ಶನಿವಾರ, ಡಿಸೆಂಬರ್ 14, 2019
20 °C
ಅನಿತಾ ಕೊಲೆ ‍ಪ್ರಕರಣ; ಆರೋಪಿಗೆ ವಾಕ್ ಶ್ರವಣ ದೋಷ

ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ

ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿ ಕೋಡಿಗಾನಹಳ್ಳಿಯ ನಿವಾಸಿ, ರೇಮಂಡ್ಸ್ ಸಿದ್ಧ ಉಡುಪು ಕಾರ್ಖಾನೆಯ ಉದ್ಯೋಗಿ ಅನಿತಾ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪಟ್ಟಣದ ಮುನೇಶ್ವರ ಬಡಾವಣೆಯ ನಿವಾಸಿ ಕಿಶೋರ್ (28) ಎಂಬುವರನ್ನು ಬಂಧಿಸಿದ್ದಾರೆ.ಅನಿತಾ ಕಾಣೆಯಾಗಿದ್ದರು. ಮಾ.30 ರಂದು ದೊಡ್ಡಹನುಮೇನಹಳ್ಳಿ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ವೇಳೆ ಅನಿತಾ ಅವರನ್ನು ರೇಮಂಡ್ಸ್ ಕಾರ್ಖಾನೆಯಲ್ಲೇ ಉದ್ಯೋಗಿಯಾಗಿರುವ ಕಿಶೋರ್‌ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿತ್ತು.

ಪೊಲೀಸರು ಕಿಶೋರ್‌ನನ್ನು ವಶಕ್ಕೆ ಪಡೆದಾಗ ಆತನಿಗೆ ವಾಕ್ ಶ್ರವಣ ದೋಷವಿರುವುದು ತಿಳಿಯಿತು. ಆದ್ದರಿಂದ ಪೊಲೀಸರು ಆತ ಕಲಿತ ಶಾಲೆಯ ಶಿಕ್ಷಕ ಫಾಸಿಲ್ ರಜಾ ಅವರ ಸಹಾಯ ಪಡೆದು ಸಂಜ್ಞೆಗಳ ಮೂಲಕ ವಿಚಾರಣೆ ನಡೆಸಿದರು. ಜತೆಗೆ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದರು.

ಕಿಶೋರ್ ಮತ್ತು ಅನಿತಾ ಅವರ ನಡುವೆ ಮೊದಲು ಇದ್ದ ಸ್ನೇಹ ಕಾಲಾಂತರದಲ್ಲಿ  ಪ್ರೀತಿಗೆ ತಿರುಗಿತ್ತು. ಅನಿತಾ ಮದುವೆಗೆ ಒತ್ತಾಯಿಸಿದಾಗ ಅಂತರ್ಜಾತಿ ಕಾರಣಕ್ಕೆ ಕಿಶೋರ್ ಮದುವೆಯಾಗಲು ನಿರಾಕರಿಸಿದ್ದ. ಮದುವೆಯಾಗದಿದ್ದರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸುವುದಾಗಿ ಅನಿತಾ ಬೆದರಿಕೆ ಹಾಕಿದರು. ಆಗ ಆರೋಪಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು.

ಮಾ.4 ರಂದು ಅನಿತಾಳನ್ನು ಬೈಕಿನಲ್ಲಿ ದೊಡ್ಡಹನುಮೇನಹಳ್ಳಿ ಸಮೀಪದ ಅರಣ್ಯಕ್ಕೆ ಕರೆದೊಯ್ದ ಕಿಶೋರ್, ವೇಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ಕಲ್ಲಿನಿಂದ ಗುರುತು ಸಿಗದಂತೆ ಮುಖ ಜಜ್ಜಿ ಅಲ್ಲಿಂದ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)