ಮಂಡ್ಯ ಕ್ಷೇತ್ರಕ್ಕೆ ರಾಜಕಾರಣವೇ ಉಸಿರು..!

7
ರಾಜಕೀಯ ಜಾಗೃತಿ, ಪ್ರಜ್ಞೆಯುಳ್ಳ ಮತದಾರರು, ಅಂಬರೀಷ್‌ ಪ್ರವೇಶದೊಂದಿಗೆ ವರ್ಣರಂಜಿತ ಕಣ

ಮಂಡ್ಯ ಕ್ಷೇತ್ರಕ್ಕೆ ರಾಜಕಾರಣವೇ ಉಸಿರು..!

Published:
Updated:

ಮಂಡ್ಯ: ಉದ್ಯಾನ, ಮಾರುಕಟ್ಟೆ, ಅರಳೀಕಟ್ಟೆ, ಬಸ್‌, ಆಟೊ ಎಲ್ಲೆಲ್ಲೂ ರಾಜಕಾರಣದ್ದೇ ಮಾತು. ಬೀಸುವ ಗಾಳಿಯಲ್ಲೂ ರಾಜಕೀಯದ ಸೋಂಕು. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಬಂದ ಹೊತ್ತಿನಲ್ಲಿ ರಾಜಕೀಯ ವಿಶ್ಲೇಷಣೆಗಳಿಗೆ ಕೊರತೆ ಇಲ್ಲ. ರಾಜಕೀಯವನ್ನೇ ಹೊದ್ದು ಮಲಗಿರುವ ಮಂಡ್ಯ ಕ್ಷೇತ್ರ ಜನರು ಅದನ್ನೇ ಒಪ್ಪಿ, ಅಪ್ಪಿದ್ದಾರೆ.

ಚುನಾವಣೆ ಸುದ್ದಿಗಳೆಂದರೆ ಇಲ್ಲಿಯ ಜನರಿಗೆ ಹೋಳಿಗೆ ಉಂಡಷ್ಟು ಖುಷಿ ಕೊಡುತ್ತವೆ. ಎಲ್ಲರೂ ರಾಜನೀತಿ ತಜ್ಞರಂತೆ ಚುನಾವಣೆಯ ಒಳಸುಳಿಗಳ ಬಗ್ಗೆ ಮಾತನಾಡುತ್ತಾರೆ. ರಾಜಕೀಯ ಜಾಗೃತಿ, ಪ್ರಜ್ಞೆಯುಳ್ಳ ಮಂಡ್ಯ ಕ್ಷೇತ್ರದ ಜನರು ಇತಿಹಾಸದುದ್ದಕ್ಕೂ ವಿಭಿನ್ನ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಕಾರಣಕ್ಕೇ ‘ಮಂಡ್ಯ ಅಂದ್ರೆ ಇಂಡ್ಯಾ’ ಎಂಬ ಮಾತು ಈ ಭಾಗದಲ್ಲಿ ಜನಜನಿತವಾಗಿದೆ.

ಆಧುನಿಕ ಮಂಡ್ಯ ಜಿಲ್ಲೆಯ ನಿರ್ಮಾಪಕ ಕೆ.ವಿ.ಶಂಕರಗೌಡ ಅವರಿಂದ ಈ ಕ್ಷೇತ್ರದ ಶಾಸಕರ ಖಾತೆಗಳು ತೆರೆದುಕೊಳ್ಳುತ್ತವೆ. ಸಂಘಟಕ, ಹೋರಾಟಗಾರ, ಕಲಾವಿದರಾಗಿದ್ದ ಶಂಕರಗೌಡರು ಅಪ್ರತಿಮ ನಾಯಕರಾಗಿದ್ದರು. ಅವರ ಪ್ರಭಾವದಿಂದಲೇ ಕ್ಷೇತ್ರದ ಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಿತು ಎಂದು ಬಣ್ಣಿಸುವವರು ಇದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ ಕೋಟೆಯಾಗಿದ್ದ ಕ್ಷೇತ್ರ ನಂತರ ಎಚ್‌.ಡಿ.ದೇವೇಗೌಡರ ಕೈಗೆ ಜಾರಿತು. ಕೆವಿಎಸ್‌ ಸೇರಿ, ಜಿ.ಎಸ್‌.ಬೊಮ್ಮೇಗೌಡ, ಜೆ.ದೇವಯ್ಯ, ಎಸ್‌.ಡಿ.ಜಯರಾಂ ಅವರಂತಹ ಘಟನಾನುಘಟಿಗಳನ್ನು ನೀಡಿರುವ ಮಂಡ್ಯ ಕ್ಷೇತ್ರದ ರಾಜಕಾರಣ ಈಗ ಅಪಾರ ಬದಲಾವಣೆ ಕಂಡಿದೆ.

1952ರಿಂದ ಇಲ್ಲಿಯವರೆಗೆ 14 ಮಹಾಚುನಾವಣೆ, ಎರಡು ಉಪ ಚುನಾವಣೆ ನಡೆದಿವೆ. ರಾಜಕೀಯದ ಆಟದಲ್ಲಿ ಇಲ್ಲಿ ಮೂರು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಕ್ಷೇತ್ರದಿಂದ ಕೆ.ವಿ.ಶಂಕರಗೌಡ, ಎಂ.ಎಸ್‌.ಆತ್ಮಾನಂದ, ಎಸ್‌.ಡಿ.ಜಯರಾಂ ಹಾಗೂ ಅಂಬರೀಷ್‌ ಸಚಿವರಾಗಿ ಕೆಲಸ ಮಾಡಿದ್ದಾರೆ. ಮೊದಲ ಚುನಾವಣೆಯಲ್ಲಿ (1952) ಗೆಲುವು ಸಾಧಿಸಿದ್ದ ಶಂಕರೇಗೌಡರು ಕೆಂಗಲ್‌ ಹನುಮಂತಯ್ಯ ಅವರ ನೀರಾವರಿ ನೀತಿ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1953ರಲ್ಲೇ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಯಿತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಜಿ.ಎಸ್‌.ಬೊಮ್ಮೇಗೌಡ ಗೆಲವು ಸಾಧಿಸಿದರು.

ಕೆವಿಎಸ್‌ಗೆ ಸೋಲು ಕಹಿ ನೆನಪು: 1957ರ ಚುನಾವಣೆಯಲ್ಲಿ ಶಂಕರಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಆ ಚುನಾವಣೆಯಲ್ಲಿ ಜಿ.ಎಸ್‌.ಬೊಮ್ಮೇಗೌಡ ಅವರಿಂದ ಕಾಂಗ್ರೆಸ್‌ಗೆ ರಾಜೀನಾಮೆ ಕೊಡಿಸಿ, ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲುವಂತೆ ಮಾಡಿದರು. ನಂತರ 1962ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜೆ.ದೇವಯ್ಯ ವಿರುದ್ಧ ಶಂಕರಗೌಡ ಅವರು ಸೋತಿದ್ದು ಇಂದಿಗೂ ಕ್ಷೇತ್ರದಲ್ಲಿ ಅಚ್ಚರಿಯಾಗಿ ಉಳಿದಿದೆ. ಆ ನಂತರ ಶಂಕರಗೌಡ ಅವರು ವಿಧಾನಪರಿಷತ್‌ ಸದಸ್ಯರಾಗಿ ಶಿಕ್ಷಣ ಸಚಿವರಾದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಯನ್ನು ಜಾರಿಗೆ ತಂದು ರಾಜ್ಯದಾದ್ಯಂತ ಹೆಸರುವಾಸಿ ಯಾದರು. ಕುವೆಂಪು ಅವರಿಂದ ‘ನಿತ್ಯ ಸಚಿವ’ ಎಂಬ ಬಿರುದನ್ನೂ ಪಡೆದರು.‘ಕೆ.ವಿ.ಶಂಕರಗೌಡರು ಕೇವಲ ರಾಜಕಾರಣಿ ಮಾತ್ರವೇ ಆಗಿರಲಿಲ್ಲ. ನಾಟಕಕಾರ, ನಿರ್ದೇಶಕರೂ ಆಗಿದ್ದರು. ಮಂಡ್ಯ ಮಣ್ಣಿನ ಸತ್ವ ಅವರ ವ್ಯಕ್ತಿತ್ವದಲ್ಲಿ ಇತ್ತು. ಅವರು ಜಿಲ್ಲೆಯಲ್ಲಿ ಮಾಡಿದ ರಾಜಕಾರಣ ಮಾದರಿಯಾಗಿತ್ತು. ಅವರ ಪ್ರೇರಣೆಯಿಂದಲೇ ಕ್ಷೇತ್ರದ ಜನರಲ್ಲಿ ರಾಜಕೀಯ ಜಾಗೃತಿ ಮೂಡಿತು’ ಎಂದು ರೈತ ಮುಖಂಡ ಶಿವರಾಮು ತಿಳಿಸಿದರು.

1978ರಲ್ಲಿ ಜನತಾ ಪಕ್ಷದಿಂದ ಎಂ.ಎಸ್‌.ಆತ್ಮಾನಂದ ಶಾಸಕರಾದ ಎಂ.ಎಸ್‌.ಆತ್ಮಾನಂದ ನಂತರ ಕಾಂಗ್ರೆಸ್‌ ಸೇರಿದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ, ಹೋರಾಟದ ಹಿನ್ನೆಲೆಯಿಂದ ಬಂದ ಎಸ್‌.ಡಿ.ಜಯರಾಂ ಪ್ರಚಂಡ ಗೆಲುವು ದಾಖಲಿಸಿದರು.1989ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆತ್ಮಾನಂದ ಅವರು ಗೆಲುವು ಸಾಧಿಸಿ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಮಂತ್ರಿಯೂ ಆದರು.

1994ರ ಚುನಾವಣೆಯಲ್ಲಿ ಮತ್ತೆ ಎಸ್‌.ಡಿ.ಜಯರಾಂ ಆಯ್ಕೆಯಾಗಿ ಜೆ.ಎಸ್‌. ಪಾಟೀಲರ ಮಂತ್ರಿಮಂಡಲ ದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರೂ ಆದರು. ಆದರೆ ಅವರು ಅನಾರೋಗ್ಯದಿಂದ ನಿಧನರಾದರು. 1997ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಪ್ರಭಾವತಿ ಜಯರಾಂ ಗೆಲುವು ದಾಖಲಿಸಿದರು. 2004ರಿಂದ ಎಂ.ಶ್ರೀನಿವಾಸ್‌ ಸತತವಾಗಿ ಎರಡು ಬಾರಿ ಆಯ್ಕೆಯಾದರು.

ಮಂಡ್ಯ ಕ್ಷೇತ್ರಕ್ಕೆ ಚಲನಚಿತ್ರನಟ ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಪ್ರವೇಶದೊಂದಿಗೆ ಮಂಡ್ಯ ಕಣ ವರ್ಣರಂಜಿತ ರೂಪ ಪಡೆಯಿತು. ಸಣ್ಣಪುಟ್ಟ ನಾಯಕರು ಅಂಬರೀಷ್‌ ಅವರನ್ನು ಹಿಂಬಾಲಿಸಿದರು.ಆ ಮೂಲಕ ರಾಜಕೀಯ ಮಾತುಗಳು ಗಲ್ಲಿ ಗಲ್ಲಿಯಲ್ಲೂ ಆರಂಭವಾದವು. 2013ರಲ್ಲಿ ಗೆಲುವು ಸಾಧಿಸಿದ ಅವರು ವಸತಿ ಸಚಿವರೂ ಆದರು.

‘ಈಗ ಮಂಡ್ಯದಲ್ಲಿ ರಾಜಕೀಯ ವನ್ನು ಮೊದಲಿನಷ್ಟು ಗಂಭೀರವಾಗಿ ವಿಶ್ಲೇಷಣೆ ಮಾಡುವವರು ಇಲ್ಲ. ಆದರೆ ಮಂಡ್ಯ ಜನರಿಗೆ ರಾಜಕೀಯ  ಬಲುದೊಡ್ಡ ಆಸಕ್ತಿಯ ಕ್ಷೇತ್ರ ಎಂದರೆ ಸುಳ್ಳಲ್ಲ’ ಎಂದು ರೈತ ಮುಖಂಡ ಕೆ.ಬೋರಯ್ಯ ಹೇಳಿದರು.

ಎಲ್ಲಾ ಪಕ್ಷದಲ್ಲೂ ಟಿಕೆಟ್‌ ಗೊಂದಲ

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳ ಕುರಿತು ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿವೆ. ಕಾಂಗ್ರೆಸ್‌ನಲ್ಲಿ ಅಂಬರೀಷ್ ಸ್ಪರ್ಧೆ ಮಾಡುತ್ತಾರೋ, ಇಲ್ಲವೋ ಎಂಬ ಬಗ್ಗೆ ಗೊಂದಲಗಳಿವೆ. ಅಂಬರೀಷ್‌ ಸ್ಪರ್ಧೆಯ ನಂತರವಷ್ಟೇ ಜೆಡಿಎಸ್‌ ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಲಕ್ಷಣಗಳಿವೆ. ಆದರೆ ಇನ್ನೊಂದೆಡೆ ಅಂಬರೀಷ್‌ ಸ್ಪರ್ಧೆ ಮಾಡುವುದಿಲ್ಲ, ಅವರ ಪತ್ನಿ ಸುಮಲತಾ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಹರಡಿದೆ.

ಇತ್ತ ಬಿಜೆಪಿ ವಲಸೆ ಹಕ್ಕಿಗಳಿಗಾಗಿ ಕಾಯುತ್ತಾ ಕುಳಿತಿದೆ. ಜೆಡಿಎಸ್‌ನಿಂದ ಟಿಕೆಟ್‌ ವಂಚಿತರಾಗಿ ಬಿಜೆಪಿ ಕಡೆ ವಲಸೆ ಬರುವ ಮುಖಂಡರಿಗೆ ಟಿಕೆಟ್‌ ಹಂಚಿಕೆ ಮಾಡುವ ಕುರಿತು ಸುಳಿವು ನೀಡಿದ್ದಾರೆ. ಆದರೆ ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಕುರಿತು ಯಾವ ಪಕ್ಷವೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry