ಗುರುವಾರ , ಜುಲೈ 16, 2020
22 °C

ಯುವಪಡೆಯ ಮೇಲೆ ಹದ್ದಿನ ಕಣ್ಣು...

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ಯುವಪಡೆಯ ಮೇಲೆ ಹದ್ದಿನ ಕಣ್ಣು...

2011ರಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕ್ರಿಕೆಟ್‌ ಸರಣಿ ಆಯೋಜನೆಯಾಗಿತ್ತು. ಲಂಕಾ ತಂಡದ ಆಯ್ಕೆಗೆ ಪ್ರಕ್ರಿಯೆ ನಡೆದಿದ್ದವು. ಆಗ ವೇಗದ ಬೌಲರ್‌ ಲಸಿತ್‌ ಮಾಲಿಂಗ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ‘ವಿಪರೀತ ಮಂಡಿನೋವು ಇದ್ದ ಕಾರಣ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನಾನು ಲಭ್ಯವಿರುವುದಿಲ್ಲ’ ಎಂದು ಆ ಸರಣಿ ತಪ್ಪಿಸಿಕೊಂಡಿದ್ದರು.

ಅಚ್ಚರಿಯೆಂದರೆ ಅದೇ ವರ್ಷ ಅವರು ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರಲ್ಲದೇ, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಪರಿಪರಿಯಾಗಿ ಕಾಡಿದ್ದರು. ಆಗಿನ ಆವೃತ್ತಿಯಲ್ಲಿ ಅವರು ಒಟ್ಟು ಹೆಚ್ಚು ವಿಕೆಟ್‌ (28) ಪಡೆದ ಬೌಲರ್‌ ಎನ್ನುವ ಶ್ರೇಯಕ್ಕೂ ಪಾತ್ರರಾಗಿದ್ದರು.  ಪರಿಣಾಮಕಾರಿಯಾದ ಯಾರ್ಕರ್‌ ಎಸೆತಗಳನ್ನು ಹಾಕಿದ್ದು ನೋಡಿದರೆ ಅವರಿಗೆ ಯಾವ ಗಾಯದ ನೋವೂ ಇರಲಿಲ್ಲ ಎಂಬುದು ಸ್ಪಷ್ವವಾಗಿ ಗೊತ್ತಾಗುತ್ತಿತ್ತು.

ವೆಸ್ಟ್‌ ಇಂಡೀಸ್‌ನ ಹೆಸರಾಂತ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಕೂಡ ಇದೇ ಹಾದಿ ತುಳಿದಿದ್ದರು. ಹಿಂದೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌, ಮೈಕಲ್‌ ಕ್ಲಾರ್ಕ್‌ ಅವರೂ ರಾಷ್ಟ್ರೀಯ ತಂಡಕ್ಕಿಂತ ‘ಮಿಲಿಯನ್ ಡಾಲರ್‌ ಬೇಬಿ’ ಐಪಿಎಲ್‌ಗೆ ಹೆಚ್ಚಿನ ಮಹತ್ವ ಕೊಟ್ಟಿದ್ದರು.

ಇವೆಲ್ಲ ಉದಾಹರಣೆಗಳಷ್ಟೇ. ಕೋಟ್ಯಂತರ ರೂಪಾಯಿ ಹಣ, ಚಿಯರ್‌ ಗರ್ಲ್ಸ್‌, ಮೂರೇ ಗಂಟೆಯಲ್ಲಿ ಮುಗಿದು ಹೋಗುವ ಪಂದ್ಯ, ಜನರ ಬೇಡಿಕೆ, ರಾತ್ರೋರಾತ್ರಿ ಲಭಿಸುವ ಖ್ಯಾತಿ ಹೀಗೆ ಹತ್ತಾರು ಅನುಕೂಲಗಳಿರುವ ಐಪಿಎಲ್‌ನಲ್ಲಿ ಆಡಬೇಕೆಂದು ಸಾಕಷ್ಟು ಆಟಗಾರರು ಬಯಸುತ್ತಾರೆ. ಅನೇಕರು ದೇಶದ ತಂಡಕ್ಕೆ ಆಡುವುದಕ್ಕಿಂತ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಎಷ್ಟೇ ದೊಡ್ಡ ನೋವಾದರೂ ಅದನ್ನು ಮರೆಮಾಚಿ ಐಪಿಎಲ್‌ ಅಂಗಳದಲ್ಲಿರಲು ಬಯಸುತ್ತಾರೆ.

ಆದ್ದರಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪ್ರಮುಖ 50 ಆಟಗಾರರ ಮೇಲೆ ಹದ್ದಿನ ಕಣ್ಣು ಇಟ್ಟಿದೆ.

ಏಕೆಂದರೆ ಭಾರತ ತಂಡ ಒಂದು ವರ್ಷದ ಅವಧಿಯಲ್ಲಿ 30 ಏಕದಿನ ಸೇರಿದಂತೆ ಒಟ್ಟು 63 ಪಂದ್ಯಗಳನ್ನು ಆಡಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಿದೆ. ಈ ಕಾರಣಕ್ಕಾಗಿ ಬಿಸಿಸಿಐ, ಆಟಗಾರರ ಫಿಟ್‌ನೆಸ್‌, ಗಾಯದ ಸಮಸ್ಯೆ, ತರಬೇತಿ ಅವಧಿ, ಆಡುವ ಪಂದ್ಯಗಳು ಹೀಗೆ ಹಲವು ಮಾಹಿತಿಗಳನ್ನು ಕಲೆ ಹಾಕಲು ತಜ್ಞರ ತಂಡ ರಚಿಸಿದ್ದು ಉತ್ತಮ ಹೆಜ್ಜೆ.

ಐಪಿಎಲ್‌ ಟೂರ್ನಿಯ ಬಳಿಕ ಜೂನ್‌ನಲ್ಲಿ ಭಾರತ ತಂಡ ಐರ್ಲೆಂಡ್ ಎದುರು ಎರಡು ಪಂದ್ಯಗಳ ಟ್ವೆಂಟಿ–20 ಸರಣಿ ಆಡಲಿದೆ. ಅದೇ ತಿಂಗಳು ಅಫ್ಗಾನಿಸ್ತಾನ ತಂಡ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್‌ ಪಂದ್ಯವಾಡಲಿದೆ.

ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಐದು ಟೆಸ್ಟ್‌, ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ಆಯೋಜನೆಯಾಗಿವೆ. ಬಳಿಕ ಏಷ್ಯಾ ಕಪ್‌ ಜರುಗಲಿದೆ. ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್‌ ತಂಡ ಎರಡು ಟೆಸ್ಟ್‌, ಐದು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯಾಡಲು ಭಾರತಕ್ಕೆ ಬರಲಿದೆ. ಬಳಿಕ ವಿರಾಟ್ ಕೊಹ್ಲಿ ಬಳಗ ಎರಡು ತಿಂಗಳು ಕಾಂಗರೂ ನಾಡಿನ ಪ್ರವಾಸ ಕೈಗೊಳ್ಳಲಿದ್ದು, ನಾಲ್ಕು ಟೆಸ್ಟ್‌, ಮೂರು ಟ್ವೆಂಟಿ–20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

2019ರ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ ಎದುರು ಐದು ಏಕದಿನ ಮತ್ತು ಐದು ಚುಟುಕು ಕ್ರಿಕೆಟ್‌ ಮಾದರಿಯ ಪಂದ್ಯಗಳು, ಜಿಂಬಾಬ್ವೆ ಎದುರು ಮೂರು ಟ್ವೆಂಟಿ–20 ಪಂದ್ಯಗಳ ಸರಣಿ ಆಯೋಜನೆಯಾಗಿದೆ. ಹೀಗೆ ಸಾಲುಸಾಲು ಸರಣಿಗಳಲ್ಲಿ ಶ್ರೇಷ್ಠ  ಆಟವಾಡಬೇಕಾದ ಸವಾಲು ಭಾರತದ ಆಟಗಾರರ ಮುಂದಿದೆ. ಇದಕ್ಕೆ ಫಿಟ್‌ನೆಸ್‌ ಉಳಿಸಿಕೊಳ್ಳುವುದು ಅನಿವಾರ್ಯ.

ಯುವ ಆಟಗಾರರತ್ತ ಚಿತ್ತ: ದೇಶಿ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಮಯಂಕ್‌ ಅಗರವಾಲ್‌, ದೆಹಲಿಯ ರಿಷಭ್‌ ಪಂತ್‌, ಮುಂಬೈನ ಪೃಥ್ವಿ ಷಾ, ಆವೇಶ್‌ ಖಾನ್‌, ದೀಪಕ್ ಹೂಡಾ, ವೇಗಿ ಮೊಹಮ್ಮದ್ ಶಮಿ ಅವರ ಮೇಲೆ ಬಿಸಿಸಿಐ ಕಣ್ಣು ಇಟ್ಟಿದೆ. ಬಿಸಿಸಿಐನಿಂದ ಕೇಂದ್ರಿಯ ಗುತ್ತಿಗೆ ಪದ್ಧತಿಯಲ್ಲಿ ಸ್ಥಾನ ಹೊಂದಿರುವ 27 ಆಟಗಾರರ ಮೇಲೆಯೂ ನಿಗಾ ವಹಿಸಿದೆ. 23 ದೇಶಿ ಟೂರ್ನಿಗಳ ಪ್ರಮುಖ ಆಟಗಾರರೂ 50ರ ಪಟ್ಟಿಯಲ್ಲಿದ್ದಾರೆ.

ಐರ್ಲೆಂಡ್‌, ಅಫಘಾನಿಸ್ತಾನ ಹೀಗೆ ಕ್ರಿಕೆಟ್‌ ಅಂಗಳದಲ್ಲಿ ಅಂಬೆಗಾಲು ಊರುತ್ತಿರುವ ತಂಡಗಳ ಎದುರಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ತಂಡದ ‘ಬೆಂಚ್‌ ಸ್ಟ್ರಂಥ್‌’ ಬಲಗೊಳಿಸುವ ಲೆಕ್ಕಾಚಾರ ಬಿಸಿಸಿಐ ಮುಂದಿದೆ. ಐಪಿಎಲ್‌ ಬಳಿಕ ಮುಂದಿನ ಕೆಲ ಸರಣಿಗಳಿಗೆ ತಂಡದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಸ್ಥಾನ ನೀಡಿದರೆ ತಂಡದ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಟೆಸ್ಟ್ ಪಂದ್ಯಗಳು ನಡೆದರೆ ಸ್ಪಿನ್ನರ್‌ಗಳೇ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ. ಸ್ಪಿನ್‌ ಸ್ನೇಹಿ ಆಗಿರುವ ಏಷ್ಯಾದ ಪಿಚ್‌ಗಳಲ್ಲಿ ನಮ್ಮ ಸ್ಪಿನ್ನರ್‌ಗಳು ಬೌಲಿಂಗ್‌ನಲ್ಲಿ ಜಾದೂ ಮಾಡುತ್ತಾರೆ. ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವಾಗುತ್ತವೆ. ಆದ್ದರಿಂದ ಏಳರಿಂದ ಎಂಟು ಬೌಲರ್‌ಗಳು ಫಿಟ್‌ ಆಗಿರುವುದು ಅನಿವಾರ್ಯ ಎಂದು ಬಿಸಿಸಿಐ ಹೇಳಿದೆ. ಏಕದಿನ ವಿಶ್ವಕಪ್‌ ಕೂಡ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿಯೇ ಆಯೋಜನೆಯಾಗಿದೆ. ಆದ್ದರಿಂದ ಇಂಗ್ಲೆಂಡ್ ಎದುರು ನಡೆಯಲಿರುವ ಸರಣಿ ಭಾರತಕ್ಕೆ ವಿಶ್ವಕಪ್‌ ಸಿದ್ಧತೆಗೆ ವೇದಿಕೆ ಎನಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ವೇಗದ ಬೌಲರ್‌ಗಳು ಗಾಯದ ಸಮಸ್ಯೆಯಿಂದ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ ಕುಮಾರ್‌, ವರುಣ್‌ ಆ್ಯರನ್‌, ಹರ್ಷಲ್‌ ಪಟೇಲ್‌, ಮೋಹಿತ್‌ ಶರ್ಮಾ ಅವರು ತಂಡದಲ್ಲಿ ಕಾಯಂ ಆಗಿ ಸ್ಥಾನ ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ. ಆದ್ದರಿಂದ ಸ್ಥಿರ ಪ್ರದರ್ಶನ ನೀಡಿ ವಿಶ್ವಕಪ್‌ವರೆಗೂ ತಂಡದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿ ಇರುವಂತೆ ನೋಡಿಕೊಳ್ಳಬೇಕಿದೆ.

ಪ್ರತಿ ಬಾರಿಯ ವಿಶ್ವಕಪ್‌ ಹತ್ತಿರದಲ್ಲಿದ್ದಾಗಲೂ ಬಿಸಿಸಿಐ ಈ ರೀತಿಯ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಆದರೆ ಈಗ 15 ಸದಸ್ಯರ ತಂಡದಲ್ಲಿ ಸ್ಥಾನ ಗಳಿಸಲು ಸಾಕಷ್ಟು ಪೈಪೋಟಿ ಇರುವ ಕಾರಣ ತಂಡದಲ್ಲಿ ಒಮ್ಮೆ ಸ್ಥಾನ ಲಭಿಸಿದರೆ ಅದನ್ನು ಉಳಿಸಿಕೊಳ್ಳಬೇಕಾದ ಸವಾಲು ಪ್ರತಿ ಆಟಗಾರನ ಮುಂದಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಇದು ಅಗ್ನಿಪರೀಕ್ಷೆಯ ಕಾಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.