗತಿ ಓದಿರುವ) 2,500, ಡಿ ಗ್ರೂಪ್‌ ನೌಕರರು 6,000, ಬಿಲ್‌ ಕಲೆಕ್ಟರ್‌ಗಳು 1,200, ಆಶಾ ಕಾರ್ಯಕರ್ತೆಯರು 1,100, ಖಾಸಗಿ ಶಾಲಾ–ಕಾಲೇಜುಗಳ ಸಿಬ್ಬಂದಿ 6 ಸಾವಿರ ಇದ್ದಾರೆ ಎಂದರು.

ನಾಳೆ ವಿಶೇಷ ನೋಂದಣಿ ಅಭಿಯಾನ: ಇದೇ 8ರಂದು ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಎಲ್ಲ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಆ ಮತಗಟ್ಟೆಯ ಮತದಾರರ ಪಟ್ಟಿ ಇರುತ್ತದೆ. ಆ ಭಾಗದ ಮತದಾರರ ಹೆಸರು ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ನೋಡಬಹುದು. ಹೆಸರು ಸೇರ್ಪಡೆ, ಹೆಸರು ತೆಗೆಸುವುದು, ತಿದ್ದುಪಡಿ ಮಾಡಿಸಬಹುದು. ಇದಕ್ಕಾಗಿ ದಾಖಲೆ ಹಾಗೂ ಭಾವಚಿತ್ರ ನೀಡಬೇಕು. ಒಂದು ವಾರದವರೆಗೆ ಆಕ್ಷೇಪಣಾ ಅವಧಿ ಇರುತ್ತದೆ. ಈ ಸಂದರ್ಭದಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಮತದಾರರ ಸ್ಥಳ ಪರಿಶೀಲಿಸಿ, ಪಟ್ಟಿಗೆ ಹೆಸರು ಸೇರ್ಪಡೆ ಮಾಡುತ್ತಾರೆ ಎಂದು ಮಂಜುನಾಥ ಪ್ರಸಾದ್‌ ವಿವರಿಸಿದರು.

ಪ್ರತಿಕ್ರಿಯಿಸಿ (+)