ಶನಿವಾರ, ಡಿಸೆಂಬರ್ 14, 2019
20 °C
ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಭೇಟಿ, ಆದಿವಾಸಿಗಳ ಜತೆ ಸಮಾಲೋಚನೆ

11ರಲ್ಲಿ 5 ಬೇಡಿಕೆ ಈಡೇರಿಕೆ; ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

11ರಲ್ಲಿ 5 ಬೇಡಿಕೆ ಈಡೇರಿಕೆ; ಸಿಇಒ

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್ ಶುಕ್ರವಾರ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿನ 250 ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೀಡಲು ಜಿಲ್ಲಾ ಪಂಚಾಯಿತಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಏ.6ರಂದು ‘ಪ್ರಜಾವಾಣಿ’ಯಲ್ಲಿ ‘ಗಿರಿಜನರಿಗೆ ಕೆಲಸದ ಭರವಸೆ ನೀಡದ ಉದ್ಯೋಗ ಖಾತ್ರಿ’ ಎಂಬ ಶೀರ್ಷಿಕೆಯಡಿ ಆದಿವಾಸಿಗಳು ಉದ್ಯೋಗ ಖಾತ್ರಿಯಿಂದ ವಂಚಿತರಾಗಿ ಕೂಲಿ ಕೆಲಸಕ್ಕಾಗಿ ಕೊಡಗಿನ ಕಾಫಿತೋಟ ಅವಲಂಬಿಸಿರುವ ಕುರಿತು ಸಮಗ್ರ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಸಿಇಒ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಗಿರಿಜನರ ಸಮಸ್ಯೆ ಆಲಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ ಹೊಂದುವುದು ಪ್ರತಿಯೊಬ್ಬರ ಹಕ್ಕು. ಪಿಡಿಒ ಮತ್ತು ಬ್ಯಾಂಕ್‌ ಸಿಬ್ಬಂದಿ ಜಂಟಿಯಾಗಿ ಹಾಡಿಗೆ ಬಂದು, ದಾಖಲೆ ಪಡೆದು ಜಾಬ್‌ ಕಾರ್ಡ್ ನೀಡಿ, ಬ್ಯಾಂಕ್‌ ಖಾತೆ ತೆರೆಯಲು ಅನುಕೂಲ ಕಲ್ಪಿಸಲಿದ್ದಾರೆ ಎಂದರು.

ಆದಿವಾಸಿ ವ್ಯವಸಾಯ ಆಂದೋಲನ ಸಂಚಾಲಕ ಎಂ.ಬಿ.ಪ್ರಭು, ಕಳೆದ 71 ದಿನದಿಂದ ಧರಣಿ ನಡೆಸಲಾಗಿದೆ. ಆದಿವಾಸಿಗಳ 11 ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ 5 ಬೇಡಿಕೆ ಈಡೇರಿಸಲಾಗುವುದು. ಸ್ಥಳದಲ್ಲೇ ಆದೇಶ ಹೊರಡಿಸಿ ಈಡೇರಿಸಲು ಸೂಚಿಸಿದ್ದೇನೆ. ಕುಡಿಯುವ ನೀರಿಗಾಗಿ 10 ತಾತ್ಕಾಲಿಕ ಟ್ಯಾಂಕ್‌ ವ್ಯವಸ್ಥೆ ಒದಗಿಸಲು ಮತ್ತು ಕೊಳವೆಬಾವಿ ದುರಸ್ತಿಗೆ 14ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ನಿವೇಶನ ಹೊಂದಿದವರು ಮನೆ ನಿರ್ಮಿಸಿಕೊಳ್ಳಲು ವಿಶೇಷ ಪ್ಯಾಕೇಜ್‌ನಲ್ಲಿ ಚುನಾವಣೆ ನಂತರ ಅನುದಾನ ನೀಲಾಗುವುದು. ಸ್ತ್ರೀ ಶಕ್ತಿ ಸ್ವಸಹಾಯ ಸಂಘ ತೆರೆದು ಫೆಡರೇಷನ್‌ ಮೂಲಕ ಚಟುವಟಿಕೆಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಕೃಷ್ಣಕುಮಾರ್, ಉದ್ಯೋಗ ಖಾತ್ರಿ ಯೋಜನೆಯಡಿ ಗಿರಿಜನರು ಹೊಲದಲ್ಲಿ ಕೆಲಸ ಮಾಡಲು ಬೇಕಿರುವ ಪರಿಕರ ವಿತರಿಸಲಾಗುವುದು. ಕಣ ಮತ್ತು ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಿಕೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಆದಿವಾಸಿ ಮುಖಂಡ ಜೆ.ಕೆ.ಮಣಿ ಮಾತನಾಡಿ, ಅಧಿಕಾರಿಗಳ ಭರವಸೆ ಮೇರೆಗೆ ಮತದಾನ ಬಹಿಷ್ಕಾರ ಹಿಂಪಡೆದಿದ್ದೇವೆ. ಆದರೆ, ಧರಣಿ ಮುಂದುವರೆಸಲಾಗುವುದು. 11ರಲ್ಲಿ 5 ಬೇಡಿಕೆ ಈಡೇರಿಸುವ ಭರವಸೆ ಆಧರಿಸಿ ಮೃಧು ದೋರಣೆ ತೋರಿಸಿದ್ದೇವೆ ಎಂದು ಹೇಳಿದರು.

**

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಆಸ್ಪತ್ರೆ ತೆರೆಯಲು ಕಟ್ಟಡ ನಿರ್ಮಿಸಿ 10 ವರ್ಷ ಕಳೆದಿದ್ದರೂ ದಾದಿಯರು ನೇಮಕವಾಗಿಲ್ಲ. ತಾಲ್ಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ – ಜೆ.ಕೆ. ಸೋಮಯ್ಯ,ಆದಿವಾಸಿ ಮುಖಂಡ.

**

ಪ್ರತಿಕ್ರಿಯಿಸಿ (+)