ಶುಕ್ರವಾರ, ಡಿಸೆಂಬರ್ 13, 2019
19 °C
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭಕ್ಕೆ ಮರುಗು ತುಂಬಿದ ಹಾಡು – ನೃತ್ಯ

ಚುಟುಕು ಕ್ರಿಕೆಟ್ ಸಂಭ್ರಮಕ್ಕೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಚುಟುಕು ಕ್ರಿಕೆಟ್ ಸಂಭ್ರಮಕ್ಕೆ ಚಾಲನೆ

ಮುಂಬೈ: ಕ್ರೀಡಾಂಗಣವನ್ನು ಆವರಿಸಿದ ಬಣ್ಣಬಣ್ಣದ ಬೆಳಕು, ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ–ನಟಿಯರು. ಹಾಡು, ನೃತ್ಯದ ರೋಮಾಂಚನದಲ್ಲಿ ಮಿಂದೆದ್ದ ಪ್ರೇಕ್ಷಕರು. ಇಂಥ ಸಂಭ್ರಮದ ಕಾರ್ಯಕ್ರಮದಲ್ಲಿ ಇಂಡಿಯನ್‌ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 11ನೇ ಆವೃತ್ತಿಗೆ ಚಾಲನೆ ನೀಡಲಾಯಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟನಾ ಪಂದ್ಯಕ್ಕೂ ಮೊದಲು ಸಂಜೆ ನಡೆದ ಕಾರ್ಯಕ್ರಮ ಒಂದೂವರೆ ತಾಸು ಕಾಲ ಪ್ರೇಕ್ಷಕರನ್ನು ರಂಜಿಸಿತು.

ಹಸಿರು ಅಂಗಣವನ್ನು ವಿವಿಧ ಬಣ್ಣಗಳ ಬಗೆ ಬಗೆಯ ಆಕೃತಿಗಳಿಂದ ಸಿಂಗರಿಸಲಾಗಿತ್ತು. ಮುಂಬೈ ಇಂಡಿಯನ್ಸ್ ತಂಡದ ಜರ್ಸಿಯನ್ನು ಹೋಲುವ ನೀಲಿ ಬಣ್ಣ ಮಧ್ಯದಲ್ಲಿ ಮೇಳೈಸಿತ್ತು. ಅದಕ್ಕೆ ಕೆಂಪು ಬಣ್ಣದ ಪಟ್ಟಿಗಳು ಇದ್ದವು. ಮಧ್ಯದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿತ್ತು. ನಿರಂತರ ನೃತ್ಯದ ಮೂಲಕ ಕಲಾವಿದರು ರಂಜಿಸಿದಾಗ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರ ಮೈ–ಮನ ತಣಿಯಿತು.

ಮೊಳಗಿದ ಡ್ರಮ್‌; ರಂಜಿಸಿದ ಧವನ್‌: ಆರಂಭದಲ್ಲಿ ಬಣ್ಣಬಣ್ಣದ ಡ್ರಮ್‌ಗಳೊಂದಿಗೆ ಬಂದ ಕಲಾವಿದರು ವಾದ್ಯಮೇಳದ ಸವಿಯುಣಿಸಿದರು. ಅಷ್ಟರಲ್ಲಿ ವೇದಿಕೆಗೆ ಬಂದ ನಟ ವರುಣ್‌ ಧವನ್‌ ನೃತ್ಯದ ಮೂಲಕ ಕಳೆ ತುಂಬಿದರು. ಕೆಂಪು, ಬಿಳಿ ಮತ್ತು ಹಳದಿ ಬಣ್ಣದ ಪೋಷಾಕು ತೊಟ್ಟ ಕಲಾವಿದರು ಅಂಗಣದ ಪೂರ್ತಿ ನೃತ್ಯ ಮಾಡುವುದರೊಂದಿಗೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ವರುಣ್‌ ಜೊತೆ ಪ್ರಭುದೇವ ಕೂಡ ಸೇರಿದಾಗ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರವಾಯಿತು. ಬಾಲಿವುಡ್‌ ಗಾಯಕ ಮಿಕಾ ಸಿಂಗ್‌ ವೇದಿಕೆ ಮೇಲೆ ನಿಂತು ಹಾಡಲು ಆರಂಭಿಸಿದಾಗ ಕ್ರೀಡಾಂಗಣದ ವಿವಿಧ ಭಾಗಗಳಲ್ಲಿ ಗುಂಪುಗಳಾಗಿ ಸೇರಿದ್ದ ಕಲಾವಿದರ ನೃತ್ಯ ಜೋರಾಯಿತು. ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಹೂವಿನ ಪಲ್ಲಕ್ಕಿಯಲ್ಲಿ ಬಂದಿಳಿದ ಜಾಕ್ವೆಲಿನ್‌ ಫರ್ನಾಂಡೀಸ್‌: ಕ್ರೀಡಾಂಗಣದ ಒಂದು ತುದಿಯ ಮೂಲಕ ಕೆಂಪು ಗುಲಾಬಿಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಕರೆತರಲಾಯಿತು. ಪಲ್ಲಕ್ಕಿಯಿಂದ ಇಳಿದು ವೇದಿಕೆ ಏರಿದ ಅವರು ನೃತ್ಯಕ್ಕೆ ರಂಗು ತುಂಬಿದರು. ಮತ್ತೊಂದು ತುದಿಯಿಂದ ಹೃತಿಕ್‌ ರೋಷನ್‌ ಕೂಡ ನರ್ತಿಸಲು ಆರಂಭಿಸಿದಾಗ ಕಾರ್ಯಕ್ರಮ ಇನ್ನಷ್ಟು ಕಳೆಗಟ್ಟಿತು.

ಪ್ರತಿಕ್ರಿಯಿಸಿ (+)