ಶುಕ್ರವಾರ, ಜೂನ್ 5, 2020
27 °C
ದಲಿತ ದೌರ್ಜನ್ಯ ತಡೆ ಕಾಯ್ದೆ ತೀರ್ಪಿಗೆ ವಿರೋಧ

ಸಂವಿಧಾನ ನೀಡಿದ ಸೌಲಭ್ಯ ಕಸಿಯುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನ ನೀಡಿದ ಸೌಲಭ್ಯ ಕಸಿಯುವ ಹುನ್ನಾರ

ಉಡುಪಿ: ದಲಿತ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ವಿರೋಧಿಸಿ ಹಾಗೂ ಅದನ್ನು ಹಿಂಪಡೆಯುವಂತೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಶುಕ್ರವಾರ ವ್ಯಾಪಕ ಪ್ರತಿಭಟನೆ ನಡೆಸಿದರು.

ದೇಶದ ದಲಿತರಿಗೆ ಸಂವಿಧಾನ ಒದಗಿಸಿರುವ ಸಾಮಾಜಿಕ ಸಮಾನತೆ ಅವಕಾಶವನ್ನು ನಿರಾಕರಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಮೊದಲು ಬಡ್ತಿ ಮೀಸಲಾತಿ ಕಸಿದುಕೊಳ್ಳಲಾಯಿತು. ಈಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದಲಿತರ ಹಿತಕ್ಕೆ ವಿರುದ್ಧವಾಗಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳ್ಳುವಂತಹ ತೀರ್ಪು ಇದಾಗಿದೆ. ಇದನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಿದವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಗುಜರಾತ್‌ನಲ್ಲಿ ಕುದುರೆ ಸವಾರಿ ಮಾಡಿದ ದಲಿತ ಯುವಕನ ಹೊಡೆದು ಸಾಯಿಸಲಾಯಿತು. ಮಧ್ಯಪ್ರದೇಶ, ರಾಜಸ್ತಾನ , ಉತ್ತರ ಪ್ರದೇಶಗಳಲ್ಲಿ ದಲಿತರ ಮೇಲೆ ದಿನ ನಿತ್ಯ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗುತ್ತಿದೆ. ಆದರೂ, ಅದರ ನಿಯಂತ್ರಣದ ಬಗ್ಗೆ ಯಾವುದೇ ರೀತಿ ಕ್ರಮವನ್ನು ಅಲ್ಲಿನ ಸರ್ಕಾರಗಳು ಕೈಗೊಳ್ಳುತ್ತಿಲ್ಲ. ಒಟ್ಟಾರೆ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದಲಿತ ಅಸ್ಮಿತೆ ಕೊನೆಗಾಣಿಸಲು ಪ್ರತಿಗಾಮಿ ಶಕ್ತಿಗಳು ಮುಂದಾಗಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯ ಮಲ್ಯ ₹11,000 ಕೋಟಿ, ನೀರವ್ ಮೋದಿ 13,000 ಕೋಟಿ, ಮೆಹುಲ್ ಬಾಯ್ 11,000 ಕೋಟಿ, ಜತಿನ್ ಮೆಹ್ತಾ 6,012 ಕೋಟಿ ವಂಚನೆ ಮಾಡಿ ದೇಶ ಬಿಟ್ಟು ಹೋಗಿದ್ದಾರೆ. ಆದರೆ, ನ್ಯಾಯಾಲಯ ಏನೂ ಕ್ರಮ ಕೈಗೊಡಿಲ್ಲ. ದಲಿತರ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದಲಿತ ಹಿತಾಸಕ್ತಿಗೆ ವಿರುದ್ಧವಾಗಿದೆ. ದಲಿತರಿಗೆ ಬೇಕಾದ ಸಮಾನತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿ ಪರ ಚಿಂತಕ ವಿಲಿಯಂ ಪಾರ್ಟಿಸ್ ಹೇಳಿದರು.

ಮೀಸಲಾತಿ ಹಿಂಪಡೆಯುವ ಹುನ್ನಾರ ನಡೆಯುತ್ತಿದೆ. ಬಡ್ತಿ ಮೀಸಲಾತಿ ಹಿಂದಕ್ಕೆ ಪಡೆಯಲಾಗಿದೆ. ಹಂತ ಹಂತವಾಗಿ ದಲಿತರನ್ನು ಈ ದೇಶದ ಮುಂಚೂಣಿಗೆ ಬರದಂತೆ ತಡೆಯುವ ಕೆಲಸ ಆಗ್ತಾ ಇದೆ. ಮುಂದಿನ ದಿನಗಳಲ್ಲಿ ಎಲ್ಲರೂ ಜಾಗೃತರಾಗಿ ಕೇಂದ್ರದ ಮನುವಾದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸುಂದರ್ ಮಾಸ್ತರ್ ಹೇಳಿದರು.

ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ಯಾಮರಾಜ್ ಬಿರ್ತಿ, ಕೋಮು ಸೌಹಾರ್ದ ವೇದಿಕೆಯ ಆಧ್ಯಕ್ಷ ರಾಜಶೇಖರ್, ಕೆ. ಫಣಿರಾಜ್ ಇದ್ದರು.

**

ದಲಿತರು ಈ ದೇಶದ ಮುಂಚೂಣಿಗೆ ಬರದಂತೆ ತಡೆಯುವ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ – ಸುಂದರ್ ಮಾಸ್ತರ್, ದಲಿತ ಮುಖಂಡ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.