ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ: ಸ್ವಾಮೀಜಿ

7
‘ಹರಿದಾಸ ಹಬ್ಬ’ದಲ್ಲಿ ಅದಮಾರು ಶ್ರೀ ಹೇಳಿಕೆ

ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ: ಸ್ವಾಮೀಜಿ

Published:
Updated:

ಬೆಳಗಾವಿ: ‘ಕನ್ನಡ ಸಾಹಿತ್ಯಕ್ಕೆ ದಾಸರು ನೀಡಿದ ಕೊಡುಗೆ ಅಪಾರ’ ಎಂದು ಉಡುಪಿ ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಇಲ್ಲಿನ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಹರಿದಾಸ ಸೇವಾ ಸಮಿತಿ ಆಯೋಜಿಸಿರುವ ಮೂರು ದಿನಗಳ ‘ಹರಿದಾಸ ಹಬ್ಬ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಮೂಲವಾಗಿದೆ. ದಾಸರು ಹಳ್ಳಿ ಹಳ್ಳಿಗಳನ್ನು ಸುತ್ತಿ, ಅಲ್ಲಿಯ ಭಾಷೆಗಳಲ್ಲಿಯೇ ದೇವರ ವಾಣಿಯನ್ನು ಹಾಡುವ ಮೂಲಕ ಕನ್ನಡ ಬೆಳೆಸಿದ್ದಾರೆ. ಕೇವಲ ಹೋರಾಟ, ಹಾರಾಟಗಳಿಂದಷ್ಟೇ ಭಾಷೆ ಬೆಳೆದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಯುವಜನರು ಮೊಬೈಲ್‌ಗಳಲ್ಲಿ ತಲೆ ಬಗ್ಗಿಸಿಕೊಂಡು ಮುಳುಗಿ ಹೋಗಿದ್ದಾರೆ. ಮೇಲೆ ನೋಡುವುದನ್ನೇ ಮರೆತಿದ್ದಾರೆ’ ಎಂದು ವಿಷಾದಿಸಿದರು.‘ದೇವರಿಗೆ ದಾಸರಾಗಬೇಕು. ಅದರೆ, ಸಮಾಜದಲ್ಲಿ ತಲೆಎತ್ತಿ ನಡೆಯುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ದಾಸಭಕ್ತಿ ಒಂದೇ ಇದ್ದರೆ ಸಾಲದು. ತಲೆ ಎತ್ತಿ ಬದುಕುವುದನ್ನೂ ಕಲಿಯಬೇಕು ಎಂದು ದಾಸವರೇಣ್ಯರು ವಾಣಿಗಳ ಮೂಲಕ ತಿಳಿಸಿದ್ದಾರೆ’ ಎಂದು ಸ್ಮರಿಸಿದರು.

ಪ್ರತಿಭೆ ಪ್ರೋತ್ಸಾಹಿಸಿ: ‘ಜ್ಞಾನ ಸಂಪಾದನೆಗೆ ವ್ಯಾಸ ಸಾಹಿತ್ಯ, ದಾಸ ಸಾಹಿತ್ಯ ಇದೆ. ವ್ಯಾಸ ಸಾಹಿತ್ಯ ಅರಿಯದವರು ದಾಸ ಸಾಹಿತ್ಯವನ್ನಾದರೂ ತಿಳಿದುಕೊಂಡರೆ ಜೀವನ ಪಾವನವಾಗುತ್ತದೆ. ಆದರೆ, ಇಂದು ಬಹಳಷ್ಟು ಮಂದಿ ಎರಡೂ ಸಾಹಿತ್ಯವನ್ನು ಮರೆತು ದಿಕ್ಕು ತಪ್ಪಿದ್ದಾರೆ’ ಎಂದು ವಿಶ್ಲೇಷಿಸಿದರು.ಭಾರತೀಯ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯದ ಶಕ್ತಿಯನ್ನು ಅವರಿಗೆ ತಿಳಿಸಿಕೊಡಬೇಕು. ಸಂಸ್ಕಾರವನ್ನೂ ಕಲಿಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಕೊಟಬಾಗಿ, ಸಮಾಜದ ಮುಖಂಡ ಅನಿಲ ಪೋತದಾರ ಮಾತನಾಡಿದರು.ಗಾಯಕ ಧಾರವಾಡದ ಅನಂತಾಚಾರ್ಯ ಕಟಗೇರಿ ಅವರಿಗೆ ‘ಅನಂತಾಧೀಶ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದಾಸವಾಣಿ ಗಾಯಕ ರಾಯಚೂರು ಶೇಷಗಿರಿದಾಸ್‌, ಉದ್ಯಮಿ ರಾಘವೇಂದ್ರ ಬೆಳಗಾಂವಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry