‘ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರ ಸುರಕ್ಷಿತವಲ್ಲ’

7
ಚರ್ಚೆಗೆ ಗ್ರಾಸವಾದ ‘ಗುಪ್ತ’ಚರ ಪತ್ರ!

‘ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರ ಸುರಕ್ಷಿತವಲ್ಲ’

Published:
Updated:

‌ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರ ಸುರಕ್ಷಿತವಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗುಪ್ತಚರ ಇಲಾಖೆ ಹೆಸರಿನಲ್ಲಿರುವ ಪತ್ರವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

‘ಅದೊಂದು ನಕಲಿ ಪತ್ರ’ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ. ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ‘ಸಿದ್ದರಾಮಯ್ಯ ಅವರು ಚುನಾವಣೆ ಘೋಷಣೆಯಾದ ನಂತರವೂ ಗುಪ್ತಚರ ವಿಭಾಗದಿಂದ ತಾವು ಸ್ಪರ್ಧಿಸಬಹುದಾದ ಕ್ಷೇತ್ರಗಳ ಬಗ್ಗೆ ವರದಿ ಪಡೆದಿದ್ದಾರೆ. ಹೀಗೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ’ ಎಂದು ಹೇಳಿದ್ದಾರೆ.

ಪತ್ರದಲ್ಲಿ ಹೀಗಿದೆ: ‘ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಅಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಹಾಗೂ ಸ್ಥಳೀಯ ಮುಖಂಡರು ಜಾತಿ ಸಮೀಕರಣಕ್ಕೆ ಮುಂದಾಗಿದ್ದಾರೆ. ಹೀಗಾಗಿ, ತಾವು ಆ ಕ್ಷೇತ್ರದಿಂದ ಸ್ಪರ್ಧಿಸುವುದು ಸುರಕ್ಷಿತವಲ್ಲ’ ಎಂದು ಮುಖ್ಯಮಂತ್ರಿಯನ್ನು ಉದ್ದೇಶಿಸಿ ಪತ್ರದಲ್ಲಿ ಹೇಳಲಾಗಿದೆ.

‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪರ್ಯಾಯವಾಗಿ ಸದ್ಯ ನೀವು ಪ್ರತಿನಿಧಿಸುತ್ತಿರುವ ವರುಣಾ, ಬೀದರ್‌ನ ಬಸವಕಲ್ಯಾಣ, ಕೊಪ್ಪಳದ ಗಂಗಾವತಿ ಹಾಗೂ ಬೆಂಗಳೂರಿನ ಶಾಂತಿನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಿ’ ಎಂಬ ಸಲಹೆಯನ್ನೂ ನೀಡಲಾಗಿದೆ. ಆ ಪತ್ರದ ಪ್ರತಿಗಳನ್ನು ಏಪ್ರಿಲ್ 5ರಂದು ಮುಖ್ಯಮಂತ್ರಿ ಹಾಗೂ ಗೃಹಸಚಿವರ ಕಾರ್ಯಾಲಯಕ್ಕೆ ಕಳುಹಿಸಿರುವುದಾಗಿ ಅದರಲ್ಲಿ ಹೇಳಲಾಗಿದೆ.

ಪತ್ರವೇ ‌ಎಲ್ಲವನ್ನೂ ಹೇಳುತ್ತದೆ

‘ಗುಪ್ತಚರ ಇಲಾಖೆಯಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿಯೇ ಇಲ್ಲ. ಆದರೆ, ಪತ್ರದಲ್ಲಿ ಎಡಿಜಿಪಿ ಹೆಸರಿನಲ್ಲಿ ಸಹಿ ಇದೆ. ಜತೆಗೆ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಮುದ್ರೆಯನ್ನು ಹಾಕಲಾಗಿದೆ. ಮೇಲಾಗಿ, ಇಂಥ ಸೂಕ್ಷ್ಮ ವಿಚಾರಗಳನ್ನು ಅಧಿಕಾರಿಗಳು ಲಿಖಿತ ರೂಪದಲ್ಲಿ ಹೇಳುವುದಿಲ್ಲ. ನೇರವಾಗಿ ಡಿಜಿ–ಐಜಿಪಿ ಅವರನ್ನು ಭೇಟಿಯಾಗಿ, ಅವರ ಮೂಲಕ ಮೌಖಿಕವಾಗಿ ಮುಖ್ಯಮಂತ್ರಿಗೆ ಸುದ್ದಿ ಮುಟ್ಟಿಸುತ್ತಾರೆ. ಪ್ರತಿಗಳನ್ನು ಯಾವತ್ತೂ ಗೃಹ ಸಚಿವರ ಕಚೇರಿಗೆ ಕಳುಹಿಸುವುದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಪ್ತಚರ ಇಲಾಖೆಯ ವಿಳಾಸವನ್ನೂ ಅದರಲ್ಲಿ ತಪ್ಪಾಗಿ ಬರೆಯಲಾಗಿದೆ. ಹೈಗ್ರೌಂಡ್ಸ್ ಸಮೀಪದ ಸಂಪಂಗಿರಾಮನಗರದಲ್ಲಿ ಕಚೇರಿ ಇರುವುದಾಗಿ ಹೇಳಲಾಗಿದೆ. ಅದೊಂದು ಕಲ್ಪಿತ ಪತ್ರ ಎಂಬುದನ್ನು ಈ ಅಂಶಗಳೇ ಹೇಳುತ್ತವೆ’ ಎಂದು ಅವರು ಹೇಳಿದರು.

**

ಎಫ್‌ಐಆರ್ ದಾಖಲು

‌‘ಇಲಾಖೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ಸುಳ್ಳು ವರದಿ ಸೃಷ್ಟಿಸಿದ್ದಾರೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದೇವೆ. ಪೊಲೀಸರು ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ’ ಎಂದು ಗುಪ್ತಚರ ಇಲಾಖೆ ಡಿಜಿಪಿ ಎ.ಎಂ.ಪ್ರಸಾದ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry