‘ಬಂಜೆತನಕ್ಕೆ ಆಯುರ್ವೇದದಲ್ಲಿ ಪರಿಹಾರ’

7
ಎನ್.ಕೆ.ಜೆ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯಾಗಾರ

‘ಬಂಜೆತನಕ್ಕೆ ಆಯುರ್ವೇದದಲ್ಲಿ ಪರಿಹಾರ’

Published:
Updated:

ಬೀದರ್: ‘ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಂಜೆತನಕ್ಕೂ ಪರಿಹಾರ ಇದೆ’ ಎಂದು ಬೆಂಗಳೂರಿನ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಗಜಾನಂದ ಹೆಗಡೆ ತಿಳಿಸಿದರು.ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀರೋಗ ಪ್ರಸೂತಿ ವಿಭಾಗದ ವತಿಯಿಂದ ಬಂಜೆತನ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂತಾನ ಭಾಗ್ಯಕ್ಕೆ ಆಯುರ್ವೇದ ಔಷಧಗಳು ಪರಿಣಾಮಕಾರಿಯಾಗಿವೆ. ಆರೋಗ್ಯವಂತ ಮಕ್ಕಳ ಜನನ ಹಾಗೂ ಸಾಮಾನ್ಯ ಹೆರಿಗೆಗೂ ಸಹಕಾರಿಯಾಗಿವೆ. ಪ್ರಸ್ತುತ ಆಯುರ್ವೇದ ಪದ್ಧತಿಯ ಬಳಕೆ ಕಡಿಮೆಯಾಗುತ್ತ ಹೋಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕಾಗಿದೆ. ಆಯುರ್ವೇದದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಅಧಾತ್ಮದ ಮಾರ್ಗದ ಮೂಲಕವೂ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಬಹುದು. ಪೂಜೆ, ಜಪ, ತಪ, ಧ್ಯಾನ, ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ತಾಯಿಗೆ ಸುಜ್ಞಾನಿ ಮಗು ಜನಿಸುತ್ತದೆ’ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ‘ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಆಯುರ್ವೇದಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಆಯುರ್ವೇದದಿಂದ ದೀರ್ಘಾವಧಿಯ ರೋಗಿಗಳನ್ನೂ ಗುಣಪಡಿಸಬಹುದು’ ಎಂದರು.

ಸಂಸ್ಥೆಯ ಕೋಶಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ವಿ.ಎಸ್ ಪಾಟೀಲ ಮಾತನಾಡಿದರು.

‘ಸ್ತ್ರೀ ವಂಧ್ಯತ್ವದಲ್ಲಿ ಸತ್ವ ಮತ್ತು ಕ್ಷೇತ್ರ ವಿಕೃತಿ’ ಕುರಿತು ಸ್ತ್ರೀರೋಗ ತಜ್ಞೆ ಡಾ.ವಿ.ಎನ್.ಕೆ. ಉಷಾ, ‘ಬೀಜದುಸ್ಟಿ ನಿವಾರಣೆಯಲ್ಲಿ ಆಯುರ್ವೇದದ ಮಹತ್ವ’ ಕುರಿತು ಡಾ.ಎನ್.ವಿಜಯಕುಮಾರ, ‘ಬಂಜೆತನ ನಿವಾರಣೆ’ ಕುರಿತು ಸೊಲ್ಲಾಪುರದ ಡಾ.ರಾಜೀವ ಧಬಾಡೆ, ‘ಸ್ತ್ರೀ ಬಂಜೆತನದಲ್ಲಿ ಅಗ್ನಿ ಪಾತ್ರ’ ಕುರಿತು ಕೇರಳದ ತಿರುವನಂತಪುರದ ಡಾ.ರವಿಂದ್ರ ಚಿಲುವೇರು, ‘ಬಂಜೆತನದಲ್ಲಿ ಶೋಧನದ ಪಾತ್ರ’ ಕುರಿತು ಸ್ತ್ರೀರೋಗ ತಜ್ಞೆ ಡಾ.ಶೀಲಾ ಹಳ್ಳಿ ಉಪನ್ಯಾಸ ನೀಡಿದರು.

ಡಾ. ಧೂಳಪ್ಪ ಮೇತ್ರೆ ರಚಿಸಿರುವ ‘ಆಯುರ್ವೇದ ಅನುಸಂಧಾನ ಪದ್ಧತಿ' ಪುಸ್ತಕ ಬಿಡುಗಡೆ ಮಾಡಲಾಯಿತು. ಸಂಸ್ಥೆ ನಿರ್ದೇಶಕ ಶಿವಶರಣಪ್ಪ ಸಾವಳಗಿ, ಉಪ ಪ್ರಾಚಾರ್ಯ ಸಂಜುಕುಮಾರ ಹಳ್ಳಿ, ಪ್ರಾಧ್ಯಾಪಕರಾದ ಡಾ.ಬ್ರಹ್ಮಾನಂದ ಸ್ವಾಮಿ, ಡಾ.ಪ್ರವೀಣ ಸಿಂಪಿ, ಅಶೋಕ ನಾಯ್ಕರ್, ಡಾ.ಬಂಡೆಪ್ಪ, ಸಂಜು ಜ್ಯೋತೆಪ್ಪ, ಕಲಬುರ್ಗಿ, ವಿಜಯಪುರ, ಕೊಪ್ಪಳದ ಪ್ರಾಧ್ಯಾಪಕರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಾಚಾರ್ಯ ಡಾ.ನಾಗರಾಜ ಮೂಲಿಮನಿ ಸ್ವಾಗತಿಸಿದರು. ವಿಜಯಕುಮಾರ ಬಿರಾದಾರ ನಿರೂಪಿಸಿದರು.

**

ಕಾರ್ಯಾಗಾರ ಮೂಲಕ ಆಯುರ್ವೇದ ಪದ್ಧತಿಯ ಮಹತ್ವವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮೇಲಿಂದ ಮೇಲೆ ನಡೆಯಬೇಕು – ಡಾ. ಗಜಾನಂದ ಹೆಗಡೆ,ವಿಸ್ತರಣಾ ನಿರ್ದೇಶಕ, ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry