ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮನೆ ಮನೆಗೆ ತೆರಳಿ ‘ಮತದಾನ ಜಾಗೃತಿ’

ಜಿ.ಪಂ. ಸಹಯೋಗದಲ್ಲಿ ವ್ಯವಸ್ಥಿತ ಮತದಾರರ ಜಾಗೃತಿ ಹಾಗೂ ಭಾಗವಹಿಸುವಿಕೆ (ಸ್ವೀಪ್‌ ) ಜಾಥಾ
Last Updated 7 ಏಪ್ರಿಲ್ 2018, 9:07 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಿ.ಟಿ. ಶಿಲ್ಪಾ ನಾಗ್‌, ಉಪ ಕಾರ್ಯದರ್ಶಿ ಜಾಫರ್‌ ಷರೀಫ್‌ ಹಾಗೂ ಚುನಾವಣಾ ಅಧಿಕಾರಿಗಳು ಶುಕ್ರವಾರ ನಗರದ ಮೈಲಾರ ಮಹದೇವಪ್ಪ ವೃತ್ತದ ಸುತ್ತಲಿನ ಮನೆಗಳಿಗೆ ಭೇಟಿ ನೀಡಿ, ಮೇ 12ರಂದು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸಿದರು.

ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ‘ವ್ಯವಸ್ಥಿತ ಮತದಾರರ ಜಾಗೃತಿ ಹಾಗೂ ಭಾಗವಹಿಸುವಿಕೆ ಜಾಥಾ’ ನಡೆಯಿತು. ಬಳಿಕ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸಿ.ಟಿ. ಶಿಲ್ಪಾನಾಗ್‌ ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ 71.25ರಷ್ಟು ಮತದಾನವಾಗಿದ್ದು, ಈ ಬಾರಿ ಶೇ 80ರಷ್ಟು ಮತದಾನ ಮಾಡುವ ಗುರಿಯನ್ನು ಹೊಂದಲಾಗಿದೆ. ಆದ್ದರಿಂದ, ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ ಹಾಗೂ ಹಿರಿಯ ನಾಗರಿಕರು ಹಾಗೂ ಕ್ಯಾಂಪಸ್‌ ರಾಯಭಾರಿಗಳು ಕಡ್ಡಾಯ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು’ ಎಂದರು.

‘ಈಗಾಗಲೇ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಸ್ವೀಪ್‌ ಕಾರ್ಯಕ್ರಮದ ಮೂಲಕ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಪ್ರತಿ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ಇಬ್ಬರು ವಿದ್ಯಾರ್ಥಿಗಳನ್ನು ‘ಕ್ಯಾಂಪಸ್‌ ರಾಯಭಾರಿ’ಗಳನ್ನಾಗಿ ನೇಮಕ ಮಾಡಲಾಗಿದೆ. ಅವರ ಮೂಲಕ ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

‘ಏ.8ರಂದು ‘ಮಿಂಚಿನ ಮತದಾರರ ನೋಂದಣಿ’ ನಡೆಯಲಿದ್ದು, ಏ.14ರ ಒಳಗಾಗಿ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ಏ.15ರ ಒಳಗಾಗಿ ಎಲ್ಲ ಮತಗಟ್ಟೆಗಳು ಸಂಪೂರ್ಣ ಸಿದ್ಧತೆಯಲ್ಲಿರಬೇಕು’ ಎಂದರು.

‘ಈ ಬಾರಿಯ ಚುನಾವಣೆಯಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸರದಿಯನ್ನು ಮಾಡಲಾಗಿದ್ದು, ಅಂಗವಿಕಲರನ್ನು ಮನೆಯಿಂದ ಕರೆತರಲು ವಾಹನ ವ್ಯವಸ್ಥೆ ಹಾಗೂ ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಾಫರ್‌ ಷರೀಫ್‌ ಮಾತನಾಡಿ, ‘ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಅವರಿಗೆ ಅಂಚೆ ಮೂಲಕ ಮತದಾನ ಮಾಡುವ ವ್ಯವಸ್ಥೆ ಇದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ ಹುಬ್ಬಳ್ಳಿ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರದ ಭರಡಿ ಮತಗಟ್ಟೆಯಲ್ಲಿ ಅತೀ ಹೆಚ್ಚು (ಶೇ 87.78) ಮತದಾನವಾದರೆ, ಯಲಗಚ್ಚ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ (ಶೇ 68.37) ಮತದಾನವಾಗಿದೆ. ಆದ್ದರಿಂದ, ಕಡಿಮೆ ಮತದಾನವಾದ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ’ ಎಂದರು.ಕಾರ್ಯಕ್ರಮದಲ್ಲಿ ಕ್ಯಾಂಪಸ್‌ ರಾಯಭಾರಿಗಳಿಗೆ ಜಾಗೃತಿ ಬ್ಯಾಡ್ಜ್‌ ಹಾಗೂ ಮತದಾನ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಬೋಧಿಸಿದರು.

ಜಾಥಾದಲ್ಲಿ ತಹಶೀಲ್ದಾರ್‌ ನವೀನ ಹುಲ್ಲೂರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಸೇರಿದಂತೆ ಬಿಎಲ್‌ಎ, ಪಿಡಿಒ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

ಹಿರೇಕೆರೂರ: ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಮತದಾರರನ್ನು ಜಾಗೃತಿಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಜಿಲ್ಲಾ ಘಟಕದ ಅಧ್ಯಕ್ಷೆ ಶಿಲ್ಪಾನಾಗ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯ್ತಿ ಆಶ್ರಯದಲ್ಲಿ ಏರ್ಪಡಿಸಿದ್ದ ಯುವ ಮತದಾರರ ನೋಂದಣಿ ಹಾಗೂ ಜನಜಾಗೃತಿ ಮೂಡಿಸುವ, ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವ (ಸ್ವೀಪ್) ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಸಂಕಲ್ಪತೊಡಬೇಕು. ಚುನಾವಣಾ ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಈಗಾಗಲೇ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿದಿವೆ. ಆಯಾ ಶಾಲಾ ಕೇಂದ್ರಗಳು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸುತ್ತಿದ್ದು, ವಿದ್ಯಾರ್ಥಿಗಳ ಅಂಕಪಟ್ಟಿ ಜೊತೆಗೆ ಕಡ್ಡಾಯ ಮತ ಚಲಾವಣೆ ಕರಪತ್ರಗಳನ್ನು ಪಾಲಕರಿಗೆ ಕಳಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯ ಹಾಗೂ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶೀಲಿಸುವಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಜಾಫರ್‌ ಷರೀಫ್ ಸುತಾರ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಹಂಚಿನಮನಿ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ ಶೆಟ್ಟಿಕೇರಿ, ತಾಲ್ಲೂಕು ನೋಡಲ್ ಅಧಿಕಾರಿ ಸಂತೋಷಕುಮಾರ ತಳಕಲ್, ಬಾಪುಗೌಡ ಪಾಟೀಲ್, ದೀಪಕ್ ನಾಯ್ಕ, ವೈ.ವಿ.ದೊಡ್ಮನಿ, ಸಿ.ಕೆ.ಚಂದ್ರಯ್ಯ ಹಾಗೂ ಮುಖ್ಯ ತರಬೇತಿದಾರರು ಇದ್ದರು.

**

ಕಳೆದ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಅವರು ತಮ್ಮಲ್ಲಿರುವ ಎಲ್ಲ ಅಪನಂಬಿಕೆ ಬಿಟ್ಟು ಮತದಾನ ಮಾಡಬೇಕು – ಸಿ.ಟಿ. ಶಿಲ್ಪಾನಾಗ್‌, ಜಿ.ಪಂ. ಸಿಇಒ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT