ಮಂಗಳವಾರ, ಜೂಲೈ 7, 2020
24 °C

ಮಕ್ಕಳಿಗಾಗಿ ದೊಡ್ಡವರ ಪುಸ್ತಕ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಮಕ್ಕಳಿಗಾಗಿ ದೊಡ್ಡವರ ಪುಸ್ತಕ

ಶ್ರೀ ಕೃಷ್ಣ ಮತ್ತು ಅರ್ಜುನನ ನಡುವೆ ಯುದ್ಧಭೂಮಿಯಲ್ಲಿ ನಡೆದ ಸಂಭಾಷಣೆ ‘ಭಗವದ್ಗೀತೆ’. ಇದರ ಬಗ್ಗೆ ಬಂದಿರುವ ಭಾಷ್ಯಗಳು, ವ್ಯಾಖ್ಯಾನಗಳು, ಟೀಕೆಗಳು, ಮೆಚ್ಚುಗೆಗಳು ಎಷ್ಟು ಎಂಬುದನ್ನು ಲೆಕ್ಕಹಾಕುವ ಕೆಲಸಕ್ಕೆ ಹೆಚ್ಚಿನ ಅರ್ಥವಿಲ್ಲ. ಹೀಗಿರುವ ಗೀತೆಯ ಒಂದು ಆವೃತ್ತಿಯನ್ನು (ಅಥವಾ ವ್ಯಾಖ್ಯಾನವನ್ನು) ಓದಿದ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು, ಅದನ್ನು ಬರೆದ ಬೆಂಗಳೂರಿನ ಲೇಖಕಿಯೊಬ್ಬರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದರು. ‘ನೀವು ಬರೆದಿದ್ದನ್ನು ಓದಿ ನನ್ನ ಕಣ್ಣುಗಳು ತೇವಗೊಂಡವು. ನನಗೇ ಗೊತ್ತಿಲ್ಲದೆ ಕಣ್ಣೀರು ಹರಿಯಿತು’ ಎಂದರು ಆ ವಿದೇಶಿ ಮಹಿಳೆ. ಆ ಮಹಿಳೆ ಓದಿದ ಪುಸ್ತಕ ‘ದಿ ಗೀತಾ ಫಾರ್‌ ಚಿಲ್ಡ್ರನ್‌’. ಅದನ್ನು ಬರೆದವರು ರೂಪಾ ಪೈ. ಪುಸ್ತಕದ ಹೆಸರೇ ತಿಳಿಸುವಂತೆ ಅವರು ಇದನ್ನು ಬರೆದಿದ್ದು ಮಕ್ಕಳಿಗಾಗಿ.

‘ಅರ್ಥಶಾಸ್ತ್ರದ ಅನಾಸಕ್ತಿಕರ ಪುಸ್ತಕಗಳನ್ನು ಓದುವ ಮನಸ್ಸು ಇಲ್ಲದಿದ್ದರೂ, ಅರ್ಥಶಾಸ್ತ್ರದ ಪ್ರಮುಖ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ನೀವು ಈ ಪುಸ್ತಕ ಓದಬೇಕು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ. ಅವರು ಹೇಳಿದ್ದು ‘So you want to know about Economics’ ಎನ್ನುವ ಪುಸ್ತಕದ ಬಗ್ಗೆ. ಇದನ್ನು ಬರೆದವರು ಸಹ ರೂಪಾ ಪೈ. ಇದು ಕೂಡ ಮಕ್ಕಳನ್ನು ಉದ್ದೇಶಿಸಿ ಬರೆದಿದ್ದು. ಆದರೆ, ದೊಡ್ಡವರೂ ಓದಿಕೊಳ್ಳುವಂತೆ ಇದೆ. ಹಾಗೆ, ಮಕ್ಕಳು ಓದಿ ಮುಗಿಸಿದ ತಕ್ಷಣ ದೊಡ್ಡವರೂ ಓದಬೇಕು ಎನ್ನುವಂತೆ ಇವೆ ಈ ಎರಡು ಪುಸ್ತಕಗಳು.

ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದು, ದೊಡ್ಡವರ ನಡುವೆ ಹೆಸರು ಗಳಿಸಿಕೊಂಡ ರೂಪಾ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬುಕ್‌ವರ್ಮ್‌ ಪುಸ್ತಕದಂಗಡಿಯಲ್ಲಿ ಒಂದು ಮಧ್ಯಾಹ್ನ ‘ಮುಕ್ತಛಂದ’ದ ಜೊತೆ ಮಾತಿಗೆ ಸಿಕ್ಕಿದ್ದರು. ಹತ್ತಾರು ಪುಸ್ತಕಗಳ ಪುಟ ತಿರುವಿಹಾಕುತ್ತಿದ್ದ ಅವರು ಅಷ್ಟಿಷ್ಟು ಮಾತುಕತೆ ನಡೆಸುವ ಉತ್ಸಾಹದಲ್ಲಿಯೂ ಇದ್ದರು. ‘ನಾನು ಬರೆಯುವುದು ಮಕ್ಕಳಿಗಾಗಿ. ಈ ಹಂತದಲ್ಲಿ ನನ್ನ ತೀರ್ಮಾನ ಇದೇ’ ಎನ್ನುತ್ತಾ ಮಾತು ಆರಂಭಿಸಿದರು. ಅವರು ‘ದಿ ಗೀತಾ’ ಬರೆದಿದ್ದರ ಹಿಂದಿನ ಕಥೆ, ಬರವಣಿಗೆ ಬಗ್ಗೆ ಒಲವು ಮೂಡಿದ ಬಗೆಯ ಬಗ್ಗೆ ಮಾತನಾಡಿದರು.

ಏನಾದರೂ ಬರೆಯಬೇಕು ಎನ್ನುವ ಸಹಜ ಒತ್ತಡವೊಂದು ರೂಪಾ ಅವರಲ್ಲಿ ಎಳೆಯ ವಯಸ್ಸಿನಿಂದಲೇ ಇತ್ತು. ಕುಟುಂಬದವರ ಜೊತೆ ಹೊರಗಡೆ ಸುತ್ತಾಡಿ ಬಂದ ನಂತರ, ಅಲ್ಲಿ ಕಂಡಿದ್ದನ್ನು, ಅನುಭವಿಸಿದ್ದನ್ನು ತಮ್ಮ ಡೈರಿಯಲ್ಲಿ ಬರೆದಿಡುತ್ತಿದ್ದರು. ಬರೆಯುವುದಕ್ಕಿಂತ ಹೆಚ್ಚಾಗಿ, ಸಿಕ್ಕ ಪುಸ್ತಕಗಳನ್ನೆಲ್ಲ ಗಬಗಬನೆ ಓದುತ್ತಿದ್ದರು. ಬೆಂಗಳೂರಿನಲ್ಲಿ ಹುಟ್ಟಿ, ಇಲ್ಲಿಯೇ ಓದಿ, ನಂತರದ ದಿನಗಳಲ್ಲಿ ದೆಹಲಿ, ಲಂಡನ್, ಮುಂಬೈ, ಅಮೆರಿಕದ ಜೀವನ ಕಂಡಿದ್ದಾರೆ ರೂಪಾ.

‘ಬ್ರಿಟಿಷ್‌ ಲೇಖಕಿ ಇನಿಡ್ ಬ್ಲೈಟನ್ ಮಕ್ಕಳಿಗಾಗಿ ಬರೆಯುತ್ತಿದ್ದ ಪುಸ್ತಕಗಳನ್ನು ನಮ್ಮ ತಲೆಮಾರಿನ ಮಕ್ಕಳು ಹೆಚ್ಚೆಚ್ಚು ಓದುತ್ತಿದ್ದರು. ಅದರಲ್ಲಿ ಬ್ರಿಟಿಷ್‌ ಮಕ್ಕಳ ಬಾಲ್ಯದ ಸೊಗಸಿನ ಕುರಿತೇ ಹೆಚ್ಚು ವಿವರ ಇರುತ್ತಿತ್ತು. ನಾನು 13 ವರ್ಷ ವಯಸ್ಸಿನಲ್ಲಿ ಇದ್ದಾಗ, ಮಕ್ಕಳಿಗಾಗಿ ರೂಪಿಸುತ್ತಿದ್ದ ಟಾರ್ಗೆಟ್ ಎನ್ನುವ ನಿಯತಕಾಲಿಕೆ ನನಗೆ ಸಿಕ್ಕಿತು. ಅದನ್ನು ಓದಿದ ನಂತರ, ನಮ್ಮ ದೇಶದ ಮಕ್ಕಳ ಬಾಲ್ಯ ಕೂಡ ಚೇತೋಹಾರಿಯಾಗಿ ಇರುತ್ತದೆ ಎಂಬುದು ನನಗೆ ಗೊತ್ತಾಯಿತು! ಆ ಪತ್ರಿಕೆಯನ್ನು ಓದಿ ಓದಿ ನಾನು ಮಕ್ಕಳಿಗಾಗಿಯೇ ಬರೆಯಬೇಕು ಎಂದು ತೀರ್ಮಾನಿಸಿದೆ. ಹಾಗೆ ನೋಡಿದರೆ, ನಾನು ಮಕ್ಕಳಿಗೆ ಬರೆಯುವಂತೆ ಆಗಿದ್ದಕ್ಕೆ ಕಾರಣ ಇನಿಡ್ ಬ್ಲೈಟನ್‌’ ಎಂದು ಹೇಳುತ್ತಾರೆ ರೂಪಾ.

ನಮ್ಮಲ್ಲಿ, ಅದರಲ್ಲೂ ಕನ್ನಡದಲ್ಲಿ, ಮಕ್ಕಳಿಗಾಗಿ ಎಷ್ಟು ಪುಸ್ತಕಗಳು ಬರುತ್ತಿವೆ, ಅವುಗಳ ವಿಷಯ ವೈವಿಧ್ಯ ಹೇಗಿದೆ ಎಂಬುದು ಚರ್ಚೆಯ ವಸ್ತು. ಇದು ರೂಪಾ ಅವರ ಮಾತುಗಳಲ್ಲೂ ಧ್ವನಿಸುತ್ತದೆ. ‘ನಾವು ನಮ್ಮ ಮಕ್ಕಳ ಬಗ್ಗೆ, ಮಕ್ಕಳಿಗಾಗಿ ಹೆಚ್ಚೆಚ್ಚು ಬರೆಯುತ್ತಿಲ್ಲ. ನಮ್ಮ ದೇಶದ ಜೀವನಕ್ರಮ ಕೂಡ ಓದುಗರಲ್ಲಿ ಜೀವನೋತ್ಸಾಹ ಮೂಡಿಸುವಂತೆಯೇ ಇದೆ. ಆದರೆ, ಇದನ್ನು ನಾವು ಮಕ್ಕಳಿಗೆ ತೋರಿಸಿಕೊಡುತ್ತಿಲ್ಲ ಎಂದು ನನಗೆ ಅನಿಸಿತು. ಹಾಗಾಗಿ ನಾನು ಭಾರತದ ಮಕ್ಕಳಿಗಾಗಿ, ಭಾರತದ್ದೇ ಕಥೆಗಳನ್ನು ಹೇಳಬೇಕು ಎಂದು ತೀರ್ಮಾನಿಸಿದೆ. ನನ್ನ ಬರಹಗಳಲ್ಲಿ ಡ್ರ್ಯಾಗನ್‌ ಅಥವಾ ಬೇರೆ ದೇಶದ ಇನ್ಯಾವುದೇ ಪ್ರಾಣಿಗಳ ಬಗ್ಗೆಯೋ, ಸ್ಥಳಗಳ ಬಗ್ಗೆಯೋ ವಿವರಣೆ ಇರಬಾರದು ಎಂದೂ ತೀರ್ಮಾನಿಸಿದ್ದೆ’ ಎಂದು ಹೇಳುತ್ತಾರೆ ರೂಪಾ. ಅವರು ಮಕ್ಕಳಿಗಾಗಿ ಬರೆದ ಮೊದಲ ಸರಣಿಯ ಹೆಸರು ‘ತಾರಾನಾಟ್ಸ್‌’. ಈ ಸರಣಿಯಲ್ಲಿ ಬರುವ ವಿಶ್ವದ ಹೆಸರು ‘ಮಿಥ್ಯಾ’. ಈ ಸರಣಿ ಬರೆಯಲು ರೂಪಾ ಅವರಿಗೆ ಕೆಲವು ಹೊಳಹುಗಳು ಸಿಕ್ಕಿದ್ದು ಬೇಲೂರು ಮತ್ತು ಹಳೆಬೀಡು ದೇವಸ್ಥಾನಗಳನ್ನು ವೀಕ್ಷಿಸಿದ ನಂತರ. ಇವರ ಬರಹಗಳಲ್ಲಿ ಅಷ್ಟದಿಕ್ಪಾಲಕರ ಬಗ್ಗೆ, ಪುರಾಣಗಳಲ್ಲಿ ಪ್ರಸ್ತಾಪವಾಗುವ ವಿವಿಧ ಹೆಸರುಗಳ ಬಗ್ಗೆ ಉಲ್ಲೇಖ ಬರುತ್ತದೆ– ನಮ್ಮ ಮಕ್ಕಳಿಗೆ ನಮ್ಮದೇ ಪ್ರಪಂಚದ ಹೆಸರುಗಳು ಹತ್ತಿರವಾಗಲಿ ಎಂಬ ಕಾರಣಕ್ಕೆ.

‘ನಾಲ್ಕು ವರ್ಷಗಳ ಅವಧಿಯಲ್ಲಿ ತಾರಾನಾಟ್ಸ್‌ ಸರಣಿಯ ಎಂಟು ಪುಸ್ತಕಗಳನ್ನು ಬರೆದ ನಂತರ ನನಗೆ ಬೇರೇನಾದರೂ ಬರೆಯಬೇಕು ಅನ್ನಿಸುತ್ತಿತ್ತು. ಆಗ, ಅಷೆಟ್ ಪ್ರಕಾಶನದ ವತ್ಸಲಾ ಕೌಲ್‌ ಬ್ಯಾನರ್ಜಿ ಅವರು, ಹೊಸ ಪುಸ್ತಕ ಬರೆಯಬಾರದೇಕೆ ಎಂದು ಕೇಳಿದರು. ಯಾವುದರ ಬಗ್ಗೆ ಬರೆಯಬೇಕು, ನನ್ನಲ್ಲಂತೂ ಸದ್ಯಕ್ಕೆ ಹೊಸ ಆಲೋಚನೆಗಳು ಇಲ್ಲ ಎಂದು ಅವರಿಗೆ ಹೇಳಿದೆ. ಆಗ ಅವರು ಮಕ್ಕಳಿಗಾಗಿ ಭಗವದ್ಗೀತೆಯ ಬಗ್ಗೆ ಏಕೆ ಬರೆಯಬಾರದು ಎಂಬ ಸಲಹೆ ನೀಡಿದ್ದರು. ಅವರು ಹಾಗೆ ಹೇಳಿದ ದಿನದವರೆಗೆ ನಾನು ಭಗವದ್ಗೀತೆಯನ್ನು ಒಮ್ಮೆಯೂ ಓದಿರಲಿಲ್ಲ. ನಾನು ಶಾಲೆಗೆ ಹೋಗುತ್ತಿದ್ದಾಗ ಅಲ್ಲಿ ಇದ್ದ ಶಿಕ್ಷಕಿಯೊಬ್ಬರು, ಗೀತೆಯ ಬಹುದೊಡ್ಡ ಅಭಿಮಾನಿ. ಅವರು ನಮಗೆ ಗೀತೆಯ ಬಗ್ಗೆ ಹೇಳಿದ್ದರು. ಶಾಲೆಯಲ್ಲಿ ಇದ್ದಾಗ ಗೀತೆಯನ್ನು ಅರ್ಥ ಮಾಡಿಕೊಳ್ಳದೆಯೇ ಅದರ ಕೆಲವು ಶ್ಲೋಕಗಳನ್ನು ಕಂಠಪಾಠ ಮಾಡಿದ್ದೆ. ಅಷ್ಟು ಬಿಟ್ಟರೆ ನನಗೆ ಗೀತೆಯ ಬಗ್ಗೆ ಏನೇನೂ ಗೊತ್ತಿರಲಿಲ್ಲ. ನಾನು ಗೀತೆಯನ್ನು ಓದಿಲ್ಲ. ಹಾಗಾಗಿ ಈ ಪುಸ್ತಕ ಬರೆಯಲು ನಾನು ಸೂಕ್ತ ವ್ಯಕ್ತಿ ಅಲ್ಲ ಎಂದು ಬ್ಯಾನರ್ಜಿ ಅವರಿಗೆ ಉತ್ತರಿಸಿದ್ದೆ’ ಎನ್ನುತ್ತಾರೆ ರೂಪಾ.

ಗೀತಾಚಾರ್ಯ ಮತ್ತು ಅರ್ಜುನನ ನಡುವಿನ ಸಂಭಾಷಣೆಯನ್ನು ವರ್ಷಗಳ ಕಾಲ ಓದಿಕೊಂಡರೂ, ‘ಗೀತೆ ನಮಗೆ ಪೂರ್ತಿಯಾಗಿ ಅರ್ಥವಾಗಿಲ್ಲ’ ಎನ್ನುತ್ತಾರೆ ಕೆಲವರು. ಹೀಗಿರುವಾಗ ಈ ಗ್ರಂಥದ ಬಗ್ಗೆ ಬರೆಯುವುದು ಹೇಗೆ, ಅದನ್ನು ಮಕ್ಕಳಿಗೆ ಅರ್ಥವಾಗುವಂತೆ ಬರೆಯುವುದು ಹೇಗೆ ಎಂಬುದು ರೂಪಾ ಮನಸ್ಸಿನಲ್ಲಿದ್ದ ಪ್ರಶ್ನೆಯಾಗಿತ್ತು. ‘ಇದನ್ನೆಲ್ಲ ಬ್ಯಾನರ್ಜಿ ಅವರಿಗೆ ಹೇಳಿದೆ. ಆಗ ಅವರು, ನಿಮಗೆ ಭಾರತದ ಪುರಾಣಗಳ ಬಗ್ಗೆ ಆಸಕ್ತಿ ಇದೆ ಎಂಬುದು ಗೊತ್ತು. ಹಾಗಾಗಿ ಈ ಪುಸ್ತಕ ಬರೆಯುವಂತೆ ಹೇಳಿದೆ ಎಂದು ಉತ್ತರಿಸಿದ್ದರು. ಆದರೂ, ಆರು ತಿಂಗಳ ಕಾಲ ನಾನು ಅವರ ಪ್ರಸ್ತಾವವನ್ನು ಒಪ್ಪಿಕೊಳ್ಳಲಿಲ್ಲ. ಗೀತೆಯ ಬಗ್ಗೆ ಬರೆಯಬೇಕು ಎಂದಾದರೆ ನಾನು ವರ್ಷಗಳ ಕಾಲ ಅಧ್ಯಯನ ಮಾಡಬೇಕು. ಅಲ್ಲಿಯವರೆಗೆ ಬರೆಯಲು ಆಗದು ಎಂದು ಹೇಳಿದ್ದೆ’ ಎಂದರು. ಗೀತೆಯ ಬಗ್ಗೆ ತನ್ಮಯತೆಯಿಂದ ಮಾತನಾಡುತ್ತಿದ್ದ ಅವರಿಗೆ ಎದುರಿಗೆ ಇದ್ದ ಕಾಫಿಯ ಬಿಸಿ ಆರುತ್ತಿರುವುದು ಗಮನಕ್ಕೇ ಬಂದಿರಲಿಲ್ಲ. ಮಾತಿನ ಮಧ್ಯದಲ್ಲಿ ಒಮ್ಮೆ ಕಾಫಿ ನೋಡಿ, ಒಂದೆರಡು ಗುಟುಕು ಕಾಫಿ ಕುಡಿದು, ಮಾತು ಮುಂದುವರಿಸಿದರು.

‘ನಿಮಗೆ ಒಂದು ತಿಂಗಳ ಸಮಯ ಕೊಡುವೆ. ಆ ಅವಧಿಯಲ್ಲಿ ಗೀತೆಯ ಬಗ್ಗೆ ಒಂದಿಷ್ಟು ಓದಿಕೊಳ್ಳಿ. ಅದಾದ ನಂತರವೂ, ಮಕ್ಕಳಿಗಾಗಿ ಗೀತೆಯ ಬಗ್ಗೆ ಬರೆಯಲು ಆಗದು ಅನ್ನಿಸಿದರೆ ನಿಮ್ಮನ್ನು ಮತ್ತೆ ಒತ್ತಾಯ ಮಾಡುವುದಿಲ್ಲ’ ಎಂದು ರೂಪಾ ಅವರಿಗೆ ಬ್ಯಾನರ್ಜಿ ಹೇಳಿದ್ದರು. ‘ಆಗ ನಾನು ನಮ್ಮ ಸಂಬಂಧಿಕರೊಬ್ಬರಲ್ಲಿ ಗೀತೆಯ ಬಗ್ಗೆ ಕೇಳಿದೆ. ಕೃಷ್ಣ ಮತ್ತು ಅರ್ಜುನ ಎನ್ನುವ ಆ‍ಪ್ತ ಸ್ನೇಹಿತರ ನಡುವಣ ಸಂಭಾಷಣೆ ಎಂಬ ರೀತಿಯಲ್ಲೂ ಗೀತೆಯನ್ನು ಓದಿಕೊಳ್ಳಬಹುದು ಎಂಬ ಹೊಳಹನ್ನು ಅವರು ನೀಡಿದರು. ಅದುವರೆಗೆ ನಾನು ಆ ರೀತಿಯಲ್ಲಿ ಯೋಚನೆಯನ್ನೇ ಮಾಡಿರಲಿಲ್ಲ. ದೇವರು ಮತ್ತು ಮನುಷ್ಯನ ನಡುವಣ ಸಂಭಾಷಣೆ ಇದು ಎಂಬ ರೀತಿಯಲ್ಲೇ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೆ. ನಾನು ಇಬ್ಬರು ಸ್ನೇಹಿತರ ನಡುವಿನ ಸಂಭಾಷಣೆಯ ಕಥೆಯನ್ನು ಮಕ್ಕಳಿಗೆ ಹೇಳಬೇಕಾಗುತ್ತದೆ ಎಂಬ ಯೋಚನೆ ಮೂಡಿತು. ಅವರ ಮಾತುಗಳು ಗೀತೆಯ ಬಗೆಗಿನ ನನ್ನ ನೋಟ ಬದಲಾಯಿಸಿದವು’ ಎಂದರು ರೂಪಾ.

ಮಕ್ಕಳಿಗಾಗಿ ಗೀತೆಯ ಬಗ್ಗೆ ತಾವು ಬರೆಯಬಹುದು ಎಂಬ ಸಣ್ಣ ಸಮ್ಮತಿಯೊಂದು ಮನಸ್ಸಿನಲ್ಲಿ ಮೂಡಿದ ನಂತರ ರೂಪಾ ಮಾಡಿದ ಕೆಲಸ ಗೀತೆಯ ಬಗ್ಗೆ ಎಸ್. ರಾಧಾಕೃಷ್ಣನ್‌ ಬರೆದ ಪುಸ್ತಕ ಓದಿದ್ದು. ಅದರ ಎರಡು–ಮೂರು ಅಧ್ಯಾಯಗಳನ್ನು ಓದುವ ಹೊತ್ತಿಗೆ, ‘ಅರೇ, ನಾನು ಇದನ್ನು ಈವರೆಗೆ ಯಾಕೆ ಓದಿರಲಿಲ್ಲ’ ಎಂದು ಅವರಿಗೆ ಅನಿಸಲು ಆರಂಭಿಸಿತು. ರಾಧಾಕೃಷ್ಣನ್ ಬರೆದ ಪುಸ್ತಕ ಓದುವಾಗ ರೂಪಾ ಅವರ ವಯಸ್ಸು 42 ಅಥವಾ 43 ವರ್ಷ. ‘ನಾನು ಗೀತೆಯನ್ನು ಓದಲು, ಅದನ್ನು ಅರ್ಥ ಮಾಡಿಕೊಳ್ಳಲು ನನಗೆ ಅಷ್ಟು ವಯಸ್ಸು ಆಗಬೇಕಾಗಿತ್ತೇನೋ’ ಎಂದು ಪ್ರಶ್ನೆ ಮತ್ತು ಉತ್ತರಗಳೆರಡೂ ಇರುವ ಮಾತನ್ನು ಹೇಳಿದರು ರೂಪಾ. ರಾಧಾಕೃಷ್ಣನ್ ಪುಸ್ತಕ ಓದಿದ ನಂತರ ಬ್ಯಾನರ್ಜಿ ಅವರಿಗೆ ಕರೆ ಮಾಡಿ, ‘ನನ್ನ ಏಳ್ಗೆಗಾಗಿ ಗೀತೆಯ ಬಗ್ಗೆ ಪುಸ್ತಕ ಬರೆಯುವೆ’ ಎಂದರು ರೂಪಾ. ಪ್ರತಿಷ್ಠಿತ ಟೆಡ್‌ಎಕ್ಸ್‌ ವೇದಿಕೆಯಲ್ಲಿ ರೂಪಾ ಅವರು ಗೀತೆಯ ಬಗ್ಗೆ ಆಡಿರುವ ಮಾತುಗಳನ್ನು ಯೂಟ್ಯೂಬ್‌ ಮೂಲಕ ಆರೂವರೆ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಗೀತೆಯ ಬಗ್ಗೆ ಅವರು ಜೈಪುರ ಸಾಹಿತ್ಯೋತ್ಸವದಲ್ಲೂ ಮಾತನಾಡಿದ್ದಾರೆ.

ಗೀತೆ ಮಕ್ಕಳಿಗೆ ಆಸಕ್ತಿಕರ ಆಗಬೇಕು ಎಂಬ ಉದ್ದೇಶದಿಂದ ರೂಪಾ ಅವರು ಗೀತೆಯ ಪ್ರತಿ ಅಧ್ಯಾಯವನ್ನೂ ಎರಡು ಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಗೀತೆಯಲ್ಲಿ ಇರುವುದನ್ನು ಅದರಲ್ಲಿ ಇರುವ ಹಾಗೆ ವಿವರಿಸಿದ್ದಾರೆ. ಇನ್ನೊಂದು ಭಾಗದಲ್ಲಿ ಗೀತೆ ಹೇಳುವ ಪಾಠವನ್ನು ಸಮಕಾಲೀನ ಶೈಲಿಯಲ್ಲಿ, ಆನ್ವಯಿಕ ರೀತಿಯಲ್ಲಿ ಹೇಳುವ ಯತ್ನ ಮಾಡಿದ್ದಾರೆ. ಹಾಗೆಯೇ ಗೀತೆಯ ಹುಟ್ಟಿಗೂ ಮೊದಲಿನ ಕುರು– ಪಾಂಡವರ ನಡುವಣ ವೈರತ್ವ, ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಗುವ ಸಂದರ್ಭಗಳ ಬಗ್ಗೆಯೂ ವಿವರಿಸಿದ್ದಾರೆ. ‘ಗೀತೆಯನ್ನು ಪೂರ್ತಿಯಾಗಿ ಕಥೆಯ ರೂಪದಲ್ಲಿ ಹೇಳಿಬಿಟ್ಟರೆ ಸರಿಯಾಗದು. ಅದೊಂದು ಪುರಾತನ ಕೃತಿ ಎಂಬುದೂ ಮಕ್ಕಳಿಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಈ ವಿಂಗಡಣೆ’ ಎನ್ನುತ್ತಾರೆ ಅವರು.

ತಾವು ಬರೆದ ‘ದಿ ಗೀತಾ’ ಪುಸ್ತಕವನ್ನು ಪ್ರಕಟಣೆಗೂ ಮೊದಲು ರೂಪಾ ಅವರು ಬಿಬೇಕ್‌ ದೇಬ್ರಾಯ್ ಅವರಿಗೆ ಕಳುಹಿಸಿದ್ದರು. ದೇಬ್ರಾಯ್ ಅವರು ನೀತಿ ಆಯೋಗದ ಸದಸ್ಯರು, ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರೂ ಹೌದು. ಅದಕ್ಕಿಂತಲೂ ಹೆಚ್ಚಾಗಿ ದೇಬ್ರಾಯ್ ಅವರು ಮಹಾಭಾರತ, ಗೀತೆ ಮತ್ತು ರಾಮಾಯಣವನ್ನು ಇಂಗ್ಲಿಷ್‌ಗೆ ಅನುವಾದಿಸಿದವರು. ‘ನಾನು ಬರೆದಿದ್ದನ್ನು ದೇಬ್ರಾಯ್‌ ಇಷ್ಟಪಟ್ಟರು, ಇದನ್ನು ಪ್ರಕಟಿಸಲೇಬೇಕು ಎಂದು ಹೇಳಿದರು. ಗೀತೆಯನ್ನು ಮೂಲದಲ್ಲಿ ಓದಿಕೊಳ್ಳಲು ಪ್ರೇರಣೆ ನೀಡುತ್ತದೆ ಈ ಪುಸ್ತಕ ಎಂದರು’ ಎನ್ನುವ ಮಾತನ್ನು ರೂಪಾ ಖುಷಿಯಿಂದ ಹೇಳಿಕೊಳ್ಳುತ್ತಾರೆ.

‘ದಿ ಗೀತಾ’ ಪುಸ್ತಕ ಪ್ರಕಟವಾದ ನಂತರ ಹಲವರು ರೂಪಾ ಅವರನ್ನು ಸಂಪರ್ಕಿಸಿ, ‘ನೀವು ವೇದ, ಉಪನಿಷತ್ತುಗಳ ಬಗ್ಗೆ ಬರೆಯಿರಿ. ಪುರಾಣಗಳ ಬಗ್ಗೆ ಬರೆಯಿರಿ’ ಎಂದೆಲ್ಲ ಒತ್ತಾಯಿಸಿದರು. ಆದರೆ ಮಕ್ಕಳಿಗಾಗಿ ಮತ್ತೊಂದು ಪುಸ್ತಕ ಬರೆಯಬೇಕು ಎಂಬ ಆಲೋಚನೆಯಲ್ಲಿ ಇದ್ದ ರೂಪಾ ಆಯ್ಕೆ ಮಾಡಿಕೊಂಡ ವಿಷಯ ಅರ್ಥಶಾಸ್ತ್ರ!

‘ನಾನು ಗೀತೆ ಅಥವಾ ಅರ್ಥಶಾಸ್ತ್ರದ ಬಗ್ಗೆ ವಿದ್ವಾಂಸರ ಜೊತೆ ವಾದಕ್ಕೆ ಇಳಿಯಲಾರೆ. ಸಹಜ ಕುತೂಹಲದ ಕಾರಣ ನಾನು ಅವುಗಳನ್ನು ಓದಿಕೊಂಡಿದ್ದೇನೆ. ಜಗತ್ತು ಮುನ್ನಡೆಯುತ್ತಿರುವುದು ಹೇಗೆ ಎಂಬುದನ್ನು ಅರ್ಥಶಾಸ್ತ್ರದ ನೆಲೆಯಲ್ಲಿ ತಿಳಿದುಕೊಳ್ಳುವ ಉದ್ದೇಶದಿಂದ ಒಂದಿಷ್ಟು ಓದಿಕೊಂಡೆ. ಓದಿ, ಅದರ ಬಗ್ಗೆಯೇ ಪುಸ್ತಕ ಬರೆದೆ – ಅದು ಕೂಡ ಮಕ್ಕಳನ್ನು ಉದ್ದೇಶಿಸಿಯೇ. ನಾನು ಅರ್ಥಶಾಸ್ತ್ರದ ಬಗ್ಗೆ ಪುಸ್ತಕ ಬರೆದರೆ ಯಾರು ಅದನ್ನು ಓದುತ್ತಾರೆ ಎಂಬ ಪ್ರಶ್ನೆ ಕಾಡಿತು. ಆಗ ಪುಸ್ತಕದ ಬಗ್ಗೆ ಅರ್ಥಶಾಸ್ತ್ರಜ್ಞರಿಂದ ಒಂದೆರಡು ಮಾತುಗಳನ್ನು ಬರೆಸೋಣ ಎಂದು ಆಗ ಆರ್‌.ಬಿ.ಐ ಗವರ್ನರ್‌ ಆಗಿದ್ದ ರಘುರಾಮ್ ರಾಜನ್ ಅವರನ್ನು ಸಂಪರ್ಕಿಸಿದೆ. ಪುಸ್ತಕದ ಕರಡು ಪ್ರತಿ ಕಳುಹಿಸಿಕೊಡುವಂತೆ ಅವರು ಹೇಳಿದರು. ಓದಿ ಮೆಚ್ಚುಗೆಯ ಮಾತು ಹೇಳಿದರು’ ಎಂದರು ರೂಪಾ.

ಅಂದಹಾಗೆ ‘ದಿ ಗೀತಾ’ ಪುಸ್ತಕ ಈವರೆಗೆ ಡಚ್, ಕನ್ನಡ ಮತ್ತು ಹಿಂದಿಗೆ ಅನುವಾದ ಆಗಿದೆ. ತೆಲುಗು ಅನುವಾದ ಕಾರ್ಯ ನಡೆಯುತ್ತಿದೆ. ‘ಮುಂದೇನು ಎಂಬುದನ್ನು ಈಗಲೇ ಹೇಳಲಾರೆ. ಆದರೆ, ನಾನು ಮಕ್ಕಳಿಗಾಗಿಯೇ ಬರೆಯಬೇಕು ಎಂಬುದು ನನ್ನ ಈಗಿನ ತೀರ್ಮಾನ’ ಎನ್ನುವ ರೂಪಾ ಈಗ ಕವಿ ನಿಸಾರ್ ಅಹಮದ್ ಅವರ ಕೆಲವು ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕೆಲಸದಲ್ಲಿ ತೊಡಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು