ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಭ್ರಷ್ಟಾಚಾರ: ಎಚ್.ಡಿ.ದೇವೇಗೌಡ

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯ ವಿಧಾನಸಭೆ ಅಧ್ಯಕ್ಷರು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ವಿಷಾದಿಸಿದರು.

ಜೆಡಿಎಸ್‌ ರಾಜ್ಯ ಕಾನೂನು ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸನಸಭೆ ದಿನದಿಂದ ದಿನಕ್ಕೆ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳ ವಿಧಾನಸಭೆ ಅಧ್ಯಕ್ಷರೂ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ತಮ್ಮ ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೈಪೋಟಿಯ ಭರದಲ್ಲಿ ಅವರ ವರ್ತನೆ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಭವಿಷ್ಯದಲ್ಲಿ ಇಂತಹ ವ್ಯವಸ್ಥೆಯನ್ನು ಸರಿ ಮಾಡುವುದು ಕಷ್ಟ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಾರಿಗೂ ಬಹುಮತವಿಲ್ಲ: ‘ಇಂದಿನ ಸನ್ನಿವೇಶ ಗಮನಿಸಿದರೆ ನಮ್ಮನ್ನೂ ಸೇರಿಸಿಕೊಂಡು ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲ ಆದಾಗ್ಯೂ ಏಪ್ರಿಲ್‌ 30ರವರೆಗೆ ಏನನ್ನೂ ಹೇಳಲು ಆಗುವುದಿಲ್ಲ’ ಎಂದರು.

ಸಿದ್ದರಾಮಯ್ಯಗೆ ಹಳೆ ಅಭ್ಯಾಸ : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗಳಲ್ಲಿ ಮತ್ತೊಬ್ಬರ ಮೇಲೆ ಕೈಮಾಡುವ ಪ್ರವೃತ್ತಿ ಹೊಂದಿದ ಮನುಷ್ಯ. ಈ ಹಿಂದೆ ಅನೇಕ ಬಾರಿ ನಾನೇ ಅವರನ್ನು ಆ ರೀತಿ ವರ್ತಿಸಿದಂತೆ ತಡೆದಿದ್ದೆ. ಈಗಲೂ ಅವರು ಅದೇ ರೀತಿಯ ಆಕ್ರೋಶ ವರ್ತನೆ ಪ್ರದರ್ಶಿಸುತ್ತಾರೆ’ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.

‘ಕೆ.ಎಚ್‌.ಶ್ರೀನಿವಾಸ್ ಅವರನ್ನು ಶಿವಮೊಗ್ಗದಲ್ಲಿ ಒಂದು ಬಾರಿ ಜಾತಿ ಹೆಸರು ಹಿಡಿದು ನಿಂದಿಸುತ್ತಾ ಅವರಿಗೆ ಹೊಡೆಯಲು ಹೋಗಿದ್ದರು. ಆಗ ನಾನೇ ತಡೆದಿದ್ದೆ’ ಎಂದು ಸ್ಮರಿಸಿಕೊಂಡರು.

17ರಂದು ವಕೀಲರ ಸಮಾವೇಶ : ಇದೇ 17ರಂದು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ವಕೀಲರ ಸಮಾವೇಶ ನಡೆಯಲಿದೆ ಎಂದು ರಾಜ್ಯ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದರು.

‘ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಈ ಸಮಾವೇಶದಲ್ಲಿ ಸಲಹೆ ಸೂಚನೆ ಪಡೆಯಲಾಗುವುದು’ ಎಂದರು.

‘ಕೊಡಲು ನನ್ನ ಬಳಿ ಏನೂ ಇಲ್ಲ...!’
‘ಯಾರಿಗೂ ಏನೂ ಕೊಡೊ ಶಕ್ತಿ ಇಲ್ಲ. ನಿಮ್ಮ ಮಾಲೀಕರಿಗೆ ಕೊಡಲೂ ನನ್ನ ಬಳಿ ಶಕ್ತಿ ಇಲ್ಲ. ಬೇಜಾರು ಮಾಡ್ಕೊಬೇಡಿ. ಕಾಫಿ ಕುಡ್ಕೊಂಡು ಹೋಗ್ರಪ್ಪಾ...’

ಜೆಡಿಎಸ್‌ನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಹೇಳಿದ ದೇವೇಗೌಡ  ‘ನಿಮ್ಮ ಸಹಕಾರ ಇಲ್ಲದೇ ನಾನು ಏನೂ ಮಾಡಲು ಆಗುವುದಿಲ್ಲ’ ಎಂದರು!

‘ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಚಿಕ್ಕಬಳ್ಳಾಪುರದಿಂದ ಒಂದೈವತ್ತು ಜನ ಕಾಂಗ್ರೆಸ್‌ನವರು ಜೆಡಿಎಸ್‌ ಸೇರಲು ಬರ್ತಿದ್ದಾರೆ. ಸ್ವಲ್ಪ ಇರಿ. ನೋಡ್ಕೊಂಡು ಹೋಗಿ’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು.

ದೇವೇಗೌಡರ ಕಾರು ತಡೆದು ಪ್ರತಿಭಟನೆ
ಬೆಂಗಳೂರು:
‘ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ನೀಡಬೇಕು’ ಎಂದು ಒತ್ತಾಯಿಸಿ ‘ಪ್ರಜ್ವಲ್‌ ಬ್ರಿಗೇಡ್‌’ ಕಾರ್ಯಕರ್ತರು  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಾರಿಗೆ ಶನಿವಾರ ತಡೆ ಒಡ್ಡಿದರು. ಪದ್ಮನಾಭ ನಗರದ ನಿವಾಸದಿಂದ ಹೊರ ಹೋಗದಂತೆ ಅಡ್ಡಿ‍ಪಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರೂ ಸೇರಿದಂತೆ ನೂರಾರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಆರ್.ಆರ್.ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದೀರಿ ಎಂಬ ಮಾತಿದೆ. ಹೀಗಾಗದಂತೆ ನೋಡಿಕೊಳ್ಳಿ. ಡಮ್ಮಿ ಅಭ್ಯರ್ಥಿ ಹಾಕಿ ಕಾಂಗ್ರೆಸ್‌ನ ಮುನಿರತ್ನ ಗೆಲ್ಲುವಂತೆ ಮಾಡಿದರೆ ಸುಮ್ಮನಿರೋದಿಲ್ಲ’ ಎಂದು ಎಚ್ಚರಿಸಿದರು.

ಬಿಬಿಎಂಪಿ ಸದಸ್ಯೆ ಮಂಜುಳಾ ಪತಿ ಲಗ್ಗೆರೆ ನಾರಾಯಣ ಸ್ವಾಮಿ ಮಾತನಾಡಿ, ‘ಪ್ರಜ್ವಲ್‌ಗೆ ಟಿಕೆಟ್‌ ಕೊಡಲೇಬೇಕು. ಇಲ್ಲದಿದ್ದರೆ ಇಲ್ಲೇ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.

‘ಇದೇ 13 ರಂದು ಆರ್.ಆರ್.ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರು ಘೋಷಿಸಬೇಕೆಂದು ಆಗ್ರಹಿಸಿದರು. ಆದರೆ ದೇವೇಗೌಡರು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ ಕಾರಿನಲ್ಲಿ ಹೊರಟು ಹೋದರು.

‘ನೀತಿ ಸಂಹಿತೆ ಇದೆ ಗಲಾಟೆ ಮಾಡಬೇಡಿ’ ಎಂದು ಪೊಲೀಸರು ಅವರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿದರು. ದೇವೇಗೌಡರು ಹೊರಟ ನಂತರವೂ ಅಭಿಮಾನಿಗಳು ಸ್ವಲ್ಪ ಹೊತ್ತು ಪ್ರತಿಭಟನೆ ಮುಂದುವರಿಸಿ ನಂತರ ಚದುರಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಇದೇ 13 ರಂದು ಪ್ರಕಟಿಸುವುದಾಗಿ ದೇವೇಗೌಡ ಈಗಾಗಲೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT