ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿಗೆ ನಾನು ಗುಲಾಮನಲ್ಲ: ಎಚ್‌ಡಿಕೆ ತಿರುಗೇಟು

Last Updated 7 ಏಪ್ರಿಲ್ 2018, 12:40 IST
ಅಕ್ಷರ ಗಾತ್ರ

ಯಾದಗಿರಿ: ‘ರಾಹುಲ್‌ ಗಾಂಧಿ ಕೇಳಿದ್ದಕ್ಕೆಲ್ಲ ಉತ್ತರಿಸಲು ನಾನೇನು ಅವರ ಗುಲಾಮನಲ್ಲ. ನಾನು ಈ ರಾಜ್ಯದ 6 ಕೋಟಿ ಜನರ ಗುಲಾಮ. ಜನರು ಪ್ರಶ್ನಿಸಲಿ. ಜೆಡಿಎಸ್‌ ಸ್ಪಷ್ಟ ನಿಲುವೇನು? ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು? ಎಂಬುದರ ಬಗ್ಗೆ ಜನರಿಗೆ ಉತ್ತರಿಸುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ತಿರುಗೇಟು ನೀಡಿದರು.

‘ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ನಿಲುವು ಹೊಂದಿಲ್ಲ ಎಂದು ರಾಹುಲ್‌ ಟೀಕಿಸಿದ್ದಾರೆ. ನನ್ನ ಪಕ್ಷವನ್ನು ಟೀಕಿಸಲು ಅವರಿಗೇನು ಅಧಿಕಾರ ಇದೆ. ಹೂ ಈಸ್‌ ಹೀ ’ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ನಿಲುವುವೇನು ಎಂಬುದೇ ರಾಹುಲ್‌ ಗಾಂಧಿಗೆ ಗೊತ್ತಿಲ್ಲ. ಐದು ವರ್ಷದ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ ಏನು ಸಾಧಿಸಿದೆ ಎಂಬುದನ್ನು ತೋರಿಸಲಿ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಸರ್ವನಾಶಕ್ಕೆ ನಿಂತಿದೆ. ಪ್ರಸಕ್ತ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಶಕ್ತಿಯ ಪ್ರದರ್ಶನವಾಗಲಿದೆ’ ಎಂದರು.

‘ಹೈದರಾಬಾದ್ ಕರ್ನಾಟಕ ಭಾಗದ ಆರು ಮಂದಿ ಶಾಸಕರು ಪಕ್ಷ ತೊರೆದಿದ್ದಾರೆ. ಅವರನ್ನು ಉಳಿಸಿಕೊಳ್ಳಲು ನನ್ನ ಬಳಿ ಹಣ, ಅಧಿಕಾರ ಇಲ್ಲ. ಬಿಟ್ಟು ಹೋದವರ ಸ್ಥಾನ ತುಂಬಲು ನಾನೆಂದೂ ದೊಡ್ಡ ನಾಯಕರನ್ನು ಹುಡುಕಿಕೊಂಡು ಹೋಗಿಲ್ಲ. ಪಕ್ಷ ಬಿಟ್ಟವರು ಮುಂದಿನ ದಿನಗಳಲ್ಲಿ ಪ್ರಾಯಶ್ಚಿತ್ತ ಅನುಭವಿಸಲಿದ್ದಾರೆ’ ಎಂದರು.

‘ನನ್ನನ್ನು ಸೋಲಿಸಲು ಸಿಎಂ ಒಂದು ದಿನ ಅಲ್ಲ, ರಾಮನಗರಕ್ಕೆ ಬಂದು ಒಂದು ವಾರ ಕ್ಯಾಂಪ್‌ ಮಾಡುವಂತೆ ಆಹ್ವಾನ ನೀಡಿದ್ದೇನೆ. ಸಿಎಂಗೆ ದುಡ್ಡಿನ ಮದ ಮತ್ತು ಅಧಿಕಾರದ ದರ್ಪ ಬಂದಿದೆ. ಹಾಗಾಗಿ, ಸಿಎಂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದರು.

‘ನನಗೆ ಕಾಂಗ್ರೆಸ್‌, ಬಿಜೆಪಿಯನ್ನು ಸೋಲಿಸುವುದು ಮುಖ್ಯವಲ್ಲ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಯಾವ ಪಕ್ಷದ ಕೊಡುಗೆಗಳು ಎಷ್ಟಿವೆ ಎಂಬುದನ್ನು ತಿಳಿದು ಅಂತಹವರನ್ನು ಜನರು ರಾಜ್ಯದಿಂದ ಒದ್ದು ಹೊರಹಾಕುವಂತೆ ಜನರಿಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT