ಶುಕ್ರವಾರ, ಡಿಸೆಂಬರ್ 6, 2019
24 °C

ಎರಡು ರಾತ್ರಿ ದಲಿತರ ಹಳ್ಳಿಗಳಲ್ಲಿ ತಂಗಲು ಸಂಸದರಿಗೆ ಪ್ರಧಾನಿ ಮೋದಿ ಸೂಚನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ರಾತ್ರಿ ದಲಿತರ ಹಳ್ಳಿಗಳಲ್ಲಿ ತಂಗಲು ಸಂಸದರಿಗೆ ಪ್ರಧಾನಿ ಮೋದಿ ಸೂಚನೆ?

ನವದೆಹಲಿ: ಬಿಜೆಪಿ ಮೇಲಿನ ನಂಬಿಕೆಯನ್ನು ಪುನಸ್ಥಾಪಿಸುವಂತೆ ಮಾಡುವ ಸಲುವಾಗಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಳ್ಳಿಗಳಲ್ಲಿ 2 ರಾತ್ರಿ ತಂಗುವಂತೆ ಪಕ್ಷದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 14 (ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್ ಅವರ ಜನ್ಮದಿನ) ಮತ್ತು ಮೇ 5ರ ನಡುವೆ ಎರಡು ರಾತ್ರಿ ಹಳ್ಳಿಗಳಲ್ಲಿ ತಂಗಬೇಕು. ಇದಕ್ಕೆ ಪರಿಶಿಷ್ಟ ಜಾತಿಗಳ ಶೇಕಡ 50ರಷ್ಟು ಜನ ಇರುವ ಹಳ್ಳಿಗಳನ್ನು ಆಯ್ದುಕೊಳ್ಳಬೇಕು ಎಂಬುದಾಗಿ ಪ್ರಧಾನಿ ಸೂಚಿಸಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರ ಹೇಳಿಕೆ ಉಲ್ಲೇಖಿಸಿ ಇಂಡಿಯನ್‌ ಎ‌ಕ್ಸ್‌ಪ್ರೆಸ್ ವರದಿ ಮಾಡಿದೆ.

ಶೇಕಡ 50ರಷ್ಟು ಪರಿಶಿಷ್ಟ ಜಾತಿಗಳ ಜನರೇ ಇರುವ ಹಳ್ಳಿಗಳು ದೇಶದಲ್ಲಿ 20 ಸಾವಿರಕ್ಕೂ ಹೆಚ್ಚಿರುವುದಾಗಿ ಪ್ರಧಾನಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ಎಸ್‌ಟಿ, ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಇತ್ತೀಚೆಗಷ್ಟೇ ಭಾರತ್ ಬಂದ್ ನಡೆಸಿದ್ದವು. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ‍ಪಡಿಸಿದ್ದವು.

‘ಮೋದಿ ಸರ್ಕಾರವು ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಮೀಸಲಾತಿ ನೀತಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಮುಂಬೈನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ತಿಳಿಸಿದ್ದರು.

ಪ್ರತಿಕ್ರಿಯಿಸಿ (+)