ಚುನಾವಣಾ ಬಹಿಷ್ಕಾರದ ಬ್ಯಾನರ್‌ ಪ್ರತ್ಯಕ್ಷ

7
ಮೂಲ ಸೌಲಭ್ಯಕ್ಕೆ ಆಗ್ರಹ: ಜನಪ್ರತಿನಿಧಿಗಳಿಂದ ಮನವೊಲಿಕೆ

ಚುನಾವಣಾ ಬಹಿಷ್ಕಾರದ ಬ್ಯಾನರ್‌ ಪ್ರತ್ಯಕ್ಷ

Published:
Updated:

ಸಾಸ್ತಾವು(ಬ್ರಹ್ಮಾವರ): ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ತಾವಿನಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷವಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.  ಇದನ್ನು ಗಮನಿಸಿದ ಸ್ಥಳೀಯ ಜನಪ್ರತಿನಿಧಿಗಳ ಮನವೊಲಿಕೆ ಪರಿಣಾಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿರುವುದು ಅಭ್ಯರ್ಥಿಗಳಲ್ಲಿ ಸ್ವಲ್ಪ ಮಟ್ಟಿನ ನಿರಾಳ ತಂದಿದೆ.

ಸಾಸ್ತಾವು ಶಾಲೆ ತನಕ ಬರುವ ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆ ದುರಸ್ತಿಗೆ 5 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಸತತವಾಗಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬ ಕಾರಣ ನೀಡಿ ಮುಂಬರುವ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸಲಾಗುವುದು ಎಂದು ಬ್ಯಾನರ್‌ನಲ್ಲಿ ಹಾಕಲಾಗಿತ್ತು.

ಬ್ಯಾನರ್‌ನ ಕೆಳಗಡೆ ಸಾಸ್ತಾವು ನಾಗರಿಕರು ಎಂದು ಉಲ್ಲೇಖಿಸಲಾಗಿದೆ. ಒಂದು ಸರ್ಕಾರಿ ಶಾಲೆ, ಹಾಲು ಡೇರಿ, ದೇವಸ್ಥಾನ ಹಾಗೂ ಅತೀ ಹೆಚ್ಚು ಎಸ್.ಟಿ ಸಮುದಾಯದ ಮನೆಗಳಿವೆ.  ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದರೂ, ಅದು ರಾಜಕೀಯ ದುರುದ್ದೇಶದಿಂದ ನಮ್ಮೂರಿಗೆ ಬಂದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ, ಜನ ಪ್ರತಿನಿಧಿಗಳಿಗೂ ಹಾಗೂ ಪಂಚಾಯಿತಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬ್ಯಾನರ್‌ನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಇದು ಯಾವುದೇ ರಾಜಕೀಯ ಪ್ರೇರಿತ ಬಹಿಷ್ಕಾರವಲ್ಲ. ಆದರೆ, ಇದು ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ ಎಂದು ಬ್ಯಾನರ್‌ನಲ್ಲಿ ಬಿಂಬಿಸಲಾಗಿದೆ.

ಆದರೆ, ಬ್ಯಾನರ್‌ನ್ನು ತೆರವುಗೊಳಿಸಿ, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿಯ ಸಿಇಒ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕೊಕ್ಕರ್ಣೆ ಪಿಡಿಒ ಪ್ರದೀಪ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry