ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತದೇಹ ಸಂಬಂಧಿಕರಿಗೆ ಹಸ್ತಾಂತರ

ಹೃದಯಾಘಾತದಿಂದ ಮೃತಪಟ್ಟಿದ್ದ ಕೇದಾರನಾಥ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ವಿಕ್ರಮಸಿಂಗ್
Last Updated 7 ಏಪ್ರಿಲ್ 2018, 5:39 IST
ಅಕ್ಷರ ಗಾತ್ರ


ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಮಸಿಂಗ್ ಅಪರಾಧ್ ಅವರ ಮೃತದೇಹವನ್ನು ಶುಕ್ರವಾರ ಸಂಬಂಧಿಕರಿಗೆ ಒಪ್ಪಿಸಲಾಯಿತು.

ನವನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಕಾರಾಗೃಹದ ಅಧಿಕಾರಿಗಳು ಹಾಗೂ ನವನಗರ ಠಾಣೆ ಪೊಲೀಸರು, ವಿಕ್ರಮಸಿಂಗ್ ಅವರ ಮೃತದೇಹವನ್ನು ಅಳಿಯ (ಮಗಳ ಗಂಡ) ವಿಶಾಲ್ ಬೊೋಸ್ವಾಲ ಅವರಿಗೆ ಒಪ್ಪಿಸಿದರು. ನಂತರ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಹುಟ್ಟೂರು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಒಯ್ಯಲಾಯಿತು.

ಜೈಲು ಅಧಿಕಾರಿಗಳ ವಿರುದ್ಧ ಆಕ್ರೋಶ:

‘ಮಾವ ವಿಕ್ರಮ ಸಿಂಗ್ ಅವರಿಗೆ 77 ವರ್ಷ ವಯಸ್ಸಾಗಿತ್ತು. ಒಮ್ಮೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯೂ ಆಗಿದೆ. ಮಧುಮೇಹದಿಂದ ಬಳಲುತ್ತಿದ್ದ ಅವರು ಗುರುವಾರ ಮಧ್ಯಾಹ್ನ ಜೈಲಿನಲ್ಲಿ ಅಸ್ವಸ್ಥರಾಗಿ ಬೇಧಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವರನ್ನು ರಾತ್ರಿ ಆಸ್ಪತ್ರೆಗೆ ಕರೆ ತರಲಾಗಿದೆ. ಅವರಿಗೆ ತುರ್ತಾಗಿ ವೈದ್ಯಕೀಯ ನೆರವು ಕೊಡಿಸುವಲ್ಲಿ ಜೈಲು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ವಿಶಾಲ್‌ ಆರೋಪಿಸಿದರು.

‘ನೂರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದ ಅವರಿಗೆ ಕೊನೆಯ ಕಾಲದಲ್ಲಿ ಅಗತ್ಯ ಚಿಕಿತ್ಸೆ ದೊರೆಯಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಸಿವಿಲ್‌ ನ್ಯಾಯಾಧೀಶರು, ವಿಕ್ರಮಸಿಂಗ್ ಅವರ ಸಾವಿನ ಬಗ್ಗೆ ಅಳಿಯ ವಿಶಾಲ್ ಅವರಿಗಿದ್ದ ಅನುಮಾನಗಳನ್ನು ವೈದ್ಯರ ಮೂಲಕ ಪರಿಹರಿಸಿದರು.

ಈ ವೇಳೆ ಶವಾಗಾರದ ಬಳಿ ನೆರೆದಿದ್ದ ಕಾರ್ಖಾನೆಯ ಷೇರುದಾರರು, ಮಾಜಿ ನಿರ್ದೇಶಕರು ಹಾಗೂ ವಿಕ್ರಮಸಿಂಗ್ ಸ್ನೇಹಿತರು ಕಣ್ಣೀರು ಹಾಕಿದರು. ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು.

ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಕೊಟ್ಟಿದ್ದ ಚೆಕ್ ಬೌನ್ಸ್ ಆದ ಕಾರಣ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಬಾದಾಮಿ ನ್ಯಾಯಾಲಯ ಬಂಧನಕ್ಕೆ ಆದೇಶಿಸಿತ್ತು. ಅದರಂತೆ ಕೆರೂರ ಠಾಣೆ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ವಿಕ್ರಮಸಿಂಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಕಾರಣ ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇಡಲಾಗಿತ್ತು.

‘ಕಾರ್ಖಾನೆ ಪುನರ್‌ ಆರಂಭಿಸಲಿದ್ದೇವೆ’...

‘ಕೇದಾರನಾಥ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಲಿದ್ದೇವೆ. ಸಹಕಾರಿ ತತ್ವದಡಿಯ ಈ ಕಾರ್ಖಾನೆಯಲ್ಲಿ ರೈತರ ಷೇರು ಬಂಡವಾರ ಶೇ 37ರಷ್ಟು ಇದ್ದು ಮಾವ ವಿಕ್ರಮ್‌ಸಿಂಗ್ ಅಪರಾಧ ಅವರ ಪಾಲು ಶೇ 63ರಷ್ಟು ಇದೆ’ ಎಂದು ವಿಶಾಲ್ ಸುದ್ದಿಗಾರರಿಗೆ ತಿಳಿಸಿದರು.‘ಕಳೆದ ಎಂಟು ವರ್ಷಗಳಿಂದ ಕಾರ್ಖಾನೆ ಬಂದ್ ಆಗಿದೆ. ಈಗ ಅದು ಲೀಲಾವು ಹಂತಕ್ಕೆ ತಲುಪಿದೆ. ಕಾರ್ಖಾನೆ ನಡೆಸಲು ನಾಲ್ಕಾರು ಮಂದಿ ಅಡ್ಡಿಪಡಿಸುತ್ತಿದ್ದಾರೆ. ಷೇರುದಾರರು
ಹಾಗೂ ರೈತರು ನಮ್ಮ ನೆರವಿಗೆ ನಿಂತರೆ ಬಂಡವಾಳ ಹೂಡುವವರನ್ನು ನಾನು ಕರೆತರುತ್ತೇನೆ. ಆ ನಿಟ್ಟಿನಲ್ಲಿ ಶೀಘ್ರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT