7

ಪದಕ ಬಾಚಿಕೊಳ್ಳಲು ಅಖಾಡ ಸಜ್ಜು

Published:
Updated:
ಪದಕ ಬಾಚಿಕೊಳ್ಳಲು ಅಖಾಡ ಸಜ್ಜು

ಸ್ಕಾ ಟ್ಕೆಂಡ್‌ನ ಗ್ಲಾಸ್ಗೊದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಭಾರತ 15 ಚಿನ್ನದ ಪದಕಗಳನ್ನು ಜಯಿಸಿತ್ತು. ಇದರಲ್ಲಿ ಮೂರನೇ ಒಂದು ಭಾಗದಷ್ಟು ಪದಕಗಳನ್ನು ಕುಸ್ತಿಪಟುಗಳು ಎದುರಾಳಿಗಳನ್ನು ‘ಚಿತ್‌’ ಮಾಡಿ ತಂದಿತ್ತಿದ್ದರು.

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಂಡಿರುವ ಕುಸ್ತಿಪಟುಗಳಿಂದ ಅಂತಹದೇ ಸಾಧನೆಯನ್ನು ನಿರೀಕ್ಷಿಸಲಾಗಿದೆ. ಏಪ್ರಿಲ್ 12 ರಿಂದ 14ರವರೆಗೆ ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು, ಈ ಮೂರು ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ 12 ವಿಭಾಗಗಳಲ್ಲಿ ಪೈಪೋಟಿ ಆಯೋಜಿಸಲಾಗಿದೆ. ಕಳೆದ ಬಾರಿ 14 ವಿವಿಧ ದೇಹತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು.

ಗ್ಲಾಸ್ಗೊದಲ್ಲಿ ಐದು ಚಿನ್ನ, ಆರು ಬೆಳ್ಳಿ ಮತ್ತು ಎರಡು ಕಂಚು ಸೇರಿ ಒಟ್ಟು 13 ಪದಕಗಳನ್ನು ಭಾರತ ಗೆದ್ದುಕೊಂಡಿತ್ತು. 14 ವಿಭಾಗಗಳಲ್ಲಿ 13ರಲ್ಲೂ ಪದಕ ದೊರೆತಿತ್ತು. ಈ ಬಾರಿ ಎಲ್ಲ 12 ವಿಭಾಗಗಲ್ಲಿ ಪದಕ ನಿರೀಕ್ಷಿಸಲಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಚಿನ್ನ ಗೆಲ್ಲಲು ತಯಾರಿ ನಡೆದಿದೆ.

ಸಾಕ್ಷಿ, ವಿನೇಶಾ ಭರವಸೆ: ಮಹಿಳಾ ಸ್ಪರ್ಧಿಗಳ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇತ್ತೀಚೆಗೆ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದರು. ಕೆನಡಾ ಮತ್ತು ನೈಜೀರಿಯಾ ಕುಸ್ತಿಪಟುಗಳಿಂದ ಭಾರತಕ್ಕೆ ಪ್ರಬಲ ಸವಾಲು ಎದುರಾಗುವ ಸಾಧ್ಯತೆಯಿದೆ. ಸಾಕ್ಷಿ ಮಲಿಕ್ (62 ಕೆ.ಜಿ ವಿಭಾಗ), ವಿನೇಶಾ ಪೊಗಟ್ (50 ಕೆ.ಜಿ) ಮತ್ತು ಬಬಿತಾ ಕುಮಾರಿ (54) ಅವರಿಂದ ಚಿನ್ನದ ಪದಕ ನಿರೀಕ್ಷಿಸಲಾಗಿದೆ.

ವಿನೇಶಾ ಅವರು ಅಭ್ಯಾಸದ ವೇಳೆ ಗಾಯಗೊಂಡಿರುವುದು ಕಳವಳಕ್ಕೆ ಕಾರಣವಾಗಿದೆ. ಆದರೆ ಸ್ಪರ್ಧೆಯ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸ ದಲ್ಲಿದ್ದಾರೆ. ವಿನೇಶಾ ಅವರು ಗ್ಲಾಸ್ಗೊದಲ್ಲಿ 48 ಕೆ.ಜಿ.ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಸಾಕ್ಷಿ ಅವರು ರಿಯೊ ಒಲಿಂಪಿಕ್ಸ್‌ ನಲ್ಲಿ 58 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದ್ದರು. ಇಲ್ಲಿ ಬೇರೆ ದೇಹತೂಕ ವಿಭಾಗದಲ್ಲಿ ಕಣಕ್ಕಿಳಿಯುವುದಾದರೂ, ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಭಾವಿಸಲಾಗಿದೆ. ಏಕೆಂದರೆ ಕಳೆದ ವರ್ಷ ಜೋಹಾನ್ಸ್ ಬರ್ಗ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅವರು ಇದೇ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಪೂಜಾ ದಂಡಾ, ದಿವ್ಯಾ ಮತ್ತು ಕಿರಣ್ ಅವರು ಮಹಿಳೆಯರ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಭಾರತದ ಇತರ ಸ್ಪರ್ಧಿಗಳು.

ಚಿನ್ನದ ಮೇಲೆ ಸುಶೀಲ್‌ ಕಣ್ಣು

ಪುರುಷರ ವಿಭಾಗದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ (74 ಕೆ.ಜಿ. ವಿಭಾಗ) ಮೇಲೆ ನಿರೀಕ್ಷೆಯ ಭಾರ ಇದೆ. ಕಳೆದ ಸ್ವಲ್ಪ ಸಮಯದಿಂದ ಜಾರ್ಜಿಯಾದಲ್ಲಿ ತರಬೇತಿ ಪಡೆಯುತ್ತಿರುವ ಸುಶೀಲ್ ತಮ್ಮ ಅನುಭವದ ಬಲದಿಂದ ಚಿನ್ನದ ಪದಕ ಕೊರಳಿಗೇರಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ. ಕಳೆದ ವರ್ಷ ಗಾಯದ ಸಮಸ್ಯೆಯಿಂದ ಬಳಲಿದ್ದ ಅವರು ಇದೀಗ ಫಿಟ್‌ನೆಸ್ ಮರಳಿ ಪಡೆದಿದ್ದಾರೆ.

ಬಜರಂಗ್ ಪೂನಿಯಾ, ಸುಮಿತ್ ಮಲಿಕ್, ರಾಹುಲ್, ಮೌಸಮ್ ಖತ್ರಿ ಮತ್ತು ಸೋಮವೀರ್ ಅವರು ವಿವಿಧ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಏಳು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಕನಸಿನೊಂದಿಗೆ ಭಾರತದ ಕುಸ್ತಿ ತಂಡ ಗೋಲ್ಡ್‌ ಕೋಸ್ಟ್‌ ಗೆ ಪ್ರಯಾಣಿಸಿತ್ತು. ಆ ಕನಸು ಈಡೇರುವುದೇ ಎಂಬುದನ್ನು ನೋಡಬೇಕು.-ಸುಶೀಲ್ ಕುಮಾರ್ (ಕೆಂಪು ಪೋಷಾಕು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry