ಬುಧವಾರ, ಜುಲೈ 15, 2020
22 °C

ಕ್ಷೀರ ಪಥ: ಎಷ್ಟು ಪರಿಚಿತ?

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಕ್ಷೀರ ಪಥ: ಎಷ್ಟು ಪರಿಚಿತ?

1. ‘ಕ್ಷೀರ ಪಥ’ - ಅದೇನು ನಿರ್ಮಿತಿ?

‘ಕ್ಷೀರ ಪಥ’ - ಅದೊಂದು ಗ್ಯಾಲಕ್ಸಿ. ವಿಶ್ವದಲ್ಲಿರುವ ಸುಮಾರು ಎರಡು ಸಾವಿರ ಶತಕೋಟಿ (2 ಟ್ರಿಲಿಯನ್) ಗ್ಯಾಲಕ್ಸಿಗಳಲ್ಲಿ ಕ್ಷೀರಪಥವೂ ಒಂದು. ಆದರೆ, ಕ್ಷೀರಪಥದ ವೈಶಿಷ್ಟ್ಯ ಏನೆಂದರೆ, ಅದು ನಮ್ಮ ಗ್ಯಾಲಕ್ಸಿ. ಏಕೆಂದರೆ, ಕ್ಷೀರಪಥವೇ ನಮ್ಮ ಸೌರವ್ಯೂಹದ, ನಮ್ಮ ಪೃಥ್ವಿಯ ತವರು ನೆಲೆ. ಗ್ಯಾಲಕ್ಸಿಗಳ ಒಂದು ವಿಧವಾದ ‘ಸುರುಳಿ ಗ್ಯಾಲಕ್ಸಿ’ಗಳ ವರ್ಗಕ್ಕೆ ಕ್ಷೀರಪಥವೂ ಸೇರಿದೆ (ಚಿತ್ರ 1, 2). ಐದು ಪ್ರಧಾನ ‘ತೋಳು’ಗಳನ್ನು (ಆರ್ಮ್ಸ್) ಹೊಂದಿರುವ ಕ್ಷೀರಪಥದ ‘ಒರೈಯನ್ ಆರ್ಮ್’ನಲ್ಲಿ, ಗ್ಯಾಲಕ್ಸಿಯ ಕೇಂದ್ರದಿಂದ 26,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ (1 ಜ್ಯೋತಿರ್ವರ್ಷ = 9.5 ಲಕ್ಷ ಕೋಟಿ ಕಿಲೋಮೀಟರ್) ನಮ್ಮ ಸೌರವ್ಯೂಹ ನೆಲೆಗೊಂಡಿದೆ (ಚಿತ್ರ-1ರಲ್ಲಿ ಬಾಣದ ಗುರುತು ತೋರಿಸುತ್ತಿರುವ ಸ್ಥಳ).

2. ಕ್ಷೀರಪಥಕ್ಕೆ ಏಕೆ ಈ ಹೆಸರು?

ನಿರಭ್ರ, ಚಂದ್ರ ರಹಿತ ರಾತ್ರಿಯಾಗಸದಲ್ಲಿ ಹಬ್ಬಿ ಹರಡಿದ ಬೆಳಕಿನ ತೇಪೆಯಂತೆ, ಚೆಲ್ಲಾಡಿದ ಬಿಳಿ ಕೆಂಡಗಳಂತೆ, ಎರಚಿ ಬಿಟ್ಟ ಹಾಲಿನ ಪದರದಂತೆ ಈ ಗ್ಯಾಲಕ್ಸಿ ನೇರವಾಗಿ ಬರಿಗಣ್ಣಿಗೇ ಗೋಚರಿಸುತ್ತದೆ. ಪುರಾತನ ಕಾಲದಿಂದಲೂ ಈ ಸೋಜಿಗದ ದೃಶ್ಯವನ್ನು ಗಮನಿಸುತ್ತ ಬಂದಿರುವ ಕುತೂಹಲಿ ಜನ ಅವರವರ ಕಲ್ಪನೆಗೆ ಅನುಗುಣವಾಗಿ ವಿಧ ವಿಧ ಹೆಸರುಗಳನ್ನು ಈ ಗ್ಯಾಲಕ್ಸಿಗೆ ನೀಡಿದ್ದಾರೆ. ಅವುಗಳಲ್ಲೆಲ್ಲ ಅತ್ಯಂತ ಜನಪ್ರಿಯವಾಗಿ ಉಳಿದು ಬಂದಿರುವ ಹೆಸರು ‘ಕ್ಷೀರಪಥ’ (ಮಿಲ್ಕೀ ವೇ). ಇದೇ ಗ್ಯಾಲಕ್ಸಿಗೇ ‘ಆಕಾಶ ಗಂಗೆ’ ಎಂಬ ಮತ್ತೊಂದು ಅಭಿಧಾನವೂ ಧಾರಾಳ ಬಳಕೆಯಲ್ಲಿದೆ.

3. ಕ್ಷೀರ ಪಥದ ಗಾತ್ರ-ವಿಸ್ತಾರ ಎಷ್ಟು?

ಕ್ಷೀರ ಪಥ ವಾಸ್ತವವಾಗಿ ಒಂದು ಬೃಹತ್ ಗ್ಯಾಲಕ್ಸಿ. ಮೂರು ಆಯಾಮಗಳ ಈ ನಿರ್ಮಿತಿಯ ಅಳತೆಗಳನ್ನು ನಿರೂಪಿಸಲು ವಿಶೇಷ ಮಾನವಾದ ‘ಜ್ಯೋತಿರ್ವರ್ಷ’ವೇ ಬೇಕು! ಆ ಪ್ರಕಾರ ಕ್ಷೀರ ಪಥದ ಉದ್ದ ಒಂದು ಲಕ್ಷ ಎಂಬತ್ತು ಸಾವಿರ ಜ್ಯೋತಿರ್ವರ್ಷ (ಹಾಗೆಂದರೆ, ಪ್ರತಿ ಸೆಕಂಡ್ ಗೆ ಮೂರು ಲಕ್ಷ ಕಿಲೋ ಮೀಟರ್ ವೇಗದಲ್ಲಿ ಅವಿರತ ಪಯಣಿಸಿದರೂ ಕ್ಷೀರಪಥದ ಒಂದು ತುದಿಯಿಂದ ಹೊರಟು ಇನ್ನೊಂದು ತುದಿ ತಲುಪಲು 1,80,000 ವರ್ಷ ಬೇಕು)! ಈ ಗ್ಯಾಲಕ್ಸಿಯ ಅಗಲ ಒಂದು ಲಕ್ಷ ಜ್ಯೋತಿರ್ವರ್ಷ! ಎತ್ತರ ಎರಡು ಸಾವಿರ ಜ್ಯೋತಿರ್ವರ್ಷ! ಎಂಥ ಕಲ್ಪನಾತೀತ ಅಳತೆಗಳು ಅಲ್ಲವೇ?

4. ಕ್ಷೀರ ಪಥದಲ್ಲಿ ಎಷ್ಟು ನಕ್ಷತ್ರಗಳಿವೆ? ಏನೇನು ನಕ್ಷತ್ರೇತರ ಕಾಯಗಳಿವೆ?

ಕ್ಷೀರ ಪಥದಲ್ಲಿರುವ ತಾರೆಗಳ ಸಂಖ್ಯೆಯೂ ಕಲ್ಪನಾತೀತ. ವೈಜ್ಞಾನಿಕ ಅಂದಾಜುಗಳ ಪ್ರಕಾರ ಈ ಗ್ಯಾಲಕ್ಸಿಯಲ್ಲಿ ಕನಿಷ್ಠ ಹತ್ತು ಸಾವಿರ ಕೋಟಿ ಮತ್ತು ಗರಿಷ್ಠ ನಲವತ್ತು ಸಾವಿರ ಕೋಟಿ ನಕ್ಷತ್ರಗಳು ಕಿಕ್ಕಿರಿದು ಹರಡಿವೆ (ಕ್ಷೀರ ಪಥದಲ್ಲಿರುವ ತಾರಾ ದಟ್ಟಣೆಯನ್ನು ಚಿತ್ರ-4 ಮತ್ತು 5ರಲ್ಲಿ ಗಮನಿಸಿ). ಸ್ಪಷ್ಟವಾಗಿಯೇ ಅವುಗಳದು ಭಿನ್ನ ಭಿನ್ನ ದ್ರವ್ಯರಾಶಿ, ಭಿನ್ನ ಭಿನ್ನ ಗಾತ್ರ, ಭಿನ್ನ ಭಿನ್ನ ಮೇಲ್ಮೈ ಉಷ್ಣತೆ, ಭಿನ್ನ ಭಿನ್ನ ಆಯುರ್ಮಾನ. ಅಷ್ಟೇ ಅಲ್ಲದೆ, ಬದುಕಿನ ಎಲ್ಲ ಹಂತಗಳಲ್ಲಿರುವ ನಕ್ಷತ್ರಗಳೂ ಈ ಗ್ಯಾಲಕ್ಸಿಯಲ್ಲಿವೆ: ‘ಕಂದು ಕುಬ್ಜ, ಕೆಂಪು ಕುಬ್ಜ, ಹಳದಿ ಕುಬ್ಜ (ನಮ್ಮ ಸೂರ್ಯನಂತಹವು), ಶ್ವೇತ ಕುಬ್ಜ, ಕೆಂಪು ದೈತ್ಯ, ನ್ಯೂಟ್ರಾನ್ ತಾರೆ, ಕ್ವಾಸಾರ್, ಪಲ್ಸಾರ್, ಕಪ್ಪು ರಂಧ್ರ... ಇತ್ಯಾದಿ’. ಜೊತೆಗೆ ಯುಗಳ ತಾರೆಗಳು, ನಕ್ಷತ್ರ ಗುಚ್ಛಗಳೂ (ಚಿತ್ರ-14) ಲಕ್ಷಾಂತರ ಸಂಖ್ಯೆಯಲ್ಲಿವೆ. ವಿಶೇಷ ಏನೆಂದರೆ, ಕ್ಷೀರ ಪಥದಲ್ಲಿ ‘ಕೆಂಪು ಕುಬ್ಜ’ ತಾರೆಗಳದೇ ಗರಿಷ್ಠ ಸಂಖ್ಯೆ. ಇಂಥ ತಾರೆಗಳದು ನಮ್ಮ ಸೂರ್ಯನಿಗಿಂತ ಕಡಿಮೆ ಮೇಲ್ಮೈ ಉಷ್ಣತೆ; ಸೂರ್ಯನ ಶೇಕಡ ಹತ್ತರಷ್ಟೇ ದ್ರವ್ಯ ರಾಶಿ. ಮತ್ತೂ ಒಂದು ವಿಶೇಷ ಏನೆಂದರೆ, ಈ ನಮ್ಮ ಗ್ಯಾಲಕ್ಸಿಯಲ್ಲಿರುವ ಅರ್ಧಕ್ಕೂ ಅಧಿಕ ನಕ್ಷತ್ರಗಳದು ನಮ್ಮ ಸೂರ್ಯನಿಗಿಂತ, ಎಂದರೆ ಐದು ನೂರು ಕೋಟಿ ವರ್ಷಕ್ಕಿಂತ, ಹೆಚ್ಚು ವಯಸ್ಸು!

ಕ್ಷೀರ ಪಥದಲ್ಲಿ ನಕ್ಷತ್ರಗಳೇ ಅಲ್ಲದೆ ಹೊಸ ಹೊಸ ತಾರೆಗಳ ಜನನಕ್ಕೆ ಮೂಲವಾಗುವ ಅನಿಲಗಳು ಮತ್ತು ಧೂಳು ಬೆರೆತ ‘ಇಂಟರ್ ಸ್ಟೆಲ್ಲಾರ್ ಮ್ಯಾಟರ್’ (ಚಿತ್ರ -8) ಹೇರಳ ಪ್ರಮಾಣದಲ್ಲಿದೆ. ನಕ್ಷತ್ರಗಳು ಮೈದಳೆಯುತ್ತಿರುವ ತಾಣಗಳಿವೆ (ಚಿತ್ರ-12); ಸಾಧಾರಣ ತಾರೆಗಳ ಬದುಕಿನ ಅಂತ್ಯದ ‘ಗ್ರಹೀಯ ನೀಹಾರಿಕೆ’ಗಳಿವೆ (ಚಿತ್ರ-13); ಭಾರೀ ನಕ್ಷತ್ರಗಳ ಸ್ಫೋಟ ಸಹಿತ ಸಾವಿನ ‘ಸೂಪರ್ ನೋವಾ ಅವಶೇಷ’ಗಳಿವೆ (ಚಿತ್ರ-9). ಕ್ಷೀರ ಪಥದ ಕೇಂದ್ರದಲ್ಲಿ ಒಂದು ‘ಸೂಪರ್ ಮ್ಯಾಸಿವ್ ಕಪ್ಪು ರಂಧ್ರ’ (ಚಿತ್ರ- 10) ಕೂಡ ಅಸ್ತಿತ್ವದಲ್ಲಿದೆ.

ಅಷ್ಟೇ ಅಲ್ಲದೆ ಕ್ಷೀರ ಪಥದಲ್ಲಿ ನಮ್ಮ ಸೌರವ್ಯೂಹಗಳಂತಹ (ಚಿತ್ರ-7) ಗ್ರಹವ್ಯೂಹಗಳು ಲೆಕ್ಕವಿಲ್ಲದಷ್ಟಿವೆ. ಅಂಥ ಪ್ರತಿ ವ್ಯೂಹದಲ್ಲೂ ಗ್ರಹಗಳೇ ಅಲ್ಲದೆ ಕುಬ್ಜ ಗ್ರಹಗಳು, ಉಪಗ್ರಹಗಳು, ಕ್ಷುದ್ರ ಗ್ರಹಗಳು, ಧೂಮಕೇತುಗಳು... ಇತ್ಯಾದಿ ಕಾಯಗಳು ಹೇರಳ ಸಂಖ್ಯೆಯಲ್ಲಿವೆ.

ವಿಸ್ಮಯ ಏನೆಂದರೆ, ಕ್ಷೀರ ಪಥದಲ್ಲಿ ಕನಿಷ್ಠ ಪ್ರತಿ ಎರಡರಲ್ಲಿ ಒಂದು ನಕ್ಷತ್ರವಾದರೂ ಒಂದು ಅಥವಾ ಅಧಿಕ ಗ್ರಹಗಳ ಸಾಂಗತ್ಯವನ್ನು ಹೊಂದಿವೆ (ಚಿತ್ರ-11). ಹಾಗೆಂದರೆ, ಕ್ಷೀರ ಪಥದಲ್ಲಿ ಕನಿಷ್ಠ ಎರಡು ನೂರು ಶತಕೋಟಿ ಅನ್ಯ ಗ್ರಹಗಳು ಇರಬಹುದಾದ ಖಚಿತ ಸಾಧ್ಯತೆ ಇದೆ. ಈವರೆಗೆ ಖಚಿತವಾಗಿ 3,743 ಅನ್ಯ ಗ್ರಹಗಳನ್ನೂ, 2,796 ಅನ್ಯ ಸೌರವ್ಯೂಹಗಳನ್ನೂ ಕ್ಷೀರ ಪಥದಲ್ಲಿ ಪತ್ತೆ ಹಚ್ಚಿದ್ದಾಗಿದೆ. ಅವುಗಳಲ್ಲಿ ನಮ್ಮ ಪೃಥ್ವಿಯಂತಹ ‘ಜೀವಧಾರಕ ಗ್ರಹ’ಗಳೂ ಇರಬಹುದು; ಅನ್ಯ ಜೀವಿಗಳೂ ಇರಬಹುದು!

ಹಾಗೆಂದರೆ ಕ್ಷೀರ ಪಥ ಕಲ್ಪನಾತೀತ ಗಾತ್ರ-ವಿಸ್ತಾರಗಳ, ಹೇರಳ ವಿಧ ಅಗಣಿತ ಕಾಯಗಳ ನಿಸರ್ಗ ನಿರ್ಮಿತಿ ಎಂಬುದು ಸ್ಪಷ್ಟ ತಾನೇ?

5. ವಿಶ್ವದಲ್ಲಿ ಕ್ಷೀರ ಪಥದ ನೆಲೆ ಎಲ್ಲಿದೆ?

ವಿಶ್ವದಲ್ಲಿರುವ ಸುಮಾರು ಎರಡು ನೂರು ಶತಕೋಟಿ ಗ್ಯಾಲಕ್ಸಿಗಳು ಎಲ್ಲವೂ ಎಲ್ಲೆಡೆ ಸಮರೂಪದಲ್ಲಿ ಹರಡಿಲ್ಲ. ಭಿನ್ನ ಭಿನ್ನ ಸಂಖ್ಯೆಗಳಲ್ಲಿ ಅವು ಅಲ್ಲಲ್ಲಿ ಗುಂಪು ಗುಂಪಾಗಿವೆ. ಅವೇ ‘ಗ್ಯಾಲಕ್ಸೀಯ ಗುಚ್ಛ’ಗಳು (ಚಿತ್ರ-3). ಪ್ರತಿ ಗುಚ್ಛದಲ್ಲಿರುವ ಗ್ಯಾಲಕ್ಸಿಗಳ ಸಂಖ್ಯೆಯನ್ನಾಧರಿಸಿ ಅವುಗಳನ್ನು ಗ್ಯಾಲಕ್ಸೀಯ ಗುಂಪು, ಗ್ಯಾಲಕ್ಸೀಯ ಗುಚ್ಛ, ಸೂಪರ್ ಕ್ಲಸ್ಟರ್, ಮೆಗಾ ಕ್ಲಸ್ಟರ್... ಎಂದೆಲ್ಲ ಗುರುತಿಸಲಾಗುತ್ತದೆ.

ಹಾಗೆ ಸಮೀಪ ಒಂದು ಲಕ್ಷ ಗ್ಯಾಲಕ್ಸಿಗಳಿದ್ದು, ಸುಮಾರು 520 ದಶಲಕ್ಷ ಜ್ಯೋತಿರ್ವರ್ಷ ವಿಸ್ತಾರಕ್ಕೆ ಹರಡಿ ನಿಂತಿರುವ ಮೆಗಾ ಗುಚ್ಛವೊಂದಿದೆ. ‘ಲೇನಿಯಾಕಿಯಾ’ ಎಂಬ ಆ ಮೆಗಾ ಗುಚ್ಛದಲ್ಲಿ ಪ್ರತಿಯೊಂದರಲ್ಲೂ ನೂರಾರು ಗ್ಯಾಲಕ್ಸಿಗಳು ಗುಂಪಾಗಿರುವ ಮುನ್ನೂರರಿಂದ ಐದು ನೂರು ‘ಸೂಪರ್ ಗುಚ್ಛ’ಗಳಿವೆ. ಅವುಗಳಲ್ಲೊಂದಾದ ‘ವಿರ್ಗೋ ಸೂಪರ್ ಕ್ಲಸ್ಟರ್’ನಲ್ಲಿ ಪ್ರತಿಯೊಂದರಲ್ಲೂ ಹಲವು ಹತ್ತು ಗ್ಯಾಲಕ್ಸಿಗಳಿರುವ ಸುಮಾರು ಒಂದು ನೂರು ಗುಚ್ಛಗಳಿವೆ. ಅವುಗಳಲ್ಲೊಂದಾದ ‘ಲೋಕಲ್ ಗ್ರೂಪ್’ನಲ್ಲಿ ಐವತ್ತು ಗ್ಯಾಲಕ್ಸಿಗಳಿವೆ. ಈ ಲೋಕಲ್ ಗ್ರೂಪ್‌ನ ಒಂದು ಗ್ಯಾಲಕ್ಸಿಯಾಗಿ ‘ಕ್ಷೀರ ಪಥ’ ಅಸ್ತಿತ್ವದಲ್ಲಿದೆ!

ಇವೆಲ್ಲವನ್ನೂ ಪರಿಗಣಿಸಿದರೆ ವಿಶ್ವದಲ್ಲಿ ನಿಮ್ಮ ‘ಪೂರ್ಣ ವಿಳಾಸ’ ಹೀಗಾಗುತ್ತದೆ: ‘ನಮ್ಮ ವಿಶ್ವ, ಲೇನಿಯಾಕಿಯಾ ಮೆಗಾ ಗುಚ್ಛ, ವಿರ್ಗೋ ಸೂಪರ್ ಗುಚ್ಛ, ಲೋಕಲ್ ಗ್ರೂಪ್, ಕ್ಷೀರ ಪಥ, ಒರೈಯನ್ ಆರ್ಮ್, ಸೌರವ್ಯೂಹ, ಭೂ ಗ್ರಹ, ಏಷ್ಯಾ ಖಂಡ, ಭಾರತ ದೇಶ, ಕರ್ನಾಟಕ ರಾಜ್ಯ, ನೀವಿರುವ ಜಿಲ್ಲೆ, ನಿಮ್ಮ ಊರು-ನಗರ, ಬಡಾವಣೆ, ರಸ್ತೆ, ಮನೆ ಸಂಖ್ಯೆ, ನಿಮ್ಮ ಹೆಸರು’!

6. ಕ್ಷೀರ ಪಥ ಒಂದು ಸ್ಥಿರ ನಿರ್ಮಿತಿಯೇ? ಇಲ್ಲ, ಅದೂ ಚಲನಶೀಲವಾಗಿದೆಯೇ?

ಕ್ಷೀರ ಪಥ ಸ್ಥಿರ ನಿರ್ಮಿತಿಯೇನಲ್ಲ. ಅದು ಒಂದು ಬೃಹತ್ ತಟ್ಟೆಯಂತೆ ಸುತ್ತುತ್ತಿದೆ. ಸಹಜವಾಗಿಯೇ ಕೇಂದ್ರದಿಂದ ದೂರ ಸರಿದಂತೆಲ್ಲ, ಅಂಚಿನತ್ತ ಸಾಗಿದಂತೆಲ್ಲ ವೇಗ ಹೆಚ್ಚುತ್ತದೆ ಕೂಡ. ಕ್ಷೀರ ಪಥದ ಕೇಂದ್ರದಿಂದ 26,000 ಜ್ಯೋತಿರ್ವರ್ಷ ದೂರದಲ್ಲಿ ನಮ್ಮ ಸೌರವ್ಯೂಹ ಇರುವ ಸ್ಥಳದಲ್ಲಿ ಕ್ಷೀರ ಪಥದ ಸ್ವಭ್ರಮಣ ವೇಗ ತಾಸಿಗೆ ಸಮೀಪ ಎಂಟು ಲಕ್ಷ ಕಿಲೋ ಮೀಟರ್ ನಷ್ಟಿದೆ! ಹಾಗಿದ್ದೂ ನಮ್ಮ ಸೌರವ್ಯೂಹ ಈ ಗ್ಯಾಲಕ್ಸಿಯ ಕೇಂದ್ರವನ್ನು ಒಮ್ಮೆ ಪೂರ್ಣವಾಗಿ ಸುತ್ತಿ ಬರಲು 240 ದಶಲಕ್ಷ ವರ್ಷ ಬೇಕು! ಹಾಗೆ ಕ್ಷೀರ ಪಥ ಈ ವರೆಗೆ ಹದಿನೆಂಟು ಸುತ್ತುಗಳನ್ನು ಮುಗಿಸಿದೆ.

ಈ ಸ್ವಭ್ರಮಣವಷ್ಟೇ ಅಲ್ಲದೆ ಅಂತರಿಕ್ಷದಲ್ಲಿ ಕ್ಷೀರ ಪಥ ಪ್ರತಿ ಸೆಕಂಡ್‌ಗೆ ಆರು ನೂರು ಕಿಲೋ ಮೀಟರ್ ವೇಗದಲ್ಲಿ ‘ಓಡುತ್ತಿದೆ’ ಕೂಡ!

7. ಈ ನಮ್ಮ ಗ್ಯಾಲಕ್ಸಿಯ ‘ವಯಸ್ಸು’ ಎಷ್ಟು? ಜನಿಸಿದಾಗಿನಿಂದಲೂ ಕ್ಷೀರ ಪಥದ್ದು ಈಗಿರುವಷ್ಟೇ ಗಾತ್ರ, ವಿಸ್ತಾರ, ದ್ರವ್ಯರಾಶಿ ಹೌದೇ?

‘ಮಹಾ ಸ್ಫೋಟ’ದೊಡನೆ (ಬಿಗ್ ಬ್ಯಾಂಗ್) ನಮ್ಮ ವಿಶ್ವ ಮೈದಳೆದ ಸುಮಾರು ಮೂರು ಶತಕೋಟಿ ವರ್ಷಗಳ ನಂತರ, ಇತರ ಬಹು ಗ್ಯಾಲಕ್ಸಿಗಳ ಜೊತೆ ಜೊತೆಗೇ ನಮ್ಮ ಕ್ಷೀರ ಪಥ ಕೂಡ ಜನ್ಮ ತಳೆಯಿತು. ಹಾಗೆಂದರೆ ನಮ್ಮ ಗ್ಯಾಲಕ್ಸಿಯ ಈಗಿನ ವಯಸ್ಸು ಹನ್ನೆರಡು ಶತ ಕೋಟಿ ವರ್ಷ ಎಂಬುದು ಸ್ಪಷ್ಟ ತಾನೇ?

ಕ್ಷೀರ ಪಥ ಜನಿಸಿದಾಗಿನಿಂದಲೇ ಈಗಿರುವಷ್ಟು ಬೃಹತ್ ಗ್ಯಾಲಕ್ಸಿ ಆಗಿರಲಿಲ್ಲ. ನಿಧಾನವಾಗಿ, ಕಾಲದಿಂದ ಕಾಲಕ್ಕೆ ಈ ಗ್ಯಾಲಕ್ಸಿ ಸನಿಹದ ಇತರ ಪುಟ್ಟ ಗ್ಯಾಲಕ್ಸಿಗಳನ್ನು ತನ್ನ ಗುರುತ್ವದಿಂದ ಬರಸೆಳೆಯುತ್ತ, ತನ್ನಲ್ಲಿ ಬೆರೆಸಿಕೊಳ್ಳುತ್ತ (ಚಿತ್ರ-6) ಈಗಿನ ಸ್ಥಿತಿ ತಲುಪಿದೆ. ಹತ್ತಿರದ ‘ಉಪ ಗ್ರಹ ಗ್ಯಾಲಕ್ಸಿ’ಗಳನ್ನು (ಚಿತ್ರ-15) ಸೆಳೆದುಕೊಳ್ಳುವ ಇದೇ ಕ್ರಿಯೆಯನ್ನು ಕ್ಷೀರ ಪಥ ಈಗಲೂ ಮುಂದುವರೆಸಿದೆ. ಪ್ರಸ್ತುತ ಈ ನಮ್ಮ ಗ್ಯಾಲಕ್ಸಿ ತನ್ನ ಸಮೀಪದ ‘ಸ್ಯಾಜಿಟೇರಿಯಸ್ ಕುಬ್ಜ ಗ್ಯಾಲಕ್ಸಿ’ಯಿಂದ ನಕ್ಷತ್ರಗಳನ್ನು ಕಸಿದುಕೊಳ್ಳುತ್ತಿದೆ; ಮತ್ತೆರಡು ಉಪಗ್ರಹ ಗ್ಯಾಲಕ್ಸಿಗಳಾದ ಮ್ಯಾಜಲಾನಿಕ್ ಮೋಡಗಳಿಂದ ದ್ರವ್ಯವನ್ನು ಎಳೆದುಕೊಳ್ಳುತ್ತಿದೆ!

ವಿಪರ್ಯಾಸ ಏನೆಂದರೆ, ನಮ್ಮ ಈ ಗ್ಯಾಲಕ್ಸಿ ‘ಲೋಕಲ್ ಗ್ರೂಪ್’ನಲ್ಲೇ ಇರುವ ಮತ್ತೊಂದು ಬೃಹತ್ ಗ್ಯಾಲಕ್ಸಿಯಾದ ‘ಆಂಡ್ರೋಮೇಡಾ ಗ್ಯಾಲಕ್ಸಿ’ಯೊಡನೆ ಸಂಘರ್ಷದ ಹಾದಿಯಲ್ಲಿದೆ. ಇನ್ನು ಸುಮಾರು ನಾಲ್ಕರಿಂದ ಐದು ಶತ ಕೋಟಿ ವರ್ಷಗಳಲ್ಲಿ ಈ ಎರಡೂ ಗ್ಯಾಲಕ್ಸಿಗಳು ಪರಸ್ಪರ ಢಿಕ್ಕಿ ಹಾಕಿ ಪರಸ್ಪರ ಸಂಪೂರ್ಣ ಬೆರೆತುಹೋಗಲಿವೆ. ಆಗ ಇವೆರಡೂ ಗ್ಯಾಲಕ್ಸಿಗಳ ಪ್ರತ್ಯೇಕ ಅಸ್ತಿತ್ವ ಇಲ್ಲವಾಗಿ ‘ಮಿಲ್ಕೋಮೇಡಾ’ ಎಂಬ ಪರಮ ದೈತ್ಯ ಗ್ಯಾಲಕ್ಸಿಯೊಂದು ರೂಪುಗೊಳ್ಳಲಿದೆ!

ಎಂಥ ವಿದ್ಯಮಾನ! ಎಂಥ ಸೋಜಿಗ! ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.