ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ರಜೆಯ ಮೋಜು

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿಬಿಟ್ಟಿದೆ. ಪ್ರತಿನಿತ್ಯ ಶಾಲೆ ಮತ್ತು ಮನೆಯಲ್ಲಿ ಅವರ ಸಮಯ ಹಂಚಿಹೋಗುತ್ತಿತ್ತು. ಈಗ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಮಯ ಕಳೆಯುವ ಅತ್ಯುತ್ತಮ ಪರಿಹಾರ. ಮನರಂಜನೆಯೊಂದಿಗೆ ಕಲಿಕೆಗೆ ಅವಕಾಶವಿರುವ ಬೇಸಿಗೆ ಶಿಬಿರಗಳು ಮಕ್ಕಳಿಗೆ ಪ್ರತಿದಿನ ಪಿಕ್‌ನಿಕ್‌ ತಾಣಗಳಂತೆ ಆಗುವುದೂ ಉಂಟು. ಆದರೆ ಯಾವುದೇ ಶಿಬಿರಗಳಿಗೆ ಹೋಗದೆ ಮನೆಯಲ್ಲಿಯೇ ಇರಬೇಕಾದ ಮಕ್ಕಳಿಗೆ ರಜಾದಿನಗಳೆಂದರೆ ಶಿಕ್ಷೆಯೇ.

ಹಾಗಂತ ಬೇಜಾರು ಮಾಡಬೇಕಿಲ್ಲ. ಮನೆಯಲ್ಲಿದ್ದುಕೊಂಡೇ ಅವರನ್ನು ಕ್ರಿಯಾಶೀಲರನ್ನಾಗಿಸುವ ಜಾಣ್ಮೆ ತಂದೆ ತಾಯಿಗಿದ್ದರೆ ಬೇಸಿಗೆ ಶಿಬಿರಕ್ಕಿಂತಲೂ ಹೆಚ್ಚಿನ ಮೋಜಿನಿಂದ ಮಕ್ಕಳು ರಜೆಯನ್ನು ಕಳೆಯಲು ಸಾಧ್ಯ. ಹಾಗಿದ್ದರೆ ಅವರನ್ನು ಚೈತನ್ಯ, ಉಲ್ಲಾಸದಿಂದ ಇರುವ ಹಾಗೆ ಮಾಡುವ ಮಾರ್ಗೋಪಾಯಗಳೇನು ನೋಡೋಣ ಬನ್ನಿ...

ಸ್ವತಂತ್ರವಾಗಿ ಕೆಲಸ ಮಾಡಲಿ
ವಯಸ್ಸು ಹತ್ತರ ಹತ್ತಿರ ಬಂದರೂ ಮಕ್ಕಳ ಕೆಲಸಗಳಿಗೆ ಮನೆಮಂದಿ ಕೈಜೋಡಿಸುವುದು ಇಲ್ಲವೇ ತಾವೇ ಮಾಡುವುದು ಸಾಮಾನ್ಯ. ಉಪಾಹಾರ ಸೇವಿಸಿ, ಬುತ್ತಿ ಕಟ್ಟಿಕೊಂಡು, ಅಗತ್ಯ ಪರಿಕರಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಹೊರಡಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂಬುದು ಮನೆ ಮಂದಿಯ ಕಾಳಜಿ. ಈಗ ರಜೆ. ಮಕ್ಕಳು ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ಮಾಡುವಂತೆ ಅಭ್ಯಾಸ ಮಾಡಿಸಲು ಸಕಾಲ.

ಶೌಚಕ್ರಿಯೆ ಮುಗಿಸಿ ಸ್ವಚ್ಛಗೊಳಿಸುವ, ಕೈಯಾರೆ ಊಟ ತಿಂಡಿ ಸೇವಿಸುವ, ಆಹಾರ ಸೇವಿಸಿದ ಬಳಿಕ ತಮ್ಮ ತಟ್ಟೆ ಲೋಟಗಳನ್ನು ತಾವೇ ತೊಳೆಯುವ, ತಮ್ಮ ಆಟ ಪಾಠದ ವಸ್ತುಗಳನ್ನು ಸ್ವತಃ ಜೋಡಿಸಿಡುವ, ತಮ್ಮ ಕೋಣೆ ಮತ್ತು ವಾರ್ಡ್‌ರೋಬ್‌ನ್ನು ತಾವೇ ಒಪ್ಪವಾಗಿ ಇಟ್ಟುಕೊಳ್ಳುವ, ಬಳಸಿದ ಬಟ್ಟೆಗಳನ್ನು ಟಬ್‌ನಲ್ಲಿ ಹಾಕುವ ಮತ್ತು ಒಗೆದು ಒಣಗಿಸಿಟ್ಟ ತಮ್ಮ ಬಟ್ಟೆಗಳನ್ನು ತಾವೇ ಮಡಚಿ ವಾರ್ಡ್‌ರೋಬ್‌/ ಬೀರು/ ಕಂಬಿಯಲ್ಲಿ ಜೋಡಿಸಿಡುವ ಜವಾಬ್ದಾರಿಗಳನ್ನು ಈಗ ಅವರಿಗೆ ವಹಿಸಬಹುದು. ಅವರು ಮಾಡಿಲ್ಲ ಎಂದು ಮನೆ ಮಂದಿ ಮಾಡುವ ಬದಲು ಅವರು ಮರೆತಾಗಲೆಲ್ಲ ನೆನಪಿಸಿ ಅವರಿಂದಲೇ ಮಾಡಿಸಿ.

ಗಿಡ ಬೆಳೆಸಲಿ
ಕನಿಷ್ಠ ಒಂದೋ ಎರಡೋ ಕುಂಡಗಳಲ್ಲಿ ಅವರಿಗಿಷ್ಟದ ಗಿಡಗಳನ್ನು ನೆಟ್ಟು ಅದರ ಪೋಷಣೆಯನ್ನು ನಿಮ್ಮ ಮಕ್ಕಳಿಗೆ ವಹಿಸಿ. ಈಗಾಗಲೇ ಇರುವ ಗಿಡಗಳ ಪೈಕಿ ಅವರಿಗೆಂದೇ ಕೆಲವನ್ನು ಮೀಸಲಿಡಿ. ‘ನನ್ನ ಗಿಡ’ ಎಂಬ ಆಪ್ಯಾಯತೆ ಮತ್ತು ಬದ್ಧತೆ ಬಂದರೆ ಅವರಿಗೆ ದಿನಚರಿಯಾಗಿ ಅಭ್ಯಾಸವಾಗುತ್ತದೆ.

ಹಕ್ಕಿ, ಅಕ್ವೇರಿಯಂ ತನ್ನಿ
ಮನೆಯಲ್ಲಿ ಸುಲಭವಾಗಿ ಪೋಷಿಸಬಹುದಾದ ಹಕ್ಕಿಗಳನ್ನು ಈಗ ಮಕ್ಕಳಿಗಾಗಿ ತನ್ನಿ. ಅಕ್ವೇರಿಯಂ ತಂದಿರಿಸಲೂ ಇದು ಸಕಾಲ. ಆದರೆ ಬೇಸಿಗೆಯ ಹವಾಮಾನಕ್ಕೆ, ಮನೆಯ ತಾಪಮಾನಕ್ಕೆ ಪೂರಕವಾದ ಹಕ್ಕಿಗಳನ್ನೂ, ಮೀನುಗಳನ್ನೂ ಆರಿಸುವುದು ಸೂಕ್ತ. ಅವುಗಳಿಗೆ ಆಹಾರ ನೀಡುವ ವೇಳಾಪಟ್ಟಿಯನ್ನು ಮಕ್ಕಳಿಗೇ ವಹಿಸಿ. ಜೊತೆಗೆ, ಹಕ್ಕಿಗಳ ಅಥವಾ ಮೀನುಗಳ ಚಟುವಟಿಕೆಯನ್ನು ಮೊದಲ ದಿನದಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಿರಲು ಹೇಳಿ. ಅಕಸ್ಮಾತ್‌, ಅವುಗಳಿಗೆ ಏನಾದರೂ ಸಮಸ್ಯೆ ಉಂಟಾದರೂ ಮಕ್ಕಳು ತಕ್ಷಣ ಅದನ್ನು ಗುರುತಿಸಲು ಇದು ಸಹಕಾರಿ.

ಮಂತ್ರ, ಜಪ, ಯೋಗ
ಮಂತ್ರ, ಶ್ಲೋಕ ಹೇಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಹಲವು ಪ್ರಯೋಜನಗಳಿವೆ. ಸ್ಮರಣಾಶಕ್ತಿಯನ್ನು ಹೆಚ್ಚಿಸುವ, ಸ್ಫುಟವಾಗಿ ಮಾತನಾಡುವ, ಮಂತ್ರ/ಶ್ಲೋಕಗಳ ಮೂಲಕ ಪೌರಾಣಿಕ ಕತೆಗಳನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ತಾಳ್ಮೆಯನ್ನು ಕಲಿಸುತ್ತದೆ. ಯೋಗಾಸನ ಮತ್ತು ಪ್ರಾಣಾಯಾಮದ ಕಲಿಕೆಗೂ ರಜಾ ದಿನಗಳು ಸೂಕ್ತ. ಆದರೆ ಶಾಲೆ ಶುರುವಾದ ಮೇಲೂ ಮುಂದುವರಿಸಬಹುದಾದ ವೇಳೆಯನ್ನೇ ಇದಕ್ಕಾಗಿ ಮೀಸಲಿಟ್ಟರೆ ನಂತರ ನಿಲ್ಲಿಸಬೇಕಾದ ಪ್ರಮೇಯ ಎದುರಾಗದು.

ಮುಖವಾಡ, ಚಿತ್ರಕಲೆ, ಕ್ಲೇ ಮಾಡೆಲ್‌
ಹುಡುಗರಿಗೆ ಬೇರೆಯೇ ಆಸಕ್ತಿಗಳಿರಬಹುದು. ಅವರಿಗೆ ಮುಖವಾಡ ತಯಾರಿಸುವ, ಕ್ಲೇ ಮಾಡೆಲಿಂಗ್‌ ಮಾಡುವ, ಚಿತ್ರಕಲೆಯ ಉಮೇದು ಇರಬಹುದು. ಕಚ್ಚಾ ವಸ್ತುಗಳೇನು ಬೇಕು ಎಂಬುದನ್ನು ಪಟ್ಟಿ ಮಾಡಿಕೊಂಡು ಅವರೊಂದಿಗೆ ಹೋಗಿ ಖರೀದಿಸಿ ತನ್ನಿ. ಮನೆಯೊಳಗೆ ಮಾಡುವುದಾದರೆ ಹಳೆಯ ದಿನಪತ್ರಿಕೆ ಇಲ್ಲವೇ ಮ್ಯಾಟ್‌ ಹಾಸಿಕೊಂಡು ಅದರ ಮೇಲೆ ತಮ್ಮ ಕೆಲಸ ಮಾಡಿ ಕೊನೆಯಲ್ಲಿ ಸ್ವಚ್ಛಗೊಳಿಸಿ ಬರುವುದನ್ನು ರೂಢಿಮಾಡಿಸಿ.

ಮನೆಯಲ್ಲೇ ಆಟ
ಮನೆಯಲ್ಲಿ ಲಭ್ಯವಿರುವ ಜಾಗದಲ್ಲಿ ಆಟವಾಡಲು ಅವಕಾಶ ಮಾಡಿಕೊಡಬಹುದು. ಹೊರಗಿನ ಅಥವಾ ಕೋಣೆಯ ಒಂದು ಗೋಡೆಗೆ ಕಬ್ಬಿಣದ ಹುಕ್‌ ಮತ್ತು ಬಾಸ್ಕೆಟ್‌ ಅಳವಡಿಸಿದರೆ ಬಾಸ್ಕೆಟ್‌ ಬಾಲ್‌ ಆಡಬಹುದು. ಕೇರಂ ಬೋರ್ಡ್‌ ಮತ್ತು ಚೆಸ್‌ ಆಡಲು ನಿಗದಿತ ಸ್ಥಳ ಬೇಕಿಲ್ಲ. ಹಾಗಾಗಿ ಬೋರ್ಡ್‌ಗಳನ್ನು ತಂದುಕೊಟ್ಟು ಸಾಧ್ಯವಾದರೆ ನೀವೂ ಅವರೊಂದಿಗೆ ಆಟವಾಡಲು ಸಮಯಾವಕಾಶ ಹೊಂದಿಸಿಕೊಳ್ಳಿ. ಚೌಕಾಬಾರ, ಪಗಡೆ, ಕೇರಂಬೋರ್ಡ್‌ಗಳನ್ನೂ ನೆನಪಿಸಿಕೊಳ್ಳಿ.

ಕ್ಯಾಮೆರಾ, ದುರ್ಬೀನು ಹೊರತೆಗೆಯಿರಿ
ಮನೆಯ ಸುತ್ತಮುತ್ತ ಮರಗಳಿದ್ದರೆ ಹಕ್ಕಿ, ಚಿಟ್ಟೆ, ದುಂಬಿಗಳನ್ನು ವೀಕ್ಷಿಸಿ ಗುರುತಿಟ್ಟುಕೊಂಡು ಅವುಗಳ ಬಗ್ಗೆ ಟಿಪ್ಪಣಿ ಮಾಡುವಂತೆ ಹೇಳಿ. ದುರ್ಬೀನು ಇದ್ದರೆ ದೂರದ ಮರಗಳನ್ನೂ ವೀಕ್ಷಿಸಲು ಅನುಕೂಲ. ಕ್ಯಾಮೆರಾ ಬಳಕೆ ತಿಳಿಸಿಕೊಟ್ಟರೆ ತಾವು ನೋಡಿದ ಕೌತುಕಗಳನ್ನು ಕ್ಲಿಕ್ಕಿಸಲೂ ಅನುಕೂಲವಾಗುತ್ತದೆ. ರಜೆಯ ದಿನಗಳಲ್ಲಿ ಬೇಸಿಗೆ ಶಿಬಿರ, ಪ್ರವಾಸ, ‍ಪಿಕ್‌ನಿಕ್‌ ಹೋಗಲು ಸಾಧ್ಯವಾಗದೇ ಇದ್ದರೆ ಮಕ್ಕಳಿಗೆ ಬೋರ್‌ ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಬೋರ್‌ ಆದರೆ ಎಲ್ಲದರ ಬಗ್ಗೆಯೂ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಕ್ಕಪಕ್ಕದ ಮಕ್ಕಳು ಖುಷಿ ಖುಷಿಯಾಗಿ ರಜೆ ಕಳೆಯುತ್ತಿದ್ದರೆ ತಮ್ಮ ಬಗ್ಗೆ ಕೀಳರಿಮೆ ಕಾಡುವ ಅಪಾಯವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT