ಬಿರುಗಾಳಿ ಸಹಿತ ಮಳೆ: ನೆಲಕಚ್ಚಿದ ಭತ್ತದ ಫಸಲು

ಸೋಮವಾರ, ಮಾರ್ಚ್ 25, 2019
33 °C

ಬಿರುಗಾಳಿ ಸಹಿತ ಮಳೆ: ನೆಲಕಚ್ಚಿದ ಭತ್ತದ ಫಸಲು

Published:
Updated:
ಬಿರುಗಾಳಿ ಸಹಿತ ಮಳೆ: ನೆಲಕಚ್ಚಿದ ಭತ್ತದ ಫಸಲು

ಕಲಬುರ್ಗಿ: ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಬಿರುಗಾಳಿ, ಗುಡುಗು ಸಹಿತ  ಮಳೆಯಾಗಿದ್ದು, ಸಿಡಿಲಿಗೆ 12 ಜಾನುವಾರುಗಳು ಮೃತಪಟ್ಟಿವೆ. ಅಲ್ಲದೇ ಕೆಲವೆಡೆ ಬೆಳೆಗೂ ಹಾನಿಯಾಗಿದೆ.

ಅಫಜಲಪುರ ತಾಲ್ಲೂಕಿನಲ್ಲಿ 4, ಕಮಲಾಪುರದಲ್ಲಿ 2 ಎತ್ತುಗಳು ಮೃತಪಟ್ಟಿವೆ. ಚಿಂಚೋಳಿ ಮತ್ತು ಆಳಂದ ತಾಲ್ಲೂಕುಗಳಲ್ಲಿ ಜೋಳ, ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಚಿಂಚೋಳಿ ತಾಲ್ಲೂಕು ಗೊಣಗಿಯಲ್ಲಿ ದಯಾನಂದ ಪಾಟೀಲ ಅವರಿಗೆ ಸೇರಿದ ಪಾಲಿ ಹೌಸ್ ಗಾಳಿಯ ರಭಸಕ್ಕೆ ಕಿತ್ತು ಹೋಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನಲ್ಲಿ 6 ಕುರಿ, 1 ಮೇಕೆ ಮತ್ತು 2 ಹಸು ಬಲಿಯಾಗಿವೆ. ಶಕ್ತಿನಗರ ಸಮೀಪದ ಸಿಂಗನೋಡಿಯಲ್ಲಿ ಭತ್ತದ ಪೈರು ನೆಲಕ್ಕುರುಳಿದೆ. ಮನೆಯೊಂದರ ಟಿನ್‌ಶೆಡ್‌ ಹಾರಿ ಹೋಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಜರಕುಂಟಿಯಲ್ಲಿ 2 ಎತ್ತುಗಳು ಮೃತಪಟ್ಟಿವೆ. ಕುಷ್ಟಗಿ ತಾಲ್ಲೂಕು ಲಿಂಗದಹಳ್ಳಿಯಲ್ಲಿ ಸಿಡಿಲಿಗೆ ಮೇವಿನ ಬಣವೆ ಸುಟ್ಟುಹೋಗಿದೆ.

ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಎಕರೆಯಲ್ಲಿ ಭತ್ತದ ಬೆಳೆ ನೆಲ ಕಚ್ಚಿದೆ. ವಡಗೇರಾ ತಾಲ್ಲೂಕಿನ ಕೋನಹಳ್ಳಿಯಲ್ಲಿ ಎತ್ತು ಸಿಡಿಲಿಗೆ ಬಲಿಯಾಗಿದೆ. ಅಲ್ಲದೇ ಇಬ್ಬರಿಗೆ ಗಾಯಗಳಾಗಿವೆ. ಹುಣಸಗಿ ತಾಲ್ಲೂಕು ಗೆದ್ದಲಮರಿಯಲ್ಲಿ ಹಸು ಸತ್ತಿದೆ.

ಗದಗ ಜಿಲ್ಲೆಯ ಗಜೇಂದ್ರಗಡ, ನರೇಗಲ್‌ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶನಿವಾರ ಸಂಜೆ ಮಳೆಯಾಗಿದೆ.

ಹುನಗುಂದಲ್ಲಿ 5ಸೆಂ.ಮೀ. ಮಳೆ

ಬೆಂಗಳೂರು:
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ದಾಖಲಾಗಿದೆ.

ಹುನಗುಂದದಲ್ಲಿ 5ಸೆಂ.ಮೀ, ತಾಳಿಕೋಟೆ, ದೇವರಹಿಪ್ಪರಗಿ, ಚಿತ್ತಾಪುರ, ನಾರಾಯಣಪುರ, ದೇವದುರ್ಗದಲ್ಲಿ ತಲಾ 2 ಸೆಂ.ಮೀ ಹಾಗೂ ಬಾಗೇವಾಡಿ, ಕಮಲಾಪುರ, ಮುದ್ಗಲ್‌ನಲ್ಲಿ ತಲಾ 1ಸೆಂ.ಮೀ ಮಳೆ ದಾಖಲಾಗಿದೆ. ಕಲಬುರ್ಗಿಯಲ್ಲಿ 39.0 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಒಳನಾಡು ಹಾಗೂ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸುರೇಬಾನ ಹೋಬಳಿಯ ಚಿಕ್ಕೊಪ್ಪ ಎಸ್‌.ಕೆ ಗ್ರಾಮದಲ್ಲಿ, ಶನಿವಾರ ಬೆಳಿಗ್ಗೆ ಸಿಡಿಲು ಬಡಿದು ಲಚ್ಚಪ್ಪ ನಿಂಗಪ್ಪ ಕಳಸದ (62) ಎಂಬ ಕುರಿಗಾಹಿ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry