ಭಾನುವಾರ, ಡಿಸೆಂಬರ್ 15, 2019
19 °C

ರಜೆಯ ಮಜದೊಂದಿಗೇ ಸಾಗಲಿ ಕಲಿಕೆ

ಟಿ. ಎ. ಬಾಲಕೃಷ್ಣ ಅಡಿಗ Updated:

ಅಕ್ಷರ ಗಾತ್ರ : | |

ರಜೆಯ ಮಜದೊಂದಿಗೇ ಸಾಗಲಿ ಕಲಿಕೆ

ಮಕ್ಕಳೇ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಪ್ರಾರಂಭವಾಗಿದೆಯಲ್ಲವೇ? ಸುಮಾರು ಆರೆಂಟು ವಾರಗಳ ರಜೆ ಸಿಕ್ಕಿರುವುದು ನಿಮಗೆ ಖುಷಿ ಕೊಟ್ಟಿರಬೇಕಲ್ಲವೆ? ಖುಷಿಯ ಜೊತೆಗೆ, ಈ ರಜಾ ಅವಧಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದೆಂದು ಯೋಚಿಸುತ್ತಿರುವಿರಾ? ಈ ರಜೆಯ ಮಜಾ ಅನುಭವಿಸುವುದರ ಜೊತೆಗೆ, ಈ ಅವಧಿಯನ್ನು ಉಪಯುಕ್ತವಾಗಿಸಿಕೊಳ್ಳುವ ಬಗ್ಗೆ ನೀವು ಏಕೆ ಆಲೋಚಿಸಬಾರದು?

ರಜಾ ಅವಧಿಯಲ್ಲಿ ವೃಥಾ ಕಾಲಹರಣ ಮಾಡುವುದರ ಬದಲಿಗೆ, ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗುವಂಥ ಕಲಿಕೆಯನ್ನು ಅಳವಡಿಸಿಕೊಂಡು, ನಿಮ್ಮ ಭವಿಷ್ಯದ ಜೀವನವನ್ನು ನೀವೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಿಮಗೆ ಕೆಲವು ಉಪಯುಕ್ತ ಹಾಗೂ ಕಾರ್ಯಸಾಧುವಾದ ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ. ಇಲ್ಲಿ ಕೊಟ್ಟಿರುವ ಸಲಹೆಗಳಲ್ಲಿ ಕೆಲವನ್ನಾದರೂ ನೀವು ಈ ರಜೆಯಲ್ಲಿ ಅಳವಡಿಸಿಕೊಂಡಲ್ಲಿ, ನಿಮ್ಮ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಸ್ವತಃ ನೀವೇ ತಂದುಕೊಳ್ಳಬಹುದು.

ರಜೆ ಅವಧಿಗೂ ಒಂದು ವೇಳಾಪಟ್ಟಿ ಇರಲಿ

ರಜೆ ಎಂದ ಕೂಡಲೇ ಅದು ಅಧ್ಯಯನದಿಂದ ದೊರೆತ ಬಿಡುಗಡೆ ಎಂಬ ಅಭಿಪ್ರಾಯ ಬಹಳಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇಡೀ ದಿನ ಮನೆಯ ಹೊರಗಿದ್ದು, ಕ್ರಿಕೆಟ್‍ನಂಥ ಅನುಪಯುಕ್ತ ಕ್ರೀಡೆಗಳಲ್ಲಿ ಕಾಲಹರಣ ಮಾಡುತ್ತಾ, ಸಂಜೆ ಸುಸ್ತಾಗಿ ಮನೆಗೆ ವಾಪಸ್ಸಾಗುವ ಬದಲಿಗೆ, ರಜೆಯಲ್ಲಿ ಕಲಿಕೆಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೆಲವು ಚಟುವಟಿಕೆಗಳನ್ನು ಕೈಗೊಂಡು ಸಮಯದ ಸದುಪಯೋಗ ಮಾಡಿಕೊಳ್ಳಬಹುದಲ್ಲವೇ? ಇದಕ್ಕಾಗಿಯೇ ನೀವು ರಜೆಯ ಅವಧಿಗೆಂದೇ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಬಹುದು. ಅದರಲ್ಲಿ, ಒಂದೆರಡು ಗಂಟೆಗಳಷ್ಟು ಸಮಯವನ್ನು ಆಟಕ್ಕೆ ಮೀಸಲಿಡಬಹುದು.

ಉಳಿದ ಸಮಯದಲ್ಲಿ ಅನೇಕ ಬಗೆಯ ಉಪಯುಕ್ತ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಇಂಥ ಹವ್ಯಾಸಗಳಲ್ಲಿ ಅತ್ಯಂತ ಉಪಯುಕ್ತವಾದುದೆಂದರೆ, ಓದುವ ಹವ್ಯಾಸ. ಪ್ರತಿ ದಿನ ಎರಡು–ಮೂರು ಗಂಟೆಗಳಷ್ಟು ಸಮಯವನ್ನು ಓದುವುದಕ್ಕೆ ಮೀಸಲಿಡಿ. ಈ ಅವಧಿಯಲ್ಲಿ ಓದಿಗೆ ನಿಮ್ಮ ಮುಂದಿನ ತರಗತಿಗೆ ಸಂಬಂಧಿಸಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ನಿಮಗೆ ನೆರವಾಗುತ್ತದೆ. ಮುಂದೆ ನಿಮ್ಮ ಕಲಿಕಾ ಪ್ರಕ್ರಿಯೆ ಸುಲಭವಾಗುತ್ತದೆ.

ನಿಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಳ್ಳಿ

ನಿಮ್ಮ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ನಿಮ್ಮ ಓದನ್ನು ಸೀಮಿತಗೊಳಿಸಿಕೊಳ್ಳಬೇಡಿ. ನಿಮ್ಮ ಆಸಕ್ತಿಯ ಯಾವುದೇ ವಿಷಯವಿರಲಿ, ಅದು ವಿಜ್ಞಾನವಿರಬಹುದು, ಇತಿಹಾಸವಿರಬಹುದು, ಇಲ್ಲವೇ ಇಂಗ್ಲೀಷ್ ಅಥವಾ ಕನ್ನಡ ಸಾಹಿತ್ಯದ ಕೃತಿಗಳಿರಬಹುದು. ಅಂಥ ಪುಸ್ತಕಗಳನ್ನು ಪಡೆದುಕೊಂಡು ಓದಲು ಪ್ರಾರಂಭಿಸಿ. ನಿಮ್ಮ ಮನೆಯ ಸಮೀಪದಲ್ಲೇ ಸರ್ಕಾರಿ ಗ್ರಂಥಾಲಯವಿದ್ದಲ್ಲಿ ಅದರ ಸದುಪಯೋಗವನ್ನು ಮಾಡಿಕೊಳ್ಳಿ. ಇಲ್ಲವೇ, ನಿಮ್ಮ ಆಸಕ್ತಿಯ ವಿಷಯದಲ್ಲಿ ನೀವು ಓದಬೇಕೆಂದುಕೊಂಡಿರುವ ಪುಸ್ತಕದ ಬಗ್ಗೆ ಮಾಹಿತಿ ಪಡೆದುಕೊಂಡು, ಪೋಷಕರಿಗೆ ಅದನ್ನು ತಂದುಕೊಡುವಂತೆ ಹೇಳಿ. ನಿಮ್ಮ ಆಸಕ್ತಿಗೆ ಖಂಡಿತ ನಿಮ್ಮ ಪೋಷಕರು ಅಡ್ಡಿ ಮಾಡುವುದಿಲ್ಲ. ಯಾವ ರೀತಿಯ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ನಿಮ್ಮ ಹಿರಿಯರ ಹಾಗೂ ಶಿಕ್ಷಕರ ನೆರವು ಪಡೆದುಕೊಳ್ಳಿ. ಈ ರೀತಿಯ ಓದು ನಿಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಳ್ಳುವುದಕ್ಕೆ ಮತ್ತು ನಿಮ್ಮ ಮನೋವಿಕಾಸಕ್ಕೆ ಅತ್ಯಂತ ಅವಶ್ಯಕ.

ಬೇಸಿಗೆ ಶಿಬಿರಗಳಿಗೆ ಸೇರಿಕೊಳ್ಳಿ

ಇಂದು ಬಹುತೇಕ ಕಡೆ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿದೆ. ನಿಮ್ಮ ಅಭಿರುಚಿಗೆ ಪೂರಕವಾದ ಚಟುವಟಿಕೆಗಳಲ್ಲಿ ಇಂಥ ಶಿಬಿರಗಳಿಗೆ ಸೇರುವ ಮೂಲಕ ನೀವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ನಿಮ್ಮ ಶಾಲೆಯಲ್ಲಿ ಮುಂದೆ ನೀವು ಅಂಥ ಚಟುವಟಿಕೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಬಹುಮಾನಗಳನ್ನು ಗೆಲ್ಲಬಹುದು. ಆ ಮೂಲಕ ನಿಮ್ಮ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದುಕೊಳ್ಳಬಹುದು.

ವಿಜ್ಞಾನದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ‘ಬೇಸಿಗೆ ವಿಜ್ಞಾನ ಶಿಬಿರ’ಗಳನ್ನು ಕೆಲವು ಸಂಘ–ಸಂಸ್ಥೆಗಳು ಏರ್ಪಡಿಸುತ್ತವೆ. ಸಾಮಾನ್ಯವಾಗಿ ತಾರಾಲಯ ಅಥವಾ ಮ್ಯೂಸಿಯಂಗಳಿರುವ ಪ್ರದೇಶಗಳಲ್ಲಿ ಇಂಥ ಶಿಬಿರಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲವೇ, ಜಿಲ್ಲಾ ವಿಜ್ಞಾನಕೇಂದ್ರಗಳಲ್ಲಿ ಇಂಥ ಶಿಬಿರಗಳು ನಡೆಯುತ್ತವೆ. ವಿಜ್ಞಾನದ ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ಗಳಿಸಿಕೊಳ್ಳುವುದರ ಜೊತೆಗೆ ಅಲ್ಲಿ ಮಾಡಿ ತೋರಿಸುವ ಪ್ರಯೋಗಗಳ ಅಥವಾ ತೋರಿಸುವ ಪ್ರಾತ್ಯಕ್ಷಿಕೆಗಳ ಮೂಲಕವೂ ನಿಮ್ಮ ವಿಷಯದ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು.

ಹೊಸ ಸ್ನೇಹಿತರನ್ನು ಗಳಿಸಿಕೊಳ್ಳಿ

ರಜೆ ಅವಧಿಯಲ್ಲಿ ನೀವು ಭಾಗವಹಿಸುವ ಶಿಬಿರಗಳ ಮೂಲಕ ನೀವು ಅನೇಕ ಹೊಸ ಸ್ನೇಹಿತರನ್ನು ಗಳಿಸಿಕೊಳ್ಳುತ್ತೀರಿ. ನಿಮ್ಮ ಮತ್ತು ಈ ಹೊಸ ಸ್ನೇಹಿತರ ಅಭಿರುಚಿ ಒಂದೇ ರೀತಿ ಇದ್ದಲ್ಲಿ, ಅಂಥ ಸಮಾನಮನಸ್ಕ ಸ್ನೇಹಿತರ ಜೊತೆಗೂಡಿ ನೀವು ಹಲವು ಬಗೆಯ ಉಪಯುಕ್ತ ಚಟುವಟಿಕೆಗಳನ್ನು ಯೋಜಿಸಬಹುದು. ನಿಮ್ಮ ಮುಂದಿನ ತರಗತಿಯ ವಿಷಯಗಳ ಬಗ್ಗೆ ಚರ್ಚಿಸಬಹುದು, ಇಲ್ಲವೇ ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೆ ಸಮಾಜಕ್ಕೆ ಉಪಯುಕ್ತವಾಗುವಂಥ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಬಹುದು. ಸ್ನೇಹಿತರೊಡನೆ ಇರುವ ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥಮಾಡದೆ, ಸದುಪಯೋಗ ಮಾಡಿಕೊಳ್ಳುವುದು, ನಿಮ್ಮ ಆದ್ಯ ಕರ್ತವ್ಯ.

ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ನಿಮ್ಮ ಸಮಾನಮನಸ್ಕ ಸ್ನೇಹಿತರ ಜೊತೆ ಸೇರಿಕೊಂಡು ಸಣ್ಣ ತಂಡವೊಂದನ್ನು ರಚಿಸಿಕೊಳ್ಳಿ. ಬಿಡುವಿನ ಸಮಯದಲ್ಲಿ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಿ. ಕಸವಿಂಗಡನೆ, ಸಾವಯವ ಗೊಬ್ಬರ ತಯಾರಿಕೆ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ, ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ. ತೋಟಗಾರಿಕೆ ಅಥವಾ ಅರಣ್ಯ ಇಲಾಖೆಯ ನೆರವು ಪಡೆದು ಜಾಗ ಇರುವ ಕಡೆ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಬಹುದು. ಅಂಥ ಗಿಡಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಕಾಳಜಿ ಮೂಡಿಸಬಹುದು. ಪರಿಸರದ ಸಂರಕ್ಷಣೆಯ ಜೊತೆಗೆ, ಈ ರೀತಿಯ ನಿಮ್ಮ ಸಮಾಜಮುಖಿ ಕಾರ್ಯಕ್ರಮಗಳು ನಿಮ್ಮ ಪೋಷಕರಿಗೆ ಹಾಗು ನಿವಾಸಿಗಳಿಗೆ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುತ್ತವೆ.

ಅನವಶ್ಯಕ ಕಾಲಹರಣ ಮಾಡದೆ, ನಿಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಂಥ, ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಪೂರಕವಾಗುವಂಥ, ಎಲ್ಲರಿಗೂ ಮೆಚ್ಚುಗೆಯಾಗುವಂಥ ಹತ್ತು ಹಲವು ಚಟುವಟಿಕೆಗಳನ್ನು ರಜೆಯ ಅವಧಿಯಲ್ಲಿ ಅಳವಡಿಸಿಕೊಂಡು ಒಬ್ಬ ಉತ್ತಮ ವಿದ್ಯಾರ್ಥಿಯಾಗಿ, ಮುಂದೆ ದೇಶದ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ರೂಪುಗೊಳ್ಳುವುದು ನಿಮ್ಮ ಕೈಯಲ್ಲೇ ಇದೆ ಅಲ್ಲವೇ? ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ನೋಡಿ. ನಿಮಗೆ ಖಂಡಿತ ಯಶಸ್ಸು ದೊರಕುತ್ತದೆ. ನಿಮ್ಮಲ್ಲಿ ಸಾರ್ಥಕತೆಯ ಭಾವ ಮೂಡುತ್ತದೆ. 

ಶೈಕ್ಷಣಿಕ ಪ್ರವಾಸಗಳನ್ನು ಯೋಜಿಸಿ

ಸಾಮಾನ್ಯವಾಗಿ ಬೇಸಿಗೆ ರಜೆ ಪ್ರಾರಂಭವಾಗುತ್ತಿದ್ದಂತೆ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ಪರಿಪಾಠ ಬಹುತೇಕ ಕುಟುಂಬಗಳಲ್ಲಿದೆ. ಹಳ್ಳಿಯಲ್ಲಿರುವ ಕುಟುಂಬದ ಹಿರಿಯರ ಮನೆಗೋ ಇಲ್ಲವೇ ಯಾವುದಾದರೂ ಪ್ರವಾಸಿತಾಣಕ್ಕೆ ಭೇಟಿ ನೀಡುವುದು ಸಾಮಾನ್ಯ. ನಿಮ್ಮನ್ನು ಏಕತಾನತೆಯಿಂದ ಹೊರತರಲು ಇಂಥ ಪ್ರವಾಸಗಳು ಅತ್ಯಗತ್ಯ. ಇಂಥ ಪ್ರವಾಸಗಳನ್ನು ಉಪಯುಕ್ತಗೊಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು. ಕುಟುಂಬದ ಹಿರಿಯರ ಮನೆಗೆ ಭೇಟಿ ನೀಡುವ ಸಂದರ್ಭ ಬಂದಲ್ಲಿ ಅದನ್ನು ನೀವು ಅವಿಸ್ಮರಣೀಯವಾಗಿಸಿಕೊಳ್ಳಬಹುದು. ಆ ಪ್ರದೇಶದ ಐತಿಹಾಸಿಕ ಪ್ರಾಮುಖ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು.

ನೀವು ಪ್ರವಾಸಕ್ಕೆ ಹೋಗುವ ಸಂದರ್ಭ ಬಂದಾಗ ಸಾಧ್ಯವಾದಷ್ಟೂ ಐತಿಹಾಸಿಕ ಹಿನ್ನೆಲೆ ಇರುವಂಥ ಇಲ್ಲವೇ ಪರಿಸರಕ್ಕೆ ಸಂಬಂಧಿಸಿದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ನೀವು ಗಮನಿಸುವ ಅಂಶಗಳು ನಿಮ್ಮ ಪಠ್ಯವಸ್ತುವಿನಲ್ಲಿ ನಿರೂಪಿತವಾಗಿದ್ದಲ್ಲಿ, ನೀವು ಕಲಿತಿರುವ ಅಥವಾ ಕಲಿಯಲಿರುವ ವಿಷಯದಲ್ಲಿ ನಿಮಗೆ ಕುತೂಹಲ ಹೆಚ್ಚುತ್ತದೆ. ಜೊತೆಗೆ, ಪ್ರತ್ಯಕ್ಷವಾಗಿ ನೋಡಿದ ಅನುಭವವೂ ನಿಮ್ಮದಾಗುತ್ತದೆ.

ಪ್ರತಿಕ್ರಿಯಿಸಿ (+)