ಭಾನುವಾರ, ಡಿಸೆಂಬರ್ 8, 2019
21 °C

ಹಣಕ್ಕೆ ಬೇಡಿಕೆ ಇಟ್ಟ ಆಡಿಯೊ ಸಿಡಿ ಬಿಡುಗಡೆ ಮಾಡಿದ ಶಾಸಕ ಸುರೇಶ್‌ಬಾಬು

Published:
Updated:
ಹಣಕ್ಕೆ ಬೇಡಿಕೆ ಇಟ್ಟ ಆಡಿಯೊ ಸಿಡಿ ಬಿಡುಗಡೆ ಮಾಡಿದ ಶಾಸಕ ಸುರೇಶ್‌ಬಾಬು

ತುಮಕೂರು: ಖಾಸಗಿ ವಾಹಿನಿ ಬಿ.ಟಿವಿಯು ತಮ್ಮ ವಿರುದ್ಧ ಹುರುಳಿಲ್ಲದ ವರದಿ ಪ್ರಸಾರ ಮಾಡಿ ತೆಜೋವದೆ ಮಾಡಿದೆ ಎಂದು  ಶುಕ್ರವಾರ ಚಿಕ್ಕನಾಯಕನಹಳ್ಳಿಯಲ್ಲಿ ಆರೋಪಿಸಿದ್ದ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ವಾಹಿನಿಯ ಜಿಲ್ಲಾ ವರದಿಗಾರ ಹಣ ಕೇಳಿದ ಆಡಿಯೊ ಸಿಡಿಯನ್ನು ಭಾನುವಾರ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಖಾಸಗಿ ವಾಹಿನಿ ಬಿ.ಟಿವಿಯು ತನ್ನ 'ಕುರುಕ್ಷೇತ್ರ' ಕಾರ್ಯಕ್ರಮದಲ್ಲಿ ನನ್ನ ಪರವಾಗಿ ಸುದ್ದಿ ಮಾಡಲು ₹ 3 ಲಕ್ಷ ಹಣ ಕೇಳಿತ್ತು. ಹಣ ನೀಡಲು ನಿರಾಕರಿಸಿದ್ದಕ್ಕೆ ನನ್ನ ವಿರುದ್ಧ ಹುರುಳಿಲ್ಲದ ವರದಿ ಪ್ರಸಾರ ಮಾಡಿ ತೇಜೋವಧೆ ಮಾಡಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

'ವಾಹಿನಿಯ ಪರವಾಗಿ ವರದಿಗಾರ ವಾಗೀಶ್ ಅವರು ಹಣಕ್ಕೆ ಬೇಡಿಕೆ ಇಟ್ಟ ಆಡಿಯೊ ಇರುವುದರಿಂದ ಈ ಕುರಿತು ಚುನಾವಣಾ ಆಯೋಗಕ್ಕೆ ಮತ್ತು ಪತ್ರಕರ್ತರ ಸಂಘಕ್ಕೆ ದೂರು ಸಲ್ಲಿಸಲಾಗುವುದು. ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಲಾಗುವುದು’ ಎಂದು ತಿಳಿಸಿದರು.

‘ನೀತಿ ಸಂಹಿತೆ ಜಾರಿಗೂ ಮುನ್ನವೇ ಒಂದು ದಿನ ತುಮಕೂರು ಪ್ರವಾಸಿ ಮಂದಿರದಲ್ಲಿ ನಾನಿದ್ದಾಗ ವಾಹಿನಿಯ ವರದಿಗಾರ ಬಂದು ಭೇಟಿ ಮಾಡಿದ್ದರು. ಕುರುಕ್ಷೇತ್ರದ ಕಾರ್ಯಕ್ರಮದಲ್ಲಿ ನಿಮ್ಮ ಪರವಾಗಿ ಸುದ್ದಿ ಮಾಡುತ್ತೇವೆ. ಅಭಿವೃದ್ಧಿಯ ಹರಿಕಾರರು ಎಂದು ಬಿಂಬಿಸುತ್ತೇವೆ. ₹ 3 ಲಕ್ಷ ಹಣ ಕೊಡಬೇಕು. ಇದು ಒಂದು ರೀತಿಯ ವಾಣಿಜ್ಯ ದೃಷ್ಟಿಕೋನದಿಂದ ವಾಹಿನಿಯು ಮಾಡುತ್ತಿರುವ ಕಾರ್ಯಕ್ರಮ ಎಂದು ವಿವರಿಸಿದ್ದರು ಎಂದು ಹೇಳಿದರು.

‘ಗುಬ್ಬಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ಈ ತರಹ ಅಭ್ಯರ್ಥಿಗಳ ಪರವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಗೌರಿಶಂಕರ್ ಅವರಿಗೂ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದೆ. ಅವರು ಒಪ್ಪಿರಲಿಲ್ಲ. ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪರ ಕಾರ್ಯಕ್ರಮ ಮಾಡಲು ಕೇಳಿದ್ದೆ. ಒಪ್ಪದೇ ಇದ್ದುದರಿಂದ ಆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ದಿಲೀಪ್ ಅವರ ಪರವಾಗಿ ಕಾರ್ಯಕ್ರಮ ಮಾಡಿದೆವು ಎಂದು ನನಗೆ ವಿವರಿಸಿದ್ದರು. ಅದೆಲ್ಲವೂ ಆಡಿಯೊ ರಿಕಾರ್ಡ್‌ನಲ್ಲಿದೆ’ ಎಂದು ತಿಳಿಸಿದರು.

‘ಶಾಸಕರಾದ ಸುರೇಶ್‌ಬಾಬು, ಶ್ರೀನಿವಾಸ್, ಕೆ.ಷಡಕ್ಷರಿ ಅವರ ಪರವಾಗಿ ಕುರುಕ್ಷೇತ್ರಕ್ಕೆ ಕಾರ್ಯಕ್ರಮ ಮಾಡಲು ವಾಹಿನಿಯ ಮುಖ್ಯಸ್ಥರೇ ಸೂಚಿಸಿದ್ದಾರೆ. ಹೀಗಾಗಿ ನಿಮ್ಮ ಬಗ್ಗೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾರ್ಯಕ್ರಮ ಮಾಡುತ್ತೇವೆ ಎಂದು ವರದಿಗಾರ ತಿಳಿಸಿದ್ದರು’ ಎಂದು ಸುರೇಶ್‌ಬಾಬು ಹೇಳಿದರು.

‘ಈ ರೀತಿಯ ಕಾರ್ಯಕ್ರಮ ಮಾಡುವುದಕ್ಕೆ ನಾನು ಸ್ಪಂದಿಸದೇ ಇದ್ದಾಗ ನನ್ನ ವಿರುದ್ಧ ಬಿ.ಟಿವಿ ವರದಿ ಪ್ರಸಾರ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಸಲ್ಲದ ಆರೋಪಗಳನ್ನು ಮಾಡಿ ಧಕ್ಕೆ ತಂದಿದೆ. 1975ರಿಂದ ನಮ್ಮ ತಂದೆಯವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ರಾಜಕಾರಣ ಮಾಡಿದ್ದಾರೆ. ಅವರ ಬಳಿಕ ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಮಾಜ ಸೇವೆಯ ರೀತಿ ಕ್ಷೇತ್ರದಲ್ಲಿ ರಾಜಕೀಯ ಮಾಡಿಕೊಂಡು ಬಂದ ಕುಟುಂಬ ನಮ್ಮದು. ಅದಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಬಿ.ಟಿವಿ ಮಾಡಿದೆ’ ಎಂದು ಆರೋಪಿಸಿದರು.

ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ, ಗುಬ್ಬಿ ಶಾಸಕ ಶ್ರೀನಿವಾಸ್, ಜಿಲ್ಲಾ ವಕ್ತಾರ ಮಧುಸೂದನ ಹಾಗೂ ಪಕ್ಷದ ಮುಖಂಡರು ಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)