ಜನಾಶೀರ್ವಾದ ಯಾತ್ರೆ ಸಿದ್ಧತೆ ಪರಿಶೀಲನೆ

7
ಜಿಲ್ಲೆಯಲ್ಲಿ ಇಂದು ರಾಹುಲ್‌ ಗಾಂಧಿ ಪ್ರವಾಸ; ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ

ಜನಾಶೀರ್ವಾದ ಯಾತ್ರೆ ಸಿದ್ಧತೆ ಪರಿಶೀಲನೆ

Published:
Updated:

ಕೋಲಾರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಭಾಗವಾಗಿ ಶನಿವಾರ (ಏ.7) ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ನಗರಕ್ಕೆ ಶುಕ್ರವಾರ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು.

ರಾಹುಲ್‌ ಗಾಂಧಿಯವರ ರೋಡ್ ಶೋ ಮಾರ್ಗ ಮತ್ತು ಸಾರ್ವಜನಿಕ ಸಭೆಯ ಸ್ಥಳದಲ್ಲಿನ ಸಿದ್ಧತೆಗಳನ್ನು ಅವಲೋಕಿಸಿದರು. ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಸಂಬಂಧ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸಲಹೆ ನೀಡಿದರು.

‘ರಾಹುಲ್‌ ಗಾಂಧಿ ಬೆಳಿಗ್ಗೆ 11ಕ್ಕೆ ಹೆಲಿಕಾಪ್ಟರ್ ಮೂಲಕ ಮುಳಬಾಗಿಲಿಗೆ ಬರುತ್ತಾರೆ. ನಂತರ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್, ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸುತ್ತಾರೆ. ಕೆಜಿಎಫ್‌ ತಾಲ್ಲೂಕಿನ ಕ್ಯಾಸಂಬಳ್ಳಿಯಲ್ಲಿರುವ ಕೆ.ಸಿ.ರೆಡ್ಡಿ ಸ್ಮಾರಕಕ್ಕೆ ಭೇಟಿ ನೀಡಿ, ಮಹಿಳಾ ಸಮಾವೇಶದಲ್ಲಿ ಭಾಗವಹಿಸುತ್ತಾರೆ’ ಎಂದು ಪರಮೇಶ್ವರ್

ತಿಳಿಸಿದರು.

ಚರ್ಚೆ ನಡೆದಿಲ್ಲ: ‘ಜೆಡಿಎಸ್‌ ಮುಖಂಡ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್‌ಗೆ ಬರುವ ಸಂಬಂಧ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆ ಬೆಳವಣಿಗೆ ನನ್ನ ಗಮನಕ್ಕೂ ಬಂದಿಲ್ಲ. ಯಾರೂ ಬೇಕಾದರೂ ಪಕ್ಷಕ್ಕೆ ಬರಬಹುದು. ಆದರೆ, ಅವರಿಗೆ ಯಾವುದೇ ಭರವಸೆ ಕೊಡುವುದಿಲ್ಲ. ಶ್ರೀನಿವಾಸಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾವುದಾದರೂ ಕೆಲಸಕ್ಕೆ ಹೋಗಿರಬಹುದು. ಆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ‘ದೇವೇಗೌಡರ ದೂರು ರಾಜಕೀಯ ಪ್ರೇರಿತವಾದುದು. ಅವರ ಆರೋಪದಲ್ಲಿ ಹುರುಳಿಲ್ಲ. ಅವರು ದೂರು ಕೊಟ್ಟ ಮಾತ್ರಕ್ಕೆ ಎಲ್ಲವೂ ನಿಜವಲ್ಲ. ಚುನಾವಣಾ ಆಯೋಗ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ನಸೀರ್ ಅಹಮ್ಮದ್, ಕೆಪಿಸಿಸಿ ಕಾರ್ಯದರ್ಶಿ ವಿ.ಆರ್‌.ಸುದರ್ಶನ್‌, ಮಾಜಿ ಸಚಿವ ನಿಸಾರ್ ಅಹಮ್ಮದ್‌, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry