ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರ ಸಾಧನೆ; ಕ್ಷೇತ್ರದ ಹಿರಿಮೆ

ಮುತ್ಸದ್ದಿ ರಾಜಕಾರಣಿಗಳ ಆಯ್ಕೆ; ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಹೆಗ್ಗಳಿಕೆ
Last Updated 7 ಏಪ್ರಿಲ್ 2018, 7:37 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಧಾರ್ಮಿಕವಾಗಿ, ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ, ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಪೀಠವನ್ನು ಹೊಂದಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮುಖ್ಯಮಂತ್ರಿ ಸೇರಿದಂತೆ ಮುತ್ಸದ್ಧಿ ರಾಜಕಾರಣಿಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕ್ಷೇತ್ರದ ಮತದಾರರು ಹಲವು ಘಟಾನುಘಟಿ ರಾಜಕಾರಣಿಗಳಿಗೆ ಸೋಲು, ಗೆಲುವಿನ ರುಚಿ ತೋರಿಸಿದವರು.

1952ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನಾ ಶೃಂಗೇರಿ ವಿಧಾನಸಭಾ ಕ್ಷೇತ್ರ ತೀರ್ಥಹಳ್ಳಿ–ಕೊಪ್ಪ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತ್ತು. ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿ ಈ ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು. ನರಸಿಂಹರಾಜಪುರ ಹೋಬಳಿ ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. 1952ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಡಿದಾಳ್ ಮಂಜಪ್ಪ 16,258 ಮತಗಳನ್ನು ಪಡೆದು ಆಯ್ಕೆಯಾದರು. ಭಾರತೀಯ ಜನಸಂಘದ ಅಭ್ಯರ್ಥಿ ಕೆ.ರಾಮಕೃಷ್ಣರಾವ್ ಸೋಲು ಕಂಡಿದ್ದರು.

1956ರಲ್ಲಿ ಕಡಿದಾಳ್ ಮಂಜಪ್ಪ ಅವರು ಎರಡೂವರೆ ತಿಂಗಳು ಮುಖ್ಯಮಂತ್ರಿಯಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕು ಸೇರ್ಪಡೆಗೊಂಡವು. ನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಮೊದಲ ಶಾಸಕರಾಗಿ ಕಡಿದಾಳ್ ಮಂಜಪ್ಪ ಅವಿರೋಧವಾಗಿ ಆಯ್ಕೆಯಾದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಕಡಿದಾಳ್ ಮಂಜಪ್ಪ ಅವರು ಕಾಂಗ್ರೆಸ್‌ನಿಂದ 24,824 ಮತಗಳನ್ನು ಪಡೆದು ಆಯ್ಕೆಯಾದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಎನ್.ಪಿ.ಗೋವಿಂದಗೌಡ ಹಾಗೂ ಎಚ್.ಪಿ.ಗಣಪತಿ ಪ್ರಭು ಸೋಲುಂಡಿದ್ದರು.

1967ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್.ವೀರಪ್ಪಗೌಡ 12,509 ಮತಗಳಿಂದ ವಿಜೇತರಾದರು. ಭಾರತೀಯ ಜನಸಂಘದಿಂದ ಸ್ಪರ್ಧಿಸಿದ್ದ ಎಚ್.ವಿ.ಶ್ರೀಕಂಠಭಟ್ಟ, ಪಕ್ಷೇತರ ಅಭ್ಯರ್ಥಿ ಎನ್.ಎಂ.ಭಿಡೆ ಪರಾಜಿತರಾಗಿದ್ದರು. 1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೀರಪ್ಪಗೌಡ 25,807 ಮತ ಪಡೆದು ವಿಜೇತರಾದರು. ಭಾರತೀಯ ಜನಸಂಘದಿಂದ ಸ್ಪರ್ಧಿಸಿದ್ದ ಎಚ್.ವಿ.ಶ್ರೀಕಂಠಭಟ್ಟ, ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ದಯಾನಂದ ರಾಮಪ್ಪಕಲ್ಲೆ ಸೋಲುಂಡಿದ್ದರು.

1978ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ನಿಂದ ಸ್ಪರ್ಧಿಸಿದ್ದ ಬೇಗಾನೆ ರಾಮಯ್ಯ 34,716 ಮತಗಳನ್ನು ಪಡೆದು ವಿಜೇತರಾದರು. ಜನತಾಪಕ್ಷದ ಎಚ್.ವಿ.ಶ್ರೀಕಂಠಭಟ್ಟ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್.ವೀರಪ್ಪಗೌಡ ಸೋಲುಕಂಡರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಜಿ.ಗೋವಿಂದೇಗೌಡ 30,270 ಮತ ಪಡೆದು ವಿಜೇತರಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೇಗಾನೆ ರಾಮಯ್ಯ ಸೋತರು.

1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಜಿ.ಗೋವಿಂದೇ ಗೌಡ 30,529 ಮತ ಪಡೆದು ವಿಜೇತರಾದರು. ಕಾಂಗ್ರೆಸ್‌ನ ಯು.ಕೆ.ಶಾಮಣ್ಣ, ಬಿಜೆಪಿಯ ಶ್ರೀಕಂಠಗೌಡ ಸೋತರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯು.ಕೆ.ಶಾಮಣ್ಣ 36,912 ಮತಪಡೆದು ವಿಜೇತರಾದರು. ಜನತಾದಳದಿಂದ ಸ್ಪರ್ಧಿಸಿದ್ದ ಎಚ್.ಜಿ.ಗೋವಿಂದೇಗೌಡ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ತಲವಾನೆ ಪ್ರಕಾಶ್ ಸೋಲುಂಡರು.

1994ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಎಚ್.ಜಿ.ಗೋವಿಂದೇಗೌಡ 35,991 ಮತಗಳನ್ನು ಪಡೆದು ವಿಜೇತರಾದರು. ಕಾಂಗ್ರೆಸ್‌ನ ಯು.ಕೆ.ಶಾಮಣ್ಣ, ಬಿಜೆಪಿಯ ಡಿ.ಎನ್.ಜೀವರಾಜ್ ಸೋತರು. ಆ ನಂತರದಲ್ಲಿ ಎಚ್.ಜಿ.ಗೋವಿಂದೇಗೌಡರು ರಾಜಕೀಯ ನಿವೃತ್ತಿ ಪ್ರಕಟಿಸಿದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡ 46,579 ಮತ ಪಡೆದು ವಿಜೇತರಾದರು. ಬಿಜೆಪಿಯ ಡಿ.ಎನ್.ಜೀವರಾಜ್, ಜೆಡಿಎಸ್‌ನ ಕೊಳಲೆ ರುದ್ರಪ್ಪಗೌಡ ಸೋಲುಂಡರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ 47,263 ಮತ ಪಡೆದು ವಿಜೇತರಾದರು. ಕಾಂಗ್ರೆಸ್‌ನ ಡಿ.ಬಿ.ಚಂದ್ರೇಗೌಡ, ಜೆಡಿಎಸ್‌ನ ಎಚ್.ಟಿ.ರಾಜೇಂದ್ರ, ಬಿಎಸ್‌ಪಿಯ ಕೆ.ಎಂ.ಗೋಪಾಲ್ ಸೋತರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ 43,646 ಮತ ಪಡೆದು ವಿಜೇತರಾದರು. ಕಾಂಗ್ರೆಸ್‌ನ ಡಿ.ಬಿ.ಚಂದ್ರೇಗೌಡ, ಜೆಡಿಎಸ್‌ನ ಎಚ್.ಟಿ.ರಾಜೇಂದ್ರ, ಬಿಎಸ್‌ಪಿಯ ಎಂ.ಆರ್.ರವಿಶಂಕರ್, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ಸೋತರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ 58,402 ಮತ ಪಡೆದು ವಿಜೇತರಾಗಿ ಹ್ಯಾಟ್ರಿಕ್ ಸಾಧಿಸಿದರು. ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ, ಜೆಡಿಎಸ್‌ನ ತಲಕಾನೆ ರಾಜೇಂದ್ರ, ಆಮ್ ಆದ್ಮಿಯ ಗುರುದೇವ್, ಶ್ರೀರಾಮ ಸೇನೆಯ ಕೆ.ವಿ.ಮಹೇಶ್‌ ಕುಮಾರ್, ಸಿಪಿಎಂಎಲ್‌ನ ಉಮೇಶ್, ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ಸೋತರು.

**

ಸಾಧನೆಯಿಂದ ಗುರುತಿಸಿಕೊಂಡವರು...

ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿಯಾಗಿದ್ದರು. ಭೂ ಮಾಲೀಕರ ವಿರೋಧದ ನಡುವೆಯೂ ಗೇಣಿದಾರರ ಹಿತರಕ್ಷಣೆಗೆ ಮುಂದಾಗಿದ್ದು ಕಡಿದಾಳ್ ಮಂಜಪ್ಪ ಅವರ ಸಾಧನೆಯಾಗಿದೆ. ಜನತಾ ಪರಿವಾರದಿಂದ ಆಯ್ಕೆಯಾಗಿದ್ದ ಎಚ್.ಜಿ.ಗೋವಿಂದೇಗೌಡರು ಶಿಕ್ಷಣ ಸಚಿವರಾಗಿ ಸಲ್ಲಿಸಿದ ಸೇವೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ. ಅವರ ಆಡಳಿತ ವೈಖರಿಯಿಂದ ‘ಮಲೆನಾಡು ಗಾಂಧಿ’ ಎಂದೇ ಪ್ರಸಿದ್ಧರಾದರು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಡಿ.ಬಿ.ಚಂದ್ರೇಗೌಡರು 1978ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ತಮ್ಮ ಸ್ಥಾನವನ್ನು ತೆರವು ಮಾಡಿ ರಾಜಕೀಯ ಪುನರ್ ಜನ್ಮ ನೀಡಿದವರು ಎಂದು ಪ್ರಸಿದ್ಧಿ ಪಡೆದ ಮುತ್ಸದ್ಧಿ ರಾಜಕಾಣಿಯಾಗಿದ್ದಾರೆ. ಬಿಜೆಪಿಯಿಂದ ಸತತ ಮೂರು ಬಾರಿ ಗೆಲ್ಲುವುದರ ಮೂಲಕ ಶಾಸಕ ಡಿ.ಎನ್.ಜೀವರಾಜ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

**

ಕೆ.ವಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT