ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 10 ಚುನಾವಣೆ ಎದುರಿಸಿದ್ದ ಸ್ವಾಮಿರಾವ್

ಮೊದಲ ಗೆಲುವಿನ ಚುನಾವಣೆಯ ಠೇವಣಿ ಕಟ್ಟಿದ್ದ ಮುಸ್ಲಿಂ ಹುಡುಗಿ
Last Updated 7 ಏಪ್ರಿಲ್ 2018, 11:09 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜಕೀಯ ಜೀವನದಲ್ಲಿ 10 ಚುನಾವಣೆ ಎದುರಿಸಿದ್ದೇನೆ. ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದೇನೆ. ಆದರೆ, ಅಲ್ಲಿ ಗಳಿಸಿಯೂ ಇಲ್ಲ. ಕಳೆದುಕೊಳ್ಳಲೂ ಇಲ್ಲ. ಆಗ ಜನರೇ ಮುಂದೆ ನಿಂತು ಚುನಾವಣೆ ಮಾಡುತ್ತಿದ್ದರು. ಅವರೇ ಠೇವಣಿಯನ್ನೂ ಕಟ್ಟುತ್ತಿದ್ದರು’ ಇದು ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ತೆರೆದಿಟ್ಟ 1960ರಿಂದ 1990ರ ದಶಕದ ಮಧ್ಯದ ಜಿಲ್ಲೆಯ ರಾಜಕೀಯ ಚಿತ್ರಣ.

ಬಂಗಾರಪ್ಪಗೂ ಮೊದಲೇ ರಾಜಕೀಯಕ್ಕೆ: ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರಿಗೂ ಮೊದಲೇ ರಾಜಕೀಯ ಕ್ಷೇತ್ರ ಪ್ರವೇಶಿಸಿದವರು ಸ್ವಾಮಿರಾವ್. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಮುಗಿಸಿ ಊರಿಗೆ (ಹೊಸನಗರ ತಾಲ್ಲೂಕು ಸೊನಲೆ) ಮರಳಿದ ಅವರು, ಭೂಪಾಳಂ ಚಂದ್ರಶೇಖರಯ್ಯ ಅವರ ಜತೆ ಸೇರಿ ಲಿಂಗನಮಕ್ಕಿ ಜಲಾಶಯಕ್ಕಾಗಿ ನೆಲೆ ಕಳೆದುಕೊಳ್ಳುತ್ತಿದ್ದ ಸಂತ್ರಸ್ತರ ಪುನರ್ವಸತಿಗಾಗಿ 1960–61ರಲ್ಲೇ ಹೋರಾಟ ಆರಂಭಿಸಿದ್ದರು. ಈ ಸಮಯದಲ್ಲೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಡ ಹಾಕಿದರು. ಅದೂ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಎದುರು.

‘ಮೊದಲ →ಪ್ರಯತ್ನದಲ್ಲಿ →ಸೋಲು ಕಂಡರೂ ಗೋಪಾಲ ಗೌಡರ ಸ್ನೇಹಕ್ಕೆ ಆ ಚುನಾವಣೆ ಮುನ್ನುಡಿ ಬರೆದಿತ್ತು. ಗೆದ್ದ ನಂತರ ಮನೆಗೇ ಬಂದ
ಗೌಡರು ಅವರ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದರು. ಅದಕ್ಕೆ ಒಪ್ಪಿಕೊಂಡೆ.ಅಷ್ಟರಲ್ಲಿ ಹೊಸನಗರ ಕ್ಷೇತ್ರ ರಚನೆ ಯಾಯಿತು. ಹೊಸ ಕ್ಷೇತ್ರದಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದೆ. ಆಗ ಕಾಂಗ್ರೆಸ್‌ನ ಸೋಮಶೇಖರಪ್ಪ ವಿರುದ್ಧ 2 ಸಾವಿರ ಮತಗಳಿಂದ ಸೋಲು ಕಂಡಿದ್ದೆ’ ಎಂದು ಸಮಾಜವಾದಿಯಾಗಿ ರೂಪುಗೊಂಡ ಇತಿಹಾಸ ಮೆಲುಕು ಹಾಕಿದರು.

ಬಂಗಾರಪ್ಪಗೆ ಸೊರಬ ಟಿಕೆಟ್: ‘ಶಿವಮೊಗ್ಗದಲ್ಲಿ ವಕೀಲರಾಗಿದ್ದ ಎಸ್‌. ಬಂಗಾರಪ್ಪ ಅವರನ್ನು ಮುಳುಗಡೆ ಸಂತ್ರಸ್ತರ ವ್ಯಾಜ್ಯಗಳ ಕಾರಣಕ್ಕೆ ಭೇಟಿಯಾಗುತ್ತಿದ್ದ ನನಗೆ ರಾಜಕೀಯಕ್ಕೆ ನಿಂತು ಸುಮ್ಮನೆ ದುಡ್ಡು ಏಕೆ ಹಾಳು ಮಾಡಿಕೊಳ್ಳುತ್ತೀಯ ಎಂದು ಅವರು ತಿಳಿವಳಿಕೆ ಹೇಳಿದ್ದರು. ಕೊನೆಗೆ ಸೊರಬದಿಂದ ಸ್ಪರ್ಧಿಸಲು ಅವರನ್ನೇ ಒಪ್ಪಿಸಿ, ಪಕ್ಷದ ಟಿಕೆಟ್‌ ಕೊಡಿಸಿದ್ದೆವು. ಮೊದಲ ಪ್ರಯತ್ನದಲ್ಲೇ ಅವರು ವಿಧಾನಸೌಧ ಪ್ರವೇಶಿಸಿದ್ದರು. ನಂತರ ಅವರು ನಮ್ಮ ಸಮಾಜದ (ಆರ್ಯ–ಈಡಿಗ) ನಾಯಕರಾಗಿ ಬೆಳೆದರು. ನಾವು ಅವರ ಅನುಯಾಯಿಗಳಾದೆವು’ ಎಂದು ಬದಲಾದ ಕಾಲಘಟ್ಟದ ಎಳೆ ಬಿಚ್ಚಿಟ್ಟರು.

ಠೇವಣಿ ಕಟ್ಟಿದ್ದ ಮುಸ್ಲಿಂ ಹುಡುಗಿ: ‘ಆಗ ಜನರೇ ಹಣ ಹೊಂದಿಸಿ ಠೇವಣಿ ಕಟ್ಟಿತ್ತಿದ್ದರು. ಚುನಾವಣೆಗೆ ಖರ್ಚು ಮಾಡುತ್ತಿದ್ದರು. ಹಾಗಾಗಿಯೇ 10 ಚುನಾವಣೆ ಮಾಡಲು ಸಾಧ್ಯವಾಯಿತು.  ಮೊದಲ ಮೂರು ಚುನಾವಣೆ ಸೋತಿದ್ದ ನನಗೆ 1983ರಲ್ಲಿ ಸ್ಪರ್ಧಿಸಲು ₹ 250 ಠೇವಣಿ ಕಟ್ಟಿದ್ದು ಮುಸ್ಲಿಂ ಹುಡುಗಿ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶೀರ್ನಾಳ ಚಂದ್ರಶೇಖರ್ ಅವರ ಎದುರು ಸುಮಾರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆ ಹುಡುಗಿ ನೀಡಿದ ಠೇವಣಿ ಉಳಿಯಿತು. ಸತತ ಮೂರು ಅವಧಿ ಹಿಂದಿರುಗಿ ನೋಡಲಿಲ್ಲ. ಬಂಗಾರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಶಿವಮೊಗ್ಗ, ಹೊಸನಗರ ಬಗರ್‌ಹುಕುಂ ಸಮಿತಿ ಅಧ್ಯಕ್ಷನಾಗಿ 8 ಸಾವಿರ ಹಕ್ಕುಪತ್ರ ವಿತರಿಸಿದ್ದು ದಾಖಲೆ. ಶಾಲಾ, ಕಾಲೇಜು. ಆಸ್ಪತ್ರೆ ಬಂದವು’ ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ಜನರಿಂದ ದೂರವಾದ ಕ್ಷಣಗಳು: ‘ಒಬ್ಬ ಜನಪ್ರತಿನಿಧಿ ಅಧಿಕಾರದಲ್ಲಿ ಇದ್ದಾಗ ಜನಜಂಗುಳಿ ಸದಾ ಇರುತ್ತದೆ. ಸೋತು ಮನೆ ಸೇರಿದಾಗ ಎಲ್ಲರೂ ದೂರವಾಗುತ್ತಾರೆ. ಸತತ ಸೋಲುಗಳು ಕಂಗೆಡಿಸುತ್ತವೆ. ಅಂತಹ ಸ್ಥಿತಿಯನ್ನು ನಾನು 1994ರ ನಂತರ ಅನುಭವಿಸಿದ್ದೇನೆ. ಕೆಲವು ಸಮಯ ಖಿನ್ನತೆಗೆ ಒಳಗಾಗಿದ್ದೆ. ಕೊನೆಗೆ ಕೃಷಿಯತ್ತ ಚಿತ್ತ ಹರಿಸಿದ ನಂತರ ಮತ್ತೆ ಹೊಸ ಬದುಕಿಗೆ ಮರಳಿದೆ. ಈಗ ಬೆಳಿಗ್ಗೆಯಿಂದ ಸಂಜೆಯವರೆಗೆ ತೋಟದಲ್ಲೇ ಕಾಲ ಕಳೆಯುತ್ತೇನೆ. ಅಡಿಕೆ, ತಾಳೆ, ಬಾಳೆ, ಭತ್ತ ಬೆಳೆಯುತ್ತಾ ಕೃಷಿಕನಾಗಿದ್ದೇನೆ. ಈಗಲೂ ಜನರು ಹುಡುಕಿಕೊಂಡು ಬರುತ್ತಾರೆ’ ಎಂದು ಪ್ರಸಕ್ತ ಸನ್ನೇಶ ಬಿಚ್ಚಿಟ್ಟರು.

ಬದಲಾದ ಕಾಲಘಟ್ಟದಲ್ಲಿ ಜತೆಗಿದ್ದವರು ಬೆನ್ನಿಗೆ ಚೂರಿ ಹಾಕಿದ್ದು, 2013ರ ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ಪಡೆದು ಗೆದ್ದ ನಂತರ ಕಾಂಗ್ರೆಸ್‌ ಮುಖಂಡರಿಂದ ಕಡೆಗಣನೆಗೆ ಒಳಗಾದದ್ದು. ಈಚೆಗೆ ಬಿಜೆಪಿ ಸೇರಿದ ಪ್ರಸಂಗ, ಕಳೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೋವು ಕೊಟ್ಟ ಪ್ರಸಂಗಗಳ ಕುರಿತು ಮನದಾಳ ತೆರೆದಿಟ್ಟರು.

ಮರೆಯಾದ ಹೊಸನಗರ ಕ್ಷೇತ್ರ

ಹೊಸನಗರ ಕ್ಷೇತ್ರ ರಚನೆ ಆದದ್ದು 1967ರಲ್ಲಿ. ಅಂದು ಜಿಲ್ಲೆಯಲ್ಲೇ ಅತ್ಯಂತ ವಿಸ್ತಾರ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಂತರ ಜಿಲ್ಲೆಯ ಚಿತ್ರಣದಿಂದಲೇ ಈ ಕ್ಷೇತ್ರ ಮರೆಯಾಯಿತು. ಈ ಕ್ಷೇತ್ರದಲ್ಲಿ ನಡೆದ 9 ಚುನಾವಣೆಗಳಲ್ಲೂ ಸ್ಪರ್ಧಿಸಿದ ಏಕೈಕ ಅಭ್ಯರ್ಥಿ ಸ್ವಾಮಿರಾವ್. ಸತತ ಮೂರು ಬಾರಿ ಗೆಲುವು ಪಡೆದವರೂ ಅವರೊಬ್ಬರೇ.

ಮರೆಯಾದ ಹೊಸನಗರ ಕ್ಷೇತ್ರ

ಹೊಸನಗರ ಕ್ಷೇತ್ರ ರಚನೆ ಆದದ್ದು 1967ರಲ್ಲಿ. ಅಂದು ಜಿಲ್ಲೆಯಲ್ಲೇ ಅತ್ಯಂತ ವಿಸ್ತಾರ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಂತರ ಜಿಲ್ಲೆಯ ಚಿತ್ರಣದಿಂದಲೇ ಈ ಕ್ಷೇತ್ರ ಮರೆಯಾಯಿತು. ಈ ಕ್ಷೇತ್ರದಲ್ಲಿ ನಡೆದ 9 ಚುನಾವಣೆಗಳಲ್ಲೂ ಸ್ಪರ್ಧಿಸಿದ ಏಕೈಕ ಅಭ್ಯರ್ಥಿ ಸ್ವಾಮಿರಾವ್. ಸತತ ಮೂರು ಬಾರಿ ಗೆಲುವು ಪಡೆದವರೂ ಅವರೊಬ್ಬರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT