ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಉತ್ತರ; ಎಂಇಎಸ್‌ ಪ್ರಾಬಲ್ಯ ಸಡಿಲಿಕೆ

Last Updated 7 ಏಪ್ರಿಲ್ 2018, 6:06 IST
ಅಕ್ಷರ ಗಾತ್ರ

ಬೆಳಗಾವಿ: ಭಾಷೆ ಆಧಾರಿತ ರಾಜಕಾರಣವು ಮರೆಯಾಗುತ್ತಿರುವುದಕ್ಕೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರವು ಸಾಕ್ಷಿಪ್ರಜ್ಞೆಯಂತಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದ ನಂತರ ನಡೆದ 10 ಚುನಾವಣೆಗಳಲ್ಲಿ ಪ್ರಾಬಲ್ಯ ಮೆರೆದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ನಂತರದ ಚುನಾವಣೆಗಳಲ್ಲಿ ಕುಸಿತ ಕಂಡಿದೆ. 1999ರ ನಂತರ ಕ್ಷೇತ್ರದ ಮತದಾರರು ರಾಷ್ಟ್ರೀಯ ಪಕ್ಷಗಳತ್ತ ಒಲವು ತೋರಿಸಿದ್ದು, ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಬಿಜೆಪಿ ತೀವ್ರ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದೆ.

1956ರಲ್ಲಿ ಭಾಷಾ ಆಧಾರಿತವಾಗಿ ರಾಜ್ಯಗಳ ಪುನರ್‌ವಿಂಗಡಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬೆಳಗಾವಿ ನಗರವನ್ನು ಕರ್ನಾಟಕಕ್ಕೆ (ಅಂದಿನ ಮೈಸೂರು ರಾಜ್ಯ) ಸೇರಿಸಲಾಗಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ ಎಂಇಎಸ್‌, ಬಿ.ಆರ್‌. ಸುಂಟಣಕರ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿತ್ತು. ಕಾಂಗ್ರೆಸ್ಸಿನ ಎಂ.ಎಂ. ಖಾಜಿ ಪರಾಭವಗೊಂಡಿದ್ದರು. 1962ರಲ್ಲಿಯೂ ಸುಂಟಣಕರ ಅವರು ಜಯಗಳಿಸಿದ್ದರು. ಕಾಂಗ್ರೆಸ್ಸಿನ ಎಸ್‌.ಬಿ. ಕಣಬುರ್ಗಿ ಪರಾಭವಗೊಂಡಿದ್ದರು.

ಪುನರ್‌ವಿಂಗಡಣೆ: ಮೊದಲ ಬಾರಿ 1967ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಯಿತು. ಆಗ ಎಂ.ಇ.ಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಬಿ. ಸಾಯನಾಯ್ಕ (27,818 ಮತಗಳು) ಆಯ್ಕೆಯಾಗಿದ್ದರು. ಬಿ.ಬಿ. ಪಾಟೀಲ, ಕೆ.ಪಿ. ಮೆಣಸೆ ಸೇರಿದಂತೆ ಇನ್ನಿಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಹ್ಯಾಟ್ರಿಕ್‌: ಬಿ.ಬಿ. ಸಾಯನಾಯ್ಕ ಅವರು ನಂತರ ನಡೆದ 1972 ಹಾಗೂ 1978ರ ಚುನಾವಣೆಯಲ್ಲೂ ಜಯಗಳಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು.1983ರ ಚುನಾವಣೆಯಲ್ಲಿ ಆರ್‌.ಎಸ್‌. ಮಾನೆ ಅವರನ್ನು ಎಂಇಎಸ್‌ ಕಣಕ್ಕಿಳಿಸಿತು. ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್‌. ದೊಡ್ಡಣ್ಣವರ ಅವರನ್ನು ಪರಾಭವಗೊಳಿಸಿದ ಮಾನೆ ಜಯಗಳಿಸಿದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಮಾನೆ ಅವರು ಜಯಗಳಿಸಿದರು. ಆಗ ಎಸ್‌.ವೈ. ಕಾಕತಕರ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದರು. 1989ರಲ್ಲಿ ಬಿ.ಆರ್‌. ಮಹಾಗಾಂವಕರ, 1992ರಲ್ಲಿ ನಡೆದ ಉಪಚುನಾವಣೆಯಲ್ಲಿ ಅರ್ಜುನರಾವ್‌ ಹಿಶೋಬಕರ, 1994ರಲ್ಲಿ ಎನ್‌.ಜಿ. ತರಳೆ ಅವರು ಎಂಇಎಸ್‌ ಬೆಂಬಲದೊಂದಿಗೆ ವಿಧಾನಸಭೆಗೆ ಆಯ್ಕೆಯಾದರು.

ತಿರುವು:1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೊದಲ ಬಾರಿ ಜಯದ ನಗೆ ಬೀರಿತು. 37,664 ಮತಗಳನ್ನು ಪಡೆಯುವ ಮೂಲಕ ರಮೇಶ ಲಕ್ಷ್ಮಣ ಕುಡಚಿ ನಗೆ ತಂದುಕೊಟ್ಟರು. ಅವರು ಎಂಇಎಸ್‌ ಬೆಂಬಲಿತ ಮಾಲೋಜಿರಾವ ಶಾಂತಾರಾಮ ಅಷ್ಟೇಕರ (30,004) ಅವರನ್ನು ಸೋಲಿಸಿದ್ದರು. ಬಿಜೆಪಿಯ ಬಾಬುಲಾಲ ಅಚಲಸಿಂಗ ರಾಜಪುರೋಹಿತ ಮೂರನೇ ಸ್ಥಾನ ಪಡೆದರು.

2004ರಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಎಂಇಎಸ್‌ ನಡುವೆ ತೀವ್ರ ಸ್ಪರ್ಧೆ ನಡೆಯಿತು. ಕೇವಲ 1,000ದಿಂದ 2,000 ಮತಗಳ ಅಂತರ ಇವರ ನಡುವೆ ಇತ್ತು. 32,198 ಮತಗಳನ್ನು ಪಡೆಯುವ ಮೂಲಕ ರಮೇಶ ಕುಡಚಿ ತಮ್ಮ ಜಯದ ಓಟವನ್ನು ಮುಂದುವರಿಸಿದರು. 31,181 ಮತಗಳನ್ನು ಪಡೆದ ಬಿಜೆಪಿಯ ವಿಲಾಸ ಪವಾರ ಜಯದ ಸನಿಹಕ್ಕೆ ಬಂದಿದ್ದರು. 29,051 ಮತಗಳನ್ನು ಪಡೆದ ಎಂಇಎಸ್‌ ಅಭ್ಯರ್ಥಿ ದೀಪಕ ದಳವಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಎಂಇಎಸ್‌ ಇನ್ನಷ್ಟು ಕುಸಿತ: 2008ರಲ್ಲಿ ಭಾರಿ ಬದಲಾವಣೆಗಳು ಸಂಭವಿಸಿದವು. ಕಾಂಗ್ರೆಸ್‌ನ ಹಾಲಿ ಶಾಸಕ ರಮೇಶ ಕುಡಚಿ ಅವರನ್ನು ಬಿಟ್ಟು, ಫಿರೋಜ್‌ ಸೇಠ್‌ ಅವರಿಗೆ ಟಿಕೆಟ್‌ ನೀಡಲಾಯಿತು. ಇದರಿಂದ ಬಂಡಾಯವೆದ್ದ ರಮೇಶ ಜೆಡಿಎಸ್‌ನಿಂದ ಕಣಕ್ಕಿಳಿದರು. ಬಿಜೆಪಿಯಿಂದ ಶಂಕರಗೌಡ ಪಾಟೀಲ ಸ್ಪರ್ಧಿಗಿಳಿದರು. ಅಭ್ಯರ್ಥಿ ಬದಲಾದರೂ ಕಾಂಗ್ರೆಸ್‌ ಹಿಡಿತ ಸಡಿಲಗೊಳ್ಳಲಿಲ್ಲ. ಮೊದಲ ಬಾರಿಗೆ ಸ್ಪರ್ಧಿಸಿದ್ದ ಫಿರೋಜ್‌ ಸೇಠ್‌ 37,527 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು. 34,154 ಪಡೆದ ಶಂಕರಗೌಡ ಪಾಟೀಲ ತೀವ್ರ ಸ್ಪರ್ಧೆಯೊಡ್ಡಿದರು. ಎಂಇಎಸ್‌ ಬೆಂಬಲಿತ ವಿಜಯ ಮೋರೆ 19,055 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕಿಳಿದರು. 10,279 ಮತಗಳನ್ನು ಪಡೆದ ರಮೇಶ ಕುಡಚಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಫಿರೋಜ್‌ ಜಯ ಮುಂದುವರಿಕೆ: 2013ರಲ್ಲಿ ನಡೆದ ಚುನಾವಣೆಯಲ್ಲಿ 45,125 ಮತ ಪಡೆಯುವ ಮೂಲಕ ಫಿರೋಜ್‌ ಸೇಠ್‌ ಜಯದ ಯಾತ್ರೆ ಮುಂದುವರಿಸಿದರು. 26,915 ಮತಗಳನ್ನು ಪಡೆದ ಎಂಇಎಸ್‌ ಬೆಂಬಲಿತ ಅಭ್ಯರ್ಥಿ ರೇಣು ಕಿಲ್ಲೇಕರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಬಿಜೆಪಿಯ ಕಿರಣ ಜಾಧವ 17,456 ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ನ ರಮೇಶ ಕುಡಚಿ 3,980 ಮತ ಪಡೆಯುವ ಮೂಲಕ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದರು.

ಮುಂದಿನ ತಿಂಗಳು ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬೆಳಗಾವಿ ಉತ್ತರ ಕ್ಷೇತ್ರ ಸಜ್ಜಾಗಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಎಂಇಎಸ್‌ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇನ್ನಷ್ಟೇ ಪ್ರಕಟವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT