ಗುರುತಿನ ಚೀಟಿ ಪಡೆಯಲು ಪರದಾಟ

7
ಭರ್ತಿ ಮಾಡಿದ ನಮೂನೆ ಸ್ವೀಕರಿಸದ ಅಧಿಕಾರಿ

ಗುರುತಿನ ಚೀಟಿ ಪಡೆಯಲು ಪರದಾಟ

Published:
Updated:

ಗುಬ್ಬಿ: ಪಟ್ಟಣದ ಬಿಲ್ಲೇಪಾಳ್ಯದ ಜೋಪಡಿಗಳ ನಡುವೆ ನೆಲೆಕಂಡುಕೊಳ್ಳಲು ಕನಸು ಕಾಣುತ್ತಿರುವ ಬುಡಗಜಂಗಮ ಅಲೆಮಾರಿಗಳು ಮತದಾನದ ಗುರುತಿನ ಚೀಟಿ ಪಡೆಯಲು ಪರದಾಡುತ್ತಿದ್ದಾರೆ. ವಾಸಸ್ಥಳ ದೃಢೀಕರಣ, ಆಧಾರ್ ಕಾರ್ಡ್, ಪಡಿತರ ಚೀಟಿ ಹೊಂದಿರುವ ಇವರು ಕಳೆದ ಮೂರ್ನಾಲ್ಕು ತಿಂಗಳಿಂದ ಇವರು ಭರ್ತಿ ಮಾಡಿದ ನಮೂನೆಗಳನ್ನೇ ತಾಲ್ಲೂಕು ಚುನಾವಣಾ ಶಾಖೆ ಸ್ವೀಕರಿಸುತ್ತಿಲ್ಲ.

ಇಲ್ಲಿ ಒಟ್ಟು 60ಮಂದಿ ಮತದಾನ ಮಾಡಲು ಅರ್ಹರಿದ್ದಾರೆ. ಇವರಲ್ಲಿ ಈಗಾಗಲೇ 15 ಮಂದಿಗೆ ಮತದಾನ ಗುರುತಿನ ಚೀಟಿ ಸಿಕ್ಕಿದೆ. 22 ಮಂದಿ ಅಗತ್ಯ ದಾಖಲಾತಿಗನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲವರು ಮತದಾನದ ಗುರುತಿನ ಚೀಟಿ ಪಡೆಯುವ ಪರದಾಟ ನಮಗೇಕೆ ಎಂದು ಕೈಚೆಲ್ಲಿದ್ದಾರೆ. ಇಲ್ಲಿ ಕೆಲವು ಕುಟುಂಬದಲ್ಲಿ ಪತಿಗೆ ಗುರುತಿನ ಚೀಟಿ ಇದ್ದು, ಪತ್ನಿಗೆ ಇಲ್ಲ. ಮಗನಿಗೆ ಇದ್ದು-ಅಪ್ಪನಿಗೆ ಗುರುತಿನ ಚೀಟಿ ಇಲ್ಲ. ಇಂತಹ ಹತ್ತಾರು ಉದಾಹರಣೆಗಳು ಇವೆ.

ನಮಗೂ ಗುರುತಿನ ಚೀಟಿ ಕೊಡಿ ಎಂದು ಗೋಗರೆದರೆ ಆಗ-ಈಗ ನೋಡುವ ಎನ್ನುವ ರಾಗವನ್ನು ಇಲ್ಲಿನ ಅಧಿಕಾರಿಗಳು ಎಳೆಯುತ್ತಿದ್ದಾರೆ ಎಂದು ಇಲ್ಲಿನ ಕುಟುಂಬಗಳು ಆರೋಪಿಸುತ್ತಿವೆ.

ಮೇ 13ರ ಚುನಾವಣೆಯಲ್ಲಿ ಮತದಾನ ಮಾಡಲು ಏಪ್ರಿಲ್ 12ಕ್ಕೂ ಮೊದಲು ಈ ಅಲೆಮಾರಿಗಳ ನೋಂದಣಿ ಆಗಬೇಕಿದೆ. ಅಗತ್ಯವಿರುವ ನಮೂನೆ ಹಾಗೂ ದಾಖಲಾತಿಗಳನ್ನೇ ಅಧಿಕಾರಿಗಳು ಪಡೆಯುತ್ತಿಲ್ಲ. ಇಲ್ಲ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಬಹುದು. ಈಗ ಕೋರ್ಟ್‌ನಿಂದ ಪ್ರತಿಯೊಬ್ಬರೂ ಪ್ರಮಾಣ ಪತ್ರ ತನ್ನಿ ಎಂದು ಹೇಳುತ್ತಿದ್ದಾರೆ. ಪಾತ್ರೆ ಮಾರಿ ಜೀವನ ನಡೆಸುವ ಇವರು ಪ್ರಮಾಣ ಪತ್ರ ಪಡೆಯಲು ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ಇವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರನ ಇದೆ. ಅಲ್ಲದೆ ಈಚೆಗೆ ಇಲ್ಲಿನ 32 ಅಲೆಮಾರಿ ಕುಟುಂಬಗಳಿಗೆ ಚೇಳೂರು ಹೋಬಳಿ ಸಾತೇನಹಳ್ಳಿ ಬಳಿ ಸರ್ಕಾರ ನಿವೇಶನವನ್ನು ಮೀಸಲಿಟ್ಟಿದೆ. ಇವರು ನೆಲೆಯೂರಲು ಇಷ್ಟೆಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಿದ್ದರೂ ಮತದಾನದ ಗುರುತಿನ ಚೀಟಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

‘ಅವರು ಅಲೆಮಾರಿಗಳು. ಇಲ್ಲಿ ಇರೋದಿಲ್ಲ. ಹಿಂದೆ ಎಲ್ಲಿದ್ದರೋ ಅಲ್ಲಿ ಬರೆಸಿಕೊಂಡು ಬರಬೇಕು’ ಎಂದು ಸ್ಥಳಕ್ಕೆ ಬರದೇ ಕುಂತಲ್ಲಿಯೇ ಅಧಿಕಾರಿಗಳು ದಾಖಲೆಗಳನ್ನು ತೂಗಿ ಹೇಳುತ್ತಿದ್ದಾರೆ. ‘ನಾವು ಹಿಂದೆಂದೂ ಮತದಾನ ಗುರುತಿನ ಪತ್ರ ಪಡೆದಿಲ್ಲ. ನಮ್ಮಲ್ಲಿ ವೃದ್ಧರೂ, ವಯಸ್ಕ ಮಹಿಳೆ-ಪುರುಷರಿದ್ದಾರೆ. ನಮ್ಮಲ್ಲಿ ಬಹುತೇಕ ವೃದ್ಧರಿಗೆ ಈವರೆಗೂ ಮತದಾನ ಗುರುತಿನ ಚೀಟಿಯನ್ನೇ ನೀಡಿಲ್ಲ’ ಹೀಗೆಂದ ಮೇಲೆ ನಾವೆಲ್ಲಿ ದಾಖಲಾತಿಗಳನ್ನು ಬರೆಸಿಕೊಂಡು ಬರೋದು’ ಎಂದು ಪ್ರಶ್ನಿಸುತ್ತಾರೆ’ ಅಲೆಮಾರಿ ವೆಂಕಟೇಶ್.

‘ಇಲ್ಲಿನವರು ಪಾತ್ರೆ ವ್ಯಾಪಾರ ಮಾಡಿಕೊಂಡು ತಮ್ಮೆಲ್ಲ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸುತ್ತಿದ್ದಾರೆ. ಈ ಮಕ್ಕಳ ಪೋಷಕರಿಗೆ ಅಧಿಕಾರಿಗಳು ಶಾಲಾ ದಾಖಲಾತಿ ತನ್ನಿ ಎಂದು ಪೀಡಿಸುತ್ತಿರುವುದು ತಪ್ಪು. ನಿಮ್ಮ ದಾಖಲಾತಿಗಳನ್ನು ನಮ್ಮಲ್ಲಿ ತರಬೇಡಿ. ತಾಲ್ಲೂಕು ಕಚೇರಿಯಲ್ಲಿ ಯಾರೂ ಸ್ವೀಕರಿಸುವುದಿಲ್ಲ’ ಎಂದು ಬಿಲ್ಲೇಪಾಳ್ಯ ವ್ಯಾಪ್ತಿಯ ಬಿಎಲ್‌ಒ ಹೇಳುತ್ತಿದ್ದಾರೆ. ಹಾಗಾದರೆ ಈ ಅಲೆಮಾರಿಗಳು ಮತದಾನ ಗುರುತಿನ ಚೀಟಿ ಪಡೆಯುವುದು ಹೇಗೆ? ಎಂದು ಪ್ರಶ್ನಿಸುತ್ತಾರೆ ಅಲೆಮಾರಿ ಕುಟುಂಬಗಳ ಅಧ್ಯಯನದಲ್ಲಿ ತೊಡಗಿರುವ ಮಡಿಲು ಸಂಸ್ಥೆಯ ಲಕ್ಷ್ಮಿ.

ಚುನಾವಣಾ ಆಯೋಗವೇ ಸರಿಮಾಡಬೇಕು

‘ಈ ಬುಡಗ ಜಂಗಮರ ಮಕ್ಕಳು ಇಲ್ಲಿಯೇ ಹುಟ್ಟಿ ಬೆಳೆಯುತ್ತಿದ್ದಾರೆ. ಎಲ್ಲ ದಾಖಲಾತಿಗಳನ್ನು ಈವರೆಗಿನ ಅಧಿಕಾರಿಗಳು ನೀಡಿದ್ದಾರೆ. ಇನ್ನಿಲ್ಲದ ನೆಪವೊಡ್ಡಿ ಗುರುತಿನ ಚೀಟಿ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆಯನ್ನು ನೋಂದಣಿಗೆ ಕೊನೆಯ ದಿನಾಂಕದೊಳಗೆ ಚುನಾವಣಾ ಆಯೋಗವೇ ಸರಿಮಾಡಬೇಕಿದೆ’ ಎಂದು ಗುಬ್ಬಿ ಗಟ್ಟಿಲೇಔಟ್ ನಿವಾಸಿ ಅರಸು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry