ರಾಹುಲ್‌ಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

7

ರಾಹುಲ್‌ಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

Published:
Updated:

ಕೋಲಾರ: ‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ವಾಮ ಮಾರ್ಗದ ಮೂಲಕ ಶಾಸಕರಾಗಿರುವ ಕೊತ್ತೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡದಂತೆ ಒತ್ತಾಯಿಸಿ ರಾಹುಲ್ ಗಾಂಧಿ ರೋಡ್ ಶೋ ವೇಳೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊತ್ತೂರು ಮಂಜುನಾಥ್ ಹಿಂದಿನ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರು ದಲಿತರ ಮೀಸಲಾತಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಸಂಗತಿಯನ್ನು ರಾಹುಲ್‌ ಗಾಂಧಿ ಗಮನಕ್ಕೆ ತರುತ್ತೇವೆ’ ಎಂದರು.

‘ಕೊತ್ತೂರು ಮಂಜುನಾಥ್ ಸೇರಿದಂತೆ 37 ಮಂದಿ ಪರಿಶಿಷ್ಟರ ಜಾತಿ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಕೊಟ್ಟಿದ್ದೇವೆ. ಈ ಸಂಬಂಧ ನಿರ್ದೇಶನಾಲಯವು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಆದರೆ, ಜಿಲ್ಲಾಧಿಕಾರಿಯು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್‌, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ರ ಒತ್ತಡಕ್ಕೆ ಮಣಿದು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಸಚಿವ ರಮೇಶ್‌ಕುಮಾರ್‌ ಚುನಾವಣೆಗೆ ಮುನ್ನ ಜಿಲ್ಲೆಗೆ ನೀರು ಹರಿಸುವುದಾಗಿ ಬೊಗಳೆ ಬಿಟ್ಟು, ಆರೋಗ್ಯ ಇಲಾಖೆಯನ್ನು ಭ್ರಷ್ಟಗೊಳಿಸಿ ಈಗ ಕೊತ್ತೂರು ಮಂಜುನಾಥ್‌ ಬೆಂಬಲಕ್ಕೆ ನಿಂತಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಕಡತವನ್ನೇ ಸಚಿವರು ಜಿಲ್ಲಾಧಿಕಾರಿ ಕಚೇರಿಯಿಂದ ನಾಪತ್ತೆ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

‘ಸಚಿವರ ಹಾಗೂ ಸಂಸದರ ಕೈಗೊಂಬೆಯಾಗಿರುವ ಜಿಲ್ಲಾಧಿಕಾರಿಯು ಜನಪರವಾಗಿ ಕೆಲಸ ಮಾಡುತ್ತಿಲ್ಲ. ಅವರು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ಸಂಘಟನೆ ಸದಸ್ಯ ವೆಂಕಟೇಶ್ ದೂರಿದರು.

ಸಂಘಟನೆ ಸದಸ್ಯರಾದ ನಾರಾಯಣ ಸ್ವಾಮಿ, ವಿಜಯ್‌ ಕುಮಾರ್, ಮಂಜು, ವಿ.ಮಂಜನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry