ಶುಕ್ರವಾರ, ಡಿಸೆಂಬರ್ 6, 2019
25 °C

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಚ: ಖಚಿತ ಸುಳಿವು ನೀಡಿದ ರಾಹುಲ್

Published:
Updated:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಚ: ಖಚಿತ ಸುಳಿವು ನೀಡಿದ ರಾಹುಲ್

ಬೆಂಗಳೂರು: ಕಾಂಗ್ರೆಸ್ ಮತ್ತೆ ಆಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳಿವು ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಅನೌಪಚಾರಿಕವಾಗಿ ಅವರು ಚರ್ಚೆ ನಡೆಸಿದರು.

ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾದಾಗ ನಗುತ್ತಲೇ ಪ್ರತಿಕ್ರಿಯಿಸಿದ ಅವರು, ‘ಜನನಾಯಕರಾದವರು ಹಾಗೂ ಜನ ಅಪೇಕ್ಷಿಸಿದವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ' ಎಂದು ಸಿದ್ದರಾಮಯ್ಯ ಅವರತ್ತ ಕೈತೋರಿಸಿದರು.

ಕಾಂಗ್ರೆಸ್‌ನ ಹಲವು ದಿಗ್ಗಜ ನಾಯಕರು ಜತೆಗಿದ್ದರೂ ಜನನಾಯಕ ಎಂಬ ಪ್ರಸ್ತಾಪದೊಂದಿಗೆ ಸಿದ್ದರಾಮಯ್ಯ ಅವರತ್ತ ರಾಹುಲ್ ನೋಟ ಹರಿಸಿದ್ದು ಅವರ ಮನಸ್ಸಿನಲ್ಲೇನಿದೆ ಎಂದು ಪ್ರತಿಬಿಂಬಿಸುವಂತಿತ್ತು.

ರಾಹುಲ್ ಇಷ್ಟು ಹೇಳುವಾಗ ಸಿದ್ದರಾಮಯ್ಯ ಪಕ್ಕದ ಟೇಬಲ್‌ನಲ್ಲಿ ಕುಳಿತು ಕೆಲವು ಪತ್ರಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಲೋಕಾಭಿರಾಮ ಹರಟೆಯಲ್ಲಿದ್ದರು.

ಈ ನಡುವೆ ಮತ್ತೊಂದು ಹಂತದಲ್ಲಿ ಮುಂದಿನ ಮುಖ್ಯ ಮಂತ್ರಿ ಯಾರು ಎನ್ನುವುದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರವಾಗುತ್ತದೆ ಎಂದು ರಾಹುಲ್ ಹೇಳಿದರು.

ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಅಧಿಕಾರ ಹಿಡಿಯುವುದರಲ್ಲಿ ಅನುಮಾನ ಬೇಡ. ಸಮರ್ಥ ನಾಯಕತ್ವ ಹಾಗೂ ಸದೃಢ ಸಂಘಟನೆ ಕಾಂಗ್ರೆಸ್‌ನಲ್ಲಿದೆ. ಆಡಳಿತ ವಿರೋಧಿ ಅಲೆಯ ಇಲ್ಲ ಎನ್ನುವುದು ಜನಾಶೀರ್ವಾದ ಯಾತ್ರೆಯಿಂದ ಅರಿವಾಗಿದೆ ಎಂದರು.

ಧರ್ಮ ಒಡೆಯುವ ಕೆಲಸ ಮಾಡಿಲ್ಲ

ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿಲ್ಲ. ಇದರಿಂದ ರಾಜಕೀಯ ಲಾಭ ಪಡೆಯುವ ಉದ್ದೇಶವೂ ಇಲ್ಲ. ಈ ಬಾರಿಯ ಚುನಾವಣೆ ಆರ್‌ಎಸ್‌ಎಸ್ ಮತ್ತು ಕಾಂಗ್ರೆಸ್ ನಡುವಿನ ಸೈದ್ಧಾಂತಿಕ ಸಂಘರ್ಷವಾಗಿದೆ. ನಾಗಪುರದವರು ಬಿಜೆಪಿಯನ್ನು ನಿಯಂತ್ರಿಸುತ್ತಿದ್ದು, ಒಡೆಯುವುದು ಅವರ ನೀತಿಯಾಗಿದೆ. ಕೂಡಿಸುವುದು ಕಾಂಗ್ರೆಸ್‌ನ ಸಿದ್ಧಾಂತ. ಈ ಯುದ್ಧದಲ್ಲಿ ಜಯಿಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಜೆಡಿಎಸ್ ತನ್ನ ನಿಲುವು ಸ್ಪಷ್ಟ ಪಡಿಸಲಿ ಎಂದು ರಾಹುಲ್ ಹೇಳಿದರು.

ಕಾಂಗ್ರೆಸ್‌ನಲ್ಲಿ ಕೆಲವರು 2 ಕ್ಷೇತ್ರಗಳಿಂದ ಸ್ಪರ್ಧಿಸಲು ಇಚ್ಛಿಸಿರುವ ಮಾಹಿತಿಯಿದೆ ಎಂದು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ರಾಹುಲ್  ‘ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದವರು 2 ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿಲ್ಲ’ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಪಕ್ಕ ಕರೆದು, ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರಾದರೂ 2 ಕ್ಷೇತ್ರಗಳ ಟಿಕೆಟ್ ಕೇಳಿದ್ದಾರಾ? ಎಂದು ವಿಚಾರಿಸಿಕೊಂಡರು. ಇಲ್ಲ ಎನ್ನುವುದು ವೇಣುಗೋಪಾಲ್ ಉತ್ತರವಾಗಿತ್ತು.

ಜಿಗ್ನೇಶ್ ಮೇವಾನಿ ಹೇಳಿಕೆಗೆ ಖಂಡನೆ

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ. ಕುರ್ಚಿಗಳನ್ನು ಎಸೆಯಿರಿ ಎಂಬ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಇಂಥ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಇದು ಉತ್ತಮ ಅಭಿರುಚಿಯಿಂದ ಕೂಡಿದ ನಡವಳಿಕೆಯಲ್ಲ. ಜಿಗ್ನೇಶ್ ಈ ರೀತಿ ಹೇಳಿರುವುದು ದುರದೃಷ್ಟಕರ ಮತ್ತು ಖಂಡನೀಯ ಎಂದರು.

ಪ್ರತಿಕ್ರಿಯಿಸಿ (+)