ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಪ್ರಶ್ನೆ ಕೇಳಿದ ಗೋಪಾಲಯ್ಯ ನಂ.1

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ವಿಧಾನಸಭಾ ಅಧಿವೇಶನಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಅಸೋಸಿ ಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) 14ನೇ ವಿಧಾನಸಭೆಯ ಐದು ವರ್ಷಗಳ ಅವಧಿಯಲ್ಲಿ ನಡೆದ ಅಧಿವೇಶನಗಳ ವಿಶ್ಲೇಷಣೆ ನಡೆಸಿದೆ. ಇದರ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆ ಕೇಳಿರುವ ಶಾಸಕರಲ್ಲಿ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಐದು ವರ್ಷಗಳಲ್ಲಿ ಶಾಸಕರು ಸರಾಸರಿ 139 ದಿನಗಳ ಕಲಾಪಗಳಲ್ಲಿ ಭಾಗವಹಿಸಿದ್ದಾರೆ. ಕಲಾಪಗಳಲ್ಲಿ ಅತಿ ಹೆಚ್ಚು ಭಾಗವಹಿಸಿದವರಲ್ಲಿ ಮೊದಲ ಮೂವರು ಕಾಂಗ್ರೆಸ್‌ನವರು. ತುಮಕೂರು ಕ್ಷೇತ್ರದ ಶಾಸಕ ಎಸ್‌.ರಫೀಕ್‌ ಅಹಮದ್‌, ಶಿವಮೊಗ್ಗದ ಕೆ.ಬಿ.ಪ್ರಸನ್ನ ಕುಮಾರ್‌ ಹಾಗೂ ಸಿರಗುಪ್ಪದ ಬಿ.ಎಂ.ನಾಗರಾಜು ತಲಾ 211 ದಿನಗಳ ಕಲಾಪಗಳಲ್ಲಿ ಭಾಗವಹಿಸಿದ್ದಾರೆ.

ಎಡಿಆರ್‌ 224 ಶಾಸಕರ ಪೈಕಿ 208 ಶಾಸಕರಿಗೆ ಸಂಬಂಧಿಸಿದ ಮಾಹಿತಿ ವಿಶ್ಲೇಷಣೆ ನಡೆಸಿದೆ. 2018ರಲ್ಲಿ ನಡೆದ ಎರಡು ಅಧಿವೇಶನಗಳ ಮಾಹಿತಿ ಇದರಲ್ಲಿ ಸೇರಿಲ್ಲ.

‘ವರ್ಷಗಳು ಕಳೆದಂತೆ ಕಲಾಪಗಳ ಪ್ರಮಾಣ ಹಾಗೂ ಗುಣಮಟ್ಟ ಕುಸಿಯುತ್ತಿದೆ. ಶಾಸಕರು ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಲು ವಿಧಾನಸಭಾ ಅಧಿವೇಶನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆಗಳನ್ನು ಕೇಳಬೇಕು’ ಎನ್ನುತ್ತಾರೆ ಎಡಿಆರ್‌ ಸಂಸ್ಥಾಪನಾ ಸದಸ್ಯರಾಗಿರುವ ಬೆಂಗಳೂರು ಐಐಎಂನ ಪ್ರೊ.ತ್ರಿಲೋಚನಶಾಸ್ತ್ರಿ.

**

224 – ವಿಧಾನಸಭಾ ಸದಸ್ಯರ ಸಂಖ್ಯೆ
15 – ವಿಧಾನಸಭಾ ಅಧಿವೇಶನಗಳು ನಡೆದಿವೆ (2013ರ ಜುಲೈನಿಂದ 2017 ಡಿಸೆಂಬರ್‌ವರೆಗೆ)
44 ದಿನಗಳು – ವರ್ಷವೊಂದರ ‌ಸರಾಸರಿ ಅಧಿವೇಶನದ ಅವಧಿ
216 ಮಸೂದೆಗಳು ಮಂಡನೆ ಆಗಿವೆ
209 ಮಸೂದೆಗಳು ಅಂಗೀಕಾರಗೊಂಡಿವೆ
8ನೇ ಅಧಿವೇಶನವು ಅತಿ ದೀರ್ಘ ಅವಧಿಯದಾಗಿತ್ತು.
2015ರ ಜೂನ್‌ 29ರಿಂದ ನವೆಂಬರ್‌ 27ರವರೆಗೆ ಈ ಅಧಿವೇಶನ ನಡೆದಿತ್ತು. ಗರಿಷ್ಠ ಸಂಖ್ಯೆಯಲ್ಲಿ ಮಸೂದೆಗಳು ಮಂಡನೆಯಾಗಿ ಅಂಗೀಕಾರಗೊಂಡಿದ್ದು ಇದರಲ್ಲೇ. ಇದರಲ್ಲಿ 26 ಮಸೂದೆಗಳು ಮಂಡನೆಯಾಗಿ, 24ಕ್ಕೆ ಅಂಗೀಕಾರ ಸಿಕ್ಕಿತ್ತು.

**
5 ವರ್ಷಗಳಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದವರು 

ಶಾಸಕ                        ಪಕ್ಷ      ಪ್ರಶ್ನೆಗಳು

ಕೆ.ಗೋಪಾಲಯ್ಯ          ಜೆಡಿಎಸ್‌   885
ಮಲ್ಲಿಕಾರ್ಜುನ ಖೂಬಾ  ಜೆಡಿಎಸ್‌    795
ಎನ್‌.ಎ.ಹ್ಯಾರಿಸ್‌         ಕಾಂಗ್ರೆಸ್‌  750

178 – ಪ್ರತಿಯೊಬ್ಬ ಶಾಸಕರು ಕೇಳಿರುವ ಪ್ರಶ್ನೆಗಳ ಸರಾಸರಿ ಸಂಖ್ಯೆ

5 ವರ್ಷಗಳಲ್ಲಿ 208 ಶಾಸಕರು ಒಟ್ಟು 37,110 ಪ್ರಶ್ನೆಗಳನ್ನು ಕೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT