ಶನಿವಾರ, ಡಿಸೆಂಬರ್ 7, 2019
16 °C
ಶತಮಾನಗಳಿಂದಲೂ ಬುಟ್ಟಿ ಹೆಣೆದು ಬದುಕುವ ಕೊರಗ ಮತ್ತು ಮೇದ ಜನಾಂಗ

ಬಿದಿರು ಕೊರತೆ: ಕುಶಲಕರ್ಮಿಗಳ ಬದುಕು ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿದಿರು ಕೊರತೆ: ಕುಶಲಕರ್ಮಿಗಳ ಬದುಕು ಅತಂತ್ರ

ಕುಶಾಲನಗರ: ಶತಮಾನಗಳಿಂದಲೂ ಬುಟ್ಟಿ ಹೆಣೆದು ಬದುಕುವ ಕೊರಗ ಮತ್ತು ಮೇದ ಎಂಬ ಜನಾಂಗವು ಕೊಡಗು ಜಿಲ್ಲೆಯಲ್ಲೂ ನೆಲೆಸಿದ್ದು, ಅವರು ಗುಡಿ ಕೈಗಾರಿಕೆಯನ್ನು ನಡೆಸುತ್ತಾ ತಮ್ಮ ಬದುಕು ಕಂಡುಕೊಂಡಿದ್ದಾರೆ.

ಆದರೆ, ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳ ತೀವ್ರ ಪೈಪೋಟಿಯಿಂದ ಗುಡಿ ಕೈಗಾರಿಕೆಗಳು ವಿನಾಶದ ಅಂಚಿನಲ್ಲಿವೆ ಎಂಬ ಕೊರಗು ಕಾಡುತ್ತಿದೆ. ತೀವ್ರ ಸ್ಪರ್ಧೆಯ ನಡುವೆ ಬೇಡಿಕೆಗೆ ಅನುಗುಣವಾಗಿ ಬಿದಿರು ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಬಿದಿರಿನ ಕಸುಬನ್ನು ನಂಬಿ ಬದುಕುತ್ತಿರುವ ಕೊರಗ ಮತ್ತು ಮೇದರ ವೃತ್ತಿ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ.

ಗಿರಿಜನರು ಕಾಡುಮೇಡು ಅಲೆದು ಬಿದಿರನ್ನು ಸಂಗ್ರಹಿಸಿ, ಅದರಿಂದ ಅಗತ್ಯ ವಸ್ತುಗಳನ್ನು ತಯಾರಿಸುತ್ತಾರೆ. ಅದನ್ನೇ ತಮ್ಮ ಜೀವನದ ಸಾಂಪ್ರದಾಯಿಕ ಕುಲಕಸುಬು ಮಾಡಿಕೊಂಡಿದ್ದಾರೆ. ಬಿದಿರನ್ನು ಮೇದರ ಸಂಜೀವಿನಿ ಎಂದೂ ಕರೆಯಲಾಗುತ್ತದೆ.

ರಾಜ್ಯ ಹೆದ್ದಾರಿಯಲ್ಲಿ ಬರುವ ಬಸವನಹಳ್ಳಿ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮೇದರ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳು ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಬಿದಿರಿನ ಕೊರತೆಯಿಂದ ಜನಾಂಗದ ವೃತ್ತಿ ಬದುಕಿಗೆ ಸಂಚಕಾರ ಎದುರಾಗಿದೆ.

ಸರ್ಕಾರ ಗುಡಿ ಕೈಗಾರಿಕೆಗಳ ಕಾರ್ಮಿಕರಿಗೆ ಜಾರಿಗೆ ತಂದಿರುವ ಹಲವು ಸೌಲಭ್ಯಗಳೂ ಮರೀಚಿಕೆ ಯಾಗಿವೆ. ಅರಣ್ಯ ಇಲಾಖೆ ಈ ಹಿಂದೆ ಸಬ್ಸಿಡಿ ದರದಲ್ಲಿ ಬಿದಿರನ್ನು ನೀಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ, ಖಾಸಗಿ ಎಸ್ಟೇಟ್‌ಗಳಲ್ಲಿ ದೊರೆಯುವ ಬಿದಿರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಕುಶಲಕರ್ಮಿಗಳು ಹೇಳುತ್ತಾರೆ.

ಆ ಬಿದಿರಿಗೆ ದುಬಾರಿ ಬೆಲೆ ನೀಡಿ ವಸ್ತುಗಳನ್ನು ತಯಾರಿಸಿದರೂ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ. ತಟ್ಟಿ, ಬಳಂಜಿ, ಬೀಸಣಿಕೆ, ರೇಷ್ಮೆ ಹುಳು ಸಾಕಾಣಿಕೆಯ ಚಂದ್ರಿಕೆ ಸೇರಿದಂತೆ ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಬರ್ಮ ಬಿದಿರು, ಕಾಡು ಬಿದಿರು ಹಾಗೂ ಮುಳ್ಳಿನ ಬಿದಿರನ್ನು ಬಳಸಲಾಗುತ್ತದೆ. ಕಾಟೇಜ್ ಮತ್ತು ಐಷಾರಾಮಿ ಕಟ್ಟಡಗಳಲ್ಲಿ ಬಿದಿರಿನ ತಟ್ಟೆಗಳಿಗೆ ಎಲ್ಲಿಲ್ಲದೆ ಬೇಡಿಕೆ. ಆದರೆ, ಬಿದಿರಿನ ಕೊರತೆಯಿಂದ ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕುಶಲಕರ್ಮಿ ಪರಮೇಶ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

**

ಗುಡಿ ಕೈಗಾರಿಗಳಿಗೆ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಗಿರಿಜನರ ಬದುಕನ್ನು ಹಸನು ಮಾಡಬೇಕು  – ಎಸ್.ಎನ್. ರಾಜಾರಾವ್, ಅಧ್ಯಕ್ಷ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ.

**

ತೀವ್ರ ಸ್ಪರ್ಧೆಯ ನಡುವೆ ಬೇಡಿಕೆಗೆ ಅನುಗುಣವಾಗಿ ಬಿದಿರು ಲಭ್ಯವಾಗುತ್ತಿಲ್ಲ. ಬಿದಿರನ್ನೇ ನಂಬಿ ಬದುಕುತ್ತಿರುವ ನಮ್ಮ ಜೀವನ ಚಿಂತಾಜನಕ ಸ್ಥಿತಿಗೆ ತಲುಪಿದೆ – ಪರಮೇಶ್, ಕುಶಲಕರ್ಮಿ, ಬಸವನಹಳ್ಳಿ

**

 

ಪ್ರತಿಕ್ರಿಯಿಸಿ (+)